Manav Sharma: ಟೆಕ್ಕಿ ಮಾನವ್ ಶರ್ಮಾ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್; ತಿಂಗಳ ನಂತರ ಪತ್ನಿ, ಮಾವನ ಬಂಧನ
ಉತ್ತರ ಪ್ರದೇಶದ ಆಗ್ರಾದಲ್ಲಿ ಖಾಸಗಿ ಕಂಪನಿಯಲ್ಲಿ ಟೆಕ್ಕಿಯಾಗಿದ್ದ ಮಾನವ್ ಶರ್ಮಾ ಆತ್ಮಹತ್ಯೆ ಮಾಡಿಕೊಂಡ ಸುಮಾರು ಒಂದು ತಿಂಗಳ ನಂತರ, ಪೊಲೀಸರು ಅವರ ಪತ್ನಿ ನಿಖಿತಾ ಶರ್ಮಾ ಮತ್ತು ಮಾವ ನೃಪೇಂದ್ರ ಶರ್ಮಾ ಅವರನ್ನು ಬಂಧಿಸಿದ್ದಾರೆ.

ಮಾನವ್ ಶರ್ಮಾ.

ಲಖನೌ: ಉತ್ತರ ಪ್ರದೇಶದ ಆಗ್ರಾದಲ್ಲಿ ಖಾಸಗಿ ಕಂಪನಿಯಲ್ಲಿ ಟೆಕ್ಕಿಯಾಗಿದ್ದ ಮಾನವ್ ಶರ್ಮಾ (Manav Sharma) ಆತ್ಮಹತ್ಯೆ ಮಾಡಿಕೊಂಡ ಸುಮಾರು ಒಂದು ತಿಂಗಳ ನಂತರ, ಪೊಲೀಸರು ಅವರ ಪತ್ನಿ ನಿಖಿತಾ ಶರ್ಮಾ ಮತ್ತು ಮಾವ ನೃಪೇಂದ್ರ ಶರ್ಮಾ ಅವರನ್ನು ಬಂಧಿಸಿದ್ದಾರೆ. ಮಾನವ್ ಆತ್ಮಹತ್ಯೆ ನಂತರ ಪರಾರಿಯಾಗಿದ್ದ ನಿಖಿತಾ ಮತ್ತು ನೃಪೇಂದ್ರ ಗುಜರಾತ್‌ನ ಅಹಮದಾಬಾದ್‌ನಲ್ಲಿ ತಲೆಮರೆಸಿಕೊಂಡಿದ್ದರು. ಇಬ್ಬರ ಮೇಲೂ ಪೊಲೀಸರು 10,000 ರೂ.ಗಳ ಬಹುಮಾನ ಘೋಷಿಸಿದ್ದರು. ಜಾಮೀನು ರಹಿತ ವಾರಂಟ್ ಹೊರಡಿಸಿದರೂ, ಇವರು ಪತ್ತೆಯಾಗದ ಕಾರಣ ಪೊಲೀಸರು ತೀವ್ರವಾಗಿ ಶೋಧ ನಡೆಸಿದ್ದರು.
ಇದಕ್ಕೂ ಮುನ್ನ, ಹಲವು ಬಾರಿ ಸಮನ್ಸ್ ನೀಡಿದರೂ ನಿಖಿತಾ ಪೊಲೀಸರ ಮುಂದೆ ಹಾಜರಾಗಿರಲಿಲ್ಲ. ಈ ಕಾರಣಕ್ಕಾಗಿ ಪೊಲೀಸರು ಮಾರ್ಚ್ 13ರಂದು ನಿಖಿತಾ ತಾಯಿ ಮತ್ತು ಸಹೋದರಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದರು. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ನಿಖಿತಾ, ನೃಪೇಂದ್ರ ಮತ್ತು ಇನ್ನೊಬ್ಬ ಆರೋಪಿಯನ್ನು ಹುಡುಕಲು ಪೊಲೀಸರು ವಿವಿಧ ಸ್ಥಳಗಳಲ್ಲಿ ಹಲವಾರು ಬಾರಿ ದಾಳಿ ಕೂಡಾ ನಡೆಸಿದ್ದರು.
Victim's wife Nikita Sharma claimed over a year into marriage, their relationship turned abusive over her past. As per Nikita, Manav made several attempts on his life. On the day of the incident, Nikita also alerted her sister-in-law over Manav taking the extreme step. pic.twitter.com/ipvkPq7D1x
— Piyush Rai (@Benarasiyaa) February 28, 2025
ಈ ಸುದ್ದಿಯನ್ನೂ ಓದಿ: Fake Doctor: ಮಧ್ಯ ಪ್ರದೇಶದಲ್ಲಿ ಬೆಚ್ಚಿ ಬೀಳಿಸುವ ಘಟನೆ; ನಕಲಿ ವೈದ್ಯನಿಂದ ಹೃದಯ ಶಸ್ತ್ರ ಚಿಕಿತ್ಸೆ: 7 ಮಂದಿ ಸಾವು
ಬೇರೊಬ್ಬನ ಜತೆ ಸಂಬಂಧ ಇದ್ದದ್ದನ್ನು ಒಪ್ಪಿಕೊಂಡ ನಿಖಿತಾ
ಮಾನವ್ ಸಾವಿನ ನಂತರ, ಅವರ ಪತ್ನಿ ನಿಖಿತಾ ವಿಡಿಯೋ ಮಾಡಿ, ಮಾನವ್ ತನಗೆ ವಿವಾಹೇತರ ಸಂಬಂಧವಿದೆ ಎಂದು ಅನುಮಾನಿಸುತ್ತಿದ್ದರು ಮತ್ತು ಪದೇ ಪದೆ ನನ್ನ ಮೇಲೆ ಹಲ್ಲೆ ನಡೆಸುತ್ತಿದ್ದರು ಎಂದು ಆರೋಪಿಸಿದ್ದಾರೆ. ಆದರೆ ಈ ವಿಡಿಯೊ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಮತ್ತೊಂದು ವಿಡಿಯೋ ಬೆಳಕಿಗೆ ಬಂದಿದ್ದು, ಅದರಲ್ಲಿ ನಿಕಿತಾ ಅವರು ತಾವು ಬೇರೊಬ್ಬ ವ್ಯಕ್ತಿಯೊಂದಿಗೆ ದೈಹಿಕ ಸಂಬಂಧ ಇಟ್ಟುಕೊಂಡಿದ್ದನ್ನು ಒಪ್ಪಿಕೊಂಡಿದ್ದಾರೆ.
