ಐಪಿಎಲ್​ ಸುನಿತಾ ವಿಲಿಯಮ್ಸ್​ ವಿದೇಶ ಫ್ಯಾಷನ್​ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Wonder Kid: ಕೇರಳದಲ್ಲೊಬ್ಬ ವಂಡರ್‌ ಕಿಡ್‌; ತಂದೆಯ ಜೀವ ಉಳಿಸಿದ 5 ವರ್ಷದ ಬಾಲಕನ ಸಾಹಸಗಾಥೆ ನಮಗೂ ಸ್ಫೂರ್ತಿ

ಕೇರಳದ ಕೋಟ್ಟಯಂ ಜಿಲ್ಲೆಯ ಪುದುಪಳ್ಳಿಯ ಪಯ್ಯಪ್ಪಾಡಿ ನಿವಾಸಿಗಳಾದ ಅನು ಮತ್ತು ಮಿನು ದಂಪತಿಯ ಮಗ ಜೋಕುಟ್ಟನ್‌ ಎನ್ನುವ 5ರ ಹರೆಯದ ಜೋರ್ದನ್‌ ಅನಾರೋಗ್ಯಕ್ಕೀಡಾದ ತನ್ನ ತಂದೆಯ ಜೀವವನ್ನು ಉಳಿಸುವ ಮೂಲಕ ಹೀರೋ ಅಗಿ ಬದಲಾಗಿದ್ದಾನೆ. ಆತನ ಸಾಹಸಗಾಥೆ ಇಲ್ಲಿದೆ.

ತಂದೆಯ ಜೀವ ಉಳಿಸಿದ ಕೇರಳದ 5 ವರ್ಷದ ಬಾಲಕ; ಇಲ್ಲಿದೆ ಸಾಹಸಗಾಥೆ

ತಂದೆ ತಾಯಿಯೊಂದಿಗೆ ಜೋರ್ದನ್‌.

