Viral Video: ದೇವಸ್ಥಾನದೊಳಗೆ ಕೇಕ್ ಕಟ್ ಮಾಡಿ ಬರ್ತ್‌ಡೇ ಆಚರಿಸಿಕೊಂಡ ಮಾಡೆಲ್; ಹುಚ್ಚಾಟಕ್ಕೆ ನೆಟ್ಟಿಗರು ಗರಂ
Viral Video: ಮಾಡೆಲ್ ಮಮತಾ ರೈ ದೇವಸ್ಥಾನದೊಳಗೆ ಕೇಕಟ್ ಕಟ್ ಮಾಡಿ ಹುಟ್ಟುಹಬ್ಬ ಆಚರಿಸಿಕೊಂಡ ವಿಡಿಯೊ ವೈರಲ್ ಆಗಿದ್ದು, ನೆಟ್ಟಿಗರು ಆಕೆಯ ವಿರುದ್ದ ಕಿಡಿ ಕಾರಿದ್ದಾರೆ.

ಲಖನೌ: ಭಾರತೀಯ ಸಂಸ್ಕೃತಿಯಲ್ಲಿ ದೇವಸ್ಥಾನಕ್ಕೆ ಪೂಜನೀಯ ಸ್ಥಾನವಿದೆ. ದೇವಸ್ಥಾನಕ್ಕೆ ತೆರಳಲು ಒಂದಷ್ಟು ರೀತಿ-ರಿವಾಜುಗಳಿವೆ. ಜತೆಗೆ ಕೆಲವೊಂದು ಚಟುವಟಿಕೆಗಳಿಗೆ ನಿರ್ಬಂಧವಿದೆ, ಹೀಗೇ ವರ್ತಿಸಬೇಕೆಂಬ ನಿಯಮವಿದೆ. ಆದರೆ ಕೆಲವು ಉಡಾಫೆಯಿಂದ ಈ ನಿಯಮಗಳನ್ನು ಉಲ್ಲಂಘಿಸುತ್ತಾರೆ. ಈ ಮೂಲಕ ಭಕ್ತರ ನಂಬಿಕೆ, ಭಾವನೆಗೆ ಘಾಸಿ ತರುತ್ತಾರೆ. ಸದ್ಯ ಅಂತಹದ್ದೊಂದು ಘಟನೆ ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆದಿದೆ. ಮಾಡೆಲ್ ಒಬ್ಬಳು ದೇವಸ್ಥಾನದ ನಿಯಮಗಳನ್ನು ರಾಜಾರೋಷವಾಗಿ ಮುರಿದಿದ್ದಾಳೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಕಿಡಿ ಕಾರಿದ್ದಾರೆ (Viral Video).
ದೇವಸ್ಥಾನದ ಒಳಗೆ, ದೇವರ ಎದುರಿನಲ್ಲೇ ಮಾಡೆಲ್ ಕೇಕ್ ಕಟ್ ಮಾಡಿ ತನ್ನ ಹುಟ್ಟುಹಬ್ಬ ಆಚರಿಸಿಕೊಂಡ 39 ಸೆಕೆಂಡ್‌ನ ವಿಡಿಯೊ ಇದಾಗಿದ್ದು, ಸದ್ಯ ಎಲ್ಲೆಡೆ ಹರಿದಾಡುತ್ತಿದೆ. ಅನುಚಿತವಾಗಿ ವರ್ತಿಸಿದ ಮಾಡೆಲ್ ಅನ್ನು ಮಮತಾ ರೈ ಎಂದು ಗುರುತಿಸಲಾಗಿದೆ.
This is truly disgraceful...How can anyone be permitted to cut a cake inside a temple? Ordinary devotees aren’t even allowed to pause there for more than 15-30 seconds. The temple management, more than these Reelbaaz, is to blame for turning our sacred #temples into a mockery.… pic.twitter.com/GMsgM7OfIR— Akassh Ashok Gupta (@peepoye_) November 30, 2024
ವಿಡಿಯೊದಲ್ಲಿ ಏನಿದೆ?
ವಾರಣಾಸಿಯ ಕಾಲ ಭೈರವ ದೇವಸ್ಥಾನದೊಳಗಿನ ದೃಶ್ಯದೊಂದಿಗೆ ವಿಡಿಯೊ ಆರಂಭವಾಗುತ್ತದೆ. ದೇವರ ವಿಗ್ರಹದ ಎದುರಿನ ಟೇಬಲ್ ಮೇಲೆ ಕೇಕ್ ಇರಿಸಲಾಗಿದೆ. ಅರ್ಚಕರು ಮೊದಲಿಗೆ ಮಮತಾ ರೈಗೆ ಹಾರ ಹಾಕಿ ತಿಲಕ ಇಡುತ್ತಾರೆ. ಬಳಿಕ ಕ್ಯಾಂಡಲ್ ಉರಿಸಿದ ಆಕೆ ಕೇಕ್ ಕಟ್ ಮಾಡುತ್ತಾಳೆ. ಬಳಿಕ ಒಂದು ತುಂಡು ಕೇಕ್ ಅನ್ನು ದೇವರ ಮುಂದಿರಿಸುತ್ತಾಳೆ. ಜತೆಗೆ ಕೈ ಮೇಲಕ್ಕೆತ್ತಿ ಹುಟ್ಟುಹಬ್ಬ ಆಚರಿಸಿಕೊಂಡ ಸಂಭ್ರಮ ವ್ಯಕ್ತಪಡಿಸುತ್ತಾಳೆ. ಇದಿಷ್ಟು ವಿಡಿಯೊದಲ್ಲಿ ಕಂಡು ಬಂದಿದೆ.
