ಬಜೆಟ್ ವಿರೋಧಿಸಿ ಸಿಪಿಐಎಂ ವತಿಯಿಂದ ಪ್ರತಿಭಟನೆ: ಬಜೆಟ್ ಪ್ರತಿ ಸುಟ್ಟ ಪ್ರತಿಭಟನೆ
ಕೇಂದ್ರ ಬಜೆಟ್ ವಿರೋಧಿಸಿ ಸಿಪಿಎಂ ತಾಲ್ಲೂಕು ಘಟಕದ ವತಿಯಿಂದ ಬುಧವಾರ ಪಟ್ಟಣದ ಜಿ.ವಿ .ಶ್ರೀರಾಮ ರೆಡ್ಡಿ ಪುಥಳಿ ಮುಂದೆ ಕೇಂದ್ರ ಬಜೆಟ್ ಪ್ರತಿಗಳನ್ನು ಸುಡುವ ಮೂಲಕ ಪ್ರತಿಭಟನೆ ನಡೆಸಿ ಮಾತನಾಡಿದರು.


ಬಾಗೇಪಲ್ಲಿ: 2025-26ನೇ ಸಾಲಿನ ಕೇಂದ್ರ ಬಜೆಟ್ ಭಾರತದ ಜನರ ಅವಶ್ಯಕತೆಗಳಿಗೆ ಮಾಡಿರುವ ಕ್ರೂರ ವಿಶ್ವಾಸ ದ್ರೋಹವಾಗಿದೆ ಎಂದು ಸಿಪಿಐಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಎಂ.ಪಿ.ಮುನಿವೆಂಕಟಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಬಜೆಟ್ ವಿರೋಧಿಸಿ ಸಿಪಿಎಂ ತಾಲ್ಲೂಕು ಘಟಕದ ವತಿಯಿಂದ ಬುಧವಾರ ಪಟ್ಟಣದ ಜಿ.ವಿ.ಶ್ರೀರಾಮ ರೆಡ್ಡಿ ಪುಥಳಿ ಮುಂದೆ ಕೇಂದ್ರ ಬಜೆಟ್ ಪ್ರತಿಗಳನ್ನು ಸುಡುವ ಮೂಲಕ ಪ್ರತಿಭಟ ನೆ ನಡೆಸಿ ಮಾತನಾಡಿದರು.
‘ಶ್ರೀಮಂತರಿಂದ ಶ್ರೀಮಂತರಿಗಾಗಿ ಮಾತ್ರ ಈ ಬಜೆಟ್ ಆಗಿದೆ. ಒಕ್ಕೂಟ ತತ್ವವನ್ನು ದುರ್ಬಲ ಗೊಳಿಸುವ ಮತ್ತು ರಾಜ್ಯಗಳ ಹಕ್ಕುಗಳ ಮೇಲೆ ದಾಳಿ ನಡೆಸುವ ನಿಲುವನ್ನು ಇದು ಬಿಂಬಿಸುತ್ತದೆ. ಮೋದಿ ಸರ್ಕಾರದ ದಿವಾಳಿತನ ಬಿಂಬಿಸುವ ಈ ಬಜೆಟ್ ದೇಶದ ಅರ್ಥ ವ್ಯವಸ್ಥೆ ನಿಭಾಯಿಸುವಲ್ಲಿ ಸಂಪೂರ್ಣ ವಿಫಲವಾಗಿದೆ’ ಎಂದು ಟೀಕಿಸಿದರು.
