ಕರ್ನಾಟಕ ಬಜೆಟ್​ ವಿದೇಶ ಮಹಿಳಾ ದಿನಾಚರಣೆ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr N Someshwara Column: ಹುಳುಗರುಳು ಛಿದ್ರವಾಗುವುದನ್ನು ತಪ್ಪಿಸಿ !

ಸಸ್ಯಗಳಲ್ಲಿರುವ ಪ್ರಧಾನ ಅಂಶ ನಾರು. ನಾರಿನಲ್ಲಿ ಪ್ರಧಾನವಾಗಿ ‘ಸೆಲ್ಯುಲೋಸ್’ ಇರುತ್ತದೆ. ಇದು ಬಿರುಸಾದ ಸಸ್ಯಭಾಗ

ಹಿಂದಿರುಗಿ ನೋಡಿದಾಗ

ಡಾ.ನಾ.ಸೋಮೇಶ್ವರ

ಹುಳುಗರುಳು, ಮಣ್ಣಿನ ಹುಳದ ಹಾಗೆ ಕಾಣುವ ಕಾರಣ ಅದಕ್ಕೆ ಆ ಹೆಸರು ಬಂದಿದೆ. ಮನುಷ್ಯರಲ್ಲಿ ಇದು ಸರಾಸರಿ 9 ಸೆಂ.ಮೀ. ಉದ್ದವಿರುತ್ತದೆ. ಇದು ಸಣ್ಣ ಕರುಳು, ದೊಡ್ಡ ಕರುಳನ್ನು ಸೇರುವ ಸಂಧಿಸ್ಥಾನ ದಲ್ಲಿದೆ. ಇದು ನಮ್ಮ ಉದರದ ಕೆಳ ಬಲ ಮೂಲೆಯಲ್ಲಿರುತ್ತದೆ.’

ಜೀವ ಜಗತ್ತಿನಲ್ಲಿರುವ ಜೀವಿಗಳನ್ನು ವಿಶಾಲವಾಗಿ ಸಸ್ಯಾಹಾರಿಗಳು, ಮಾಂಸಾಹಾರಿಗಳು ಹಾಗೂ ಮಿಶ್ರಾಹಾರಿ ಗಳೆಂದು ವಿಂಗಡಿಸಬಹುದು. ಹಸು, ಕುರಿ, ಮೇಕೆ, ಕುದುರೆ, ಮೊಲ, ಜಿಂಕೆ ಮುಂತಾದ ಸಸ್ಯಾಹಾರಿ ಜೀವಿಗಳು, ಸಸ್ಯಗಳ ವಿವಿಧ ಭಾಗಗಳನ್ನು ತಿಂದು ಬದುಕುತ್ತವೆ. ಹುಲಿ, ಸಿಂಹ, ಚಿರತೆ, ನರಿ, ತೋಳ ಮುಂತಾದವೆಲ್ಲ ಕೇವಲ ಪ್ರಾಣಿಗಳನ್ನು ತಿಂದು ಬದುಕುತ್ತವೆ. ಮನುಷ್ಯನನ್ನು ಒಳಗೊಂಡಂತೆ ಚಿಂಪಾಂಜ಼ಿ, ಬಬೂನ್, ಕರಡಿ, ಹಂದಿ, ಕೋಳಿ, ಕಾಗೆ, ಆಮೆ, ಜಿರಲೆ, ಇರುವೆ ಮುಂತಾದವು ಸಸ್ಯೋತ್ಪನ್ನಗಳನ್ನು ತಿನ್ನುವುದರ ಜತೆಯಲ್ಲಿ, ಅವಕಾಶಸಿಕ್ಕಾಗಲೆಲ್ಲ ಪ್ರಾಣಿಗಳನ್ನು ಕೊಂದು ಅವನ್ನು ತಿನ್ನಬಲ್ಲವು.

