#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Makar Sankranti 2025: ಮಕರ ಸಂಕ್ರಾಂತಿಯಂದು ಗಾಳಿಪಟ ಹಾರಿಸೋದೇಕೆ? ಅದರ ವಿಶೇಷತೆ ಏನು?

Makar Sankranti 2025: ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ಗಾಳಿಪಟ ಹಾರಿಸುವ ಸಂಪ್ರದಾಯವಿದೆ. ಸಾಕಷ್ಟು ಕಡೆಗಳಲ್ಲಿ ಪಟಗಳನ್ನು ಹಾರಿಸಿ ಎಲ್ಲರೂ ಸಂಭ್ರಮಪಡುತ್ತಾರೆ. ಈ ಆಚರಣೆಯ ಹಿಂದೆ ಧಾರ್ಮಿಕ ಮತ್ತು ವೈಜ್ಞಾನಿಕ ಕಾರಣವೂ ಇದೆ. ಅದೇನು ಎನ್ನುವ ವಿವರ ಇಲ್ಲಿದೆ.

Makar Sankranti 2025: ಮಕರ ಸಂಕ್ರಾಂತಿಯಂದು ಗಾಳಿಪಟ ಹಾರಿಸೋದೇಕೆ? ಅದರ ವಿಶೇಷತೆ ಏನು?

Profile Sushmitha Jain Jan 14, 2025 6:30 AM
ಬೆಂಗಳೂರು: ಮಕರ ಸಂಕ್ರಾಂತಿ (Makar sankranti 2025) ಹಬ್ಬವನ್ನು ಕರ್ನಾಟಕದಲ್ಲಿ, ಭಾರತದ ಬಹುತೇಕ ಎಲ್ಲ ಭಾಗಗಳಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ವಿವಿಧ ರಾಜ್ಯಗಳಲ್ಲಿ, ವಿವಿಧ ಹೆಸರಿಂದ ಈ ಹಬ್ಬವನ್ನು ಕರೆಯಲಾಗುತ್ತದೆ. ಈ ವರ್ಷ ಈ ಹಬ್ಬವನ್ನು ಭಾರತದಲ್ಲಿ ಇಂದು (ಜ. 14) ಆಚರಿಸಲಾಗುತ್ತದೆ. ಈ ಪವಿತ್ರ ದಿನದ ಶುಭ ಸಂದರ್ಭದಲ್ಲಿ, ಸೂರ್ಯನನ್ನು ಪೂಜಿಸುವುದು ಮತ್ತು ಗಂಗೆಯಲ್ಲಿ ಸ್ನಾನ ಮಾಡುವುದು ಸಹ ಮುಖ್ಯವೆಂದು ಪರಿಗಣಿಸಲಾಗುತ್ತದೆ.
ಮಕರ ಸಂಕ್ರಾಂತಿಯಂದು ಸಾಮಾನ್ಯವಾಗಿ ಗಾಳಿಪಟಗಳನ್ನು ಹಾರಿಸಲಾಗುತ್ತದೆ. ಆದರೆ ಬಹುತೇಕರಿಗೆ ಇದರ ಹಿಂದಿರುವ ಕಾರಣ ತಿಳಿದಿಲ್ಲ. ಈ ಲೇಖನದಲ್ಲಿ ನಿಮ್ಮ ಅನುಮಾನಕ್ಕಿದೆ ಉತ್ತರ. ಮಕರ ಸಂಕ್ರಾಂತಿಯ ಶುಭ ಸಂದರ್ಭದಲ್ಲಿ ಗಾಳಿಪಟಗಳನ್ನು ಹಾರಿಸುವುದರ ಹಿಂದಿನ ಕಥೆ ಏನು ಮತ್ತು ಯಾವ ರಾಜ್ಯದಲ್ಲಿ ಅದರ ಪ್ರಾಮುಖ್ಯತೆ ಹೆಚ್ಚು ಎನ್ನುವುದನ್ನು ನೋಡೋಣ.
ಗಾಳಿಪಟವನ್ನು ಆಕಾಶದ ಎತ್ತರಕ್ಕೆ ಹಾರಿಸುವುದೇಕೆ?
