PM Modi: ಮೋದಿ ನಿವೃತ್ತಿಗೆ ಫಿಕ್ಸ್ ಆಯ್ತಾ ದಿನಾಂಕ? ರಾಜಕೀಯ ಚರ್ಚೆಗೆ ನಾಂದಿ ಹಾಡಿದ ಮೋಹನ್ ಭಾಗವತ್ ಆ ಹೇಳಿಕೆ
Narendra Modi: ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್, “75 ವರ್ಷ ದಾಟಿದವರು ಜವಾಬ್ದಾರಿಗಳನ್ನು ವರ್ಗಾಯಿಸಿ ವಿಶ್ರಾಂತಿ ಪಡೆಯಬೇಕು” ಎಂದು ಹೇಳಿದ್ದಾರೆ. ಈ ಹೇಳಿಕೆ ಕೇವಲ ಸಾಮಾನ್ಯ ಸಂದೇಶವಾಗಿಲ್ಲ, ಬಹುದೊಡ್ಡ ರಾಜಕೀಯ ಚರ್ಚೆಗೆ ಕಾರಣವಾಗಿದೆ.


ದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ (Rashtriya Swayamsevak Sangh) ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat), “75 ವರ್ಷ ದಾಟಿದವರು ಜವಾಬ್ದಾರಿಗಳನ್ನು ವರ್ಗಾಯಿಸಿ ವಿಶ್ರಾಂತಿ ಪಡೆಯಬೇಕು” ಎಂದು ಹೇಳಿದ್ದಾರೆ. ಈ ಹೇಳಿಕೆ ಕೇವಲ ಸಾಮಾನ್ಯ ಸಂದೇಶವಾಗಿಲ್ಲ, ಬಹುದೊಡ್ಡ ರಾಜಕೀಯ ಚರ್ಚೆಗೆ (Political Discussion) ಕಾರಣವಾಗಿದೆ.
74 ವರ್ಷ ವಯಸ್ಸಿನ ಭಾಗವತ್ ಅವರಿಗೆ 2025ರ ಸೆಪ್ಟೆಂಬರ್ ವೇಳೆಗೆ 75 ತುಂಬಲಿದ್ದು, ಮುಂದಿನ ವರ್ಷ ತಮ್ಮ ಸ್ಥಾನದಿಂದ ಕೆಳಗಿಳಿಯಬಹುದೆಂಬ ಊಹಾಪೋಹಗಳು ಜೋರಾಗಿವೆ. ಈ ಹೇಳಿಕೆಯು ಆರ್‌ಎಸ್‌ಎಸ್‌ನ ಭವಿಷ್ಯದ ನಾಯಕತ್ವಕ್ಕೆ ಸಂಕೇತವೇ ಅಥವಾ ಸರ್ಕಾರಿ ನೀತಿಗೆ ಸೂಚನೆಯೇ ಎಂಬ ಪ್ರಶ್ನೆಗಳು ಎದ್ದಿವೆ. ಭಾಗವತ್ ನಿವೃತ್ತರಾದರೆ, ಸಹಸರ್ ಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಕೃಷ್ಣ ಗೋಪಾಲ್, ಭಯ್ಯಾಜಿ ಜೋಶಿ ಮುಂತಾದ ಸಕ್ರಿಯ ನಾಯಕರ ಹೆಸರುಗಳು ಉತ್ತರಾಧಿಕಾರಿಗಳ ಪಟ್ಟಿಯಲ್ಲಿ ಕೇಳಿಬರುತ್ತಿವೆ. ಆರ್‌ಎಸ್‌ಎಸ್‌ನಲ್ಲಿ ನಾಯಕತ್ವ ಬದಲಾವಣೆ ಸಾಮಾನ್ಯವಾಗಿ ಸಾರ್ವಜನಿಕವಾಗದಿದ್ದರೂ, ಹೆಡ್ಗೆವಾರ್ ಮತ್ತು ಗೋಲ್ವಾಲ್ಕರ್ ಬಳಿಕ ಬದಲಾವಣೆಗಳು ದೀರ್ಘಕಾಲದ ಚಿಂತನೆ ಬಳಿಕ ನಡೆದಿವೆ.
