Sanjay Kumar Mishra: ಪ್ರಧಾನಿ ಮೋದಿ ಆರ್ಥಿಕ ಸಲಹೆಗಾರರಾಗಿ ಇಡಿ ಮಾಜಿ ಮುಖ್ಯಸ್ಥ ಸಂಜಯ್ ಕುಮಾರ್ ಮಿಶ್ರಾ ನೇಮಕ
ಜಾರಿ ನಿರ್ದೇಶನಾಲಯದ ಮಾಜಿ ಮುಖ್ಯಸ್ಥ ಸಂಜಯ್ ಕುಮಾರ್ ಮಿಶ್ರಾ ಅವರನ್ನು ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಮಂಡಳಿಯ ಸಲಹೆಗಾರನಾಗಿ ನೇಮಿಸಲಾಗಿದೆ. ಆರ್ಥಿಕ ಸಲಹಾ ಮಂಡಳಿ ಅಥವಾ EAC-PM ಒಂದು ಸ್ವತಂತ್ರ ಸಂಸ್ಥೆಯಾಗಿದ್ದು, ಇದು ನಿರ್ಣಾಯಕ ಆರ್ಥಿಕ ವಿಷಯಗಳ ಕುರಿತು ಸಲಹೆಗಳನ್ನು ನೀಡುತ್ತದೆ.


ನವದೆಹಲಿ: ಜಾರಿ ನಿರ್ದೇಶನಾಲಯದ (ED) ಮಾಜಿ ಮುಖ್ಯಸ್ಥ ಸಂಜಯ್ ಕುಮಾರ್ ಮಿಶ್ರಾ ಅವರನ್ನು ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಮಂಡಳಿಯ ಸಲಹೆಗಾರನಾಗಿ (EAC-PM) ನೇಮಿಸಲಾಗಿದೆ. ಪ್ರಧಾನಿ ಮೋದಿಗೆ ಆಪ್ತರಾಗಿರುವ ಮಿಶ್ರಾ ಅವರಿಗೆ ನಿಕಟವರ್ತಿಯಾಗಿದ್ದು, ಜಾರಿ ನಿರ್ದೇಶನಾಲಯದ ಮುಖ್ಯಸ್ಥರಾಗಿದ್ದ ವೇಳೆ ಅವರಿಗೆ ಹಲವು ಬಾರಿ ಸೇವಾ ಅವಧಿಯನ್ನು ವಿಸ್ತರಿಸಲಾಗಿತ್ತು. ಈಗ ಈ ಹುದ್ದೆಯು ಕಾರ್ಯದರ್ಶಿ ದರ್ಜೆಯ ಹುದ್ದೆಯಾಗಿದ್ದು, ಪ್ರಧಾನ ಮಂತ್ರಿಯ ಆರ್ಥಿಕ ಸಲಹಾ ಮಂಡಳಿ ಅಥವಾ EAC-PM ಒಂದು ಸ್ವತಂತ್ರ ಸಂಸ್ಥೆಯಾಗಿದೆ.
ಆರ್ಥಿಕ ಸಲಹಾ ಮಂಡಳಿ ಅಥವಾ EAC-PM ಒಂದು ಸ್ವತಂತ್ರ ಸಂಸ್ಥೆಯಾಗಿದ್ದು, ಇದು ನಿರ್ಣಾಯಕ ಆರ್ಥಿಕ ವಿಷಯಗಳ ಕುರಿತು ಸಲಹೆಗಳನ್ನು ಪ್ರಧಾನ ಮಂತ್ರಿಗೆ ಒದಗಿಸುವ ಜವಾಬ್ದಾರಿಯನ್ನು ಹೊಂದಿದೆ. ಪ್ರಧಾನ ಮಂತ್ರಿಯ ಆರ್ಥಿಕ ಸಲಹಾ ಮಂಡಳಿಯ ಮಾಜಿ ಅಧ್ಯಕ್ಷ ಬಿಬೆಕ್ ಡೆಬ್ರಾಯ್ ಅವರು 2024 ರ ನವೆಂಬರ್ 1 ರಂದು ತಮ್ಮ 69 ನೇ ವಯಸ್ಸಿನಲ್ಲಿ ನಿಧನರಾಗಿದ್ದರು. ಪ್ರಸ್ತುತ ಸುಮನ್ ಬೆರಿ ಆರ್ಥಿಕ ಸಲಹಾ ಮಂಡಳಿಯ ನೇತೃತ್ವ ವಹಿಸಿದ್ದಾರೆ.