Profile Ramesh B Mar 24, 2025 1:52 PM

ತಿರುವನಂತಪುರಂ: ಇಂದಿನ ತಲೆಮಾರಿನ ಮಕ್ಕಳು ಸಖತ್‌ ಚೂಟಿ. ಎಲ್ಲ ವಿಷಯಗಳನ್ನು ಬೇಗ ಕಲಿತು ಬಿಡುತ್ತಾರೆ. ಅದರಲ್ಲಿಯೂ ತಂತ್ರಜ್ಞಾನದ ಬಳಕೆಯ ವಿಚಾರಕ್ಕ ಬಂದರೆ ಅವರನ್ನು ಮೀರಿಸುವವರು ಇರುವುದಿಲ್ಲ. ನಮಗಿಂತೂ ಅವರಿಗೆ ಹೆಚ್ಚಿನ ಸಂಗತಿ ಗೊತ್ತಿರುತ್ತದೆ. ಆದರೆ ಈ ಜ್ಞಾನವನ್ನು ಅವರು ಸರಿಯಾಗಿ ಬಳಸಿಕೊಳ್ಳುವುದೇ ಇಲ್ಲ. ಮೊಬೈಲ್‌ ನೋಡುತ್ತಲೋ, ಗೇಮ್‌ ಆಡುತ್ತಲೋ ಸಮಯ ವ್ಯರ್ಥ ಮಾಡುತ್ತಿರುತ್ತಾರೆ-ಇಂತಹ ಮಾತುಗಳನ್ನು ನೀವು ಆಗಾಗ ಕೇಳಿಯೇ ಇರುತ್ತೀರಿ. ಇದು ಸ್ಪಲ್ಪ ಮಟ್ಟಿಗೆ ನಿಜವಾದರೂ ಇದಕ್ಕೆ ಅಪವಾದ ಎನ್ನುವಂತಹ ಹಲವು ಘಟನೆಗಳು ಆಗಾಗ ನಡೆಯುತ್ತಿರುತ್ತವೆ. ಅದಕ್ಕೆ ಉತ್ತಮ ಉದಾಹರಣೆ ಎನ್ನುವಂತಿದೆ ಈ ಘಟನೆ (Wonder Kid). ಕೇರಳದ 5 ವರ್ಷದ ಬಾಲಕನೊಬ್ಬನ ಬುದ್ಧಿವಂತಿಕೆ, ಸಮಯೋಚಿತ ಕಾರ್ಯದಿಂದ ಆತನ ತಂದೆಯ ಜೀವ ಉಳಿದಿದೆ. ಸದ್ಯ ಆತನ ಈ ಸಾಹಸ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ನಾವು ಈಗ ಹೇಳ ಹೊರಟಿರುವುದು ಕೇರಳದ ಕೋಟ್ಟಯಂ ಜಿಲ್ಲೆಯ ಪುದುಪಳ್ಳಿಯ ಪಯ್ಯಪ್ಪಾಡಿ ನಿವಾಸಿಗಳಾದ ಅನು ಮತ್ತು ಮಿನು ದಂಪತಿಯ ಮಗನಾದ ಜೋಕುಟ್ಟನ್‌ ಎನ್ನುವ 5ರ ಹರೆಯದ ಜೋರ್ದನ್‌ನ ಅಪರೂಪದ ಸಾಹಸಗಾಥೆ. ತಂದೆಯ ಜೀವ ಉಳಿಸಿದ ಹೀರೋ ಈತ. ಈತನ ಸಾಹಸಗಾಥೆ ಇದೀಗ ಜನಜನಿತ. ಮನೆಯಲ್ಲಿ ಯಾರೂ ಇಲ್ಲದಾಗ ಪ್ರಜ್ಞೆ ತಪ್ಪಿ ಬಿದ್ದ ತಂದೆಗೆ ಸಕಾಲದಲ್ಲಿ ಚಿಕಿತ್ಸೆ ಲಭಿಸುವಂತೆ ಮಾಡಿದ ಜೋರ್ದನ್‌ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ಲಭ್ಯವಾಗುತ್ತಿದೆ. ಈ ಬಗ್ಗೆ ನ್ಯೂಸ್‌ 18 ಮಲಯಾಳಂ ವಿಶೇಷ ವರದಿ ಸಿದ್ಧಪಡಿಸಿದೆ.

ಈ ಸುದ್ದಿಯನ್ನೂ ಓದಿ: Viral news: ಕೇರಳದ ಕರುಂಬಿಗೆ ಒಲಿದ ವಿಶ್ವದ ಅತ್ಯಂತ ಕುಬ್ಜ ಮೇಕೆ ಪಟ್ಟ; ಗಿನ್ನಿಸ್‌ ರೆಕಾರ್ಡ್‌ಗೆ ಸೇರ್ಪಡೆ

ಏನಿದು ಘಟನೆ?

ಯುಕೆಜಿಯಲ್ಲಿ ಓದುತ್ತಿರುವ ಜೋರ್ದನ್‌ ಅ ದಿನ ಶಾಲೆಯಿಂದ ಮರಳಿದಾಗ ಮನೆಯಲ್ಲಿ ತಂದೆ ಅನು ಮಾತ್ರ ಇದ್ದರು. ತಾಯಿ ಮಿನು ಅವರ ಅಂಗಡಿಗೆ ಹೋಗಿದ್ದರು. ಆಗಲೇ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದ್ದರಿಂದ ಅನು ಮಗನಿಗೆ ಊಟ ಕೊಟ್ಟು ಆತ ಹೊರಗಡೆ ಹೋಗದಂತೆ ಬಾಗಿಲಿಗೆ ಚಿಲಕ ಹಾಕಿ ಮಲಗಿದರು. ಊಟ ಮುಗಿಸಿ ಹೊರ ಬಂದ ಜೋರ್ದನ್‌ಗೆ ಅಸ್ವಸ್ಥನಾಗಿ ಹಾಸಿಗೆಯಲ್ಲಿ ಮಲಗಿರುವ ತಂದೆ ಕಾಣಿಸಿದರು.

