ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ನಿಮ್ಮಲ್ಲಿ ಇದ್ದರೆ ಪೈಸಾ ಸರಾಗ ಸಿಗಲಿದೆ ವೀಸಾ !

ವಿಶ್ವದ ಎಲ್ಲೆಡೆಯ ಜನರನ್ನೂ ಆಯಸ್ಕಾಂತದಂತೆ ಸೆಳೆದುಕೊಳ್ಳುವ ಅತ್ಯಂತ ಸಿರಿವಂತ ದೇಶ ಅಮೆರಿಕಕ್ಕೆ ತೆರಳಬೇಕು, ಅಲ್ಲೇ ಉಳಿಯಬೇಕು, ದುಡಿದು ಹೇರಳ ದುಡ್ಡು ಗಳಿಸಬೇಕು, ಸುಖವಾಗಿ ಬದುಕು ಸಾಗಿಸಬೇಕು ಎಂಬುದು ವಿಶ್ವಾದ್ಯಂತದ ಬಹಳಷ್ಟು ಜನರ ಕನಸು. ಅದನ್ನು ಬಲು ಸುಲಭವಾಗಿ ನನಸಾಗಿಸಿಕೊಳ್ಳಲು ಈಗಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಂದು ಸರಳ ಆದರೆ, ದುಬಾರಿಯಾದ ಮಾರ್ಗವನ್ನು ತೋರಿಸಿಕೊಟ್ಟಿದ್ದಾರೆ.

ನಿಮ್ಮಲ್ಲಿ ಇದ್ದರೆ ಪೈಸಾ ಸರಾಗ ಸಿಗಲಿದೆ ವೀಸಾ !

Profile Ashok Nayak Jul 11, 2025 5:48 PM

ಬಿ.ವಿ.ಮಹೇಶ್‌ ಚಂದ್ರ

ದುಡ್ಡಿದ್ದವನೇ ದೊಡ್ಡಪ್ಪ. ಇದು ಹಳೆಯ ಕಾಲದ ಜನಪ್ರಿಯ ನುಡಿ. ವರ್ಷಗಳೇ ಕಳೆಯಿತು, ಮಾತು ಹಳೆಯದಾಯಿತು ಎನ್ನುವಂತಿಲ್ಲ. ಈಗಲೂ ಇದೇ ಮಾತು ಜಗತ್ತಿನೆಲ್ಲೆಡೆ ಚಾಲ್ತಿ ಯಲ್ಲಿದೆ. ಹಣದ ಮಹಿಮೆ ಬದಲಾಗಿಲ್ಲ. ಈಗಲೂ ದುಡ್ಡು ಇದ್ದವನೇ ದೊಡ್ಡಪ್ಪ ಎಂಬ ಮಾತಿಗೆ ಜಗತ್ತು ತಲೆದೂಗುತ್ತದೆ. ದುಡ್ಡು ಕೊಟ್ಟರೆ ಅಮೆರಿಕ, ಯುಎಇ ವೀಸಾ ಸರಾಗ ಸಿಗುತ್ತದೆ! ಮೊದಲೆಲ್ಲಾ ಅಮೆರಿಕ, ಯೂರೋಪ್ ದೇಶಗಳು, ಅರಬ್ ರಾಷ್ಟ್ರಗಳಿಗೆ ಭಾರತೀಯರಾಗಲೀ, ಬೇರಾವುದೇ ದೇಶದ ಪ್ರಜೆಗಳಾಗಲಿ ತೆರಳಬೇಕೆಂದರೆ ಪಾಸ್‌ಪೋರ್ಟ್ ಮಾಡಿಸಿಕೊಂಡು, ವೀಸಾಗೆ ಅರ್ಜಿ ಸಲ್ಲಿಸಿ ತಿಂಗಳು ಗಟ್ಟಲೆ ಕಾಯ್ದು ಕುಳಿತು, ಆ ದೇಶಗಳ ದೂತವಾಸದ ಕಚೇರಿಗೆ ಬಹಳಷ್ಟು ಬಾರಿ ಅಲೆದು, ಅವರು ಕೇಳುವ ಎಲ್ಲಾ ಬಗೆಯ ದಾಖಲೆ ಪತ್ರಗಳನ್ನೂ ಒದಗಿಸಿದರೆ, ಅದೆಲ್ಲವೂ ಸರಿ ಇದೆ ಎಂದು ಅಲ್ಲಿನ ಅಧಿಕಾರಿಗಳಿಗೆ ಅನಿಸಿದರೆ, ಅಲ್ಲದೇ, ನಾವು ಅವರ ದೇಶದಲ್ಲಿ ಶಾಶ್ವತವಾಗಿ ಉಳಿಯದೇ ಖಂಡಿತಾ ವಾಪಸ್ ಆಗುತ್ತೇವೆ ಎಂಬುದು ಖಾತರಿ ಆದರೆ, ಆಗ ವೀಸಾ ಕೊಡುತ್ತಿದ್ದರು. ಆದರೆ ಈಗ ಕಾಲ(ವೀಸಾ ರೀತಿ) ಬದಲಾಗಿದೆ. ದುಡ್ಡಿದ್ದರೆ ಅಮೆರಿಕ, ಯುನೈಟೆಡ್ ಅರಬ್ ಎಮಿರೇಟ್ಸ್ ದೇಶಗಳ ವೀಸಾ ನಿಮ್ಮ ಕಾಲ ಬುಡಕ್ಕೆ ಬಂದು ಬೀಳುತ್ತದೆ. ನೀವು ಅಂದುಕೊಂಡಷ್ಟು ದಿನ ಆ ದೇಶಗಳಲ್ಲಿ ಉಳಿದುಕೊಳ್ಳಲು ನಿಮಗೆ ಅವಕಾಶ ಸಿಗುತ್ತದೆ. ದೊಡ್ಡ ಮೊತ್ತದ ಹಣ ಪಾವತಿಸಿದ ನಿಮಗೆ ವಿಶೇಷ ಬಗೆಯ ಸೌಲಭ್ಯ, ಆತಿಥ್ಯವೂ ದೊರೆಯುತ್ತದೆ.

