Vishweshwar Bhat Column: ಜಪಾನ್ ಇಡೀ ಜಗತ್ತಿಗೆ ಕೊಟ್ಟ ಅನೇಕ ಕೊಡುಗೆಗಳಲ್ಲಿ ಕರೋಕೆಯೂ ಒಂದು !
ಕರೋನಾ ತಲುಪಲು ಸಾಧ್ಯವಾಗದ ಕಡೆಗಳಲ್ಲೂ ಕರೋಕೆ ಹೋಗಿದೆ. ಇಂದು ಯಾವುದೇ ಸಂತೋಷಕೂಟ, ಪಾರ್ಟಿಗಳಲ್ಲಿ ಕರೋಕೆ ಇರಲೇಬೇಕು. ಕರೋಕೆ ಇದ್ದರೆ ಎಲ್ಲಿ ಬೇಕಾದರೂ ಪಾರ್ಟಿ ಮಾಡಬಹುದು. ಅಷ್ಟರಮಟ್ಟಿಗೆ ಇಂದು ಅದು ಆಧುನಿಕ ಸಂಗೀತ ಪ್ರೇಮಿಗಳ ಅಚ್ಚು ಮೆಚ್ಚಿನ ಸಾಥಿ, ಸಂಗಾತಿ

ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಅಂಕಣ

ಇದೇ ಅಂತರಂಗ ಸುದ್ದಿ
vbhat@me.com
ಜಪಾನ್ ಇಡೀ ಜಗತ್ತಿಗೆ ಅನೇಕ ಸಂಗತಿಗಳನ್ನು ಕೊಟ್ಟಿದೆ. ಆ ಪೈಕಿ ವಿಜ್ಞಾನ-ತಂತ್ರಜ್ಞಾನ, ಬುಲೆಟ್ ಟ್ರೇನ್, ಜೆನ್, ಕಾರು (ಅಟೋಮೊಬೈಲ), ಭೂಕಂಪ ಸಹಿಷ್ಣು ಆರ್ಕಿಟೆಕ್ಚರ್, ಅನಿಮೇಶನ್, ಹೈಕು (ಸಾಹಿತ್ಯ), ರೋಬೋಟ್... ಹೀಗೆ ಅನೇಕ ಅಂಶಗಳನ್ನು ಹೆಸರಿಸ ಬಹುದು. ಆದರೆ ಅನೇಕ ಜನರಿಗೆ ಗೊತ್ತಿರದ ಒಂದು ಸಂಗತಿಯೆಂದರೆ, ಜಪಾನ್ ಈ ಜಗತ್ತಿಗೆ ನೀಡಿರುವ ಕೊಡುಗೆಗಳಲ್ಲಿ ಕರೋಕೆ ( Karaoke) ಕೂಡ ಸೇರಿದೆ ಎಂಬುದು. ಕರೋಕೆ ಜಪಾನಿನಲ್ಲಿ ಹುಟ್ಟಿಕೊಂಡ ಅತ್ಯಂತ ಜನಪ್ರಿಯ ಮನರಂಜನಾ ಪ್ರಕಾರ. ಅದು ಇಡೀ ಜಗತ್ತಿಗೆ ವ್ಯಾಪಿಸಿರುವ ಸಂಗೀತ ಸಂಸ್ಕೃತಿಯ ಒಂದು ಪ್ರಮುಖ ಭಾಗವೂ ಹೌದು. ಕರೋನಾಕ್ಕೂ, ಕರೋಕೆಗೂ ಒಂದು ಸಾಮ್ಯವಿದೆ. ಅದೇನೆಂದರೆ, ಅವು ತಲುಪದೇ ಇರುವ ದೇಶಗಳಿರಲಿಕ್ಕಿಲ್ಲ. ಹಾಗೆ ನೋಡಿದರೆ, ಕರೋನಾಗಿಂತ ಕರೋಕೆ ಒಂದು ಕೈ ಮೇಲು.
ಹೇಗೆಂದರೆ, ಕರೋನಾ ತಲುಪಲು ಸಾಧ್ಯವಾಗದ ಕಡೆಗಳಲ್ಲೂ ಕರೋಕೆ ಹೋಗಿದೆ. ಇಂದು ಯಾವುದೇ ಸಂತೋಷಕೂಟ, ಪಾರ್ಟಿಗಳಲ್ಲಿ ಕರೋಕೆ ಇರಲೇಬೇಕು. ಕರೋಕೆ ಇದ್ದರೆ ಎಲ್ಲಿ ಬೇಕಾದರೂ ಪಾರ್ಟಿ ಮಾಡಬಹುದು. ಅಷ್ಟರಮಟ್ಟಿಗೆ ಇಂದು ಅದು ಆಧುನಿಕ ಸಂಗೀತ ಪ್ರೇಮಿಗಳ ಅಚ್ಚುಮೆಚ್ಚಿನ ಸಾಥಿ, ಸಂಗಾತಿ.
