John Doe order: ಧರ್ಮಸ್ಥಳದ ವಿರುದ್ಧ ಮಾನಹಾನಿ ಮಾಡದಂತೆ ಆದೇಶ; ಏನಿದು ಜಾನ್ ಡೋ ಆರ್ಡರ್ ಅಂದ್ರೆ?
ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ಡಿ ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ಮಾಧ್ಯಮಗಳ ಮೂಲಕ ಅವಹೇಳನಕಾರಿ ವರದಿ ಮಾಡದಂತೆ ಹಾಗೂ ಈಗಾಗಲೇ ಸಾಮಾಜಿಕ ಮಾಧ್ಯಮಗಳೂ ಸೇರಿದಂತೆ ಇನ್ನಿತರೆ ಮಾಧ್ಯಮಗಳು ಮಾಡಿರುವ ಅವಹೇಳನಕಾರಿ ವರದಿಗಳನ್ನು ಅಳಿಸಿ ಹಾಕುವಂತೆ ಕೋರ್ಟ್ ಜಾನ್ ಡೋ ಆದೇಶದ ಮೂಲಕ ಸೂಚಿಸಿದೆ. ಏನಿದು ಜಾನ್ ಡೋ ಆದೇಶ? ವಿವರ ಇಲ್ಲಿದೆ.


ಬೆಂಗಳೂರು: ಧರ್ಮಸ್ಥಳ (Dharmasthala) ಹಾಗೂ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ (Dr D Veerendra Heggade) ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ಹಾಗೂ ವರದಿ ಮಾಡದಂತೆ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯ ಜಾನ್ ಡೋ (ಅಶೋಕಕುಮಾರ್) ಆದೇಶ (John Doe Order) ಹೊರಡಿಸಿದೆ. ಈ ಸಂಬಂಧ ಹಿರಿಯ ನ್ಯಾಯವಾದಿ ಎಸ್. ರಾಜಶೇಖರ್ ಹಿಳಿಯಾರು ವಾದ ಮಂಡಿಸಿದ್ದು, ದಾವೆಯನ್ನು ವಿಚಾರಣೆ ನಡೆಸಿದ ಸಿಸಿಎಚ್–11ನೇ ನ್ಯಾಯಾಲಯ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ಡಿ ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ಮಾಧ್ಯಮಗಳ ಮೂಲಕ ಅವಹೇಳನಕಾರಿ ವರದಿ ಮಾಡದಂತೆ ಹಾಗೂ ಈಗಾಗಲೇ ಸಾಮಾಜಿಕ ಮಾಧ್ಯಮಗಳೂ ಸೇರಿದಂತೆ ಇನ್ನಿತರೆ ಮಾಧ್ಯಮಗಳು ಮಾಡಿರುವ ಅವಹೇಳನಕಾರಿ ವರದಿಗಳನ್ನು ಅಳಿಸಿ ಹಾಕುವಂತೆ ಸೂಚಿಸಿದೆ. ನ್ಯಾಯಾಲಯ ಹೊರಡಿಸಿರುವ ಈ ಆದೇಶವನ್ನು ಉಲ್ಲಂಘಿಸಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಶ್ರೀ ಕ್ಷೇತ್ರ ಧರ್ಮಸ್ಥಳ, ಧರ್ಮಾಧಿಕಾರಿಗಳ ಹಾಗೂ ಅವರ ಕುಟುಂಬದ ವಿರುದ್ಧ ಮಾಡುತ್ತಿರುವ ಅಪಪ್ರಚಾರ ತಡೆಯುವಲ್ಲಿ ಈ ಆದೇಶ ಪ್ರಮುಖ ಪಾತ್ರವಹಿಸಲಿದೆ.
ಏನಿದು ಜಾನ್ ಡೋ (ಅಶೋಕ ಕುಮಾರ್) ಆದೇಶ?
