Himanta Biswa Sarma: ಅರೆಸ್ಟ್ ಮಾಡಲು ಹೋಗಿದ್ದ ಪೊಲೀಸರನ್ನೇ ತಪಾಸಣೆ ಮಾಡಿಸಿದ ಆರೋಪಿ; ಕಾನೂನಿನಲ್ಲಿ ಅವಕಾಶವಿದೆ ಎಂದ ಅಸ್ಸಾಂ ಸಿಎಂ!
ಅಸ್ಸಾಂನ ಗುವಹಟಿಯಲ್ಲಿ ನಕಲಿ ದಾಖಲೆ ಮತ್ತು ಪರೀಕ್ಷಾ ಅಕ್ರಮಗಳ ಆರೋಪ ಹೊತ್ತಿರುವ ವಿಶ್ವವಿದ್ಯಾನಿಲಯದ ಕುಲಪತಿಯ ಖಾಸಗಿ ಭದ್ರತಾ ಸಿಬ್ಬಂದಿಗಳು ಅಸ್ಸಾಂ ಪೊಲೀಸರನ್ನು ಪರಿಶೀಲನೆ ಮಾಡಿದ ದೃಶ್ಯ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈರಲ್ ಆದ ವಿಡಿಯೋಗೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಪ್ರತಿಕ್ರಿಯೆ ನೀಡಿದ್ದಾರೆ.

ವೈರಲ್ ನ್ಯೂಸ್

ದಿಸ್ಪುರ್: ಅಸ್ಸಾಂನ ಗುವಹಟಿಯಲ್ಲಿ ನಕಲಿ ದಾಖಲೆ ಮತ್ತು ಪರೀಕ್ಷಾ ಅಕ್ರಮಗಳ ಆರೋಪ ಹೊತ್ತಿರುವ ವಿಶ್ವವಿದ್ಯಾನಿಲಯದ ಕುಲಪತಿಯ ಖಾಸಗಿ ಭದ್ರತಾ ಸಿಬ್ಬಂದಿಗಳು ಅಸ್ಸಾಂ ಪೊಲೀಸರನ್ನು ಪರಿಶೀಲನೆ ಮಾಡಿದ ದೃಶ್ಯ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 'ವಾಯ್ಸ್ ಆಫ್ ಅಸ್ಸಾಂ' ಎಂಬ ಎಕ್ಸ್ ಹ್ಯಾಂಡಲ್ ಈ ವೀಡಿಯೊವನ್ನು ಹಂಚಿಕೊಂಡಿದೆ. ಇದು ಪಾಕಿಸ್ತಾನ, ಬಾಂಗ್ಲಾದೇಶ, ಅಥವಾ ಚಲನಚಿತ್ರದ ದೃಶ್ಯವಲ್ಲ. ಇದು ಅಸ್ಸಾಂನ ವಿಡಿಯೋ ಎಂದು ಅದರಲ್ಲಿ ಬರೆಯಲಾಗಿದೆ. ವೈರಲ್ ಆದ ವಿಡಿಯೋಗೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ( Himanta Biswa Sarma) ಪ್ರತಿಕ್ರಿಯೆ ನೀಡಿದ್ದಾರೆ.
ಎಕ್ಸ್ ಖಾತೆಯನ್ನು ವಾಯ್ಸ್ ಆಫ್ ಅಸ್ಸಾಂ ಅವರ ವಿಡಿಯೋವನ್ನು ರೀಟ್ವೀಟ್ ಮಾಡಿರುವ ಅವರು ಈ ಮಾತನ್ನು ಸ್ಪಷ್ಟಪಡಿಸುತ್ತಾ, ಕಾನೂನಿನಲ್ಲಿ ಇದಕ್ಕೆ ಅವಕಾಶವಿದೆ ಎಂದು ಹೇಳಿದ್ದಾರೆ. 1973 ರ ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ (CrPC) ಸೆಕ್ಷನ್ 100(3) ರ ಪ್ರಕಾರ, ಪೊಲೀಸರು ನಿವಾಸದ ಮೇಲೆ ದಾಳಿ ನಡೆಸಿದಾಗ, ಅಧಿಕಾರಿಗಳು ಆವರಣದಲ್ಲಿ ಶೋಧ ನಡೆಸುವ ಮೊದಲು ಅವರನ್ನು ತಪಾಸಣೆಗೆ ಒಳಪಡಿಸುವ ಹಕ್ಕು ಮಾಲೀಕನಿಗಿರುತ್ತದೆ. ಕಾನೂನು ಅಂತಹ ಅವಕಾಶವನ್ನು ನೀಡಿದೆ ಎಂದು ಅವರು ಹೇಳಿದ್ದಾರೆ. ವೀಡಿಯೊದಲ್ಲಿ ಪೊಲೀಸರು ಮಹ್ಬೂಬುಲ್ ಹಕ್ ಅವರ ಮನೆಗೆ ಪ್ರವೇಶಿಸುತ್ತಿರುವುದನ್ನು ಮತ್ತು ಆ ಕುಲಪತಿ ಅವರು ನೇಮಿಸಿದ್ದ ಖಾಸಗಿ ಭದ್ರತಾ ಸಿಬ್ಬಂದಿಯಿಂದ ತಪಾಸಣೆ ನಡೆಸಲ್ಪಡುತ್ತಿರುವುದನ್ನು ತೋರಿಸಲಾಗಿದೆ.
