Champions Trophy: ಪಾಕಿಸ್ತಾನಕ್ಕೆ ತೆರಳಲು ನಿರಾಕರಿಸಿದ ಭಾರತೀಯ ಅಂಪೈರ್ ನಿತಿನ್ ಮೆನನ್!
Nitin Menon: ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಪಂದ್ಯಗಳಲ್ಲಿ ಅಂಪೈರಿಂಗ್ ಜವಾಬ್ದಾರಿಯನ್ನು ನಿರ್ವಹಿಸುವ ಸಲುವಾಗಿ ಪಾಕಿಸ್ತಾನಕ್ಕೆ ತೆರಳಲು ಭಾರತೀಯ ಐಸಿಸಿ ಎಲೈಟ್ ಪ್ಯಾನಲ್ ಅಂಪೈರ್ ನಿತಿನ್ ಮೆನನ್ ನಿರಾಕರಿಸಿದ್ದಾರೆ. ನಿತಿನ್ ಮೆನನ್ ಅವರು ವೈಯಕ್ತಿಕ ಕಾರಣಗಳನ್ನು ನೀಡಿ 50 ಓವರ್‌ಗಳ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ.
ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) ಎಲೈಟ್ ಅಂಪೈರ್‌ಗಳ ಸಮಿತಿಯಲ್ಲಿ ಭಾರತದ ಏಕೈಕ ಪ್ರತಿನಿಧಿಯಾಗಿರುವ ನಿತಿನ್ ಮೆನನ್ ವೈಯಕ್ತಿಕ ಕಾರಣಗಳಿಂದಾಗಿ ಪಾಕಿಸ್ತಾನದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಅಂಪೈರಿಂಗ್ ಜವಾಬ್ದಾರಿಯಿಂದ ಹೊರಗುಳಿದಿದ್ದಾರೆ. ಫೆಬ್ರವರಿ 19 ರಿಂದ ಆರಂಭವಾಗಿ ಮಾರ್ಚ್ 9 ರಂದು ನಡೆಯುವ ಫೈನಲ್ ಮೂಲಕ ಚಾಂಪಿಯನ್ಸ್ ಟ್ರೋಫಿ ಅಂತ್ಯವಾಗಲಿದೆ. ಮೂವರು ಮ್ಯಾಚ್ ರೆಫರಿಗಳು ಮತ್ತು 12 ಅಂಪೈರ್‌ಗಳು ಸೇರಿದಂತೆ 15 ಪಂದ್ಯದ ಅಧಿಕಾರಿಗಳ ಪಟ್ಟಿಯನ್ನು ಐಸಿಸಿ ಬುಧವಾರ ಪ್ರಕಟಿಸಿದೆ.
ಎಂಟು ತಂಡಗಳ ಟೂರ್ನಿಗೆ ಆಸ್ಟ್ರೇಲಿಯಾದ ಡೇವಿಡ್ ಬೂನ್, ಶ್ರೀಲಂಕಾದ ರಂಜನ್ ಮದುಗಲ್ಲೆ ಮತ್ತು ಜಿಂಬಾಬ್ವೆಯ ಆಂಡ್ರ್ಯೂ ಪೈಕ್ರಾಫ್ಟ್ ಅವರನ್ನು ಮ್ಯಾಚ್ ರೆಫರಿಗಳಾಗಿ ನೇಮಿಸಲಾಗಿದೆ. ಈ ಟೂರ್ನಿಯ ಪಂದ್ಯಗಳು ಪಾಕಿಸ್ತಾನದ ಮೂರು ಸ್ಥಳಗಳಾದ ಕರಾಚಿ, ಲಾಹೋರ್ ಮತ್ತು ರಾವಲ್ಪಿಂಡಿಯಲ್ಲಿ ನಡೆಯಲಿದ್ದು, ಭದ್ರತಾ ಕಾರಣಗಳಿಂದಾಗಿ ಭಾರತ ತಂಡ ತನ್ನ ಎಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ. ಫೆಬ್ರವರಿ 20 ರಂದು ಬಾಂಗ್ಲಾದೇಶ ವಿರುದ್ಧದ ಪಂದ್ಯದ ಮೂಲಕ ಟೀಮ್ ಇಂಡಿಯಾದ ಅಭಿಯಾನ ಆರಂಭವಾಗಲಿದೆ.