ಇದನ್ನೂ ಓದಿ: Vishweshwar Bhat Column: ಟಿಪ್ಪಿಂಗ್ ಕುರಿತು ಟಿಪ್ಸ್
‘ಕರೋಕೆ’ ಪದವು ಜಪಾನಿ ಭಾಷೆಯ ‘ಕರಾಪೊ’ (ಅಂದರೆ ‘ಖಾಲಿ’) ಮತ್ತು ‘ಒಕೆಸುಟ್ರಾ’ (ಅಂದರೆ ‘ವಾದ್ಯಸಂಗೀತ’) ಎಂಬ ಎರಡು ಪದಗಳಿಂದ ಹುಟ್ಟಿಕೊಂಡಿದೆ. ಸ್ಥೂಲವಾಗಿ ಕರೋಕೆ ಅಂದ್ರೆ ‘ಖಾಲಿ ಆರ್ಕೆಸ್ಟ್ರಾ’ ಎನ್ನಬಹುದು. ಅಂದರೆ ಕೇವಲ ಹಿನ್ನೆಲೆ ಸಂಗೀತ ವಿರುತ್ತದೆ, ಆದರೆ ಹಾಡುಗಾರನ ಸ್ವರವಿರುವುದಿಲ್ಲ. ಹಿನ್ನೆಲೆ ಸಂಗೀತಕ್ಕೆ ಅನುಗುಣವಾಗಿ ಯಾರು ಬೇಕಾದರೂ ಹಾಡಬಹುದು. ಕರೋಕೆ ಇದ್ದರೆ ಯಾರು ಬೇಕಾದರೂ ಹಾಡುಗಾರ ರಾಗಬಹುದು. ಅದಕ್ಕೆ ಉತ್ತಮ ನಿದರ್ಶನ ಅಂದ್ರೆ ಇಲ್ಲಿ ತನಕ ಯಾರನ್ನೂ ಕೆಟ್ಟ ಕರೋಕೆ ಹಾಡುಗಾರ ಎಂದು ಕರೆಯದಿರುವುದು.
1960ರ ದಶಕದಲ್ಲಿ ಜಪಾನಿನಲ್ಲಿ ಸಂಗೀತ ಮತ್ತು ರಂಗಭೂಮಿಯು ವ್ಯಾಪಕ ಜನಪ್ರಿಯತೆ ಗಳಿಸಿತು. ಆದರೆ ಕರೋಕೆಯ ಅಧಿಕೃತ ಜನ್ಮ ಆಗಿದ್ದು 1970ರ ದಶಕದಲ್ಲಿ; ಡೈಸುಕೆ ಇನುಇ ( Daisuke Inoue) ಎಂಬ ಜಪಾನಿ ಸಂಗೀತಗಾರ ಕರೋಕೆ ಹುಟ್ಟಿಗೆ ಕಾರಣನಾದ. ಡೈಸುಕೆ ಇನುಇ, ಕೋಬೆ ಎಂಬ ನಗರದಲ್ಲಿ ಸಂಗೀತಗಾರನಾಗಿ ಕೆಲಸ ಮಾಡುತ್ತಿದ್ದವ.
1971ರಲ್ಲಿ, ಅವನು ಗಾಯಕರಿಗೆ ಹಿನ್ನೆಲೆ ಸಂಗೀತ ( background music) ನೀಡುವಂತೆ ಯಂತ್ರವನ್ನು ವಿನ್ಯಾಸಗೊಳಿಸಿದ. ಈ ಯಂತ್ರವನ್ನು 8-Juke ಎಂದು ಕರೆಯಲಾಯಿತು. ಇದು ಒಂದು ಟೇಪ್ ಆಧರಿತ ಮ್ಯೂಸಿಕ್ ಪ್ಲೇಯರ್ ಆಗಿದ್ದು, ಹಾಡುಗಾರರಿಗೆ ಹಾಡಲು ಅನುಕೂಲವಾಗಿತ್ತು.
ಡೈಸುಕೆ ಇನುಇ ತನ್ನ ಆವಿಷ್ಕಾರವನ್ನು ಪೇಟೆಂಟ್ ಮಾಡಲಿಲ್ಲ, ಆದ್ದರಿಂದ ಬೇರೆ ಕಂಪನಿ ಗಳು ಇದನ್ನು ವಾಣಿಜ್ಯೀಕರಣ ಮಾಡಿಬಿಟ್ಟವು. ಆದರೂ, ಅವನ ಆವಿಷ್ಕಾರದಿಂದಲೇ ಇಂದಿನ ಕರೋಕೆ ಯಂತ್ರಗಳು ಬೆಳೆಯಲು ಸಾಧ್ಯವಾಯಿತು ಎಂಬುದನ್ನು ಮರೆಯುವ ಹಾಗಿಲ್ಲ.
1970ರ ದಶಕದ ಆರಂಭದಲ್ಲಿ ಕರೋಕೆ ಯಂತ್ರಗಳನ್ನು ಹೋಟೆಲ್‌ಗಳು, ಬಾರ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತಿತ್ತು. ಆಗಲೇ ಇದನ್ನು ‘ಸಂಗೀತ ಬಾಂಧವ’ ಎಂದು ಪರಿಗಣಿಸಲಾಗಿತ್ತು. ಅಲ್ಲಿ ತನಕ ಆರ್ಕೆಸ್ಟ್ರಾ ಸಂಘಟಿಸಲು ಕನಿಷ್ಠ ಹತ್ತು ಜನರಾದರೂ ಬೇಕಾಗಿತ್ತು. ಆರ್ಕೆಸ್ಟ್ರಾದ ಕಲ್ಪನೆಯನ್ನು ಕರೋಕೆ ಬದಲಿಸಿಬಿಟ್ಟಿತು.
ಕರೋಕೆ ಅಂದ್ರೆ ಒಬ್ಬನೇ ನಡೆಸಬಹುದಾದ ಆರ್ಕೆಸ್ಟ್ರಾ ಎನ್ನುವಂತಾಯಿತು. 1980ರ ದಶಕದಲ್ಲಿ, ತಂತ್ರಜ್ಞಾನ ಅಭಿವೃದ್ಧಿಯಿಂದಾಗಿ ‘ಲೇಸರ್ ಡಿ ಕರೋಕೆ’ ಅಭಿವೃದ್ಧಿ ಯಾಯಿತು. ಇದರಿಂದಾಗಿ ಧ್ವನಿ ಗುಣಮಟ್ಟ ಇನ್ನಷ್ಟು ಸುಧಾರಿಸಿತು.