ಗಾಬರಿಗೊಂಡ ಆತ ತಂದೆಯ ಬಳಿ ಓಡಿ ಬಂದು ಏನಾಯ್ತು ಎಂದ ಕೇಳತೊಡಗಿದೆ. ಆದೆ ಅನು ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಕೈ ಸನ್ನೆಯಲ್ಲಿ ಏನೋ ಹೇಳಲು ಯತ್ನಿಸಿದಾಗ ಪ್ರಜ್ಞೆ ತಪ್ಪಿ ಬಿದ್ದು ಬಿಟ್ಟರು. ದಿಕ್ಕು ತೋಚದ ಜೋರ್ದನ್‌ ಅವರನ್ನು ಏಳಿಸಲು ಯತ್ನಿಸಿದ. ಆದರೆ ಅನು ಮೇಲೇಳಲಿಲ್ಲ. ಮುಖಕ್ಕೆ ನೀರು ಚಿಮುಕಿಸಿದರೂ ಪ್ರಯೋಜನವಾಗಲಿಲ್ಲ. ಕೂಡಲೇ ಯಾರನ್ನಾದರೂ ಕರೆಯಬೇಕೆಂದು ಹೊರಗೋಡಲು ಯತ್ನಿಸಿದ. ಆದರೆ ಬಾಗಿಲಿಗೆ ಚಿಲಕ ಹಾಕಿತ್ತು.

ಸಮಯ ಮೀರುತ್ತಿದ್ದಂತೆ ಜೋರ್ದನ್‌ನ ಆತಂಕವೂ ಹೆಚ್ಚಾಗತೊಡಗಿತು. ಕೊನೆಗೆ ಕುರ್ಚಿ ಎಳೆದು ತಂದು ಚಿಲಕ ತೆಗೆದು ಹೊರಗೆ ಬಂದು ಪಕ್ಕದ ಮನೆಯವರಿಗೆ ವಿಷಯ ತಿಳಿಸಿದ. ಬಾಲಕನ ಗಾಬರಿ ಗಮನಿಸಿ ಅವರೆಲ್ಲ ಮನೆಗೆ ಓಡಿ ಬಂದಾಗ ಅನು ಪ್ರಜ್ಞೆ ತಪ್ಪಿ ಬಿದ್ದಿರುವುದು ಕಾಣಿಸಿತು.

ಕೂಡಲೇ ಪಕ್ಕದ ಮನೆಯವರು ಅನುವನ್ನು ಕಾರಿನಲ್ಲಿ ಅಸ್ಪತ್ರೆಗೆ ಸಾಗಿಸಲು ಮುಂದಾದರು. ಆದರೆ ಪ್ರಜ್ಞೆ ತಪ್ಪಿದ್ದರಿಂದ ಆಂಬುಲೆನ್ಸ್‌ಗೆ ಕರೆ ಮಾಡಿದರು. ಹೀಗೆ ಪುದುಪಳ್ಳಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡಿದ್ದರಿಂದ ಅನುವಿನ ಜೀವ ಉಳಿಸಲು ಸಾಧ್ಯವಾಯ್ತು.

ಅನು ಹೇಳಿದ್ದೇನು?