ಚಾಂಪಿಯನ್ಸ್ ಟ್ರೋಫಿ ಬಳಿಕ ರೋಹಿತ್ ಶರ್ಮಾ ಭವಿಷ್ಯ ನಿರ್ಧಾರ? ಹೊಸ ನಾಯಕನ ಹುಡುಕಾಟದಲ್ಲಿ ಬಿಸಿಸಿಐ!
ಬಿಸಿಸಿಐ ಮೂಲಗಳು ಹೇಳುವುದೇನು?
"ಐಸಿಸಿ ಅವರನ್ನು (ನಿತಿನ್ ಮೆನನ್) ಚಾಂಪಿಯನ್ಸ್ ಟ್ರೋಫಿ ಅಧಿಕಾರಿಗಳ ತಂಡಕ್ಕೆ ಸೇರಿಸಿಕೊಳ್ಳಲು ಬಯಸಿದೆ," ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಮೂಲವೊಂದು ಪಿಟಿಐಗೆ ತಿಳಿಸಿದೆ. ಆದರೆ ವೈಯಕ್ತಿಕ ಕಾರಣಗಳಿಂದಾಗಿ ಅವರು ಪಾಕಿಸ್ತಾನಕ್ಕೆ ಹೋಗದಿರಲು ನಿರ್ಧರಿಸಿದ್ದಾರೆ. ಐಸಿಸಿ ತಟಸ್ಥ ಅಂಪೈರ್‌ಗಳನ್ನು ನೇಮಿಸುವ ನೀತಿಯನ್ನು ಅನುಸರಿಸುತ್ತಿರುವುದರಿಂದ ಮೆನನ್ ದುಬೈನಲ್ಲಿ ನಡೆಯುವ ಭಾರತದ ಪಂದ್ಯಗಳಲ್ಲಿ ಅಂಪೈರ್ ಮಾಡಲು ಸಾಧ್ಯವಾಗುವುದಿಲ್ಲ. ಅಧಿಕಾರಿಗಳ ಪಟ್ಟಿಯನ್ನು ಬಿಡುಗಡೆ ಮಾಡಿರುವ ತನ್ನ ಹೇಳಿಕೆಯಲ್ಲಿ ಐಸಿಸಿ ನಿತಿನ್ ಮೆನನ್ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
A world-class officiating team featuring 12 umpires and 3 match referees is set for the 2025 #ChampionsTrophy 🏏
— ICC (@ICC) February 5, 2025
Details 👇 https://t.co/z3tQ8vVQiS
ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಪಂದ್ಯದ ಅಧಿಕಾರಿಗಳು
ಅಂಪೈರ್‌ಗಳು: ಕುಮಾರ್ ಧರ್ಮಸೇನ, ಕ್ರಿಸ್ ಗಫಾನಿ, ಮೈಕೆಲ್ ಗೌಫ್, ಆಡ್ರಿಯನ್ ಹೋಲ್ಡ್‌ಸ್ಟಾಕ್, ರಿಚರ್ಡ್ ಇಲ್ಲಿಂಗ್‌ವರ್ತ್, ರಿಚರ್ಡ್ ಕೆಟಲ್‌ಬರೋ, ಅಹ್ಸಾನ್ ರಜಾ, ಪಾಲ್ ರೀಫೆಲ್, ಶರ್ಫುದ್ದೌಲಾ ಇಬ್ನೆ ಶಾಹಿದ್, ರಾಡ್ನಿ ಟಕರ್, ಅಲೆಕ್ಸ್ ವಾರ್ಫ್, ಜೋಯಲ್ ವಿಲ್ಸನ್
ಪಂದ್ಯದ ರೆಫರಿಗಳು: ಡೇವಿಡ್ ಬೂನ್, ರಂಜನ್ ಮದುಗಲ್ಲೆ, ಆಂಡ್ರ್ಯೂ ಪೈಕ್ರಾಫ್ಟ್