ಹೇರಳ ಹಣವಿದ್ದರೆ ನಿಮಗೆ ಸ್ವಾಗತ: ಟ್ರಂಪ್

ಜಗತ್ತಿನ ಅತ್ಯಂತ ಸಿರಿವಂತ ದೇಶ, ಸ್ವರ್ಗಸದೃಶ ಸೌಲಭ್ಯಗಳು ಇರುವ ದೇಶ, ಬಯಸಿದ್ದೆಲ್ಲ ಥಟ್ಟನೆ ದೊರಕುವಂತೆ ಮಾಡುವ ರಾಷ್ಟ್ರ ಎಂದೆಲ್ಲಾ ಹೊಗಳಿಸಿಕೊಳ್ಳುವ ಅಮೆರಿಕ ಎಲ್ಲರ ಪಾಲಿಗೂ ಕನಸಿನ ರಾಜ್ಯವಾಗಿತ್ತು. ಒಮ್ಮೆಯಾದರೂ ಅಮೆರಿಕಕ್ಕೆ ಹೋಗಿ ಸುತ್ತಾಡಿ ಬರಬೇಕು ಎಂಬುದು ಬಹುತೇಕರ ಆಸೆಯಾಗಿರುತ್ತದೆ.

ಇನ್ನು ಕೆಲವರದ್ದು, ಅಮೆರಿಕದಲ್ಲೇ ನೆಲೆಸಬೇಕು, ಕೈತುಂಬಾ ಡಾಲರ್ ಗಳಿಸಬೇಕು, ಸದೃಢ ಬದುಕು ಕಂಡುಕೊಳ್ಳಬೇಕು, ಸುಖವಾಗಿ ಜೀವಿಸಬೇಕು ಎಂಬ ಕನಸಾಗಿರುತ್ತದೆ. ಅದರೆ, ಹಾಗೆ ಬಯಸಿದವ ರನ್ನೆಲ್ಲಾ ಅಮೆರಿಕ ಸ್ವಾಗತಿಸುವುದಿಲ್ಲ, ಕೇಳಿದವರಿಗೆಲ್ಲಾ ಅಮೆರಿಕ ವೀಸಾ ಕೊಡುವುದಿಲ್ಲ. ಅಮೆರಿಕದ ವೀಸಾ ಪಡೆಯಬೇಕೆಂದರೆ ಹತ್ತಾರು ನಿಯಮಗಳು-ಷರತ್ತುಗಳು ಎದುರಾಗುತ್ತವೆ.