ಅದಾದ ಬಳಿಕ, ಟೋಕಿಯೊ ಮತ್ತು ಓಸಾಕಾದಂಥ ನಗರಗಳಲ್ಲಿ ‘ಕರೋಕೆ ಬಾಕ್ಸ್’ ( Karao ke Box) ಎಂಬ ವೈಯಕ್ತಿಕ ಕೊಠಡಿಗಳ ವ್ಯವಸ್ಥೆ ಪ್ರಾರಂಭವಾಯಿತು. ಇದು ಖಾಸಗಿ ಕೊಠಡಿಗಳನ್ನು ಹೊಂದಿದ್ದು, ಸ್ನೇಹಿತರು ಅಥವಾ ಕುಟುಂಬ ಸದಸ್ಯರು ತಮ್ಮಲ್ಲಿಯೇ ಹಾಡಲು ಸಾಧ್ಯ ಮಾಡಿಕೊಟ್ಟಿತು. ಅಲ್ಲಿ ತನಕ ಜಪಾನಿಗೆ ಮಾತ್ರ ಸೀಮಿತ ವಾಗಿದ್ದ ಕರೋಕೆ, 1990ರ ದಶಕದ ಬಳಿಕ ಜಪಾನ್‌ನಿಂದ ಆಚೆಗೆ ದಕ್ಷಿಣ ಕೊರಿಯಾ, ಚೀನಾ, ಅಮೆರಿಕ ಮತ್ತು ಯುರೋಪಿನ ಕಡೆಗೆ ವಿಸ್ತರಿಸಿತು.
ಕರೋಕೆ ಬಾಕ್ಸ್‌ನ ಲಕ್ಷಣಗಳಲ್ಲಿ ಪ್ರಮುಖವಾದ ಪಠ್ಯವನ್ನು ( Lyrics) ಪರದೆಯ ಮೇಲೆ ತೋರಿಸುವ ವ್ಯವಸ್ಥೆ ಅಭಿವೃದ್ಧಿಪಡಿಸಿದ ಬಳಿಕ, ಸ್ನೇಹಿತರು, ಕುಟುಂಬ ಅಥವಾ ಸಹೋ ದ್ಯೋಗಿಗಳೊಂದಿಗೆ ಒಟ್ಟಿಗೆ ಕಾಲಕಳೆಯಲು ಕರೋಕೆ ಉತ್ತಮ ನೆಪವಾಯಿತು. ಅಚ್ಚರಿಯ ಸಂಗತಿಯೆಂದರೆ, ಕರೋಕೆ ಚೀನಾದಲ್ಲಿ KTV (Karaoke Television) ಎಂದು ಪ್ರಸಿದ್ಧ ಗೊಂಡಿತು.
ದಕ್ಷಿಣ ಕೊರಿಯಾದಲ್ಲಿ, ಕರೋಕೆ ಬಾಕ್ಸ್‌ಗಳು ಮನೆಮನೆಗೆ ತಲುಪಿದವು. ಈ ಮಧ್ಯೆ ಅಮೆರಿಕದಲ್ಲಿ ಕರೋಕೆ ಬಾರ್‌ಗಳು ಪ್ರಖ್ಯಾತವಾದವು. ಯುರೋಪಿನಲ್ಲೂ ಕರೋಕೆ ಸಾಂಸ್ಕೃತಿಕ ಚಟುವಟಿಕೆಯ ಮುಖ್ಯ ಆಕರ್ಷಣೆಯಾಯಿತು. ಇಂದು, ಇಂಟರ್ನೆಟ್ ಮತ್ತು ಮೊಬೈಲ್ ತಂತ್ರಜ್ಞಾನದಿಂದಾಗಿ ಆನ್‌ಲೈನ್ ಕರೋಕೆ ಪ್ಲಾಟ್ ಫಾರ್ಮ್‌ಗಳು ( Smule, StarMaker, YouTube Karaoke) ಜನಪ್ರಿಯಗೊಂಡಿವೆ.
ಈ ದಿನಗಳಲ್ಲಿ ಕೃತಕ ಬುದ್ಧಿಮತ್ತೆ (AI ) ತಂತ್ರಜ್ಞಾನದ ನೆರವಿನಿಂದ ಕರೋಕೆ ತನ್ನ ಸಾಧ್ಯತೆಯನ್ನು ಮತ್ತಷ್ಟು ವಿಸ್ತರಿಸಿಕೊಂಡಿದೆ. ಸ್ವಯಂಚಾಲಿತ ಧ್ವನಿ ವಿಶ್ಲೇಷಣೆ ( Voice Analysis) ಮತ್ತು ವೃತ್ತಿಪರ ಗಾಯಕರಂತೆ ಹಾಡಲು ಸಹಾಯ ಮಾಡುವ ತಂತ್ರಜ್ಞಾನ ಅಭಿವೃದ್ಧಿಯಾಗಿರುವುದರಿಂದ ಕರೋಕೆ ಹೊಸ ಹೊಸ ಸಾಧ್ಯತೆಗಳನ್ನು ಹುಟ್ಟು ಹಾಕಿದೆ.