ಹಾಗಾಗಿ ಅವನ್ನು ಮಿಶ್ರಾಹಾರಿಗಳೆಂದು ಕರೆಯಬಹುದು. ಸಸ್ಯಗಳಲ್ಲಿರುವ ಪ್ರಧಾನ ಅಂಶ ನಾರು. ನಾರಿನಲ್ಲಿಪ್ರಧಾನವಾಗಿ ‘ಸೆಲ್ಯುಲೋಸ್’ ಇರುತ್ತದೆ. ಇದು ಬಿರುಸಾದ ಸಸ್ಯಭಾಗ. ಇದನ್ನು ಜೀರ್ಣಿಸಿಕೊಳ್ಳುವುದು ಕಷ್ಟ.ಹಾಗಾಗಿ ಸಸ್ಯಾಹಾರಿಗಳಲ್ಲಿ ಸಣ್ಣಕರುಳು ದೊಡ್ಡ ಕರುಳನ್ನು ಸೇರುವ ಸ್ಥಳದಲ್ಲಿ ಒಂದು ‘ಮೂಗರುಳು’ ಅಥವಾ‘ಸೀಕಮ್’ ಎಂಬ ಭಾಗವಿರುತ್ತದೆ. ಈ ಮೂಗರುಳಿನ ಒಂದು ಭಾಗವೇ ಹುಳುಗರುಳು, ಕರುಳಬಾಲ ಅಥವಾ ಅಪೆಂಡಿಕ್ಸ್/ವರ್ಮಿ-ರಂ ಅಪೆಂಡಿಕ್ಸ್ ಎಂದು ಹೆಸರಾದ ಭಾಗ. ಮೂಗರುಳು ಹಾಗೂ ಹುಳುಗರುಳು ಪ್ರಾಣಿಗಳುತಿನ್ನುವ ಸಸ್ಯಗಳಲ್ಲಿರುವ ಸೆಲ್ಯುಲೋಸನ್ನು ಜೀರ್ಣಿಸು ತ್ತದೆ.

ಈ ಎರಡು ಭಾಗಗಳಲ್ಲಿ ರೂಮಿನೋಕಾಕಸ್, ಫೈಬ್ರೋ ಬ್ಯಾಕ್ಟರ್ ಮುಂತಾದ ಬ್ಯಾಕ್ಟೀರಿಯಗಳು, ಆದಿಜೀವಿಗಳು, ಶಿಲೀಂಧ್ರ ಗಳು ಹಾಗೂ ಆರ್ಕಿಯ ಮುಂತಾದ ಸೂಕ್ಷ್ಮಜೀವಿಗಳಿರುತ್ತವೆ. ಇವು ‘ಸೆಲ್ಯುಲೇಸ್’ ಎಂಬ ಕಿಣ್ವವನ್ನುಉತ್ಪಾದಿಸಿ, ಸೆಲ್ಯು ಲೋಸನ್ನು ಹುಳಿಯಿಸುತ್ತವೆ (ಫಾರ್ಮೇಂಟೇಶನ್). ಸೆಲ್ಯುಲೋಸ್ ಲಯವಾಗಿ ಗ್ಲೂಕೋಸ್ ರೂಪುಗೊಳ್ಳುತ್ತದೆ. ಇದು ಸಸ್ಯಾಹಾರಿ ಜೀವಿಗಳ ಬದುಕಿಗೆ ಅಗತ್ಯವಾದ ಶಕ್ತಿಯನ್ನು ಕೊಡುತ್ತವೆ.

ಹುಳುಗರುಳು, ಇಂದಿಗೆ ಸುಮಾರು 80 ದಶಲಕ್ಷ ವರ್ಷಗಳ ಹಿಂದೆ ಹುಟ್ಟಿದ್ದ ಸಸ್ಯಾಹಾರಿ ಜೀವಿಗಳಲ್ಲಿ ಮೊದಲ ಬಾರಿಗೆ ರೂಪುಗೊಂಡಿತು ಎಂದು ಕಾಣುತ್ತದೆ. ಇಲಿ, ಅಳಿಲು, ಬೀವರ್, ಹ್ಯಾಮ್‌ಸ್ಟರ್, ಪಾರ್ಕ್ಯುಪೈನ್, ಗಿನಿಪಿಗ್ ಮುಂತಾದ ದಂಶಕಗಳಲ್ಲಿ (ರೋಡೆಂಟ್ಸ್) ಹಾಗೂ ಕಾಂಗರು, ಕೋಲ, ವಾಮ್‌ಬ್ಯಾಟ್, ಪೋಸುಮ್, ಒಪೋಸಮ್ ಮುಂತಾದ ಉದರಚೀಲಿಗಳಲ್ಲಿ (ಮಾರ್ಸು ಪಿಯಲ್ಸ್) ಆದಿಸ್ವರೂಪದ ಹುಳುಗರುಳನ್ನು ನೋಡಬಹುದು.

