ಐಪಿಎಲ್​ ಸುನಿತಾ ವಿಲಿಯಮ್ಸ್​ ವಿದೇಶ ಫ್ಯಾಷನ್​ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಢಾಕಾ ಪ್ರೀಮಿಯರ್‌ ಲೀಗ್‌ ಪಂದ್ಯದ ವೇಳೆ ತಮಿಮ್‌ ಇಕ್ಬಾಲ್‌ಗೆ ಹೃದಯಾಘಾತ, ಆರೋಗ್ಯ ಸ್ಥಿತಿ ಗಂಭೀರ!

Tamim Iqbal admitted to hospital: ಢಾಕಾ ಪ್ರೀಮಿಯರ್‌ ಲೀಗ್‌ ಪಂದ್ಯದ ವೇಳೆ ಬಾಂಗ್ಲಾದೇಶ ಕ್ರಿಕೆಟ್‌ ತಂಡದ ಮಾಜಿ ನಾಯಕ ತಮಿಮ್‌ ಇಕ್ಬಾಲ್‌ ಅವರಿಗೆ ಹೃದಯಾಘಾತವಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.

ಬಾಂಗ್ಲಾದೇಶ ಕ್ರಿಕೆಟಿಗ ತಮಿಮ್‌ ಇಕ್ಬಾಲ್‌ಗೆ ಹೃದಯಾಘಾತ!

ಕ್ರಿಕೆಟ್‌ ಆಡುವ ವೇಳೆ ತಮಿಮ್‌ ಇಕ್ಬಾಲ್‌ಗೆ ಹೃದಯಾಘಾತ.

Profile Ramesh Kote Mar 24, 2025 1:09 PM

ನವದೆಹಲಿ: ಢಾಕಾ ಪ್ರೀಮಿಯರ್‌ ಲೀಗ್‌ (Dhaka Premier Leaguee 2025) ಟೂರ್ನಿಯ ಪಂದ್ಯದ ವೇಳೆ ಎದೆಯಲ್ಲಿ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬಾಂಗ್ಲಾದೇಶ ಕ್ರಿಕೆಟ್‌ ತಂಡದ ಮಾಜಿ ನಾಯಕ ತಮಿಮ್‌ ಇಕ್ಬಾಲ್‌ (Tamim Iqbal) ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಹಾಗೂ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಮಾರ್ಚ್‌ 24 ರಂದು ಸವಾರ್‌ನ ಬಾಂಗ್ಲಾದೇಶ ಕ್ರಿರಾ ಶಿಖಾ ಪ್ರೊಟಿಸ್ತಾನ್‌ ಮೂರನೇ ಮೈದಾನದಲ್ಲಿ ಮೊಹಮೆಡನ್‌ ಸ್ಪೋರ್ಟಿಂಗ್‌ ಕ್ಲಬ್‌ ಹಾಗೂ ಶೈನ್‌ಪುಕುರ್‌ ಕ್ರಿಕೆಟ್‌ ಕ್ಲಬ್‌ ನಡುವಣ ಪಂದ್ಯದ ವೇಳೆ ಅವರಿಗೆ ಹೃದಯಾಘಾತವಾಗಿದೆ. ತಮಿಮ್‌ ಇಕ್ಬಾಲ್‌ ಅವರು ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು, ಇದೀಗ ಅವರು ಬಾಂಗ್ಲಾದೇಶದ ದೇಶಿ ಕ್ರಿಕೆಟ್‌ ಆಡುವುದರಲ್ಲಿ ತಲ್ಲಿನರಾಗಿದ್ದಾರೆ.

ಪಂದ್ಯದ ಆರಂಭಕ್ಕೂ ಮುನ್ನ ತಮಿಮ್‌ ಇಕ್ಬಾಲ್‌ ಅವರು ಟಾಸ್‌ಗೆ ತೆರಳಿದ್ದರು ಹಾಗೂ ಶೈನ್‌ಪುಕುರ್‌ ತಂಡದ ಇನಿಂಗ್ಸ್‌ನಲ್ಲಿ ಫೀಲ್ಡಿಂಗ್‌ ವೇಳೆ ತಮಿಮ್‌ ಇಕ್ಬಾಲ್‌ ಅವರ ಎದೆಯಲ್ಲಿ ನೋವು ಕಾಣಿಸಿಕೊಂಡಿತ್ತು. ಈ ವೇಳೆ ತಕ್ಷಣ ವೈದ್ಯಕೀಯ ತಂಡ ಅಂಗಣಕ್ಕೆ ಪ್ರವೇಶ ಮಾಡಿ ಆಟಗಾರನಿಗೆ ತುರ್ತು ಚಿಕಿತ್ಸೆ ನೀಡಿ, ನಂತರ ಹೆಲಿಕಾಪ್ಟರ್‌ ಮೂಲಕ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಲಾಯಿತು. ಆದರೆ, ಬಾಂಗ್ಲಾ ಮಾಜಿ ನಾಯಕನನ್ನು ಬೇರೆ ಸ್ಥಳಕ್ಕೆ ಕರೆದುಕೊಂಡು ಹೋಗಲು ಸಾಧ್ಯವಾಗಲಿಲ್ಲ. ಏಕೆಂದರೆ ಅವರು ಹೆಲಿಕಾಪ್ಟರ್‌ಗೆ ಹತ್ತುವ ಪರಿಸ್ಥಿತಿಯಲ್ಲಿರಲಿಲ್ಲ. ಇದರ ಬದಲು ಅವರನ್ನು ಢಾಕಾದ ಕೆಪಿಜೆ ವಿಶೇಷ ಆಸ್ಪತ್ರೆಗೆ ದಾಖಲಿಸಲಾಯಿತು.