ಇದನ್ನೂ ಓದಿ: Keshava Prasad B Column: ಶ್ರೀಮಂತರಂತೆ ಕಾಣಬಯಸುತ್ತೀರಾ ಅಥವಾ ನಿಜಕ್ಕೂ ಹಾಗಾಗುತ್ತೀರಾ ?!

ಅವೆಲ್ಲವನ್ನೂ ಪೂರೈಸುವುದು ಎಲ್ಲರಿಗೂ ಅಷ್ಟು ಸುಲಭವಲ್ಲ. ಹಾಗಾಗಿ ಅಮೆರಿಕ ಬಹುತೇಕರ ಪಾಲಿಗೆ ಗಗನ ಕುಸುಮ. ಆದರೆ, ಈಗ ಕಾಲ ಬದಲಾಗಿದೆ. ಡೊನಾಲ್ಡ್ ಟ್ರಂಪ್ ಅವರಂತಹ ವ್ಯಾಪಾರಿ ಮನೋಭಾವದ ಮನುಷ್ಯ ಎರಡನೇ ಬಾರಿ ಅಮೆರಿಕದ ಅಧ್ಯಕ್ಷ ಹುದ್ದೆಯಲ್ಲಿದ್ದಾರೆ. ಅವರಿಗೆ ಒಂದೇ ಗುರಿ. ಅಮೆರಿಕವನ್ನು ಮತ್ತೊಮ್ಮೆ ವಿಶ್ವದಲ್ಲೇ ಅತ್ಯಂತ ಪ್ರತಿಷ್ಠಿತ ದೇಶವಾಗಿಸ ಬೇಕು.

ವಿಶ್ವದ ಎಲ್ಲಾ ದೇಶಗಳಲ್ಲೂ ಅಮೆರಿಕದ ಸರಕುಗಳು ಸಿಗುವಂತೆ ಮಾಡಬೇಕು. ಅಮೆರಿಕದಲ್ಲೂ ಸ್ವದೇಶಿ ವಸ್ತುಗಳೇ ಹೆಚ್ಚು ಮಾರಾಟವಾಗವಂತೆ ಮಾಡಬೇಕು ಎಂಬುದು ಅವರ ಉದ್ದೇಶವಾಗಿದೆ. ಹಾಗಾಗಿಯೇ ವಿಶ್ವದ ಹತ್ತಾರು ದೇಶಗಳ ಸರಕುಗಳು ಅಮೆರಿಕಕ್ಕೆ ಬರುವುದನ್ನು, ಅಮೆರಿಕದ ಮಾರುಕಟ್ಟೆಯಲ್ಲಿ ಸರಾಗವಾಗಿ ಮಾರಾಟವಾಗುವುದನ್ನು ತಡೆಯಲೆಂದೇ ‘ಟಾರಿಫ್‌ ವಾರ್’ (ಪ್ರತಿ ಸುಂಕ ಸಮರ) ಶುರುವಿಟ್ಟಿದ್ದಾರೆ. ಇದರ ಮಧ್ಯೆಯೂ ವ್ಯಾಪಾರಿ ಬುದ್ಧಿ ತೋರಿಸಿದ್ದಾರೆ. ನಿಮ್ಮಲ್ಲಿ ಹೇರಳವಾಗಿ ಹಣ ಇದ್ದರೆ ನೀವು ಅಮೆರಿಕಕ್ಕೆ ಬರಬಹುದು, ಬಂದು ನೆಲೆಸಬಹುದು. ಆದರೆ, ಅದಕ್ಕೇ 50 ಲಕ್ಷ ಡಾಲರ್ ಹಣ ಕೊಟ್ಟು ಅಮೆರಿಕ ಗೋಲ್ಡ್ ಕಾರ್ಡ್ ಖರೀದಿಸಬೇಕು ಎಂಬ ಷರತ್ತು ವಿಧಿಸಿದ್ದಾರೆ.