ಜೀವವಿಕಾಸದೊಡನೆ ಹುಳುಗರುಳು ಸಹ ವಿಕಾಸವಾಯಿತು. ಸಸ್ಯದ ಗಡಸು ಭಾಗಗಳನ್ನು ತಿನ್ನುವ ಸಸ್ಯಾಹಾರಿ ಗಳಲ್ಲಿ ಹುಳುಗರುಳು ಪ್ರಧಾನವಾಗಿ ಬೆಳೆಯಿತು. ಆದರೆ ಸಸ್ಯಾಹಾರವನ್ನು ಲವಲೇಶವೂ ತಿನ್ನದ ಮಾಂಸಾ ಹಾರಿಗಳಲ್ಲಿ ಹುಳುಗರುಳು ಎನ್ನುವ ಅಂಗವು ಹುಟ್ಟಲೇ ಇಲ್ಲ! ಹಾಗಾಗಿ ಹುಲಿ, ಸಿಂಹ, ಚಿರತೆ, ನರಿ, ತೋಳಗಳಲ್ಲಿ ಹುಳುಗರುಳು ಕಂಡುಬರುವುದಿಲ್ಲ. ಈ ಹಿನ್ನೆಲೆಯಲ್ಲಿ ಹುಳುಗರುಳು ಎನ್ನುವ ಅಂಗದ ‘ಅನುಕೂಲತೆ’ ಹಾಗೂ ‘ಅನಾನುಕೂಲತೆ’ಗಳನ್ನು ಸಸ್ಯಾಹಾರಿ ಮತ್ತು ಮಿಶ್ರಾಹಾರಿ ಜೀವಿಗಳು ಅನುಭವಿಸ ಬೇಕಾಗಿರುವುದು ಅನಿವಾರ್ಯ ವಾಗಿದೆ. ನಮ್ಮ ಪೂರ್ವಜರು ಪ್ರಧಾನವಾಗಿ ಸಸ್ಯಾಹಾರಿಗಳಾಗಿದ್ದರು.

ಉದಾಹರಣೆಗೆ 4 ದಶಲಕ್ಷ ವರ್ಷಗಳ ಹಿಂದೆ ಬದುಕಿದ್ದ ‘ಆಸ್ಟ್ರಲೋಪಿಥಿಕಸ್’ ಎಂಬ ನಮ್ಮ ಪೂರ್ವಜರಲ್ಲಿ ಮೂಗರುಳು ಹಾಗೂ ಹುಳುಗರುಳು ಪ್ರಧಾನವಾಗಿ ಬೆಳೆದಿದ್ದವು. 2 ದಶಲಕ್ಷ ವರ್ಷಗಳ ಹಿಂದೆ ಬದುಕಿದ್ದ ನಮ್ಮಪೂರ್ವಜರು ತಮ್ಮ ಆಹಾರ ಪದ್ಧತಿಯನ್ನು ಪರಿಷ್ಕರಿಸಿಕೊಂಡರು. ನಾರು, ಬೇರು, ತೊಗಟೆ, ಎಲೆ ಮುಂತಾದಗಡಸು ಸಸ್ಯಭಾಗಗಳನ್ನು ತಿನ್ನುವುದನ್ನು ನಿಲ್ಲಿಸಿದರು. ಬದಲಿಗೆ ಸಸ್ಯಗಳ ಹೂವು, ಹಣ್ಣು, ಕಾಯಿ, ಗಡ್ಡೆ ಹಾಗೂಬೀಜಗಳನ್ನು (ಅಕ್ಕಿ, ಗೋಧಿ, ರಾಗಿ ಇತ್ಯಾದಿ) ಮಾತ್ರ ಹೆಚ್ಚು ಹೆಚ್ಚು ತಿನ್ನಲಾರಂಭಿಸಿದರು. ಸಸ್ಯದ ಈ ಭಾಗಗಳುಮೃದುವಾಗಿದ್ದು, ರುಚಿಯಾಗಿದ್ದು, ಸುಲಭವಾಗಿ ಜೀರ್ಣವಾಗುತ್ತವೆ. ಹಾಗಾಗಿ ಮೂಗರುಳು ಮತ್ತು ಹುಳುಗರುಳು ಗಳಿಗೆ ಸೆಲ್ಯುಲೋಸನ್ನು ಹುಳಿಯಿಸುವ ಪ್ರಸಂಗಗಳು ಕಡಿಮೆಯಾದವು. ಜತೆಯಲ್ಲಿ ನಮ್ಮ ಪೂರ್ವಜರು ಮಾಂಸಾ ಹಾರವನ್ನೂ ರೂಢಿಸಿಕೊಂಡರು.

