Champions Trophy: ಭಾರತ ತಂಡದಲ್ಲಿ ಸ್ಥಾನ ಸಿಗದ ಬಗ್ಗೆ ಕನ್ನಡಿಗ ಕರುಣ್ ನಾಯರ್ ಪ್ರತಿಕ್ರಿಯೆ!
Karun Nair on Ajit Agarkar statement:ರಣಜಿ ಟ್ರೋಫಿ ಹಾಗೂ ವಿಜಯ್ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿದ್ದ ವಿದರ್ಭ ತಂಡದ ತಂಡದ ಬ್ಯಾಟ್ಸ್‌ಮನ್ ಹಾಗೂ ಕನ್ನಡಿಗ ಕರುಣ್ ನಾಯರ್ ಭಾರತ ತಂಡಕ್ಕೆ ಆಯ್ಕೆಯಾಗುವಲ್ಲಿ ವಿಫಲರಾದರು. ಈ ಬಗ್ಗೆ ಕರುಣ್ ನಾಯರ್ ಪ್ರತಿಕ್ರಿಯೆ ನೀಡಿದ್ದಾರೆ.

Karun Nair

ನವದೆಹಲಿ: ದೇಶಿ ಕ್ರಿಕೆಟ್‌ನಲ್ಲಿ ರನ್ ಹೊಳೆ ಹರಿಸಿದ ಹೊರತಾಗಿಯೂ ವಿದರ್ಭ ತಂಡದ ಹಿರಿಯ ಬ್ಯಾಟ್ಸ್‌ಮನ್ ಹಾಗೂ ಕನ್ನಡಿಗ ಕರುಣ್ ನಾಯರ್ ಅವರನ್ನು ಐಸಿಸಿ ಚಾಂಪಿಯನ್ಸ್ ಟ್ರೋಫಿ ಭಾರತ ತಂಡಕ್ಕೆ ಆಯ್ಕೆ ಮಾಡುವಲ್ಲಿ ಬಿಸಿಸಿಐ ಆಯ್ಕೆ ಸಮಿತಿಯ ಮುಖ್ಯಸ್ಥ ಅಜಿತ್ ಅಗರ್ಕರ್ ಮನಸು ಮಾಡಲಿಲ್ಲ. ಚಾಂಪಿಯನ್ಸ್ ಟ್ರೋಫಿಗೆ ಭಾರತ ಪರಿಷ್ಕೃತ ತಂಡವನ್ನು ಪ್ರಕಟಿಸಿದ ಬಳಿಕ ಅಜಿತ್ ಅಗರ್ಕರ್, ಕರುಣ್ ನಾಯರ್‌ಗೆ ಅವಕಾಶ ನೀಡದ ಬಗ್ಗೆ ಸ್ಪಷ್ಟನೆ ನೀಡಿದ್ದರು. ಇದೀಗ ಅಜಿತ್ ಅಗರ್ಕರ್ ಅವರ ಹೇಳಿಕೆಗೆ ಕರುಣ್ ನಾಯರ್ ಪ್ರತಿಕ್ರಿಯಿಸಿದ್ದಾರೆ ಹಾಗೂ ಭಾರತ ತಂಡಕ್ಕೆ ಮರಳುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಕರುಣ್ ನಾಯರ್ ಅವರು 2017ರಲ್ಲಿ ಕೊನೆಯ ಬಾರಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧ ತಮ್ಮ ಪದಾರ್ಪಣೆ ಟೆಸ್ಟ್ ಪಂದ್ಯದಲ್ಲಿ ಕರುಣ್ ನಾಯರ್ ಚೊಚ್ಚಲ ತ್ರಿಶತಕವನ್ನು ಬಾರಿಸಿದ್ದರು. ನಂತರ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಬಳಿಕ ಅವರನ್ನು ಭಾರತ ತಂಡದಿಂದ ಕೈ ಬಿಡಲಾಗಿತ್ತು. ಆದರೆ, 2024-25ರ ಸಾಲಿನ ದೇಶಿ ಕ್ರಿಕೆಟ್‌ನಲ್ಲಿ ಕರುಣ್ ನಾಯರ್ ರನ್ ಹೊಳೆ ಹರಿಸಿದ್ದಾರೆ. ಇಂಗ್ಲೆಂಡ್ ವಿರುದ್ದದ ಏಕದಿನ ಸರಣಿಯ ಭಾರತ ತಂಡದಲ್ಲಿ ಕರುಣ್ ನಾಯರ್‌ಗೆ ಅವಕಾಶ ಸಿಗಬಹುದೆಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಬಿಸಿಸಿಐ ಆಯ್ಕೆ ಸಮಿತಿ ಕನ್ನಡಿಗನಿಗೆ ಅವಕಾಶ ನೀಡಿರಲಿಲ್ಲ. ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಭಾರತ ತಂಡದಲ್ಲಿಯೂ ಕರುಣ್ ನಾಯರ್‌ಗೆ ಅವಕಾಶ ನೀಡಿರಲಿಲ್ಲ. ಕರುಣ್ ನಾಯರ್‌ಗೆ ಅವಕಾಶ ನೀಡದ ಬಗ್ಗೆ ಅಜಿತ್ ಅಗರ್ಕರ್ ಸ್ಪಷ್ಟನೆ ನೀಡಿದ್ದರು.