ಅಜ್ಞಾತ ವ್ಯಕ್ತಿಗಳ ವಿರುದ್ಧ ಜಾರಿಯಾಗುವ ಕಾನೂನು ಕ್ರಮ ಇದು. ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣಗಳಾದ ವಾಟ್ಸ್ ಆ್ಯಪ್, ಫೇಸ್ ಬುಕ್, ಇನ್ಸ್ಟಾಗ್ರಾಮ್, ಯೂ–ಟ್ಯೂಬ್ ಹಾಗೂ ದೃಶ್ಯ ಮಾಧ್ಯಮ ಸೇರಿದಂತೆ ಮತ್ತಿತರ ಮಾಧ್ಯಮಗಳ ಮೂಲಕ ನೀಡಲಾಗುತ್ತಿರುವ ಅವಹೇಳನಕಾರಿ ಹೇಳಿಕೆ ಮತ್ತು ಅಪಪ್ರಚಾರಕ್ಕೆ ಇದು ಕಡಿವಾಣ ಹಾಕುತ್ತದೆ. ಹಾಗೇ ಬೌದ್ಧಿಕ ಅಸ್ತಿ ಹಕ್ಕುಗಳನ್ನು ಇತರರು ಯಾರೇ ಆಗಲಿ ಉಲ್ಲಂಘಿಸಲು ಸಾಧ್ಯವಾಗದಂತೆಯೂ ರಕ್ಷಿಸುತ್ತದೆ. ವಾದಿಯು ತಮ್ಮ ಹಕ್ಕುಗಳನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ಇದು ಅನುವು ಮಾಡಿಕೊಡುತ್ತದೆ.
ಯಾವಾಗ ಆದೇಶ ನೀಡಲಾಗುತ್ತದೆ?
ವಾದಿಯು (ಮೊಕದ್ದಮೆ ಹೂಡುವ ವ್ಯಕ್ತಿ) ತಮ್ಮ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಅನುಮಾನಿಸಿ, ಆದರೆ ಹಾಗೆ ಉಲ್ಲಂಘಿಸುವವರು ಯಾರು ಎಂಬುದನ್ನು ಸ್ಪಷ್ಟವಾಗಿ ತಿಳಿಯದಿದ್ದಾಗ ಜಾನ್ ಡೋ ಆದೇಶಗಳನ್ನು ಬಳಸಲಾಗುತ್ತದೆ. ಅಂದರೆ, ಯಾರೇ ಆಗಲಿ ಈ ಆದೇಶವನ್ನು ಉಲ್ಲಂಘಿಸುವಂತಿಲ್ಲ. ಅಂಥವರ ವಿರುದ್ಧ ವಾದಿಯು ಕಾನೂನು ಕ್ರಮ ಕೈಗೊಳ್ಳಬಹುದು. ನಿಜವಾದ ಉಲ್ಲಂಘನೆದಾರರ ಗುರುತು ಬಹಿರಂಗಗೊಳ್ಳುವವರೆಗೆ ನ್ಯಾಯಾಲಯವು "ಜಾನ್ ಡೋ" (ಪ್ರತಿವಾದಿಯು ಮಹಿಳೆ ಎಂದು ಭಾವಿಸಿದರೆ "ಜೇನ್ ಡೋ") ವಿರುದ್ಧ ಆದೇಶವನ್ನು ನೀಡುತ್ತದೆ. ಇಲ್ಲಿ ಜಾನ್ ಡೋ ಎಂಬುದು ಒಂದು ಕಾಲ್ಪನಿಕ ವ್ಯಕ್ತಿಯ ಹೆಸರು. ಭಾರತದಲ್ಲಿ ಜಾನ್ ಡೋ ಬದಲಾಗಿ ʼಅಶೋಕ್ ಕುಮಾರ್ʼ ಎಂಬ ಹೆಸರನ್ನು ಬಳಸಲಾಗುತ್ತದೆ. ಅಶೋಕ್ ಕುಮಾರ್ ಎಂಬುದು ಕೂಡ ಕಾಲ್ಪನಿಕ.
ಈ ಆದೇಶದಿಂದ ಏನನ್ನು ತಡೆಯಬಹುದು?
