IND vs ENG: ಬ್ರಾಡ್ಮನ್, ಗಾವಸ್ಕರ್, ದ್ರಾವಿಡ್ ದಾಖಲೆ ಮೇಲೆ ಕಣ್ಣಿಟ್ಟ ಗಿಲ್
Shubman Gill: ಭಾರತ ಪರ ಸರಣಿಯೊಂದರಲ್ಲಿ ಗರಿಷ್ಠ ರನ್ ಗಳಿಸಿದ ದಾಖಲೆ ಸುನೀಲ್ ಗಾವಸ್ಕರ್ ಹೆಸರಿನಲ್ಲಿದೆ. ಅವರು 1970-71ರ ವೆಸ್ಟ್ ಇಂಡೀಸ್ ಪ್ರವಾಸದ 4 ಟೆಸ್ಟ್ಗಳಲ್ಲಿ 4 ಶತಕಗಳ ಸಹಿತ 774 ರನ್ ಸಿಡಿಸಿದ್ದರು. ಈ ದಾಖಲೆ ಮುರಿಯಲು ಗಿಲ್‌ಗೆ ಇನ್ನು 190 ರನ್ ಅಗತ್ಯವಿದೆ. ಈ ಮೇಲುಗಲ್ಲು ತಲುಪಿದರೆ ಗಾವಸ್ಕರ್ ಅವರ 54 ವರ್ಷ ಹಳೆಯ ದಾಖಲೆ ಪತನಗೊಳ್ಳಲಿದೆ.


ಲಂಡನ್: ಪ್ರಚಂಡ ಬ್ಯಾಟಿಂಗ್ ಫಾರ್ಮ್‌ನಲ್ಲಿರುವ ಭಾರತ ಟೆಸ್ಟ್ ತಂಡದ ನಾಯಕ ಹಾಗೂ ಬ್ಯಾಟರ್ ಶುಭಮಾನ್ ಗಿಲ್(Shubman Gill) ಅವರು ಕಳೆದ ಎಜ್ಬಾಸ್ಟನ್ ಟೆಸ್ಟ್ ಒಂದರಲ್ಲೇ ಬರೋಬ್ಬರಿ 34 ದಾಖಲೆಗಳನ್ನು ಅಳಿಸಿಹಾಕಿದ್ದರು. ಇದೀಗ ಅವರು ಉಳಿದ ಮೂರು ಟೆಸ್ಟ್ ಪಂದ್ಯಗಳಲ್ಲಿ(IND vs ENG) ಕ್ರಿಕೆಟ್ ದಂತಕಥೆ ಡಾನ್ ಬ್ರಾಡ್ಮನ್(Don Bradman) ಸೇರಿ ರಾಹುಲ್ ದ್ರಾವಿಡ್, ಸುನೀಲ್ ಗಾವಸ್ಕರ್(Sunil Gavaskar ) ಅವರ ದಾಖಲೆಯನ್ನು ಮುರಿಯುವ ಸನಿಹದಲ್ಲಿದ್ದಾರೆ.
ಬ್ರಾಡ್ಮನ್ 95 ವರ್ಷದ ದಾಖಲೆ ಮೇಲೆ ಕಣ್ಣು
ಆಸ್ಟ್ರೆಲಿಯಾದ ಡಾನ್ ಬ್ರಾಡ್ಮನ್ 1930ರಲ್ಲಿ ಇಂಗ್ಲೆಂಡ್ ವಿರುದ್ಧದ ಆಶಸ್ ಸರಣಿಯ 5 ಟೆಸ್ಟ್ಗಳಲ್ಲಿ 4 ಶತಕಗಳ ಸಹಿತ 974 ರನ್ ಸಿಡಿಸಿರುವುದು, ಸರಣಿಯೊಂದರಲ್ಲಿ ದಾಖಲಾಗಿರುವ ಗರಿಷ್ಠ ರನ್ ವಿಶ್ವದಾಖಲೆಯಾಗಿದೆ. ಇದನ್ನು ಮುರಿಯುವ ಅವಕಾಶ ಗಿಲ್ ಮುಂದಿದೆ. ಸರಣಿಯ ಉಳಿದ 3 ಪಂದ್ಯಗಳಲ್ಲಿ ಗಿಲ್ 390 ರನ್ ಗಳಿಸಿದರೆ, 95 ವರ್ಷ ಹಳೆಯ ಈ ದಾಖಲೆ ಮುರಿಯಲಿದ್ದಾರೆ. ಅಲ್ಲದೆ ಗಿಲ್ ಇನ್ನು 415 ರನ್ ಗಳಿಸಿದರೆ, ಟೆಸ್ಟ್ ಸರಣಿಯೊಂದರಲ್ಲಿ ಸಾವಿರ ರನ್ ಗಳಿಸಿದ ವಿಶ್ವದ ಮೊಟ್ಟಮೊದಲ ಬ್ಯಾಟರ್ ಎನಿಸಲಿದ್ದಾರೆ. ಈ ಮೂಲಕ ಗಿಲ್ ನಾಯಕನಾಗಿ ಅತಿವೇಗದ ಸಾವಿರ ರನ್ ಸಿಡಿಸಿದ ಸಾಧನೆಯನ್ನೂ ಮಾಡಬಹುದು. ಬ್ರಾಡ್ಮನ್ ನಾಯಕನಾಗಿ 11 ಇನಿಂಗ್ಸ್ಗಳಲ್ಲಿ ಸಾವಿರ ರನ್ ಗಳಿಸಿದ್ದು ಹಾಲಿ ದಾಖಲೆಯಾಗಿದೆ.