ಬಣ್ಣ ಬಣ್ಣದ ಗಾಳಿಪಟವನ್ನು ಆಕಾಶದ ಎತ್ತರಕ್ಕೆ ಹಾರಿಸುವುದು ಸಂಕ್ರಾಂತಿಯ ಆಚರಣೆಯಲ್ಲಿ ಪ್ರಮುಖ ಭಾಗ. ಇದೇ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಕೈಟ್ ಫ್ಲೈಯಿಂಗ್ ಉತ್ಸವವನ್ನು ಪ್ರತಿವರ್ಷ ಗುಜರಾತ್‌ನಲ್ಲಿ ಆಯೋಜಿಸಲಾಗುತ್ತದೆ. ಅತ್ಯಂತ ಪ್ರಾಚೀನ ಹಿಂದೂ ಉತ್ಸವಗಳಲ್ಲಿ ಒಂದಾದ ಮಕರ ಸಂಕ್ರಾಂತಿಯು ಸೂರ್ಯ ದೇವನಿಗೆ ಮೀಸಲಾದ ಹಬ್ಬ ಎಂದು ಕರೆಯಲಾಗುತ್ತದೆ. ಅಲ್ಲದೆ ಅಯ್ಯಪ್ಪ ಸ್ವಾಮಿಯ ಸನ್ನಿಧಿಯಲ್ಲಿ ಮಕರ ಜ್ಯೋತಿಯು ಕಾಣಿಸಿಕೊಳ್ಳುತ್ತದೆ ಎನ್ನುವ ನಂಬಿಕೆಯೂ ಇದೆ.
ಸುಗ್ಗಿಯ ಋತುವಿನ ಆಗಮನವನ್ನು ಸೂಚಿಸುವ ಈ ಹಬ್ಬವು ಚಳಿಗಾಲದ ಅಂತ್ಯವನ್ನು ಸಹ ಸಂಕೇತಿಸುತ್ತದೆ. ಸಾಮಾನ್ಯವಾಗಿ ಚಳಿಗಾಲದಲ್ಲಿ ಸಾಕಷ್ಟು ಸೂಕ್ಷ್ಮಾಣುಗಳು ಉತ್ಪತ್ತಿಯಾಗುತ್ತವೆ. ಇದರಿಂದ ಸಾಕಷ್ಟು ಅನಾರೋಗ್ಯ ಹಾಗೂ ಜ್ವರಗಳು ಬರುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಮಕರ ಸಂಕ್ರಾಂತಿಯ ಸಮಯದಲ್ಲಿ ಪ್ರಕಾಶಮಾನವಾದ ಸೂರ್ಯನ ಕಿರಣಗಳನ್ನು ಪಡೆಯುವುದರಿಂದ ಬ್ಯಾಕ್ಟೀರಿಯಾಗಳು ನೈಸರ್ಗಿಕವಾಗಿಯೇ ನಾಶವಾಗುತ್ತವೆ. ಈ ಕಾರಣದಿಂದಲೇ ಜನರು ಮನೆಯಿಂದ ಹೊರಬಂದು, ಸೂರ್ಯನ ಬೆಳಕಿಗೆ ಮೈಒಡ್ಡಿ ಗಾಳಿಪಟ ಹಾರಿಸುತ್ತಾರೆ.
ಇನ್ನೊಂದು ನಂಬಿಕೆಯ ಪ್ರಕಾರ ಮಕರ ಸಂಕ್ರಾಂತಿ ಮತ್ತು ಉತ್ತರಾಯಣದ ಸಂದರ್ಭದಲ್ಲಿ ಹಾರಿಸುವ ಗಾಳಿಪಟ ಸ್ವರ್ಗಕ್ಕೆ ಹಾರಿಹೋಗುತ್ತವೆ ಎನ್ನುವ ನಂಬಿಕೆಯಿದೆ. ಉತ್ತಮ ಪೈರು ಹಾಗೂ ಜೀವನದಲ್ಲಿ ಸಂತೋಷವನ್ನು ನೀಡಿರುವುದಕ್ಕೆ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸುವ ನಿಟ್ಟಿನಲ್ಲಿ ಗಾಳಿಪಟವನ್ನು ಹಾರಿಸಲಾಗುತ್ತದೆ ಎಂದು ಹೇಳಲಾಗುತ್ತದೆ. ಇನ್ನೊಂದು ನಂಬಿಕೆಯ ಪ್ರಕಾರ ದೇವರು ಆರು ತಿಂಗಳುಗಳ ಕಾಲ ನಿದ್ರಿಸುತ್ತಿದ್ದರು. ಇದೀಗ ಎದ್ದೇಳುವ ಸಮಯ. ಅಲ್ಲದೆ ಉತ್ತರಾಯಣದ ಸಮಯದಲ್ಲಿ ನೀಲಿ ಆಕಾಶವು ಗಾಳಿಪಟ ಹಾರಿಸಲು ಸಜ್ಜಾದಂತೆ ಇರುತ್ತದೆ. ಅಲ್ಲದೆ ಗಾಳಿಪಟಗಳನ್ನು ಹಾರಿಸಲು ಸೂಕ್ತ ಸಮಯ ಮತ್ತು ಸುಂದರ ದೃಶ್ಯವನ್ನು ನೀಡುವುದು ಎಂದು ಹೇಳಲಾಗುತ್ತದೆ.