ಅಮೆರಿಕ ವೀಸಾ-ಪ್ಯಾಕೇಜ್

ವಿಶ್ವದ ಎಲ್ಲೆಡೆಯ ಜನರನ್ನೂ ಆಯಸ್ಕಾಂತದಂತೆ ಸೆಳೆದುಕೊಳ್ಳುವ ಅತ್ಯಂತ ಸಿರಿವಂತ ದೇಶ ಅಮೆರಿಕಕ್ಕೆ ತೆರಳಬೇಕು, ಅಲ್ಲೇ ಉಳಿಯಬೇಕು, ದುಡಿದು ಹೇರಳ ದುಡ್ಡು ಗಳಿಸಬೇಕು, ಸುಖವಾಗಿ ಬದುಕು ಸಾಗಿಸಬೇಕು ಎಂಬುದು ವಿಶ್ವಾದ್ಯಂತದ ಬಹಳಷ್ಟು ಜನರ ಕನಸು. ಅದನ್ನು ಬಲು ಸುಲಭವಾಗಿ ನನಸಾಗಿಸಿಕೊಳ್ಳಲು ಈಗಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಂದು ಸರಳ ಆದರೆ, ದುಬಾರಿಯಾದ ಮಾರ್ಗವನ್ನು ತೋರಿಸಿಕೊಟ್ಟಿದ್ದಾರೆ.

Gold Card ok

ಅದುವೇ 50 ಲಕ್ಷ ಡಾಲರ್(42.80 ಕೋಟಿ ರು.) ಬೆಲೆಯ ಅಮೆರಿಕ ಗೋಲ್ಡ್ ಕಾರ್ಡ್! ‘ಫಾರ್ ಫೈವ್ ಮಿಲಿಯನ್ ಡಾಲರ್ಸ್ ಡಿ ಟ್ರಂಪ್ ಕಾರ್ಡ್ ಈಸ್ ಕಮಿಂಗ್’(50 ಲಕ್ಷ ಡಾಲರ್ ಬೆಲೆಯ ಟ್ರಂಪ್ ಸ್ವರ್ಣ ಚೀಟಿ ಬರುತ್ತಿದೆ) ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮದೇ ಒಡೆತನದ ‘ಟ್ರೂಥ್’ ಸಂದೇಶ ವಾಹಕ ಖಾತೆಯಲ್ಲಿ ಜೂ.11ರ ಬುಧವಾರ ಪ್ರಕಟಿಸಿದ್ದಾರೆ.

ನಮ್ಮ ಕಚೇರಿಗೆ ಸಾವಿರಾರು ಜನರು ಕರೆ ಮಾಡಿ ಗ್ರೇಟೆಸ್ಟ್ ಕಂಟ್ರಿ ಅಮೆರಿಕಕ್ಕೆ ಬರುವುದಕ್ಕೆ ಆಸಕ್ತಿ ತೋರುತ್ತಿದ್ದಾರೆ. ಗೋಲ್ಡ್ ಕಾರ್ಡ್ ಬಗ್ಗೆ ವಿಚಾರಿಸುತ್ತಿದ್ದಾರೆ ಎಂದಿರುವ ಟ್ರಂಪ್, ‘ಎರಡು ವಾರ ದಲ್ಲಿ ವಿಶೇಷ ವೀಸಾ ಕೂಡಾ ದೊರೆಯಲಿದೆ’ ಎಂದು ಹೇಳಿದ್ದಾರೆ.

ಅಮೆರಿಕಕ್ಕೆ ವಿದೇಶಿಯರು ಸುಲಭ ಪ್ರವೇಶಕ್ಕೆ ಈ ಗೋಲ್ಡ್ ಕಾರ್ಡ್ ಅವಕಾಶ ಮಾಡಿಕೊಡಲಿದೆ. ಇದಕ್ಕಾಗಿ ಆಸಕ್ತರು ನೋಂದಾಯಿಸಿಕೊಳ್ಳುವುದಕ್ಕಾಗಿ ಪ್ರತ್ಯೇಕ ವೆಬ್ ಸೈಟ್ ಅನ್ನೂ ಟ್ರಂಪ್ ಆಡಳಿತ ಆರಂಭಿಸಿದೆ.