ಘಟನೆ ಬಗ್ಗೆ ಮಾತನಾಡಿದ ಅನು, ʼʼಆ ದಿನ ಹುಷಾರಿಲ್ಲದ ಕಾರಣ ಮನೆಯಲ್ಲೇ ಇದ್ದೆ. ಪತ್ನಿ ಮಿನು ನಮ್ಮ ಅಂಗಡಿಗೆ ತೆರಳಿದ್ದಳು. ಜೋಕುಟ್ಟನ್‌ (ಜೋರ್ದನ್‌) ಶಾಲೆಯಿಂದ ಬಂದಾಗ ಆತನಿಗೆ ಊಟ ನೀಡಿ ಮಲಗಿದೆ. ಆತ ಸೈಕಲ್‌ ಸವಾರಿ ಮಾಡಬಹುದು, ಗಮನಿಸಲು ಸಾಧ್ಯವಿಲ್ಲ ಎನ್ನುವ ಕಾರಣಕ್ಕೆ ಬಾಗಿಲಿಗೆ ಚಿಲಕ ಹಾಕಿದ್ದೆ. ಯಾಕೋ ಗೊತ್ತಿಲ್ಲ ಇದ್ದಕ್ಕಿದ್ದಂತೆ ತೀವ್ರ ಅಸ್ವಸ್ಥತೆ ಕಾಣಿಸಿತು. ಜೋಯ್‌ಕುಟ್ಟ ಸಮೀಪಕ್ಕೆ ಬಂದು ಅಪ್ಪ ಏನಾಯ್ತು ಎಂದು ಕೇಳುತ್ತಿದ್ದಾನೆ. ಆದರೆ ಉತ್ತರಿಸಲು ಸಾಧ್ಯವಾಗುತ್ತಿಲ್ಲ. ಆತ ಅವನಿಗೆ ಸಾಧ್ಯವಿರುವಷ್ಟು ಆರೈಕೆ ಮಾಡಿದ. ಸ್ವಲ್ಪ ಹೊತ್ತಿನಲ್ಲಿ ಪ್ರಜ್ಞೆ ತಪ್ಪಿತು. ಕಣ್ಣು ಬಿಟ್ಟಾಗ ಆಂಬುಲೆನ್ಸ್‌ನಲ್ಲಿದ್ದೆ. ಬಳಿಕ 1 ದಿನ ಚಿಕಿತ್ಸೆ ಪಡೆದು ಈಗ ಮನೆಗೆ ಮರಳಿದ್ದೇನೆ. ಸದ್ಯ ಆರೋಗ್ಯ ಸುಧಾರಿಸಿದೆʼʼ ಎಂದು ಹೇಳಿದ್ದಾರೆ.

ಮಿನು ಹೇಳಿದ್ದೇನು?

ಈ ಹಿಂದೆ ಮಿನು ಮೆಡಿಕಲ್‌ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರು. ಹೀಗಾಗಿ ಆರೋಗ್ಯಕ್ಕೆ ಸಂಬಂಧಪಟ್ಟ ಕೆಲವೊಂದು ಮಾಹಿತಿಯನ್ನು ಜೋಕುಟ್ಟನ್‌ನೊಂದಿಗೆ ಹಂಚಿಕೊಂಡಿದ್ದರು. ʼʼಯಾರಿಗಾದರೂ ದಿಢೀರ್‌ ಅನಾರೋಗ್ಯ ಕಾಣಿಸಿಕೊಂಡರೆ ಏನು ಮಾಡಬೇಕು? ಹೇಗೆ ಆರೈಕೆ ಮಾಡಬೇಕು ಎನ್ನುವುದನ್ನು ಆತನಿಗೆ ತಿಳಿಸಿದ್ದೆ. ಆದರೆ ಅದನ್ನು ಇಷ್ಟು ಪರಿಣಾಮಕಾರಿಯಾಗಿ ಜಾರಿಗೆ ತರುತ್ತಾನೆ ಎಂದುಕೊಂಡಿರಲಿಲ್ಲʼʼ ಎಂದು ಮಿನು ಎಂದು ಹೇಳವಾಗ ಅವರ ಧ್ವನಿಯಲ್ಲಿ ಮಗನ ಬಗ್ಗೆ ಹೆಮ್ಮೆ ತುಂಬಿ ತುಳುಕುತ್ತಿತ್ತು.

ಸದ್ಯ ಜೋರ್ದನ್‌ ಶಾಲೆಯಲ್ಲಿ ಮತ್ತು ತನ್ನ ಗ್ರಾಮದಲ್ಲಿ ಹೀರೋ ಆಗಿ ಬದಲಾಗಿದ್ದಾನೆ. ಶಿಕ್ಷಕರು ಆತನ ಕಾರ್ಯವನ್ನು ಶ್ಲಾಘಿಸಿದ್ದು, ಅಸ್ಲೆಂಬಿಯಲ್ಲಿ ಬೆನ್ನು ತಟ್ಟಿ ಇತರ ಮಕ್ಕಳಿಗೂ ಸ್ಫೂರ್ತಿ ತುಂಬಿದ್ದಾರೆ.