Maha Kumbh Stampede: ಕುಂಭಮೇಳದಲ್ಲಿ ಬೆಳಗಾವಿಯ ನಾಲ್ವರ ದುರ್ಮರಣ; ಲಕ್ಷ್ಮಿ ಹೆಬ್ಬಾಳ್ಕರ್, ಸತೀಶ್ ಜಾರಕಿಹೊಳಿ ಸಂತಾಪ
Maha Kumbh Stampede: ಕುಂಭಮೇಳ ದುರಂತದಲ್ಲಿ ಬೆಳಗಾವಿಯ ನಾಲ್ವರು ಸೇರಿ ಹಲವರು ಸಾವಿಗೀಡಾಗಿರುವ ಸುದ್ದಿ ತಿಳಿದು ಮನಸ್ಸಿಗೆ ನೋವಾಗಿದೆ. ಮೃತರ ಆತ್ಮಗಳಿಗೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇವೆ ಎಂದು ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.


ಬೆಳಗಾವಿ: ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನ ಮಹಾ ಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಕಂಬನಿ ಮಿಡಿದಿದ್ದಾರೆ. ದುರಂತದಲ್ಲಿ ಬೆಳಗಾವಿಯ ನಾಲ್ವರು ಸೇರಿದಂತೆ ಹಲವರು ಸಾವಿಗೀಡಾಗಿರುವ ಸುದ್ದಿ ತಿಳಿದು ಮನಸ್ಸಿಗೆ ನೋವಾಗಿದೆ. ಈ ಸಂದರ್ಭದಲ್ಲಿ ಮೃತರ ಆತ್ಮಗಳಿಗೆ ಶಾಂತಿ ಸಿಗಲೆಂದು ಹಾಗೂ ಕಾಲ್ತುಳಿತದಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವವರು ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.
ಕಾಲ್ತುಳಿತದಲ್ಲಿ ರಾಜ್ಯದ ಇನ್ನು ಕೆಲವು ಜನ ಗಾಯಗೊಂಡಿರುವ ಮಾಹಿತಿಯಿದ್ದು, ಎಲ್ಲರನ್ನು ಕ್ಷೇಮವಾಗಿ ರಾಜ್ಯಕ್ಕೆ ಕರೆತರಲು ರಾಜ್ಯ ಸರ್ಕಾರ ಅಧಿಕಾರಿಗಳನ್ನು ನಿಯೋಜಿಸಿದ್ದು, ನಮ್ಮವರ ರಕ್ಷಣೆಗೆ ಸರ್ಕಾರ ಸಕಲ ಪ್ರಯತ್ನ ಮಾಡುತ್ತಿದೆ ಎಂದು ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಚಿವ ಸತೀಶ್ ಜಾರಕಿಹೊಳಿ ಸಂತಾಪ
ಬೆಳಗಾವಿ: ಪ್ರಯಾಗ್‌ರಾಜ್‌ನ ಮಹಾ ಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಬೆಳಗಾವಿಯ ವಡಗಾವಿ ನಿವಾಸಿಗಳಾದ ಜ್ಯೋತಿ ಹತ್ತರವಾಠ್ (50) ಮೇಘಾ ಹತ್ತರವಾಠ್, ಶೆಟ್ಟಿಗಲ್ಲಿ ನಿವಾಸಿ ಅರುಣ್ ಕೋಪರ್ಡೆ ಹಾಗೂ ಶಿವಾಜಿ ನಗರದ ಮಾಹಾದೇವಿ ಭವನೂರ ಅವರು ಮೃತಪಟ್ಟಿರುವುದು ತಿಳಿದು ದುಃಖಿತನಾಗಿದ್ದೇನೆ. ಆ ದೇವರು ಅವರ ಕುಟುಂಬ ವರ್ಗಕ್ಕೆ ದುಃಖ ಭರಿಸುವ ಶಕ್ತಿ ಹಾಗೆ ಮೃತರ ಆತ್ಮಕ್ಕೆ ಶಾಂತಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸಂತಾಪ ಸೂಚಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ವಿಷಯ ತಿಳಿಸಿದ ಅವರು, ಪ್ರಯಾಗ್‌ರಾಜ್ ಮಹಾಕುಂಭದಲ್ಲಿ ಏಕಾಏಕಿ ಜನಸಂದಣಿ ಹೆಚ್ಚಾದ ಕಾರಣ ಮಾತಿನ ಚಕಮಕಿ ಉಂಟಾಗಿದೆ. ಈ ವೇಳೆ ಕಾಲ್ತುಳಿತದಿಂದ ಬೆಳಗಾವಿ ಮೂಲದ ನಾಲ್ವರು ಸಾವನ್ನಪ್ಪಿದ್ದಾರೆ. ಅಲ್ಲದೇ ಈ ಮಹಾಕುಂಭಮೇಳದಲ್ಲಿ ಬೆಳಗಾವಿ ಮೂಲದ 30 ಜನರು ಭಾಗವಹಿಸಿದ್ದು, ಕೆಲವರು ಗಾಯಗೊಂಡಿರುವ ಮಾಹಿತಿಯಿದೆ. ಅವರೆಲ್ಲರು ಸುರಕ್ಷಿತವಾಗಿ ಮರಳಲಿ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Mahakumbh Mela: ಮಹಾ ಕುಂಭಮೇಳಕ್ಕೆ ತೆರಳಿ ವಾಪಸ್ ಬರುತ್ತಿದ್ದ ವೇಳೆ ಅಪಘಾತ; ರಾಜ್ಯದ ಇಬ್ಬರ ದುರ್ಮರಣ
ಮಹಾ ಕುಂಭಮೇಳಕ್ಕೆ ತೆರಳಿ ವಾಪಸ್ ಬರುತ್ತಿದ್ದ ವೇಳೆ ಅಪಘಾತ; ರಾಜ್ಯದ ಇಬ್ಬರ ದುರ್ಮರಣ
ಮೈಸೂರು: ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನ ಮಹಾ ಕುಂಭಮೇಳಕ್ಕೆ ತೆರಳಿ ವಾಪಸ್ ಬರುವಾಗ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೈಸೂರು ಹಾಗೂ ಮಂಡ್ಯದ ಇಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ರಾಮಕೃಷ್ಣ ಶರ್ಮ(31), ಅರುಣ್ ಶಾಸ್ತ್ರಿ(38) ಮೃತರು.
ಪ್ರಯಾಗರಾಜ್‌ನಿಂದ ಕಾಶಿಗೆ ತೆರಳುವಾಗ ಮಿರ್ಜಾಪುರದ ಬಳಿ ಲಾರಿ ಮತ್ತು ರಾಮಕೃಷ್ಣ ಶರ್ಮ , ಅರುಣ್ ಶಾಸ್ತ್ರಿ ಅವರಿದ್ದ ಕಾರಿನ ನಡುವೆ ಅಪಘಾತ ಸಂಭವಿಸಿದೆ. ತಲೆಗೆ ತೀವ್ರವಾದ ಪೆಟ್ಟು ಬಿದ್ದು ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.
ಮೈಸೂರು ತಾಲೂಕಿನ ಮಂಟಿಕ್ಯಾತನಹಳ್ಳಿ ನಿವಾಸಿ ರಾಮಕೃಷ್ಣ ಶರ್ಮ ಅವರು ಕೆಆರ್‌ಎಸ್ ಹಿನ್ನೀರಿನ ವೇಣುಗೋಪಾಲ ಸ್ವಾಮಿ ದೇವಸ್ಥಾನದಲ್ಲಿ ಸಹಾಯಕ ಅರ್ಚಕರಾಗಿದ್ದು, ತಂದೆ – ತಾಯಿಗೆ ಇವರು ಒಬ್ಬರೇ ಮಗ. ಇನ್ನು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟ ತಾಲೂಕಿನ ಕೆಆರ್‌ಎಸ್ ನಿವಾಸಿ ಅರುಣ್ ಶಾಸ್ತ್ರಿ ಪುರೋಹಿತರಾಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಈ ಸುದ್ದಿಯನ್ನೂ ಓದಿ | Kumbhamela Stampede: ಮಹಾಕುಂಭ ಮೇಳದಲ್ಲಿ ಕಾಲ್ತುಳಿತ-ಸಿಎಂ ಯೋಗಿ ಫಸ್ಟ್ ರಿಯಾಕ್ಷನ್