ಮಾಧ್ಯಮಗಳಲ್ಲಿ ತನ್ನ (ವಾದಿಯ) ಕುರಿತು ಯಾವುದೇ ಹೇಳಿಕೆ, ಮಾನಹಾನಿಕರ ಹೇಳಿಕೆ, ಪ್ರತಿವಾದ, ಟೀಕೆಗಳನ್ನು ಪ್ರಸಾರ ಮಾಡುವುದನ್ನು ತಡೆಯುತ್ತದೆ. ಕೇಸು ಹಕ್ಕುಸ್ವಾಮ್ಯಕ್ಕೆ ಸಂಬಂಧಿಸಿದ್ದರೆ, ಆನ್‌ಲೈನ್‌ನಲ್ಲಿ ಅದರ ಅನಧಿಕೃತ ವಿತರಣೆಯಿಂದ ರಕ್ಷಿಸುವುದು. ಅನುಮತಿಯಿಲ್ಲದೆ ಟ್ರೇಡ್‌ಮಾರ್ಕ್ ಬಳಕೆಯನ್ನು ತಡೆಗಟ್ಟುವುದು. ದೂರದರ್ಶನ, ಚಲನಚಿತ್ರ, ಸೋಶಿಯಲ್ ಮೀಡಿಯಾ ಅಥವಾ ಮುದ್ರಣ ಮಾಧ್ಯಮದಲ್ಲಿ ತನ್ನ ಕುರಿತ ವಿಷಯದ ಅನಧಿಕೃತ ಬಳಕೆಯನ್ನು ನಿಲ್ಲಿಸುವುದು.
ಭಾರತೀಯ ಸಂದರ್ಭ
ಭಾರತದಲ್ಲಿ ಜಾನ್ ಡೋ ಆದೇಶಗಳನ್ನು "ಅಶೋಕ್ ಕುಮಾರ್ ಆದೇಶ" ಎಂದೂ ಕರೆಯಲಾಗುತ್ತದೆ. 1908ರ ಸಿವಿಲ್ ಪ್ರೊಸೀಜರ್ ಸಂಹಿತೆಯ ಆದೇಶ 39 ನಿಯಮಗಳು 1 ಮತ್ತು 2 ರ ಅಡಿಯಲ್ಲಿ ನೀಡಲಾಗುತ್ತದೆ, ಇದನ್ನು CPC ಯ ಸೆಕ್ಷನ್ 151 ರೊಂದಿಗೆ ಓದಲಾಗುತ್ತದೆ. ಇದನ್ನು ಮಂಜೂರು ಮಾಡಲು ಷರತ್ತುಗಳು ಏನೆಂದರೆ ವಾದಿಯ ಹಕ್ಕುಗಳ ಉಲ್ಲಂಘನೆಯ ಬಲವಾದ ಸಾಧ್ಯತೆಯಿರಬೇಕು; ಅದನ್ನು ಉಲ್ಲಂಘಿಸುವವರ ಗುರುತು ತಿಳಿದಿಲ್ಲದ ವಾತಾವರಣ ಇರಬೇಕು. ಆದೇಶವನ್ನು ನೀಡದಿದ್ದರೆ ಸರಿಪಡಿಸಲಾಗದ ಹಾನಿಯ ಅಪಾಯವಿರುವುದನ್ನು ಕಾಣಿಸಬೇಕು.
ಎಲ್ಲಿಂದ ಆರಂಭ?
ಜಾನ್ ಡೋ ಎಂಬ ಹೆಸರಿನ ಬಳಕೆ ಮತ್ತು ಈ ಕಾಯಿದೆಯ ಆರಂಭ ಆದುದು ಬ್ರಿಟನ್‌ನಿಂದ. ಬ್ರಿಟನ್‌ನ ಕಿಂಗ್ ಎಡ್ವರ್ಡ್ 3ಯ ಕಾಲದಲ್ಲಿ ಇದನ್ನು ನೀಡಲು ಆರಂಭಿಸಲಾಯಿತು. ಜಾನ್ ಡೋ ಎಂದರೆ ʼಅಜ್ಞಾತ ಪ್ರತಿಕಕ್ಷಿಗಳುʼ ಎಂದರ್ಥ. ಮುಂದೆ ಇದು ಅಮೆರಿಕ ಸೇರಿದಂತೆ ಇತರ ಕಡೆಗಳಿಗೂ ಪಸರಿಸಿತು, ಬ್ರಿಟಿಷರ ಮೂಲಕ ಭಾರತಕ್ಕೂ ಬಂತು. ಜಾನ್ ಡೋ ಆದೇಶ ಮೊದಲು ಭಾರತದಲ್ಲಿ ಜಾರಿ ಆದುದು 2002ರಲ್ಲಿ. ತಾಜ್ ಟೆಲಿವಿಷನ್ vs ರಾಜನ್ ಮಂಡಲ್ ಪ್ರಕರಣದ ಮೂಲಕ. ಆಗ 2002ರ FIFA ವಿಶ್ವಕಪ್ ಪ್ರಸಾರದ ಹಕ್ಕುಗಳು ತಾಜ್ ಟೆಲಿವಿಷನ್ ಬಳಿ ಇದ್ದವು. ಕೇಬಲ್ ಆಪರೇಟರ್‌ಗಳು ಕಾನೂನುಬಾಹಿರವಾಗಿ ಪ್ರಸಾರ ಮಾಡುವುದನ್ನು ದೆಹಲಿ ಹೈಕೋರ್ಟ್ ಈ ಆದೇಶದಿಂದ ನಿರ್ಬಂಧಿಸಿತು.