ಹಾಗಾಗಿ ಮೂಗರುಳು ಮತ್ತು ಹುಳುಗರುಳು ಅಂಗಗಳು ಕೆಲಸವಿಲ್ಲದೇ ಸೋಮಾರಿಗಳಾದವು. ಒಂದು ತಲೆಮಾರಿ ನಿಂದ ಮತ್ತೊಂದು ತಲೆಮಾರಿಗೆ ಅವು ಸೊರಗಲಾರಂಭಿಸಿದವು. ಕೊನೆಗೆ ಹುಳುಗರುಳು ಸಂಪೂರ್ಣವಾಗಿ ನಶಿಸಿ ಹೋಗ ಬೇಕಾಗಿತ್ತು. ಆದರೆ ಹುಳುಗರುಳು, ತನ್ನ ಕೆಲಸವನ್ನು ಬದಲಿಸಿಕೊಂಡಿತು. ಮಾನವ ದೇಹದ ಮಿಲಿಟರಿ ಪಡೆಯಾದ ರೋಗರಕ್ಷಣಾ ವ್ಯೂಹದ (ಇಮ್ಯೂನ್ ಸಿಸ್ಟಮ್) ಒಂದು ಭಾಗವಾಯಿತು.

ಬಿಳಿ ರಕ್ತಕಣಗಳಿಗೆ ತರಬೇತಿ ಯನ್ನು ನೀಡುವ ಕೇಂದ್ರವಾಯಿತು. ಜತೆಗೆ ಉಪಯುಕ್ತ ಬ್ಯಾಕ್ಟೀರಿಯಗಳ ದಾಸ್ತಾನನ್ನು ಸಂಗ್ರಹಿಸುವ ಉಗ್ರಾಣ ವಾಯಿತು. ನಾವು ಯದ್ವಾ ತದ್ವಾ ಪ್ರತಿಜೈವಿಕಗಳನ್ನು (ಆಂಟಿಬಯೋಟಿಕ್ಸ್) ತಿಂದು, ರೋಗಜನಕ ಬ್ಯಾಕ್ಟೀರಿಯ ಗಳನ್ನು ನಾಶಪಡಿಸುವುದರ ಜತೆಯಲ್ಲಿ, ಕರುಳಿನಲ್ಲಿರುವ ಉಪಯುಕ್ತ ಬ್ಯಾಕ್ಟೀರಿಯ ಗಳನ್ನೆಲ್ಲ ನಾಶಮಾಡು ತ್ತೇವೆ. ಆಗ ಹುಳುಗರುಳು ತನ್ನಲ್ಲಿ ದಾಸ್ತಾನಿರುವ ಉಪಯುಕ್ತ ಬ್ಯಾಕ್ಟೀರಿಯಗಳನ್ನು ಪೂರೈಸಿ ದೇಹದ ಆರೋಗ್ಯವನ್ನು ಕಾಪಾಡುತ್ತದೆ.