ದುಬಾರಿ ಗ್ರೀನ್ ಕಾರ್ಡ್

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ಪರಿಚಯಿಸಿರುವ ‘ಗೋಲ್ಡ್ ಕಾರ್ಡ್’ ಅನ್ನು 50 ಲಕ್ಷ ಡಾಲರ್ ಕೊಟ್ಟು ಖರೀದಿಸಿದರೆ ಅಮೆರಿಕದಲ್ಲಿ ನೆಲೆಸುವುದಕ್ಕೆ ಸರಕಾರದ ಅನುಮತಿ ಸುಲಭವಾಗಿ ದೊರೆಯಲಿದೆ. ಇದನ್ನು ಅತಿ ದುಬಾರಿ ಬೆಲೆಯ ಗ್ರೀನ್‌ಕಾರ್ಡ್ ಎಂದೂ ಕರೆಯ ಲಾಗುತ್ತಿದೆ. ಈ ಗೋಲ್ಡ್ ಕಾರ್ಡ್ ‘ಇಬಿ-5’ ಹೂಡಿಕೆದಾರರ ವೀಸಾಕ್ಕೆ ಬದಲಿಯಾಗಿದೆ ಎಂದೂ ವ್ಯಾಖ್ಯಾನಿಸಲಾಗಿದೆ. ಸಾಲ ತೀರಿಸಲು ಅನುಕೂಲ!

ಅಮೆರಿಕಕ್ಕೆ ಸುಲಭ ಪ್ರವೇಶ ಮತ್ತು ಶೀಘ್ರ ಪೌರತ್ವಕ್ಕೆ ಭಾರೀ ಬೇಡಿಕೆ ಇರುವುದರಿಂದ 10 ಲಕ್ಷ ಗೋಲ್ಡ್ ಕಾರ್ಡ್‌ಗಳು ಮಾರಾಟವಾಗಬಹುದಾಗಿದೆ. ಇದರಿಂದ 5 ಲಕ್ಷ ಕೋಟಿ ಡಾಲರ್ ಹಣ ಸಂಗ್ರಹವಾಗುವ ನಿರೀಕ್ಷೆಯಿದೆ. ಇದರಿಂದ ದೇಶದ ಬಾಹ್ಯ ಸಾಲವನ್ನು ತೀರಿಸಲು ಸಾಧ್ಯವಾಗಲಿದೆ ಎಂಬುದು ಅಧ್ಯಕ್ಷ ಟ್ರಂಪ್ ಅವರ ಮನದಿಂಗಿತವಾಗಿದೆ ಎಂಬ ಮಾತುಗಳೂ ಕೇಳಿಬಂದಿವೆ.

ವಿಶೇಷ ವೀಸಾ ಪಡೆಯುವ ಬಗೆ

ಭಾರತ ಮತ್ತು ಬಾಂಗ್ಲಾದೇಶದಲ್ಲಿಯೇ ಇರುವ ‘ವಿಎಎಸ್ ಸಿಒ’ ಕಚೇರಿಗಳಲ್ಲಿ ‘ಯುಎಇ ಗೋಲ್ಡನ್ ವೀಸಾ’ಗೆ ತೆರಳಿ ನೇರವಾಗಿ, ಅಥವಾ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವುದಕ್ಕೆ ಮುನ್ನ ಭಾರತ ಸರಕಾರದ ಗೃಹ ಇಲಾಖೆಯಿಂದ ಅನುಮತಿ ಪಡೆದಿರಬೇಕಿದೆ. ವೀಸಾಗೆ ಅರ್ಜಿ ಸಲ್ಲಿಸಿದ ಬಳಿಕ ವಾಡಿಕೆಯಂತೆ ವ್ಯಕ್ತಿಯ ಹಿನ್ನೆಲೆಯ ತಪಾಸಣೆ ನಡೆಯುತ್ತದೆ.

‘ತಾನು ಹೇಗೆ ಯುಎಇ ಅಭಿವೃದ್ಧಿಗೆ, ಮಾರುಕಟ್ಟೆಗೆ ಅಥವಾ ಉದ್ಯಮ ವಲಯಕ್ಕೆ ಕೊಡುಗೆ ನೀಡ ಬಲ್ಲೆ’ ಎಂಬುದನ್ನೂ ಅರ್ಜಿದಾರ ವೀಸಾ ಅರ್ಜಿಯಲ್ಲಿ ವಿವರಿಸಬೇಕಿರುತ್ತದೆ. ಆ ಬಳಿಕ ಅರ್ಜಿ ಯುಎಇ ಸರಕಾರದ ಅಧಿಕೃತ ಕಚೇರಿಗೆ ರವಾನೆಯಾಗುತ್ತದೆ. ಸಮಗ್ರ ಪರಿಶೀಲನೆ ಬಳಿಕ ಹಣ ಕಟ್ಟಿಸಿಕೊಂಡು ಗೋಲ್ಡನ್ ವೀಸಾ ನೀಡಲಾಗುತ್ತದೆ.