ಇದನ್ನೂ ಓದಿ: Child Marriage: ಬಾಲ್ಯ ವಿವಾಹ: ರಾಜಧಾನಿಗೆ ಕುಖ್ಯಾತಿ
ಕೇಂದ್ರ ಬಜೆಟ್ ಬಹಳ ಸ್ಪಷ್ಟವಾಗಿ ಕಾರ್ಪೊರೇಟ್ ಚಮಚಾಗಳಿಗೆ ಮತ್ತು ಶ್ರೀಮಂತರಿಗಾಗಿ ತಯಾರಿಸಿದ ಬಜೆಟ್ ಆಗಿದೆ. ರೈತರ, ಕಾರ್ಮಿಕರ, ದಲಿತರ, ಮಹಿಳೆಯರ, ವಿದ್ಯಾರ್ಥಿ, ಯುವಜನರ ಒಟ್ಟಾರೆಯಾಗಿ ಬಡವರ ಜೀವನೋಪಾಯದ ಮೇಲೆ ನಡೆಸಿದ ಕ್ರೂರ ದಾಳಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೃಷಿ, ಆಹಾರ ಭದ್ರತೆ, ನರೇಗಾ ಸೇರಿದಂತೆ ಹಲವು ಬಡವರ ಕಲ್ಯಾಣದ ಕಾರ್ಯಕ್ರಮಗಳಿಗೆ ತೀವ್ರ ವಾದ ರೀತಿಯಲ್ಲಿ ಅನುದಾನ ಕಡಿತಗೊಳಿಸಿದೆ. ಬೆಲೆ ಏರಿಕೆ, ನಿರುದ್ಯೋಗ, ಹಸಿವು, ವಲಸೆ, ಸಾಲ ಭಾಧೆ ಮುಂತಾದ ಅರ್ಥಿಕ ಸಂಕಷ್ಟಗಳಿಗೆ ಸಿಲುಕಿರುವ ದುಡಿಯುವ ವರ್ಗಕ್ಕೆ ಯಾವುದೇ ರೀತಿ ಯಲ್ಲೂ ನೆರವಾಗದೇ, ಬಹು ರಾಷ್ಟ್ರೀಯ ಕಾರ್ಪೊರೇಟ್ ಸಂಸ್ಥೆಗಳ ಹಿತರಕ್ಷಣೆಗೆ ಹೆಚ್ಚಿನ ಅನುಕೂಲ ಮಾಡಿಕೊಟ್ಟಿದೆ ಎಂದು ಆರೋಪಿಸಿದರು.
ರೈತರ ಬಹಳ ಪ್ರಧಾನವಾದ ಹಕ್ಕೊತ್ತಾಯಗಳಾದ ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತರಿ, ಸಾಲಭಾಧೆಯಿಂದ ಮುಕ್ತಿ, ಕೃಷಿ ಲಾಗುವಾಡುಗಳ ವೆಚ್ಚ ಕಡಿತ, ರೈತರ ಕೃಷಿ ಭೂಮಿ ಹಾಗೂ ಬೆಳೆ ಸಂಪತ್ತಿನ ಕಾರ್ಪೊರೇಟ್ ಲೂಟಿಗೆ ಪರಿಣಾಮಕಾರಿ ನಿಯಂತ್ರಣದ ಆಗ್ರಹಗಳನ್ನು ಸಂಪೂರ್ಣ ವಾಗಿ ಕಡೆಗಣಿಸಲಾಗಿದೆ. ವಿದೇಶಿ ಬಂಡವಾಳಕ್ಕೆ ಸಂಪೂರ್ಣ ಮಣೆ ಹಾಕಿ ,ವೇಗದ ಖಾಸಗೀಕರಣ ಕ್ಕೆ ಒತ್ತು ನೀಡಿರುವ ಈ ಬಜೆಟ್ ಒಟ್ಟಾರೆಯಾಗಿ ನಿರುದ್ಯೋಗ, ಬೆಲೆ ಏರಿಕೆ, ಬಡತನ, ದಾರಿದ್ರ್ಯ, ವಲಸೆಯನ್ನು ಗಣನೀಯವಾಗಿ ಹೆಚ್ಚಿಸಲಿದೆ. ಕೃಷಿ ರಂಗವನ್ನು ಕಾರ್ಪೋರೇಟೀಕರಣಗೊಳಿಸಲು ಒಂದು ಸಾಧನವಾಗಿ ಈ ಬಜೆಟ್ ರೂಪಿಸಲಾಗಿದೆ ಎಂದು ದೂರಿದರು.
ಈ ಬಜೆಟ್ ಸಂಪೂರ್ಣವಾಗಿ ರೈತ ವಿರೋಧಿ, ಕಾರ್ಮಿಕ ವಿರೋಧಿ ಹಾಗೂ ದುಡಿಯುವ ಜನರ ವಿರೋಧಿಯಾಗಿದ್ದು ಇದನ್ನು ಸಿಪಿಎಂ ಖಂಡಿಸುತ್ತದೆ ಎಂದು ತಾಲ್ಲೂಕು ಕಾರ್ಯದರ್ಶಿ ಎಂ.ಎನ್. ರಘರಾಮ ರೆಡ್ಡಿ ಹೇಳಿದರು.
ಈ ಸಂದರ್ಭದಲ್ಲಿ ಸಿಪಿಐಎಂ ಪಕ್ಷದ ಮುಖಂಡರಾದ ಬಿಳ್ಳೂರು ನಾಗರಾಜು, ಲಕ್ಷಣ್ ರೆಡ್ಡಿ, ಮುಸ್ತಫಾ, ವಾಲ್ಮೀಕಿ ಅಶ್ವತ್ಥಪ್ಪ,ಎಸ್. ಎಫ್.ಐ. ಮುಖಂಡ ಸೋಮಶೇಖರ್ ಇತರರು ಉಪಸ್ಥಿತ ರಿದ್ದರು.