ಜಪಾನಿನಲ್ಲಿ ಕರೋಕೆ ಸಂಸ್ಕೃತಿಯು ಜನಜೀವನದ ಅವಿಭಾಜ್ಯ ಅಂಗವೇ ಆಗಿಹೋಗಿದೆ. ಸ್ನೇಹಿತರು ಮತ್ತು ಸಹೋದ್ಯೋಗಿಗಳು ಒಟ್ಟಾಗಿ ಕರೋಕೆ ಬಾಕ್ಸ್‌ಗೆ ಹೋಗುವುದು ಸಾಮಾನ್ಯ ಸಂಸ್ಕೃತಿಯಾಗಿದೆ. ಸಾಮಾನ್ಯವಾಗಿ, ಎಲ್ಲ ವ್ಯವಹಾರ, ಚರ್ಚೆಗಳ ಕೊನೆಯಲ್ಲಿ ಪಾರ್ಟಿ ಸಂಸ್ಕೃತಿಯ ಭಾಗವಾಗಿ ಕರೋಕೆ ಬಳಕೆಯಾಗುತ್ತಿದೆ.
ಹಲವಾರು ಅಮೆಚೂರ್ ಗಾಯಕರು, ಪ್ರಭಾವಶಾಲಿ ವ್ಯಕ್ತಿಗಳು, ಅಷ್ಟೇನೂ ಉತ್ತಮ ಗಾಯಕರಲ್ಲದವರು ಸಹ ತಮ್ಮ ಪ್ರತಿಭೆ ಪ್ರದರ್ಶಿಸಲು ಕರೋಕೆ ಬಳಸುತ್ತಿದ್ದಾರೆ. ಕರೋಕೆ ಇದ್ದರೆ ಯಾರು ಬೇಕಾದರೂ ಹಾಡಬಹುದು ಎಂಬ ಆತ್ಮವಿಶ್ವಾಸವನ್ನು ಅದು ಎಲ್ಲರಲ್ಲೂ ತುಂಬಿದೆ. ಜಪಾನಿನಲ್ಲಿ ಕರೋಕೆ ಚಾಂಪಿಯನ್ ಶಿಪ್ (ಕರೋಕೆ ಸ್ಪರ್ಧೆಗಳು) ತುಂಬಾ ಜನಪ್ರಿಯ.
ಇಂದು ಕರೋಕೆ ಜಪಾನಿನ ಸಾಂಸ್ಕೃತಿಕ ಹೆಗ್ಗುರುತಾಗಿ ನಿಂತಿದೆ. ವಯಸ್ಕರು, ಮಹಿಳೆ ಯರು, ಯುವಕರು, ಮಕ್ಕಳು ಎಂಬ ಭೇದವಿಲ್ಲದೇ ಎಲ್ಲರೂ ಇದನ್ನು ಬಳಸುತ್ತಾರೆ. ಜಪಾನಿನಲ್ಲಿ ಪುರಾತನ ಸಂಗೀತ ಶೈಲಿಗಳನ್ನು ( Enka, J-Pop, Anime Songs) ಕೂಡ ಕರೋಕೆ ಮೂಲಕ ಪ್ರಚೋದಿಸಲಾಗಿದೆ.
ಜಪಾನಿನ ಆರ್ಥಿಕತೆಯ ಮೇಲೆ ಕರೋಕೆ ತನ್ನ ಗಾಢ ಪ್ರಭಾವವನ್ನು ಬೀರಿರುವುದು ಗಮನಾರ್ಹ. ಕಾರಣ ಕರೋಕೆ ಉದ್ಯಮವು ಬಹು ಬಿಲಿಯನ್ ಡಾಲರ್ ಮೌಲ್ಯದ ಮಾರು ಕಟ್ಟೆಯಾಗಿದೆ. ಹೋಟೆಲ್‌ಗಳು, ಬಾರುಗಳು ಮತ್ತು ಪ್ರವಾಸೋದ್ಯಮ ವಲಯದಲ್ಲಿ ಕರೋಕೆ ಮಹತ್ವದ ಪಾತ್ರವಹಿಸುತ್ತಿದೆ. ಕರೋಕೆ ಇದ್ದರೆ ಯಾವ ದೇಶದ ಸಂಗೀತವಾದರೂ ಸಲೀಸು. ಎಐ ತಂತ್ರಜ್ಞಾನದ ಫಲದಿಂದ ಕರೋಕೆ ಸ್ವರೂಪವೇ ಬದಲಾಗುತ್ತದಂತೆ. ನಾವು ಮನಸ್ಸಿಗೆ ಬಂದಂತೆ, ನಮ್ಮದೇ ರಾಗದಲ್ಲಿ ಹಾಡಿದರೂ ಎಐ ತಂತ್ರಜ್ಞಾನ ನಮ್ಮ ಧ್ವನಿ ಯನ್ನು ಶುದ್ಧಗೊಳಿಸಿ, ಹಾಡಿನ ಮೂಲ ಸಂಗೀತಗಾರನ ದನಿಯಲ್ಲಿ ಕೇಳುವಂತೆ ಪರಿಷ್ಕ ರಿಸುತ್ತದಂತೆ.