ನಿಮ್ಮಲ್ಲಿ ಭಾರೀ ಹಣವಿದ್ದರೆ ಯುಎಇಗೆ ಸ್ವಾಗತ

ಈಗ ಯನೈಟೆಡ್ ಅರಬ್ ಎಮಿರೇಟ್ಸ್ ಕೂಡಾ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡೆಯ ಲಾರಂಭಿಸಿದ ಮಾರ್ಗದಲ್ಲೇ ಸಾಗಲು ಮುಂದಾಗಿದೆ. “ನಿಮ್ಮಲ್ಲಿ ಸಾಕಷ್ಟು ಹಣವಿದ್ದರೆ ನೀವು ‘ಯುಎಇ’ಗೆ ಬಂದು ನೆಲೆಸಬಹುದು. ಅದಕ್ಕೆ ಒಂದು ಬಾರಿಯ ಶುಲ್ಕ ಪಾವತಿಸಿದರೆ ಆಯಿತು" ಎಂದು ಧನಿಕರನ್ನು ಕೈಬೀಸಿ ಕರೆಯಲಾರಂಭಿಸಿದೆ. ತೈಲೋತ್ಪನ್ನಗಳ ಮಾರಾಟದಿಂದ ಬಂದ ಅಪಾರ ಪ್ರಮಾಣದಿಂದ ತನ್ನ ನೆಲವನ್ನು ಸ್ವರ್ಗಸದೃಶವಾಗಿ ರೂಪಿಸಿಕೊಂಡಿರುವ ‘ಯುಎಇ’ ಆಡಳಿತ, ತನ್ನ ದೇಶವನ್ನು ಸಿರಿವಂತರ ನಾಡಾಗಿಸಲು ಯೋಜನೆ ರೂಪಿಸಿದೆ. ಯಾರ ಬಳಿಯಲ್ಲಿ ಹೇರಳ ಸಂಪತ್ತು ಇದೆಯೋ ಅವರೆಲ್ಲವೂ ಯುಎಇಗೆ ಬಂದು ನೆಲೆಸಬಹುದು, ಉದ್ಯಮ ಸಂಸ್ಥೆ ಗಳಲ್ಲಿ ಹೂಡಿಕೆ ಮಾಡಬಹುದು ಎಂದು ಆಹ್ವಾನಿಸಿದೆ.

ಯುನೈಟೆಡ್ ಅರಬ್ ಎಮಿರೇಟ್ಸ್ ಆಡಳಿತ ‘ಯುಎಇ ಗೋಲ್ಡನ್ ವೀಸಾ’ ಮಾರಾಟಕ್ಕೆ ಯೋಜನೆ ರೂಪಿಸಿದೆ. ಕೇವಲ 1 ಲಕ್ಷ ಅರಬ್ ಎಮಿರೇಟ್ಸ್ ದಿರ‍್ಹಾಮ್-ಎಇಡಿ (ಭಾರತದ ರುಪಾಯಿ ಲೆಕ್ಕದಲ್ಲಿ 23.30 ಲಕ್ಷ) ಪಾವತಿಸಿದರೆ ಯುಎಇನ ಅಮಿತ ಅವಽಯ ವೀಸಾ ದೊರೆಯುತ್ತದೆ. 23.30 ಲಕ್ಷ ರು. ಬೆಲೆಯ ಈ ‘ಗೋಲ್ಡನ್ ವೀಸಾ’ ಹಂಚಿಕೆ ವ್ಯವಸ್ಥೆಯು ‘ನಾಮಿನೇಟೆಡ್ ಬೇಸ್ಡ್’ ಆಗಿದೆ.