ಇವಿಷ್ಟು ಧಾರ್ಮಿಕ ಕಾರಣವಾದರೆ ಈ ಆಚರಣೆಯ ಹಿಂದೆ ವೈಜ್ಞಾನಿಕ ಕಾರಣವೂ ಸಿಗುತ್ತದೆ. ಅದೇನೆಂದರೆ ಚಳಿಗಾಲದಲ್ಲಿ ಕೆಮ್ಮು, ಶೀತ ಮತ್ತು ಸಾಂಕ್ರಾಮಿಕ ರೋಗಗಳು ಬರುತ್ತವೆ. ಅಂತೆಯೇ ಸೂರ್ಯನ ಬೆಳಕಿನಲ್ಲಿ ಒಂದಷ್ಟು ಹೊತ್ತು ಕಳೆದರೆ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಯಾಕೆಂದರೆ ಸೂರ್ಯನ ಕಿರಣದಲ್ಲಿ ದೇಹಕ್ಕೆ ಬೇಕಾದ ವಿಟಮಿನ್ ಡಿ ಸಿಗುತ್ತದೆ. ಈ ಕಾರಣಕ್ಕಾಗಿ ಮಕರ ಸಂಕ್ರಾಂತಿಯ ದಿನದಂದು ಗಾಳಿಪಟಗಳನ್ನು ಹಾರಿಸುವುದರಿಂದ ದೇಹವು ಸೂರ್ಯನ ಕಿರಣಗಳೊಂದಿಗೆ ಸಂಪರ್ಕದಲ್ಲಿರುತ್ತದೆ. ಮಕರ ಸಂಕ್ರಾಂತಿಯಂದು ಸೂರ್ಯನಿಂದ ಪಡೆಯುವ ಬೆಳಕು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಚರ್ಮರೋಗದಂತಹ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಬಹುದು ಎಂಬ ನಂಬಿಕೆ ಇದೆ. ಇದರ ಜತೆಗೆ ಗಾಳಿಪಟ ಹಾರಿಸುವಾಗ ದೇಹಕ್ಕೂ ಒಂದಷ್ಟು ವ್ಯಾಯಾಮ ಸಿಗುತ್ತದೆ. ಆರೋಗ್ಯವೃದ್ಧಿಗೆ ಇದು ಕೂಡಾ ಸಹಕಾರಿ.
ದೆಹಲಿ, ಪಂಜಾಬ್, ಹರಿಯಾಣ, ಗುಜರಾತ್, ತೆಲಂಗಾಣ ಮತ್ತು ರಾಜಸ್ಥಾನದಂತಹ ನಗರಗಳಲ್ಲಿ ಮುಖ್ಯವಾಗಿ ಮಕರ ಸಂಕ್ರಾಂತಿಯ ದಿನದಂದು ಗಾಳಿಪಟಗಳನ್ನು ಹಾರಿಸಲಾಗುತ್ತದೆ. ಈ ದಿನದಂದು ಈ ನಗರಗಳಲ್ಲಿ ಗಾಳಿಪಟ ಹಾರಿಸುವ ಉತ್ಸವವನ್ನು ಸಹ ಆಯೋಜಿಸಲಾಗುತ್ತದೆ.
ಈ ಸುದ್ದಿಯನ್ನು ಓದಿ: Mahakumbh: ಮಹಾಕುಂಭ ಮೇಳಕ್ಕೆ ಪ್ರಯಾಗ್‌ರಾಜ್‌ ಸಜ್ಜು; 40 ಕೋಟಿಗೂ ಹೆಚ್ಚು ಭಕ್ತರು ಆಗಮಿಸುವ ನಿರೀಕ್ಷೆ