“ಮದುವೆಗೆ ಮೊದಲು ಅಭಿಷೇಕ್ ಎಂಬ ವ್ಯಕ್ತಿಯೊಂದಿಗೆ ಲೈಂಗಿಕ ಸಂಬಂಧ ಇಟ್ಟುಕೊಂಡಿದ್ದೆ. ತನ್ನ ಮಾವ ಕೂಡ ಅವನನ್ನು ಜತೆ ಇರುವಂತೆ ಬಲವಂತ ಮಾಡಿದ್ದರು. ಅಭಿಷೇಕ್‌ನನ್ನು ಲವ್ ಮಾಡುತ್ತಿದ್ದೆ ಎಂದು ಮದುವೆಗೆ ಮುಂಚೆಯೇ ಮಾನವ್‌ಗೆ ಹೇಳಿದ್ದೆ. ಆದರೆ, ಆತನ ಜತೆ ಲೈಂಗಿಕ ಸಂಬಂಧ ಇಟ್ಟುಕೊಂಡ ವಿಚಾರವನ್ನು ಹೇಳಿರಲಿಲ್ಲ. ಮಾನವ್ ನನಗೆ ಎಂದಿಗೂ ಹೊಡೆದಿಲ್ಲ” ಎಂದು ನಿಖಿತಾ ಆ ವಿಡಿಯೊದಲ್ಲಿ ಹೇಳಿದ್ದಾರೆ.
ಮಾನವ್ ಸಹೋದರಿ ಹೇಳಿದ್ದೇನು?
“ಮಾನವ್‌ಗೆ ಆತನ ಪತ್ನಿ ನಿಖಿತಾ ಬೆದರಿಕೆ ಹಾಕಿ ಒತ್ತಡ ಹೇರುತ್ತಿದ್ದಳು. ವಿಚ್ಚೇದನ ನೀಡಲು ಮುಂದಾದರೆ ನಿನ್ನ ಸಂಪೂರ್ಣ ಕುಟುಂಬವನ್ನು ಬೀದಿಗೆ ತರುವುದಾಗಿ ಬೆದರಿಕೆ ಹಾಕಿದ್ದಳು. ದೀರ್ಘ ಕಾಲದ ಕಾನೂನು ತೊಂದರೆಗೆ ಹೆದರಿ ಮಾನವ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ” ಎಂದು ಆತನ ಸಹೋದರಿ ಆಕಾಂಕ್ಷ ಶರ್ಮಾ ಹೇಳಿದ್ದಾರೆ.
ಮದುವೆಗೂ ಮುಂಚೆ ನಿಕಿತಾ ಹೊಂದಿದ್ದ ಸಂಬಂಧಗಳ ಬಗ್ಗೆ ತಿಳಿದ ಬಳಿಕ ಮಾನವ್‌ಗೆ ಅತೀವ ದುಃಖವಾಗಿತ್ತು. ಮದುವೆ ಬಳಿಕವೂ ಅವಳು ಬೇರೆಯವರ ಜತೆ ಸಂಬಂಧ ಇಟ್ಟುಕೊಂಡಿದ್ದಾಳೆಂದು ತಿಳಿದು ಆತನ ನೋವು ಇನ್ನಷ್ಟು ಹೆಚ್ಚಾಯಿತು ಎಂದಿದ್ದಾರೆ.
ವಾಯುಪಡೆಯ ನಿವೃತ್ತ ಯೋಧ ನರೇಂದ್ರ ಕುಮಾರ್ ಶರ್ಮಾ ಅವರ ಏಕೈಕ ಪುತ್ರನಾಗಿರುವ ಮಾನವ್ ಶರ್ಮಾ ಫೆಬ್ರವರಿ 24ರಂದು ಡಿಫೆನ್ಸ್ ಕಾಲೋನಿಯಲ್ಲಿರುವ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದರು. ಆತ್ಮಹತ್ಯೆಗೂ ಮುನ್ನ ವಿಡಿಯೋ ಮಾಡಿದ್ದ ಮಾನವ್, ತನ್ನ ಸಾವಿಗೆ ಹೆಂಡತಿ ನಿಖಿತಾ ಕಾರಣ ಎಂದು ಹೇಳಿದ್ದರು.