Mohan Yadav: ಬಲವಂತದಿಂದ ಮತಾಂತರಗೊಳಿಸಿದರೆ ಮರಣ ದಂಡನೆ; ಮಧ್ಯ ಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್
Mohan Yadav: ʼʼಮಹಿಳೆಯರನ್ನು ಬಲವಂತವಾಗಿ ಧಾರ್ಮಿಕ ಮತಾಂತರಗೊಳಿಸಿದರೆ ಅಂತಹವರಿಗೆ ಮರಣ ದಂಡನೆ ವಿಧಿಸುವ ಕಾನೂನನ್ನು ರಾಜ್ಯದಲ್ಲಿ ಶೀಘ್ರದಲ್ಲೇ ಜಾರಿಗೊಳಿಸಲಾಗುವುದುʼʼ ಎಂದು ಮಧ್ಯ ಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಘೋಷಿಸಿದ್ದಾರೆ. ಸದ್ಯ ಈ ಹೇಳಿಕೆ ವ್ಯಾಪಕ ಚರ್ಚೆ ಹುಟ್ಟು ಹಾಕಿದೆ.

ಮಧ್ಯ ಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್.

ಭೋಪಾಲ್: ʼʼಮಹಿಳೆಯರನ್ನು ಬಲವಂತವಾಗಿ ಧಾರ್ಮಿಕ ಮತಾಂತರಗೊಳಿಸಿದರೆ (Religious conversion) ಅಂತಹವರಿಗೆ ಮರಣ ದಂಡನೆ (Death penalty) ವಿಧಿಸುವ ಕಾನೂನನ್ನು ರಾಜ್ಯದಲ್ಲಿ ಶೀಘ್ರದಲ್ಲೇ ಜಾರಿಗೊಳಿಸಲಾಗುವುದುʼʼ ಎಂದು ಮಧ್ಯ ಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ (Mohan Yadav) ತಿಳಿಸಿದ್ದಾರೆ. ʼʼಈ ಕಾನೂನು ಜಾರಿಯಾದರೆ ಅಪ್ರಾಪ್ತ ವಯಸ್ಸಿನವರ ಮೇಲೆ ಅತ್ಯಾಚಾರ ಎಸಗುವ ಅಪರಾಧಿಗಳಿಗೆ ವಿಧಿಸುವಂತ ಶಿಕ್ಷೆಯನ್ನೇ ನೀಡಲಾಗುತ್ತದೆʼʼ ಎಂದು ಅವರು ಎಚ್ಚರಿಸಿದ್ದಾರೆ. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ (International Women's Day) ಪ್ರಯುಕ್ತ ಭೋಪಾಲ್‌ನ ಖುಷ್ಬು ಠಾಕ್ರೆ ಅಂತಾರಾಷ್ಟ್ರೀಯ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಈ ಘೋಷಣೆ ಹೊರಡಿಸಿದ್ದಾರೆ.
"ಮುಗ್ಧ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಎಸಗುವವರ ವಿರುದ್ಧ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ. ಈ ನಿಟ್ಟಿನಲ್ಲಿ ಮರಣ ದಂಡನೆಗೆ ಅವಕಾಶ ಕಲ್ಪಿಸಲಾಗಿದೆ. ಇದಲ್ಲದೆ ಧಾರ್ಮಿಕ ಮತಾಂತರ ನಡೆಸುವವರ ವಿರುದ್ಧ ಮಧ್ಯ ಪ್ರದೇಶದ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆಯಲ್ಲಿ ಮರಣ ದಂಡನೆ ವಿಧಿಸಲು ಅವಕಾಶ ಕಲ್ಪಿಸಲಾಗುವುದುʼʼ ಎಂದು ಮೋಹನ್ ಯಾದವ್ ಹೇಳಿದ್ದಾರೆ.
बेटियों की रक्षा और स्वाभिमान के लिए समर्पित मध्यप्रदेश सरकार...
— Dr Mohan Yadav (@DrMohanYadav51) March 8, 2025
बेटियों के साथ दुराचार करने वालों को फांसी की सजा का प्रावधान पहले से ही लागू है।अब बेटियों का धर्मांतरण कराने वाले दोषियों के लिए भी मध्यप्रदेश सरकार सख्त कदम उठाएगी।
मध्यप्रदेश में जोर जबरदस्ती या बहला फुसलाकर… pic.twitter.com/kgyeC5pxRY
ʼʼಬಲವಂತದ ಮತಾಂತರಕ್ಕೆ ಯತ್ನಿಸುವವರನ್ನು ರಾಜ್ಯ ಸರ್ಕಾರ ಸುಮ್ಮನೆ ಬಿಡುವುದಿಲ್ಲ. ಇಂತಹ ಅನಾಚಾರಗಳನ್ನು ಮಟ್ಟ ಹಾಕಲು ಸರ್ಕಾರ ನಿರ್ಧರಿಸಿದೆʼʼ ಎಂದು ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿಯೂ ಈ ಬಗ್ಗೆ ಬರೆದುಕೊಂಡಿರುವ ಅವರು, ʼʼಮಧ್ಯಪ್ರದೇಶ ಸರ್ಕಾರವು ಹೆಣ್ಣುಮಕ್ಕಳ ರಕ್ಷಣೆ ಮತ್ತು ಸ್ವಾಭಿಮಾನಕ್ಕಾಗಿ ಹಗಲಿರುಳು ಕಾರ್ಯ ನಿರ್ವಹಿಸಲಿದೆʼʼ ಎಂದು ಭರವಸೆ ನೀಡಿದ್ದಾರೆ.
"ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಎಸಗುವವರಿಗೆ ಮರಣ ದಂಡನೆ ವಿಧಿಸುವ ಕಾನೂನು ಜಾರಿಯಾದ ನಂತರ ಮಧ್ಯ ಪ್ರದೇಶದಲ್ಲಿ ಹೆಣ್ಣುಮಕ್ಕಳನ್ನು ಮತಾಂತರಿಸುವವರಿಗೂ ಅದೇ ರೀತಿಯ ಶಿಕ್ಷೆ ವಿಧಿಸಲಾಗುತ್ತದೆʼʼ ಎಂದಿದ್ದಾರೆ.
ಭೋಪಾಲ್‌ನಲ್ಲಿ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಮೋಹನ್ ಯಾದವ್ ಮಹಿಳೆಯರಿಗಾಗಿ ಜಾರಿಗೊಳಿಸಿರುವ ಮಾಸಿಕ ಆರ್ಥಿಕ ನೆರವು ನೀಡುವ ಲಾಡ್ಲಿ ಬೆಹ್ನಾ ಯೋಜನೆ (Ladli Behna Yojana)ಯ 1.27 ಕೋಟಿಗೂ ಹೆಚ್ಚು ಫಲಾನುಭವಿಗಳ ಖಾತೆಗಳಿಗೆ 1,552.73 ಕೋಟಿ ರೂ.ಗಳನ್ನು ವರ್ಗಾಯಿಸಿದರು. ಎಲ್‌ಪಿಜಿ ಸಿಲಿಂಡರ್ ರೀಫಿಲ್ ಯೋಜನೆಯಡಿ 26 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ 55.95 ಕೋಟಿ ರೂ.ಗಳ ಅನುದಾನವನ್ನೂ ಅವರು ವರ್ಗಾಯಿಸಿದರು. ಈ ಯೋಜನೆ ಅಡಿಯಲ್ಲಿ ಪ್ರತಿ ಸಿಲಿಂಡರ್‌ಗೆ ಮಾಸಿಕ 450 ರೂ. ನಿಗದಿಪಡಿಸಲಾಗಿದೆ.
ಕಾಂಗ್ರೆಸ್‌ನಿಂದ ವಿರೋಧ
ಮರಣ ದಂಡನೆ ಹೇಳಿಕೆಗೆ ಇದೀಗ ಕಾಂಗ್ರೆಸ್ ಕಿಡಿಕಾರಿದೆ. ಯಾದವ್ ಅವರ ಘೋಷಣೆಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕ ಆರಿಫ್ ಮಸೂದ್, ಬಲವಂತದ ಮತಾಂತರ ಎಂದರೇನು ಎಂಬುದನ್ನು ಮೊದಲು ಸ್ಪಷ್ಟಪಡಿಸುವಂತೆ ಆಗ್ರಹಿಸಿದ್ದಾರೆ. ಭೋಪಾಲ್‌ನಲ್ಲಿ ನಾಪತ್ತೆಯಾದ ಬಾಲಕಿಯರ ಪ್ರಕರಣಗಳನ್ನು ಬೇಧಿಸುವಲ್ಲಿ ಸರ್ಕಾರದ ವಿಫಲವಾಗಿದೆ ಎಂದೂ ಅವರು ದೂರಿದ್ದಾರೆ.
"ಮೊದಲು, ಬಲವಂತದ ಮತಾಂತರ ಎಂದರೇನು ಎಂಬುದನ್ನು ಮುಖ್ಯಮಂತ್ರಿ ಸ್ಪಷ್ಟಪಡಿಸಬೇಕು. ಅಲ್ಲದೆ ಭೋಪಾಲ್‌ನಲ್ಲಿ ನಾಪತ್ತೆಯಾದ ಬಾಲಕಿಯರ ಪತ್ತೆಗೆ ಕ್ರಮ ಕೈಗೊಳ್ಳಬೇಕು. ಇತ್ತೀಚೆಗೆ ಇಟ್ಖೇಡಿಯ ಹುಡುಗಿಯೊಬ್ಬಳು ನಾಪತ್ತೆಯಾಗಿದ್ದಾಳೆ. ಇದರಿಂದ ಕಳೆದ 3 ದಿನಗಳಿಂದ ಆಕೆಯ ಕುಟುಂಬ ಸಂಕಷ್ಟದಲ್ಲಿದೆ. ಇನ್ನೂ ಆಕೆಯನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲʼʼ ಎಂದು ಹೇಳಿದ್ದಾರೆ.