ಭಿನ್ನಾಭಿಪ್ರಾಯವೂ ಇದೆ
ಜಾನ್ ಡೋ ಆದೇಶಗಳ ಬಳಕೆಯ ಬಗ್ಗೆ ಭಾರತದಲ್ಲಿ ಸಾಕಷ್ಟು ಭಿನ್ನಾಭಿಪ್ರಾಯಗಳಿವೆ. ಈ ಆದೇಶಗಳು ಪ್ರಜೆಗಳ ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತದೆ ಹಾಗೂ ಅಧಿಕಾರಿಗಳಿಗೆ ನಿರಂಕುಶ ಅಧಿಕಾರ ನೀಡುತ್ತದೆ ಎಂಬುದು ಇದಕ್ಕೆ ಕಾರಣ. ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿರುವ ವ್ಯಕ್ತಿಗಳು ಅಥವಾ ಘಟಕಗಳ ವಿರುದ್ಧ, ಅವರ ಗುರುತುಗಳು ತಿಳಿದಿಲ್ಲದಿದ್ದರೂ ಸಹ, ಕ್ರಮ ಕೈಗೊಳ್ಳಲೇನೋ ಇವು ಅವಕಾಶ ನೀಡುತ್ತವೆ. ಆದರೆ, ಅವು 1908ರ ಸಿವಿಲ್ ಪ್ರೊಸೀಜರ್ ಕೋಡ್‌ನಲ್ಲಿ ಪ್ರತಿವಾದಿಗಳ ಗುರುತಿಸುವಿಕೆಗೆ ಅಗತ್ಯವಿರುವ ನಿಬಂಧನೆಗಳನ್ನು ಬೈಪಾಸ್ ಮಾಡುತ್ತವೆ. ಅದಕ್ಕೆ ಕಾರಣ ಮತ್ತು ಅದರ ಅಸ್ಪಷ್ಟ ಸ್ವಭಾವ. ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಉಲ್ಲಂಘಿಸುವ ಸಾಮರ್ಥ್ಯವೂ ಟೀಕೆಗೆ ಒಳಗಾಗಿದೆ. ಜಾನ್ ಡೋ ಆದೇಶಗಳ ಆಧಾರದ ಮೇಲೆ ವೆಬ್‌ಸೈಟ್‌ಗಳನ್ನು ನಿರ್ಬಂಧಿಸುವಾಗ ಇಂಟರ್ನೆಟ್ ಸೇವಾ ಪೂರೈಕೆದಾರರು (ISP ಗಳು) ಅನುಸರಿಸಲು ಯಾವುದೇ ಪ್ರಮಾಣೀಕೃತ ಕಾನೂನು ಚೌಕಟ್ಟು ಇಲ್ಲ. ಇದು ಅಧಿಕಾರಿಗಳಿಂದ ವಿವೇಚನೆಯ ದುರುಪಯೋಗಕ್ಕೆ ಕಾರಣವಾಗುತ್ತದೆ.
ಇದನ್ನೂ ಓದಿ: Dharmastala: ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ಕುಟುಂಬದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುವವರ ವಿರುದ್ಧ ಜಾನ್ ಡೋ ಆದೇಶ ಜಾರಿ