‘ಉಪಯೋಗಿಸು ಇಲ್ಲವೇ ಕಳೆದುಕೊ’ ಎಂಬ ಭಾವದ ಚಾರ್ಲ್ಸ್ ಡಾರ್ವಿನ್‌ನ ‘ಯೂಸ್ ಆಂಡ್ ಡಿಸ್ಯೂಸ್’ ಥಿಯರಿ ಯನ್ನು ನೆನಪಿಸಿಕೊಳ್ಳಬಹುದು. ಕೆಲಸವಿಲ್ಲದ ಅಂಗವು ನಶಿಸುವುದು ಪ್ರಕೃತಿಯ ನಿಯಮ. ಹಾಗಾಗಿ ತಮ್ಮ ಸಹಜ ಕೆಲಸ ಕಾರ್ಯಗಳನ್ನು ಕಳೆದುಕೊಂಡಿರುವ ಕಿವಿ, ಮೂರನೆಯ ದವಡೆ ಹಲ್ಲು, ಬಾಲಮೂಳೆ, ಮೂರನೆಯ ಕಣ್ಣರೆಪ್ಪೆ (ಪ್ಲಿಕಾ ಸೆಮಿಲ್ಯೂನಾರಿಸ್), ದೇಹದಲ್ಲಿರುವ ರೋಮಗಳು, ರೋಮವನ್ನು ನಿಮಿರಿಸುವ ನಿಮಿರು ಸ್ನಾಯುಗಳು (ಅರೆಕ್ಟಾರ್ ಪೈಲಿ), ಪುರುಷರ ಸ್ತನಗಳು, ಟಾನ್ಸಿಲ್ ಮುಂತಾದ ಅಂಗಗಳೆಲ್ಲ ಭವಿಷ್ಯತ್ ದಿನಮಾನ ದಲ್ಲಿ ಇರಲಾರವು ಎನ್ನುತ್ತಾರೆ ವಿಜ್ಞಾನಿಗಳು. ಹಾಗಾಗಿ ಇವುಗಳಿಗೆ ‘ನಶಿಸುತ್ತಿರುವ ಅಂಗಗಳು’ ಅಥವಾ ‘ವೆಸ್ಟೀಜಿ ಯಲ್ ಆರ್ಗನ್ಸ್’ ಎಂದು ಕರೆದಿದ್ದೇವೆ.

ಹುಳುಗರುಳು, ಮಣ್ಣಿನ ಹುಳದ ಹಾಗೆ ಕಾಣುವ ಕಾರಣ, ಅದಕ್ಕೆ ಆ ಹೆಸರು ಬಂದಿದೆ. ಮನುಷ್ಯರಲ್ಲಿ ಇದು ಸರಾಸರಿ 9 ಸೆಂ.ಮೀ. ಉದ್ದವಿರುತ್ತದೆ. ಇದು ಸಣ್ಣ ಕರುಳು, ದೊಡ್ಡ ಕರುಳನ್ನು ಸೇರುವ ಸಂಧಿಸ್ಥಾನದಲ್ಲಿದೆ. ಇದು ನಮ್ಮ ಉದರದ ಕೆಳ ಬಲ ಮೂಲೆಯಲ್ಲಿರುತ್ತದೆ. ಪ್ರಾಚೀನ ಈಜಿಪ್ಷಿಯನ್, ಮೆಸೋಪೊಟೋಮಿಯನ್, ಚೀನಿ ಹಾಗೂ ಭಾರತೀಯ ವೈದ್ಯರಿಗೆ ಹುಳುಗರುಳಿನ ಅಸ್ತಿತ್ವದ ಬಗ್ಗೆ ಯಾವುದೇ ಪರಿಚಯವು ಇರಲಿಲ್ಲ. 1508ರಲ್ಲಿ, ಬಹುಮುಖ ಪ್ರತಿಭೆಯ ಲಿಯೋನಾರ್ಡೋ ಡ ವಿಂಚಿ ಹುಳುಗರುಳಿನ ಮೊದಲ ಚಿತ್ರವನ್ನು ಬರೆದ. 1522ರಲ್ಲಿ ಇಟಲಿಯ ವೈದ್ಯ ಜಾಕೋಪೋ ಬೆರಂಗಾರಿಯೊ ದ ಕಾರ್ಪಿ ತನ್ನ ‘ಐಸಾಗೋಗ್ ಬ್ರೇವಿಸ್’ ಕೃತಿಯಲ್ಲಿ ಹುಳುಗರುಳಿನ ವಿವರಣೆಯನ್ನು ಮೊದಲ ಬಾರಿಗೆ ನೀಡಿದ. ಅವನ ನಂತರ ಆಧುನಿಕ ಅಂಗರಚನಾ ವಿಜ್ಞಾನದ ಪಿತಾಮಹ ಎಂದು ಹೆಸರಾದ ಆಂಡ್ರಿಯಸ್ ವೆಸಾಲಿಯಸ್ ತನ್ನ ಉದ್ಗ್ರಂಥ ‘ಡಿ ಹ್ಯೂಮನಿ ಕಾರ್ಪೊರಿಸ್’ನಲ್ಲಿ (1543) ಹುಳುಗರುಳಿನ ಸಮಗ್ರ ಮಾಹಿತಿಯನ್ನು ನೀಡಿದ. ಹುಳುಗರುಳಿನಲ್ಲಿ ಒಂದು ಸೂಕ್ಷ್ಮ ನಾಳವಿರುವುದನ್ನೂ ದಾಖಲಿಸಿದ.

