Bengaluru News: ಬೆಂಗಳೂರಿನಲ್ಲಿ ಮೊದಲ ದಶಪಥ; ಎಲ್ಲಿ, ಏನಿದು ಯೋಜನೆ?
ಸುಮಾರು 450 ಕೋಟಿ ರೂಪಾಯಿ ವೆಚ್ಚದಲ್ಲಿ 10.75 ಕಿ.ಮೀ ಉದ್ದದ ಎಂಎಆರ್ ಯೋಜನೆಯು ಪ್ರಸ್ತುತ ಪ್ರಗತಿಯಲ್ಲಿದೆ. ಈ ವಿಸ್ತಾರವಾದ ರಸ್ತೆಯು 100 ಮೀಟರ್ ಅಗಲ ಮತ್ತು 8 ಲೇನ್‌ಗಳನ್ನು ಹೊಂದಿದೆ. ಸಂಚಾರ ದಟ್ಟಣೆಯನ್ನು ಇದು ಕಡಿಮೆ ಮಾಡಲಿದೆ.


ಬೆಂಗಳೂರು: ಬೆಂಗಳೂರಿನ (Bengaluru news) ಮೈಸೂರು ರಸ್ತೆಯಿಂದ (Mysuru road) ಮಾಗಡಿ ರಸ್ತೆಗೆ (Magadi road) ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ 11 ಕಿಮೀ ಉದ್ದದ ಮೇಜರ್ ಆರ್ಟೀರಿಯಲ್ ರಸ್ತೆ (Major Arterial Road) ಕಾಮಗಾರಿ ಪ್ರಗತಿಯಲ್ಲಿದೆ. ಇದು ಬೆಂಗಳೂರಿನ ಮೊದಲ ದಶಪಥ ಎನಿಸಲಿದ್ದು, 300 ಅಡಿ ಅಗಲ ಇರಲಿದೆ. ಇದು ಎರಡು ರಸ್ತೆಗಳ ನಡುವೆ ಪ್ರಮುಖ ಕೊಂಡಿಯಾಗಿ ಕಾರ್ಯನಿರ್ವಹಿಸಿ, ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲಿದೆ.
ಬಿಡಿಎ ಕೆಂಪೇಗೌಡ ಲೇಔಟ್ ಮೂಲಕ ಈ ರಸ್ತೆ ಹಾದು ಹೋಗಲಿದೆ. ಸದ್ಯ ಕೆಂಪೇಗೌಡ ಬಡಾವಣೆಯಲ್ಲಿ ಒತ್ತುವರಿ ತೆರವು ಮಾಡುವ ಕೆಲಸ ನಡೆಯುತ್ತಿದ್ದು, ಇನ್ನು ಸುಮಾರು ಮೂರು ತಿಂಗಳ ಕೆಲಸ ಬಾಕಿ ಉಳಿದಿದೆ. ಮಾಗಡಿ ರಸ್ತೆ ಮತ್ತು ಮೈಸೂರು ರಸ್ತೆಯನ್ನು ಸಂಪರ್ಕಿಸುವ ಚಲ್ಲಘಟ್ಟ ಬಳಿ ರೈಲ್ವೆ ಕೆಳಸೇತುವೆ ನಿರ್ಮಾಣಕ್ಕೆ ರೈಲ್ವೆ ಇಲಾಖೆ ಕೂಡ ಈಗಾಗಲೆ ಅನುಮೋದನೆ ನೀಡಿದೆ. 2019ರಲ್ಲೇ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಈ ಮನವಿ ಮಾಡಿತ್ತು. ಆದರೆ, ಕೋವಿಡ್ ಹಾಗೂ ಭೂಸ್ವಾಧೀನ ಸಮಸ್ಯೆಯಿಂದ ಯೋಜನೆ ನಿಧಾನವಾಗಿತ್ತು.