ಚಾಂಪಿಯನ್ಸ್ ಟ್ರೋಫಿ ಗೆದ್ದ ತಂಡಕ್ಕೆ ಸಿಗಲಿದೆ ಭಾರೀ ಮೊತ್ತದ ಬಹುಮಾನ
ಅಜಿತ್ ಅಗರ್ಕರ್ ಹೇಳಿಕೆ
"ಪ್ರಸ್ತುತ ಸನ್ನಿವೇಶದಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆಯುವುದು ತುಂಬಾ ಕಠಿಣ ಸಂಗತಿಯಾಗಿದೆ. ಭಾರತ ತಂಡಕ್ಕೆ ಆಯ್ಕೆಯಾಗಿರುವ ಆಟಗಾರರನ್ನು ನೀವು ಒಮ್ಮೆ ನೋಡಬಹುದು. ಅವರೆಲ್ಲರೂ 20ರ ಆಸುಪಾಸಿನ ವಯಸಿನ ಆಟಗಾರರಾಗಿದ್ದು, ಅವರು ಉತ್ತಮ ಸರಾಸರಿಯನ್ನು ಹೊಂದಿದ್ದಾರೆ. 15ರ ಸದಸ್ಯರ ಭಾರತ ತಂಡದಲ್ಲಿ ಪ್ರತಿಯೊಬ್ಬರನ್ನು ಆಯ್ಕೆ ಮಾಡಲು ಸಾಧ್ಯವಿಲ್ಲ. ಆದರೆ, ದೇಶಿ ಕ್ರಿಕೆಟ್‌ನಲ್ಲಿನ ಇಂಥಾ ಪ್ರದರ್ಶನಗಳು ಖಂಡಿತಾ ಗಮನ ಸೆಳೆಯುತ್ತವೆ. ಆಟಗಾರರು ಫಾರ್ಮ್ ಕಳೆದುಕೊಂಡರೆ ಅಥವಾ ಗಾಯಕ್ಕೆ ತುತ್ತಾದರೆ, ಆಗ ಅವರ(ಕರುಣ್ ನಾಯರ್) ಬಳಿ ಸಂಭಾಷಣೆ ನಡೆಸಲಾಗುತ್ತದೆ," ಎಂದು ಅಜಿತ್ ಅಗರ್ಕರ್ ತಿಳಿಸಿದ್ದಾರೆ.
ವರುಣ್ ಚಕ್ರವರ್ತಿ ಇನ್, ಜಸ್‌ಪ್ರೀತ್ ಬುಮ್ರಾ ಔಟ್: ಚಾಂಪಿಯನ್ಸ್ ಟ್ರೋಫಿಗೆ ಭಾರತದ ಪರಿಷ್ಕೃತ ತಂಡ!
ಅಜಿತ್ ಅಗರ್ಕರ್ ಹೇಳಿಕೆಗೆ ಕರುಣ್ ನಾಯರ್ ಪ್ರತಿಕ್ರಿಯೆ
ರೆವ್‌ಸ್ಪೋರ್ಟ್ಸ್ ಜೊತೆ ಮಾತನಾಡಿದ ಕರುಣ್ ನಾಯರ್, ಬಿಸಿಸಿಐ ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್ ಹೇಳಿಕೆಯನ್ನು ಸ್ವಾಗತಿಸಿದ್ದಾರೆ. ತಂಡಕ್ಕೆ ಆಯ್ಕೆ ಮಾಡದಿದ್ದರೂ ಅವರ ಹೇಳಿಕೆಯಲ್ಲಿ ನೀಡಿದ ಸ್ಪಷ್ಟತೆಯಿಂದ ಸಮಾಧಾನವಾಗಿದೆ ಎಂದು ಹೇಳಿಕೊಂಡಿದ್ದಾರೆ.
"ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡದ ಬಗ್ಗೆ ಸ್ಪಷ್ಟತೆಯ ಹೇಳಿಕೆಯನ್ನು ನೋಡುವುದು ಒಳ್ಳೆಯ ಸಂಗತಿ. ಏಕೆಂದರೆ ಆಯ್ಕೆದಾರರು ನಮ್ಮ ಬಗ್ಗೆ ಏನು ಯೋಚಿಸುತ್ತಿದ್ದಾರೆ ಹಾಗೂ ಅವರಿಗೆ ಯಾವುದು ಅಗತ್ಯವಿದೆ ಮತ್ತು ನಾವು ಏನು ಮಾಡಬೇಕೆಂಬುದರ ನಮಗೆ ಸ್ಪಷ್ಟವಾಗಿ ತಿಳಿಯಲಿದೆ. ಈ ಹೇಳಿಕೆಯಿಂದ ಮುಂದಿನ ಪಂದ್ಯದಲ್ಲಿ ಏನು ಮಾಡಬೇಕು ಹಾಗೂ ರಣಜಿ ಟ್ರೋಫಿ ಗೆಲ್ಲಲು ನೆರವು ನೀಡಲಿದೆ," ಎಂದು ಕರುಣ್ ನಾಯರ್ ತಿಳಿಸಿದ್ದಾರೆ.
ಸೆಮಿಫೈನಲ್‌ನಲ್ಲಿ ವಿದರ್ಭಗೆ ಮುಂಬೈ ಎದುರಾಳಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ತಮಿಳುನಾಡು ವಿರುದ್ಧ ವಿದರ್ಭ ತಂಡ 198 ರನ್‌ಗಳಿಂದ ಗೆಲುವು ಪಡೆದಿದೆ. ಈ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ 122 ರನ್‌ಗಳನ್ನು ಗಳಿಸಿದ ಕರುಣ್ ನಾಯರ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಈ ಗೆಲುವಿನೊಂದಿಗೆ ವಿದರ್ಭ ತಂಡ ಸೆಮಿಫೈನಲ್‌ಗೆ ಪ್ರವೇಶ ಮಾಡಿದೆ. ಫೆಬ್ರವರಿ 17 ರಂದು ಮುಂಬೈ ವಿರುದ್ಧ ವಿದರ್ಭ ತಂಡ ಸೆಮಿಫೈನಲ್‌ನಲ್ಲಿ ಕಾದಾಟ ನಡೆಸಲಿದೆ.