ಇದರ ಜತೆಗೆ, ಕರೋಕೆ ಆಪ್ ಗಳು ವೃದ್ಧಿಯಾಗಿ, ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡುವ ಮೂಲಕ ಅಧಿಕ ಪ್ರಚಾರ ಪಡೆಯುವ ಸಾಧ್ಯತೆಯನ್ನು ಇನ್ನಷ್ಟು ಸುಲಭ ಗೊಳಿಸುತ್ತದಂತೆ. ಕರೋಕೆ ಕೇವಲ ಒಂದು ತಂತ್ರeನ ಅಥವಾ ಸಂಗೀತ ಸಾಧನ ಮಾತ್ರ ವಲ್ಲ,
ಅದು ಜಪಾನಿನ ಸಾಂಸ್ಕೃತಿಕ ಪರಂಪರೆಯ ಒಂದು ಪ್ರಮುಖ ಭಾಗ. ಜಪಾನ್ ಈ ಪ್ರಪಂಚ ಕ್ಕೆ ಕೊಟ್ಟ ಅತ್ಯಂತ ಪ್ರಭಾವಿ ಮತ್ತು ಬಹು ಆಯಾಮದ ಸಂಗೀತ ಮಾಧ್ಯಮ. ಇದು ಜನರನ್ನು ಒಗ್ಗೂಡಿಸುವ, ಖುಷಿ ನೀಡುವ ಮತ್ತು ಹೊಸ ಪ್ರತಿಭೆಗಳಿಗೆ ವೇದಿಕೆ ಒದಗಿಸುವ ಒಂದು ಅನನ್ಯ ಸಾಧನ. ಇಂದು ಕರೋಕೆ ಹೆಸರನ್ನು ಕೇಳದವರು ಇರಲಿಕ್ಕಿಲ್ಲ. ಜಪಾನಿನ ಒಂದು ಸಣ್ಣ ಆವಿಷ್ಕಾರ ಅರ್ಧ ಶತಮಾನದ ಅವಧಿಯಲ್ಲಿ ಇಡೀ ಜಗತ್ತನ್ನು ಆವರಿಸಿದ್ದು ಒಂದು ಪವಾಡವೇ. ಕರೋಕೆ ಜಾಗತೀಕರಣಕ್ಕೆ ಒಂದು ದೊಡ್ಡ ನಿದರ್ಶನ.
In karaoke, you don't choose the song; the song chooses you ಎಂಬ ಮಾತಿದೆ. ಅಷ್ಟೇ ಅಲ್ಲ, ಯಾವ ಹಾಡನ್ನಾದರೂ ಹಾಡುವಂತೆ ಕರೋಕೆ ಪ್ರಚೋದಿಸುತ್ತದೆ. ನೀವು ಯಾವ ಪ್ರಸಿದ್ಧ ಗಾಯಕ ಅಥವಾ ಗಾಯಕಿಯನ್ನು ನೆನಪಿಸಿಕೊಂಡರೆ ಸಾಕು, ಕ್ಷಣಾರ್ಧ ದಲ್ಲಿ ಅವರು ನಮ್ಮೊಳಗೇ ಅವತರಿಸಿ ಬಂದುಬಿಡುತ್ತಾರೆ. I'm a huge karaoke person even though I have the worst singing voice. When you love doing something, who cares? ಎಂದು ಯಾವನೋ ಹೇಳಿದ ಮಾತು ನೂರಕ್ಕೆ ನೂರು ಸತ್ಯ.
“ನಾನು ರಫಿ, ಕಿಶೋರ್, ಮನ್ನಾಡೇ ಥರಾ ಹಾಡುತ್ತೇನೆ ಅಂತ ಗೊತ್ತಾಗಿದ್ದೇ ರೋಕೆಯಿಂದ" ಎಂದು ಬಾತ್‌ರೂಮ್ ಸಿಂಗರ್ ಹೇಳಿದ್ದರೆ ಅದರಲ್ಲಿ ಆಶ್ಚರ್ಯವಿಲ್ಲ. ಅಳುವ ಕೋಣೆಗಳು ಜಪಾನ್ ಎಂದರೆ ತಂತ್ರಜ್ಞಾನ, ಶಿಸ್ತು, ಶ್ರಮಶೀಲತೆ ಮತ್ತು ವಿಶಿಷ್ಟ ಆವಿಷ್ಕಾರ ಎಂಬ ಚಿತ್ರಣ ನಮ್ಮ ಕಣ್ಮುಂದೆ ಬರುವುದು ಸಹಜ. ಆದರೆ ಜಗತ್ತಿನಲ್ಲಿಯೇ ಇಲ್ಲದ ವಿಚಿತ್ರಗಳು ಆ ದೇಶದಲ್ಲಿರುವುದನ್ನು ಕಂಡಾಗ ಆ ದೇಶದ ಬಗೆಗಿರುವ ಕಲ್ಪನೆಯೇ ಬದಲಾಗುತ್ತಾ ಹೋಗು ತ್ತದೆ. ಜಪಾನಿನಲ್ಲಿ ‘ಅಳುವ ಕೊಠಡಿ’ (Crying Rooms) ಗಳಿವೆ ಗೊತ್ತಾ ಎಂದಾಗ ನನಗೆ ನಂಬಲು ತುಸು ಸಮಯ ಹಿಡಿಯಿತು.