ಅರ್ಚಕರ ಪ್ರತಿಕ್ರಿಯೆ
ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಮಮತಾ ರೈ ಮತ್ತು ದೇವಸ್ಥಾನ ಆಡಳಿತ ಮಂಡಳಿ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಈ ಬಗ್ಗೆ ದೇವಸ್ಥಾನದ ಮುಖ್ಯ ಅರ್ಚಕ ನವೀನ್ ಗಿರಿ ಪ್ರತಿಕ್ರಿಯಿಸಿ, ʼʼತಪ್ಪು ತಿಳುವಳಿಕೆಯಿಂದ ಈ ಘಟನೆ ನಡೆದಿದೆ. ಮಮತಾ ರೈ ಅವರು ದೇವರಿಗೆ ಕೇಕ್ ಅರ್ಪಿಸುವುದಾಗಿ ಆರಂಭದಲ್ಲಿ ನಮ್ಮಲ್ಲಿ ಮನವಿ ಮಾಡಿದ್ದರು. ಇದೇನೂ ಹೊಸದಲ್ಲ. ಹಿಂದೆಯೂ ಹಲವು ಮಂದಿ ಈ ದೇವಾಸ್ಥಾನಕ್ಕೆ ಆಗಮಿಸಿದ ಕೇಕ್ ಅರ್ಪಿಸಿದ್ದರು. ಹೀಗಾಗಿ ಒಪ್ಪಿಕೊಂಡೆವು. ಎಲ್ಲರಂತೆ ಅವರೂ ಕೇಕ್ ಕಟ್ ಮಾಡಿ ದೇವರಿಗೆ ಅರ್ಪಿಸುತ್ತಾರೆ ಅಂದುಕೊಂಡೆವು. ಆದರೆ ಆಕೆ ಸಾಮಾನ್ಯ ಭಕ್ತರಂತೆ ಇದನ್ನು ಅರ್ಪಿಸಲಿಲ್ಲ. ಬದಲಾಗಿ ಬರ್ತ್‌ಡೇ ಆಚರಿಸುವಂತೆ ಕೇಕ್ ಕಟ್ ಮಾಡಿದ್ದಾರೆ. ಇದನ್ನು ನಾವು ನಿರೀಕ್ಷಿಸಿರಲಿಲ್ಲ. ಅಲ್ಲದೆ ಈ ಬಗ್ಗೆ ನಮಗೆ ಗೊತ್ತಿರಲೂ ಇಲ್ಲʼʼ ಎಂದು ತಿಳಿಸಿದ್ದಾರೆ.
ಸದ್ಯ ದೇವಸ್ಥಾನ ಆಡಳಿತ ಮಂಡಳಿ ಇನ್ನು ಮುಂದೆ ದೇವಸ್ಥಾನದಲ್ಲಿ ಕೇಕ್ ಕತ್ತರಿಸುವುದನ್ನು ನಿಷೇಧಿಸಿ ಆದೇಶ ಹೊರಡಿಸಲು ನಿರ್ಧರಿಸಿದೆ. ವಾರಣಾಸಿಯ ಧಾರ್ಮಿಕ ಸಂಸ್ಥೆ ಕಾಶಿ ವಿದ್ವತ್ ಪರಿಷತ್ ಈ ಘಟನೆಯನ್ನು ಖಂಡಿಸಿದ್ದು, ದೇಗುಲದ ಪಾವಿತ್ರತ್ಯಕ್ಕೆ ಧಕ್ಕೆ ತರಲಾಗಿದೆ ಎಂದು ಆರೋಪಿಸಿದೆ. ಜತೆಗೆ ಮಮತಾ ರೈ ವಿರುದ್ಧ ಕಾನೂನು ಹೋರಾಟದ ಚಿಂತನೆ ನಡೆಸಿದೆ. ʼʼಕೇಕ್ ಕತ್ತರಿಸುವುದು ನಮ್ಮ ಸಂಪ್ರದಾಯವಲ್ಲ. ಈ ಘಟನೆ ಖಂಡನೀಯ. ದೇಗುಲದೊಳಗೆ ಕ್ಯಾಂಡಲ್ ಹಚ್ಚಿ ಕೇಕ್ ಕಟ್ ಮಾಡಿ ಹುಟ್ಟುಹಬ್ಬ ಆಚರಿಸುವುದನ್ನು ಕ್ಷಮಿಸಲು ಸಾಧ್ಯವಿಲ್ಲ. ಇಂತಹ ಘಟನೆಗೆ ಬ್ರೇಕ್ ಹಾಕುವಂತೆ ಮುಖ್ಯಮಂತ್ರಿ ಅವರಲ್ಲಿ ಮನವಿ ಮಾಡಲಿದ್ದೇವೆʼʼ ಎಂದು ಕಾಶಿ ವಿದ್ವತ್ ಪರಿಷತ್‌ನ ರಾಮ್ ನಾರಾಯಣ ದ್ವಿವೇದಿ ತಿಳಿಸಿದ್ದಾರೆ.
ಸದ್ಯ ನೆಟ್ಟಿಗರು ಮಮತಾ ರೈ ವಿರುದ್ದ ಕಿಡಿ ಕಾರಿದ್ದಾರೆ. ಆಕೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಕೆಲವರು ಆಕೆಗೆ ಸಂಸ್ಕೃತಿಯ ಪಾಠ ಮಾಡಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೊ ವ್ಯಾಪಕ ಚರ್ಚೆ ಹುಟ್ಟು ಹಾಕಿದೆ.
ಈ ಸುದ್ದಿಯನ್ನೂ ಓದಿ: Viral News: ಕಾಲಭೈರವನಿಗೆ ಸಿಗರೇಟ್ ಅರ್ಪಿಸಿದ ಭೂಪ; ನೆಟ್ಟಿಗರಿಂದ ಆಕ್ರೋಶ