ಇಷ್ಟು ಹಣವನ್ನು ಒಮ್ಮೆ ಪಾವತಿಸಿದರೆ ಆ ವ್ಯಕ್ತಿಗೆ ಜೀವನವಿಡೀ ಯುನೈಟೆಡ್ ಅರಬ್ ಎಮಿರೇಟ್ಸ್‌ ನಲ್ಲಿ ಉಳಿಯಲು ಅವಕಾಶ ಸಿಗುತ್ತದೆ. ಹಾಗೆಂದು, ಈ ಯುಎಇ ಗೋಲ್ಡನ್ ವೀಸಾ ಇದು ಎಲ್ಲರಿಗೂ ಸುಲಭ ಲಭ್ಯ ಎಂದೇನೂ ಇಲ್ಲ. ೨೩.೩ ಲಕ್ಷ ರು. ಕೊಡುವ ಸಾಮರ್ಥ್ಯ ಇದ್ದರೂ ಅದರ ಜತೆಗೇ ಕೆಲವು ಪೂರಕ ಅಂಶಗಳೂ ಆ ವ್ಯಕ್ತಿಯಲ್ಲಿರಬೇಕು. ಈ ವಿಶೇಷ ವೀಸಾ ಬಯಸುವವರು ವ್ಯಾಪಾರಿ, ಉದ್ಯಮಿ, ನಿರ್ದಿಷ್ಟ ವೃತ್ತಿನಿರತ ವ್ಯಕ್ತಿ, ವಿಜ್ಞಾನಿ, ಕಲಾಕಾರ ಅಥವಾ ಸಾಮಾಜಿಕ ಪ್ರಭಾವಿ ವ್ಯಕ್ತಿ ಆಗಿರಬೇಕು ಎಂಬ ಷರತ್ತನ್ನೂ ‘ಯುಎಇ’ ಆಡಳಿತ ಮುಂದಿರಿಸಿದೆ. ಹಾಗಾಗಿ, 1 ಲಕ್ಷ ದಿರ‍್ಹಾಮ್ ಹಣ ಕೊಡುತ್ತಿದ್ದಂತೆಯೇ ಯುಎಇ ಗೋಲ್ಡನ್ ವೀಸಾ ಕೈಗೆ ಸಿಕ್ಕಿಯೇ ಬಿಡುತ್ತದೆ ಎಂದೇನೂ ಇಲ್ಲ.

ಭಾರತ-ಬಾಂಗ್ಲಾದಲ್ಲಿ ಪ್ರಯೋಗ!

ಮೊದಲಿಗೆ ಪ್ರಾಯೋಗಿಕವಾಗಿ ‘ಯುಎಇ ಗೋಲ್ಡನ್ ವೀಸಾ’ವನ್ನು ಭಾರತೀಯರಿಗೆ ಮತ್ತು ಬಾಂಗ್ಲಾದೇಶಿಯರಿಗೆ ಕೊಡುವುದಾಗಿ ಯುನೈಟೆಡ್ ಅರಬ್ ಎಮಿರೇಟ್ಸ್ ಆಡಳಿತ ಹೇಳಿದೆ. ಈ ವಿದಾನದಲ್ಲಿ ನಿರೀಕ್ಷಿತ ಫಲಿತಾಂಶ ಸಿಕ್ಕ ಬಳಿಕ, ಹಾಗೂ ದೇಶದ ಅಭಿವೃದ್ಧಿಗೆ ಅನುಕೂಲ ವಾಗುತ್ತದೆ ಎಂಬುದು ಖಚಿತವಾದ ಬಳಿಕ ಬೇರೆ ದೇಶಗಳ (ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ ಮಾಡಿಕೊಂಡಿರುವ ದೇಶಗಳ) ಜನರಿಗೂ ‘ಗೋಲ್ಡನ್ ವೀಸಾ’ ಮಾರಾಟದ ಬಗ್ಗೆ ಆಲೋಚಿಸುವು ದಾಗಿ ಯುಎಇ ಆಡಳಿತಗಾರರು ಹೇಳಿಕೊಂಡಿದ್ದಾರೆ. ಸದ್ಯಕ್ಕೆ, 5 ಸಾವಿರ ಭಾರತೀಯರು 3 ತಿಂಗಳ ಅವಧಿಯಲ್ಲಿ ಸೂಕ್ತ ಮಾರ್ಗದಲ್ಲಿ ಅರ್ಜಿ ಸಲ್ಲಿಸಿ 1 ಲಕ್ಷ ದಿರ‍್ಹಾಮ್ ಪಾವತಿಸಿ ಯುಎಇ ಗೋಲ್ಡನ್ ವೀಸಾ ಪಡೆಯಲು ಅವಕಾಶವಿದೆ.