ಜಪಾನಿನ ಕೆಲವು ಹೋಟೆಲ್‌ಗಳು ಮಹಿಳೆಯರಿಗಾಗಿ ವಿಶೇಷವಾಗಿ ‘ಕ್ರೈಯಿಂಗ್ ರೂಮ್’ ಸೌಲಭ್ಯವನ್ನು ಆರಂಭಿಸಿವೆಯಂತೆ. ಇದೊಂದು ಅತ್ಯಂತ ಖಾಸಗಿ ಹಾಗೂ ಆರಾಮ ದಾಯಕ ಸ್ಥಳ. ಅಲ್ಲಿ ಮಹಿಳೆಯರು ತಮ್ಮ ಭಾವನೆಗಳನ್ನು ಮುಕ್ತವಾಗಿ ಹೊರಹಾಕ ಬಹುದು, ಮನಸೋ ಇಚ್ಛೆ ಅಳಬಹುದು, ಅತ್ತು ಅತ್ತು ಮನಸ್ಸನ್ನು ಹಗುರ ಮಾಡಿಕೊಳ್ಳ ಬಹುದು. ಇಂದು ಎಲ್ಲರ ಮನೆಗಳಲ್ಲಿ ಮುಕ್ತವಾಗಿ ಅಳುವ ಸ್ವಾತಂತ್ರ್ಯವೂ ಇರುವುದಿಲ್ಲ. ಕೆಲವರಿಗೆ ಅದು ಸಾಧ್ಯವೂ ಆಗಲಿಕ್ಕಿಲ್ಲ. ಮನೆಯಲ್ಲಿ ಮಕ್ಕಳ ಮುಂದೆ ಅಳಲಾಗುವುದಿಲ್ಲ.
ಎಷ್ಟೋ ಸಂದರ್ಭಗಳಲ್ಲಿ ಅಳು ಬಂದರೂ ಬೇರೆ ಬೇರೆ ಕಾರಣಗಳಿಂದ ಅಳುವನ್ನು ತಡೆದು ಕೊಳ್ಳುತ್ತೇವೆ ಅಥವಾ ಅಡಗಿಸಿಟ್ಟುಕೊಳ್ಳುತ್ತೇವೆ. ಅಂದರೆ ಚೆನ್ನಾಗಿ ಅತ್ತುಬಿಡ ಬೇಕು ಅಂದರೂ ಆಗುವುದಿಲ್ಲ. ಅಳು ಎಂಬುದು ಮಾನವೀಯ ಅಥವಾ ಭಾವನಾತ್ಮಕ ಅಭಿವ್ಯಕ್ತಿಯ ಬಹು ಮುಖ್ಯವಾದ ಭಾಗ. ಆದರೆ, ಸಮಾಜದಲ್ಲಿ ಬಹಳಷ್ಟು ಸಂದರ್ಭ ಗಳಲ್ಲಿ ಅಳು ‘ದೌರ್ಬಲ್ಯದ ಸಂಕೇತ’ ಎಂದು ಪರಿಗಣಿಸಲಾಗಿದೆ.
ಈ ಕಾರಣದಿಂದಾಗಿ, ಬಹುತೇಕರು ತಮ್ಮ ಭಾವನೆಗಳನ್ನು ಬಚ್ಚಿಟ್ಟುಕೊಳ್ಳಲು, ಹತ್ತಿಕ್ಕಲು ಅಥವಾ ಅಳುವನ್ನು ತಡೆಯಲು ಪ್ರಯತ್ನಿಸುತ್ತಾರೆ. ಆದರೆ, ಮಾನಸಿಕ ಆರೋಗ್ಯದ ತಜ್ಞರ ಪ್ರಕಾರ, ಅಳುವು ಒತ್ತಡದ ನಿವಾರಣೆ, ಹೃದಯ ಸಂತೋಷ ಹಾಗೂ ಶಾಂತಿಯ ಪ್ರವೇಶಕ್ಕೆ ದಾರಿ ತೆರೆಸುತ್ತದಂತೆ. ಮನಸ್ಸಿನ ಭಾರ ಇಳಿಸಿಕೊಳ್ಳಲು ಅಳು ಸಹಕಾರಿಯಂತೆ.
ಈ ಪರಿಕಲ್ಪನೆಯ ಮೂಸೆಯಲ್ಲಿ ಹುಟ್ಟಿಕೊಂಡಿದ್ದು ಅಳುವ ಕೋಣೆಗಳು. ಜಪಾನಿನ ಕೆಲವು ಹೋಟೆಲ್‌ಗಳು ಈ ಸಂಗತಿಯನ್ನು ಅರ್ಥಮಾಡಿಕೊಂಡು ಮಹಿಳೆಯರಿಗೆ ’ Cry Room ’ ಅನ್ನು ಪ್ರಾರಂಭಿಸಿವೆ. ಈ ಕೊಠಡಿಗಳು ಮಹಿಳೆಯರಿಗೆ ತಮ್ಮ ಭಾವನೆಗಳನ್ನು ಮುಕ್ತವಾಗಿ ಹೊರಹಾಕಲು ಅನುಕೂಲವಾಗುವ ರೀತಿಯಲ್ಲಿ ವಿನ್ಯಾಸಗೊಳಿಸಲ್ಪಟ್ಟಿವೆ.
ಜಪಾನ್ ಅತ್ಯಂತ ತೀವ್ರವಾಗಿ ಕೆಲಸ ಮಾಡುವವರಿರುವ, ಶ್ರಮಿಕ ಸಂಸ್ಕೃತಿ ಇರುವ ದೇಶ. ಅಲ್ಲಿನ ಕಾರ್ಪೊರೇಟ್ ಸಂಸ್ಕೃತಿ ಬಹಳ ಜಟಿಲ ಮತ್ತು ಒತ್ತಡಪೂರ್ಣವಾಗಿದೆ. ಮಹಿಳೆ ಯರು ಕೆಲಸ, ಕುಟುಂಬ ಮತ್ತು ಸಮಾಜದ ನಿರೀಕ್ಷೆಗಳನ್ನು ಸಮಾನವಾಗಿ ತಲುಪ ಬೇಕೆಂಬ ಅಪೇಕ್ಷೆಯಲ್ಲಿ ಸದಾ ಇಕ್ಕಟ್ಟಿನ ಸ್ಥಿತಿಯಲ್ಲಿರುತ್ತಾರೆ. ಇದರಿಂದಾಗಿ, ಅವರ ಮೇಲಿನ ಒತ್ತಡ ಹೆಚ್ಚಾಗುತ್ತದೆ ಮತ್ತು ಅವರು ತಮ್ಮ ಭಾವನೆಗಳನ್ನು ಮುಕ್ತವಾಗಿ ಹೊರಹಾಕಲು ಅವಕಾಶವೂ ಇಲ್ಲ, ಅದಕ್ಕೆ ಸರಿಯಾದ ಜಾಗವೂ ಇಲ್ಲ.