ದ್ರಾವಿಡ್ ದಾಖಲೆ ಪತನಕ್ಕೆ 18 ರನ್ ಅಗತ್ಯ
ಸರಣಿಯ ಮೊದಲ 2 ಪಂದ್ಯಗಳಲ್ಲೇ 3 ಶತಕಗಳ ಸಹಿತ 585 ರನ್ ಸಿಡಿಸಿರುವ ಗಿಲ್ 18 ರನ್ ಗಳಿಸಿದರೆ 23 ವರ್ಷ ಹಿಂದಿನ ರಾಹುಲ್ ದ್ರಾವಿಡ್ ಅವರ ದಾಖಲೆಯನ್ನು ಮುರಿಯಲಿದ್ದಾರೆ. ರಾಹುಲ್ ದ್ರಾವಿಡ್ 2002ರಲ್ಲಿ 4 ಪಂದ್ಯಗಳ ಸರಣಿಯಲ್ಲಿ 602 ರನ್ ದಾಖಲಿಸಿರುವುದು, ಇಂಗ್ಲೆಂಡ್ನಲ್ಲಿ ನಡೆದ ಟೆಸ್ಟ್ ಸರಣಿಯೊಂದರಲ್ಲಿ ಭಾರತೀಯ ಬ್ಯಾಟರ್ ಗಳಿಸಿರುವ ಗರಿಷ್ಠ ರನ್ ಆಗಿದೆ.
ಗವಾಸ್ಕರ್ ದಾಖಲೆ ಮೇಲೆ ಕಣ್ಣು
ಭಾರತ ಪರ ಸರಣಿಯೊಂದರಲ್ಲಿ ಗರಿಷ್ಠ ರನ್ ಗಳಿಸಿದ ದಾಖಲೆ ಸುನೀಲ್ ಗಾವಸ್ಕರ್ ಹೆಸರಿನಲ್ಲಿದೆ. ಅವರು 1970-71ರ ವೆಸ್ಟ್ ಇಂಡೀಸ್ ಪ್ರವಾಸದ 4 ಟೆಸ್ಟ್ಗಳಲ್ಲಿ 4 ಶತಕಗಳ ಸಹಿತ 774 ರನ್ ಸಿಡಿಸಿದ್ದರು. ಈ ದಾಖಲೆ ಮುರಿಯಲು ಗಿಲ್‌ಗೆ ಇನ್ನು 190 ರನ್ ಅಗತ್ಯವಿದೆ. ಈ ಮೇಲುಗಲ್ಲು ತಲುಪಿದರೆ ಗಾವಸ್ಕರ್ ಅವರ 54 ವರ್ಷ ಹಳೆಯ ದಾಖಲೆ ಪತನಗೊಳ್ಳಲಿದೆ.
ಇದು ಮಾತ್ರವಲ್ಲದೆ ಭಾರತೀಯ ನಾಯಕನೊಬ್ಬ ಸರಣಿಯೊಂದರಲ್ಲಿ ಗಳಿಸಿರುವ ಗರಿಷ್ಠ ರನ್ ದಾಖಲೆಗೆ ಗಿಲ್‌ಗೆ ಇನ್ನು 148 ರನ್ ಬೇಕಿದೆ. ಸದ್ಯ ದಾಖಲೆ ಗಾವಸ್ಕರ್ ಹೆಸರಿನಲ್ಲಿದೆ. ಅವರು 1978-79ರಲ್ಲಿ ವಿಂಡೀಸ್ ಎದುರಿನ 6 ಟೆಸ್ಟ್ಗಳಲ್ಲಿ 732 ರನ್ ಗಳಿಸಿದ್ದರು.
ಇದನ್ನೂ ಓದಿ ENG vs IND: ಮೂರನೇ ಪಂದ್ಯಕ್ಕೆ ಬುಮ್ರಾ ಲಭ್ಯ; ಖಚಿತಪಡಿಸಿದ ನಾಯಕ ಗಿಲ್