ಖಾಸಗಿ ಕಂಪನಿಯೊಂದು ಈ ರೈಲ್ವೆ ಕೆಳಸೇತುವೆ (ಆರ್‌ಯುಬಿ) ನಿರ್ಮಾಣದ ಟೆಂಡರ್ ಪಡೆದುಕೊಂಡಿದೆ. ಈ ಯೋಜನೆಯು ಮೇಜರ್ ಆರ್ಟಿರಿಯಲ್ ರಸ್ತೆಯಲ್ಲಿ (ಎಂಎಆರ್) ಇದು ಕೂಡ ಇದೆ. ಬಿಎಂಆರ್‌ಸಿಎಲ್‌ನಿಂದ ನಿರ್ಮಾಣ ಹಂತದಲ್ಲಿರುವ ಮೆಟ್ರೋ ಮಾರ್ಗದೊಂದಿಗೆ ಈ ಆರ್‌ಯುಬಿ ಲಿಂಕ್ ಆಗಲಿದೆ. ಇದು ನಾಲ್ಕು ಲೇನ್‌ಗಳಲ್ಲಿ ವ್ಯಾಪಿಸಲಿದ್ದು, ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಳಿಸುವುದಾಗಿ ಬಿಡಿಎ ಅಧಿಕಾರಿಗಳು ಹೇಳಿದ್ದಾರೆ. ಈ ರಸ್ತೆಯು ಬೆಂಗಳೂರು ಪಶ್ಚಿಮ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಲಿದ್ದು, ಬಿಡದಿ ಅಥವಾ ನೆಲಮಂಗಲದಲ್ಲಿ ಉದ್ದೇಶಿತ ಬೆಂಗಳೂರು 2ನೇ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಲು ಸಹ ಇದು ಸಹಾಯ ಮಾಡಲಿದೆ. ಮುಖ್ಯವಾಗಿ ಪಿಆರ್‌ಆರ್ ಅನ್ನು ಕೂಡ ಸಂಪರ್ಕಿಸಲಿದೆ.
ಸುಮಾರು 450 ಕೋಟಿ ರೂಪಾಯಿ ವೆಚ್ಚದಲ್ಲಿ 10.75 ಕಿ.ಮೀ ಉದ್ದದ ಎಂಎಆರ್ ಯೋಜನೆಯು ಪ್ರಸ್ತುತ ಪ್ರಗತಿಯಲ್ಲಿದೆ. ಈ ವಿಸ್ತಾರವಾದ ರಸ್ತೆಯು 100 ಮೀಟರ್ ಅಗಲ ಮತ್ತು 8 ಲೇನ್‌ಗಳನ್ನು ಹೊಂದಿದೆ. ಅಲ್ಲದೆ ನಾಡಪ್ರಭು ಕೆಂಪೇಗೌಡ ಬಡಾವಣೆಯ ಎಲ್ಲ 9 ಬ್ಲಾಕ್‌ಗಳನ್ನೂ ಸಂಪರ್ಕಿಸಲಿದೆ. ಮಾಗಡಿ ರಸ್ತೆ ಮತ್ತು ಮೈಸೂರು ರಸ್ತೆಗೆ ಸಂಪರ್ಕ ಕೂಡ ಸುಲಭವಾಗಲಿದೆ. ಇದರಲ್ಲಿ ಮೂರು ಅಂಡರ್‌ಪಾಸ್‌ಗಳು, 35 ಸಣ್ಣ ಸೇತುವೆಗಳು ಮತ್ತು ರೈಲ್ವೆ ಕೆಳಸೇತುವೆ ಕೂಡ ಒಳಗೊಂಡಿದೆ. ಈ ಯೋಜನೆಯು ಈ ಎರಡು ರಸ್ತೆಗಳನ್ನು ಜೋಡಿಸುವ ಮೂಲಕ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲಿದೆ. 2019ಕ್ಕೇ ಕೆಂಪೇಗೌಡ ಲೇಔಟ್‌ನಲ್ಲಿರುವ ಎಂಎಆರ್ ಅನ್ನು ಮೈಸೂರು ರಸ್ತೆಗೆ ಸಂಪರ್ಕಿಸುವ ರೈಲ್ವೆ ಕೆಳಸೇತುವೆ ನಿರ್ಮಿಸಲು ರೈಲ್ವೆ ಇಲಾಖೆಗೆ ಬಿಡಿಎ ಅನುಮತಿ ಕೋರಿತ್ತು. ಆದರೆ, ಕಾರಣಾಂತರಗಳಿಂದ ಇದು ವಿಳಂಬವಾಯಿತು. ಈಗ ರೈಲ್ವೇ ಇಲಾಖೆ ಗ್ರೀನ್ ಸಿಗ್ನಲ್ ನೀಡಿದೆ. ರೈಲ್ವೇ ಟ್ರ್ಯಾಕ್ ಅಡಚಣೆಯನ್ನು ಬೈಪಾಸ್ ಮಾಡುವ ಮೂಲಕ ಈ ರಸ್ತೆಯು ಮೈಸೂರು ರಸ್ತೆಯನ್ನು ಸಂಪರ್ಕಿಸಲಿದೆ.
ಇದನ್ನೂ ಓದಿ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ರಾಷ್ಟ್ರೀಯ ರಸ್ತೆ ಸುರಕ್ಷತಾ ಅಭಿಯಾನ