ಅನೇಕ ಬಾರಿ ಮಹಿಳೆಯರು ತಮ್ಮ ಭಾವನೆಗಳನ್ನು ತಡೆದುಕೊಳ್ಳುವ ಅನಿವಾರ್ಯತೆ ಎದುರಿಸುತ್ತಾರೆ. ಕೆಲಸದ ಸ್ಥಳದಲ್ಲಿ ಅಥವಾ ತಮ್ಮ ಮನೆಯಲ್ಲಿ ಅತ್ತು ಹಗುರಾಗುವ ವಾತಾವರಣ ಇರುವುದಿಲ್ಲ. ಅಳುವುದು ಹತ್ತಾರು ಸಂದೇಹಗಳಿಗೆ ಆಸ್ಪದ ನೀಡಬಹುದು. ಒಂದು ಅಳು ಇಡೀ ಸಂಸಾರದ ಮಾನ ಮರ್ಯಾದೆಯನ್ನು ಹರಾಜು ಹಾಕಬಹುದು. ಎಲ್ಲರ ಮುಂದೆ ಅತ್ತರೆ ತಮ್ಮ ಆತ್ಮವಿಶ್ವಾಸವನ್ನು ಕುಂದಿಸಬಹುದು ಎಂಬ ಭಯ ಅವರಿಗೆ ಇರುತ್ತದೆ. ಈ ಸಮಸ್ಯೆಯನ್ನು ಪರಿಹರಿಸಲು ‘ಅಳುವ ಕೋಣೆ’ ಪರಿಕಲ್ಪನೆ ಜಾರಿಗೆ ಬಂದಿದೆ.
ಹಾಗಾದರೆ ಅಳುವುದು ಮಾನಸಿಕ ಆರೋಗ್ಯಕ್ಕೆ ಹಿತಕರವೇ? ಹೌದು. ಅಳುವುದು ಕೇವಲ ದುಃಖದ ಸಂಕೇತವಲ್ಲ. ವಿಜ್ಞಾನಿಗಳು ಹೇಳುವಂತೆ, ಅಳು ಆಂತರಿಕ ಒತ್ತಡವನ್ನು ಹೊರ ಹಾಕಲು ಅನುವು ಮಾಡಿಕೊಡುವ ಉತ್ತಮ ಮಾರ್ಗ. ನೈಸರ್ಗಿಕ ವಾದದ ಪ್ರಕಾರ ಅಳು ಒಂದು ಉತ್ತಮ ಚಿಕಿತ್ಸೆಯೂ ಹೌದು. ಇದು ಸ್ಟ್ರೆಸ್ ಹಾರ್ಮೋನ್‌ಗಳನ್ನ ಕಡಿಮೆ ಮಾಡ ಬಹುದು, ಮನಸ್ಸನ್ನು ಶಾಂತಗೊಳಿಸಬಹುದು, ಮತ್ತು ತಾಜಾತನವನ್ನು ನೀಡಬಹುದು.
ಅಳುವ ಕೊಠಡಿಗಳು ಆರಾಮದಾಯಕ ಪರಿಸರ ( Comfortable Ambiance) ಮತ್ತು ಅತ್ಯಂತ ಶಾಂತ ವಾತಾವರಣವನ್ನು ಹೊಂದಿರುತ್ತವೆ. ಮೃದು ಬೆಳಕು ( Soft lighting ), ಬೂದು, ಹಳದಿ, ನೀಲಿ ಬಣ್ಣದ ಶಾಂತಗೊಳಿಸುವ ಗೋಡೆಗಳು, -- ಸೋ-ಗಳು ಮತ್ತು ಮೆತ್ತನೆಯ ಹಾಸಿಗೆಗಳನ್ನು ಹೊಂದಿರುತ್ತವೆ. ಈ ಕೊಠಡಿಯಲ್ಲಿ ಅಳುವ ಅನುಭವವನ್ನು ಸುಗಮಗೊಳಿಸಲು ಹೋಟೆಲ್ ಹಲವು ವಿಶೇಷ ಸಾಮಗ್ರಿಗಳನ್ನು ಒದಗಿಸುತ್ತದೆ. ಉನ್ನತ ದರ್ಜೆಯ ಟಿಷ್ಯೂಗಳು (ಕಣ್ಣೀರನ್ನು ಒರೆಸಲು), ಶಾಂತಗೊಳಿಸುವ ಸಂಗೀತ (ಪರಿಚಯ ವಿಲ್ಲದ ಧ್ವನಿಗಳು, ನೈಸರ್ಗಿಕ ಶಬ್ದಗಳು), ಅರೋಮಾಥೆರಪಿ (ಲಾವೆಂಡರ್, ಚಮೋಮೈಲ್ ಪರಿಮಳಗಳು), ಮುಖ ಒರೆಸಿಕೊಳ್ಳಲು ಮೃದುವಾದ ಟವೆಲ್‌ಗಳು (ಕಣ್ಣೀರು ಒಣಗಿದ ನಂತರ ಮುಖ ಒರೆಸಿಕೊಳ್ಳಲು), ಉತ್ಸಾಹದಾಯಕ ಪುಸ್ತಕಗಳು ಅಥವಾ ಡೈರಿಗಳು (ಭಾವನೆಗಳನ್ನು ಬರೆಯಲು) ಮುಂತಾದವುಗಳನ್ನು ಇಟ್ಟಿರುತ್ತಾರೆ.