IPL 2025: ಲಖನೌ ಸೂಪರ್‌ ಜಯಂಟ್ಸ್‌ ತಂಡಕ್ಕೆ ಬಾಂಗ್ಲಾ ವೇಗಿ ಟಾಸ್ಕಿನ್‌ ಅಹ್ಮದ್‌?

"ಸದ್ಯ ತಮಿಮ್‌ ಇಕ್ಬಾಲ್‌ ಅವರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಹಾಗೂ ಅವರ ಆರೋಗ್ಯ ಸ್ಥಿತಿ ಉತ್ತಮವಾಗಿಲ್ಲ. ಈ ಕಾರಣದಿಂದ ಅವರನ್ನು ಹೆಲಿಕಾಪ್ಟರ್‌ ಮೂಲಕ ಢಾಕಾಗೆ ಕರೆದೊಯ್ಯಲು ಸಾಧ್ಯವಾಗಲಿಲ್ಲ," ಎಂದು ಮೊಹಮೆಡಿನ್‌ ಕ್ಲಬ್‌ನ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದರು.

ಢಾಕಾ ಪ್ರೀಮಿಯರ್‌ ಲೀಗ್‌ನಲ್ಲಿ ಮಿಂಚುತ್ತಿರುವ ತಮಿಮ್‌

ಪ್ರಸ್ತುತ ನಡೆಯುತ್ತಿರುವ ಢಾಕಾ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ತಮಿಮ್‌ ಇಕ್ಬಾಲ್‌ ಬ್ಯಾಟಿಂಗ್‌ನಲ್ಲಿ ಮಿಂಚುತ್ತಿದ್ದಾರೆ. ಅವರು ಸದ್ಯ ಈ ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಇಲ್ಲಿಯತನಕ ಆಡಿದ 7 ಪಂದ್ಯಗಳಿಂದ 73.60 ರ ಸರಾಸರಿ ಹಾಗೂ 102.50ರ ಸ್ಟ್ರೈಕ್‌ ರೇಟ್‌ನಲ್ಲಿ ಎರಡು ಶತಕಗಳು ಸೇರಿದಂತೆ 368 ರನ್‌ಗಳನ್ನು ಬಾರಿಸಿದ್ದಾರೆ.



ಮಾರ್ಚ್‌ 9 ರಂದು ಪಾರ್ಟೆಕ್ಸ್‌ ಸ್ಪೋರ್ಟಿಂಗ್‌ ಕ್ಲಬ್‌ ವಿರುದದ ಪಂದ್ಯದಲ್ಲಿ ಸ್ಪೋಟಕ ಬ್ಯಾಟ್‌ ಮಾಡಿದ್ದ ತಮಿಮ್‌ ಇಕ್ಬಾಲ್‌ ಅವರು 112 ಎಸೆತಗಳಲ್ಲಿ ಅಜೇಯ 125 ರನ್‌ಗಳನ್ನು ಸಿಡಿಸಿದ್ದಾರೆ ಹಾಗೂ ತಮ್ಮ ತಂಡದ 7 ವಿಕೆಟ್‌ ಗೆಲುವಿಗೆ ಸಹಾಯವಾಗಿದ್ದರು. ಇದಾದ ಬಳಿಕ ಮುಂದಿನ ಪಂದ್ಯದಲ್ಲಿಯೇ ಬ್ರದರ್ಸ್‌ ಯೂನಿಯನ್‌ ವಿರುದ್ದ 96 ಎಸೆತಗಳಲ್ಲಿ ಅಜೇಯ 105 ರನ್‌ಗಳನ್ನು ಕಲೆ ಹಾಕಿದ್ದರು. ಈ ಪಂದ್ಯದಲ್ಲಿ ಮೊಹಮೆಡನ್‌ ಕ್ಲಬ್‌ ತಂಡದ 9 ವಿಕೆಟ್‌ ಗೆಲುವಿನಲ್ಲಿ ನೆರವು ನೀಡಿದ್ದರು.

ಎರಡನೇ ಬಾರಿ ವಿದಾಯ ಹೇಳಿದ್ದ ತಮಿಮ್‌ ಇಕ್ಬಾಲ್‌

ಪ್ರಸಕ್ತ ವರ್ಷದ ಆರಂಭದಲ್ಲಿ ತಮಿಮ್‌ ಇಕ್ಬಾಲ್‌ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಎರಡನೇ ಬಾರಿ ವಿದಾಯ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಅವರು ಕಳೆದ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಆಡಿರಲಿಲ್ಲ. ನಂತರ 2025ರ ಬಾಂಗ್ಲಾದೇಶ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ತಮ್ಮ ನಾಯಕತ್ವದಲ್ಲಿ ಫಾರ್ಚುನ್‌ ಬಾರಿಶಾಲ್‌ ತಂಡವನ್ನು ಚಾಂಪಿಯನ್‌ ಮಾಡಿದ್ದರು.