As per Section 100(3) of the Code of Criminal Procedure (CrPC), 1973, when police conduct a search of a residence, the owner has the right to request that the officers be searched first before they proceed with searching the premises. https://t.co/pHvLtFobXZ
— Himanta Biswa Sarma (@himantabiswa) March 1, 2025
ಸಿಬಿಎಸ್‌ಇ 12 ನೇ ತರಗತಿ ಪರೀಕ್ಷೆಯಲ್ಲಿ ನಕಲಿ ಜಾತಿ ಪ್ರಮಾಣಪತ್ರದ ಆರೋಪದ ಮೇಲೆ ಮೇಘಾಲಯದ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ (ಯುಎಸ್‌ಟಿಎಂ) ಕುಲಪತಿ ಹೋಕ್ ಅವರನ್ನು ಕಳೆದ ತಿಂಗಳು ಅಸ್ಸಾಂ ಪೊಲೀಸರು ಬಂಧಿಸಿದ್ದರು. ಫೆಬ್ರವರಿ 21 ರಂದು, ಪೊಲೀಸ್ ತಂಡವು ತಡರಾತ್ರಿ ಗುವಾಹಟಿಯ ಅವರ ಮನೆಯಿಂದ ನಡೆಸಿದ ಕಾರ್ಯಾಚರಣೆಯಲ್ಲಿ ಹೋಕ್ ಅವರನ್ನು ಬಂಧಿಸಿತು, ಮೂಲಗಳ ಪ್ರಕಾರ ಹೋಕ್ ಅವರು ವಿದ್ಯಾರ್ಥಿಗಳಿಂದ ಹಣ ಪಡೆದು ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ನಕಲು ಮಾಡಲು ಅವಕಾಶ ನೀಡಿದ್ದರು. ಆದರೆ ಅವರ ಯೋಜನೆ ಕೊನೆಯಲ್ಲಿ ಕಾರ್ಯರೂಪಕ್ಕೆ ಬರಲಿಲ್ಲ ಮತ್ತು ಪರೀಕ್ಷಾ ಕೇಂದ್ರದಲ್ಲಿ ಅವ್ಯವಸ್ಥೆ ಉಂಟಾಗಿತ್ತು.
ಈ ಸುದ್ದಿಯನ್ನೂ ಓದಿ: Namaz Break: ಶಾಸಕರ ನಮಾಜ್ ಬ್ರೇಕ್ ರದ್ದು; 90 ವರ್ಷದ ಸಂಪ್ರದಾಯಕ್ಕೆ ಫುಲ್ ಸ್ಟಾಪ್ ಹಾಕಿದ ಅಸ್ಸಾಂ ಸರ್ಕಾರ
ದೂರಿನ ಆಧಾರದಲ್ಲಿ ತನಿಖೆ ಕೈಗೊಂಡ ಪೊಲೀಸರು ಹೋಕ್ ಅವರನ್ನು ಬಂಧಿಸಿದ್ದರು. ಈ ವಿಷಯವನ್ನು ಪ್ರಸ್ತಾಪಿಸಿದ ಮುಖ್ಯಮಂತ್ರಿ ಶರ್ಮಾ, ಹಕ್ ನಕಲಿ ಪದವಿಗಳು ಮತ್ತು ಹಣಕಾಸು ಅಕ್ರಮ ಸೇರಿದಂತೆ ಹಲವಾರು ವಂಚನೆ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಿದ್ದರು. ವಿಶ್ವವಿದ್ಯಾನಿಲಯವು ಪರೀಕ್ಷೆಗಳನ್ನು ನಡೆಸದೆ ಪಿಎಚ್‌ಡಿ ಮತ್ತು ಇತರ ಪದವಿಗಳನ್ನು ಮಾರಾಟ ಮಾಡಿದೆ ಎಂದು ಅವರು ಆರೋಪಿಸಿದ್ದರು.