ಈ ಕೊಠಡಿಗಳು ಸಂಪೂರ್ಣವಾಗಿ ಮಹಿಳೆಯರಿಗಷ್ಟೇ ಮೀಸಲಾಗಿರುತ್ತವೆ. ಹಾಗಾಗಿ ಬೇರೆ ಯಾರೂ ಅತಿಕ್ರಮಣ ಮಾಡುವ ಭಯ ಇಲ್ಲ. ಬುಕಿಂಗ್ ಪ್ರಕ್ರಿಯೆಯನ್ನು ಪೂರ್ತಿಯಾಗಿ ಗೌಪ್ಯವಾಗಿಡಲಾಗುತ್ತದೆ. ಹೀಗಾಗಿ ಸಾಮಾಜಿಕ ಅಪಮಾನ ಅಥವಾ ನಾಚಿಕೆ ಉಂಟಾಗುವ ಸಾಧ್ಯತೆ ಕಡಿಮೆ. ಅಲ್ಲಿಗೆ ಬಂದಿದ್ದು ಯಾರಿಗೂ ಗೊತ್ತಾಗುವುದಿಲ್ಲ. ಇಂದಿನ ಜಗತ್ತಿನಲ್ಲಿ ನಮ್ಮ ಮನಸ್ಸಿಗೆ ಸ್ಪಂದಿಸುವ ಸ್ಥಳಗಳು ಕಡಿಮೆ. ಕೆಲಸ ಮಾಡುವ ತಾಣ (ಆಫೀಸು) ಮತ್ತು ಮನೆಯಲ್ಲಿ ಅಳುವುದು ಸಾಧ್ಯವೇ ಇಲ್ಲ.
ಇವನ್ನು ಬಿಟ್ಟರೆ ಅಳಲು ಅಥವಾ ನಮ್ಮ ಮನಸ್ಸಿನ ಭಾರ ಹೊರಹಾಕಲು ಬೇರೆ ತಾಣಗಳು ಇಲ್ಲವೇ ಇಲ್ಲ. ಅಳು Self Care ಅನ್ನು ಪ್ರೇರೇಪಿಸುತ್ತದೆ ಮತ್ತು ಮಹಿಳೆಯರಿಗೆ ತಮ್ಮ ಭಾವನೆಗಳನ್ನು ಗೌರವಿಸುವ ಅವಕಾಶ ನೀಡುತ್ತದೆ. ಅಳುವ ಕೋಣೆಗಳ ಸೌಕರ್ಯವನ್ನು ಬಯಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇವುಗಳ ಜನಪ್ರಿಯತೆಯಿಂದಾಗಿ, ಇಂಥ ಕೊಠಡಿಗಳನ್ನು ಕಚೇರಿಗಳಲ್ಲಿ, ಶಾಲೆಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲೂ ತೆರೆಯ ಬೇಕೆಂಬ ಒತ್ತಾಯವೂ ಬರಲಾರಂಭಿಸಿದೆ.
ಸಾಕಷ್ಟು ಮಂದಿ ಅಂಥ ಸಲಹೆ ನೀಡಿದ್ದಾರೆ. ಕೇವಲ ಮಹಿಳೆಯರಷ್ಟೇ ಅಲ್ಲ, ಪುರುಷರೂ ಒತ್ತಡವನ್ನು ಅನುಭವಿಸುತ್ತಾರೆ, ಅವರಿಗೂ ಅಳುವ ಕೋಣೆಗಳನ್ನೇಕೆ ತೆರೆಯಬಾರದು ಎಂಬ ಚರ್ಚೆಯೂ ಆರಂಭವಾಗಿದೆ. ಈ ಕೊಠಡಿಗಳು ತಾತ್ಕಾಲಿಕ ಪರಿಹಾರವನ್ನು ನೀಡ ಬಹುದೇ ಹೊರತು, ಶಾಶ್ವತ ಮಾನಸಿಕ ಪರಿಹಾರ ನೀಡುವುದಿಲ್ಲ ಎಂಬ ವಾದವೂ ಕೇಳಿ ಬರುತ್ತಿವೆ.
ಈ ಪರಿಕಲ್ಪನೆ, ಮಾನಸಿಕ ಒತ್ತಡವಿರುವ ಎಲ್ಲರಿಗೂ ಅನುಕೂಲವಾದೀತು. ಭವಿಷ್ಯದಲ್ಲಿ, ಇದು ಅಗತ್ಯ ಸೇವೆಯಾಗಿಯೂ ಜಾರಿಗೆ ಬರಬಹುದು. ಅಳುವುದು ಲಜ್ಜೆಯಲ್ಲ, ಅದೊಂದು ಸ್ವಾಭಾವಿಕ ಮಾನವೀಯ ಅನಿಸಿಕೆಯ ಪ್ರಸ್ತುತಿ. ಅಷ್ಟಕ್ಕೂ ನಾವು ಈ ಜಗತ್ತಿಗೆ ಕಾಲಿಟ್ಟಿದ್ದೇ ಅಳುವ ಮೂಲಕವಲ್ಲವೇ?