ಭಾಗವತ್ ಅವರ ಹೇಳಿಕೆಯ ಹಿನ್ನೆಲೆಯಲ್ಲಿ ಶಿವಸೇನಾ ಸಂಸದ ಸಂಜಯ್ ರಾವತ್, “ಭಾಗವತ್ 75ರಲ್ಲಿ ನಿವೃತ್ತಿಯಾದರೆ, ಈ ನಿಯಮವು ಪ್ರಧಾನಿ ಮೋದಿಗೂ ಅನ್ವಯವಾಗಬೇಕು. ಅವರಿಗೂ ಈಗ 74 ವರ್ಷ” ಎಂದು ಆಗ್ರಹಿಸಿದ್ದಾರೆ. ಬಿಜೆಪಿಯ 75 ವರ್ಷದ ನಿವೃತ್ತಿ ಸೂತ್ರವನ್ನು ಮೋದಿಗೂ ಅನ್ವಯಿಸಬೇಕೆಂದು ರಾವತ್ ಒತ್ತಿ ಹೇಳಿದ್ದಾರೆ. ಇದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಈ ಸುದ್ದಿಯನ್ನೂ ಓದಿ: PM Modi: ವಿದೇಶಿ ಸಂಸತ್ತು ಉದ್ದೇಶಿಸಿ ಗರಿಷ್ಠ ಭಾಷಣ: ಪ್ರಧಾನಿ ಮೋದಿಯೇ ಮೇಲುಗೈ
ಇದೇ ವೇಳೆ, ಗುಜರಾತ್‌ಗೆ ಭೇಟಿ ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ತಮ್ಮ ಎರಡು ದಶಕಗಳ ರಾಜಕೀಯ ಜೀವನ ಸಾಕೆಂದು, ನಿವೃತ್ತಿಯಾದ ಬಳಿಕ ವೇದಗಳು, ಉಪನಿಷತ್ತುಗಳ ಅಧ್ಯಯನ ಮತ್ತು ನೈಸರ್ಗಿಕ ಕೃಷಿಯತ್ತ ಗಮನ ಹರಿಸುವುದಾಗಿ ಹೇಳಿದ್ದಾರೆ. ಇದು ಅಮಿತ್ ಶಾ ಅವರ ವೈಯಕ್ತಿಕ ಅಭಿಪ್ರಾಯವೋ ಅಥವಾ ಬಿಜೆಪಿಯಲ್ಲಿ ಬದಲಾವಣೆಯ ಸಂಕೇತವೋ ಎಂಬ ಅನುಮಾನಗಳೂ ಮೂಡಿವೆ.
ಮೋಹನ್ ಭಾಗವತ್ ಅವರ ಹೇಳಿಕೆಯು ಆರ್‌ಎಸ್‌ಎಸ್ ಮತ್ತು ಬಿಜೆಪಿಯ ಭವಿಷ್ಯದ ನಾಯಕತ್ವದ ಕುರಿತು ತೀವ್ರ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ಈ ಹೇಳಿಕೆಯು ಕೇವಲ ಸಂಘದ ಒಳಗಿನ ವಿಷಯವೋ ಅಥವಾ ರಾಷ್ಟ್ರೀಯ ರಾಜಕಾರಣದ ಮೇಲೆ ಪರಿಣಾಮ ಬೀರಬಹುದೇ ಎಂಬುದನ್ನು ಕಾಲವೇ ತೀರ್ಮಾನಿಸಲಿದೆ. ಆದರೆ ಈ ಹೇಳಿಕೆಯಿಂದ ರಾಜಕೀಯ ವಲಯದಲ್ಲಿ ಹೊಸ ಚರ್ಚೆ ಆರಂಭವಾಗಿದ್ದಂತು ಹೌದು.