Former ED chief Sanjay Kumar Mishra appointed as member of Economic Advisory Council to the PM. pic.twitter.com/Tt8YiW2ufi
— Kashmir Dot Com (KDC) (@kashmirdotcom) March 26, 2025
ಯಾರು ಸಂಜಯ್ ಕುಮಾರ್ ಮಿಶ್ರಾ?
ಸಂಜಯ್ ಕುಮಾರ್ ಮಿಶ್ರಾ ಮೂಲತಃ ಉತ್ತರ ಪ್ರದೇಶದವರು. 1984 ರಲ್ಲಿ ಭಾರತೀಯ ಕಂದಾಯ ಸೇವೆ (IRS) ಅಧಿಕಾರಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಜಾರಿ ನಿರ್ದೇಶನಾಲಯ (ED) ಯಲ್ಲಿ ಅಧಿಕಾರ ವಹಿಸಿಕೊಳ್ಳುವ ಮೊದಲು ದೆಹಲಿಯಲ್ಲಿ ಆದಾಯ ತೆರಿಗೆಯ ಮುಖ್ಯ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು. ಸಂಜಯ್ ಕುಮಾರ್ ಮಿಶ್ರಾ ಅವರನ್ನು ಮೊದಲು ಅಕ್ಟೋಬರ್ 2018ರಲ್ಲಿ ಮೂರು ತಿಂಗಳ ಅವಧಿಗೆ ಜಾರಿ ನಿರ್ದೇಶನಾಲಯದ ಹಂಗಾಮಿ ನಿರ್ದೇಶಕರಾಗಿ ನೇಮಿಸಲಾಯಿತು. 2018ರ ನವೆಂಬರ್ ನಲ್ಲಿ 2 ವರ್ಷಗಳ ಅವಧಿಗೆ ಜಾರಿ ನಿರ್ದೇಶನಾಲಯದ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಯಿತು. ಹಲವು ಬಾರಿ ಅವಧಿ ವಿಸ್ತರಣೆ ಮಾಡಿದ್ದರಿಂದ ಅವರು 2023ರ ಸೆಪ್ಟೆಂಬರ್‌ವರೆಗೆ ಅಧಿಕಾರದಲ್ಲಿದ್ದರು.
ಈ ಸುದ್ದಿಯನ್ನೂ ಓದಿ: Sam Pitroda: ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾ ವಿರುದ್ಧ ಬಿಜೆಪಿಯಿಂದ ಕರ್ನಾಟಕ ಲೋಕಾಯುಕ್ತ, ಇಡಿಗೆ ದೂರು
ಸಂಜಯ್ ಕುಮಾರ್ ಮಿಶ್ರಾ, ಅಧಿಕಾರದಲ್ಲಿದ್ದಾಗ, ಕರ್ನಾಟಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್, ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್, ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ನಾಯಕರಾದ ಫಾರೂಕ್ ಅಬ್ದುಲ್ಲಾ ಮತ್ತು ಒಮರ್ ಅಬ್ದುಲ್ಲಾ ಸೇರಿದಂತೆ ಹಲವಾರು ಉನ್ನತ ರಾಜಕಾರಣಿಗಳ ವಿರುದ್ಧವೂ ಸಂಸ್ಥೆ ಕ್ರಮ ಕೈಗೊಂಡಿದೆ.ಮಿಶ್ರಾ ಅವರ ಅಧಿಕಾರಾವಧಿಯಲ್ಲಿ, ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪತಿ ರಾಬರ್ಟ್ ವಾದ್ರಾ ಸೇರಿದಂತೆ ಪ್ರಮುಖ ರಾಜಕೀಯ ವ್ಯಕ್ತಿಗಳನ್ನು ಒಳಗೊಂಡ ತನಿಖೆಗಳನ್ನು ಇಡಿ ಆರಂಭಿಸಿತ್ತು.