ಹುಳುಗರುಳಿನ ಒಳಗಿರುವ ನಾಳವು ಯಾವಾಗಲೂ ಮುಕ್ತವಾಗಿರಬೇಕು. ಆದರೆ ಕೆಲವು ಸಲ ಮಲವೇ ಕಲ್ಲಿನಷ್ಟು ಗಟ್ಟಿಯಾಗಿ ಮಲಕಲ್ಲುಗಳಾಗಬಹುದು (ಫೀಕೋಲಿಥ್). ಇಂಥ ಕಲ್ಲುಗಳು ಹುಳುಗರುಳ ನಾಳರಂಧ್ರವನ್ನುಅಡಚಬಹುದು ಇಲ್ಲವೇ ಹುಳುಗರುಳಿನಲ್ಲಿರುವ ದುಗ್ಧ ಊತಕವು ಅತಿವೃದ್ಧಿಯಾಗಿ (ಹೈಪರ್‌ಟ್ರೋಫಿ) ಅಥವಾಯಾವುದಾದರೂ ಗಂತಿಯು (ಟ್ಯೂಮರ್) ನಾಳವನ್ನು ಮುಚ್ಚಬಹುದು. ಇಂಥ ಸಂದರ್ಭಗಳಲ್ಲಿ ಬ್ಯಾಕ್ಟೀರಿಯಬೆಳವಣಿಗೆಯು ತೀವ್ರವಾಗುತ್ತದೆ. ಸೋಂಕಾಗುತ್ತದೆ. ಆಗ ಹುಳುಗರುಳಿನಲ್ಲಿ ಉರಿಯೂತದ ಎಲ್ಲ ಲಕ್ಷಣಗಳು ಕಂಡುಬರುತ್ತವೆ. ಹುಳುಗರುಳು ಊದಿಕೊಳ್ಳು ತ್ತದೆ. ವಿಪರೀತ ನೋಯುತ್ತದೆ.

ಇದನ್ನೂ ಓದಿ: Dr N Someshwara Column: ಸಯನೇಡ್‌ ಜೀವವನ್ನು ಸೃಜಿಸಬಲ್ಲದೆ ?

ಜತೆಗೆ ಜ್ವರವು ಏರುತ್ತದೆ. ಹೊಟ್ಟೆಯು ಬಿಗಿಯಾಗಿ ಕರುಳಿನ ಎಲ್ಲ ಚಲನವಲನವು ಸ್ಥಗಿತವಾಗುತ್ತದೆ. ಕರುಳಿನಲ್ಲಿ ಅನಿಲ ಸಂಗ್ರಹವು ಅಧಿಕವಾಗಿ ಇಡೀ ಉದರವು ಊದಿಕೊಳ್ಳಬಹುದು. ಈ ಅಪಾಯಕಾರಿ ಸ್ಥಿತಿಯು ಹೀಗೇ ಮುಂದು ವರಿದರೆ ಒಂದು ಘಟ್ಟದಲ್ಲಿ ಊದಿಕೊಂಡಿರುವ ಹುಳುಗರುಳು ಛಿದ್ರವಾಗಿ ಸೋಂಕು ಉದರದ ಒಳಗೆಲ್ಲ ವ್ಯಾಪಿಸು ತ್ತದೆ. ಆಗ ವ್ಯಕ್ತಿಯು ಸಾಯುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಇದುವೇ ‘ಹುಳುಗರುಳ ಉರಿಯೂತ’ ಅಥವಾ ‘ಅಪೆಂಡಿಸೈಟಿಸ್’!

ಮಧ್ಯಯುಗದ ಯುರೋಪಿನ ವೈದ್ಯರಿಗೆ ಹುಳುಗರುಳ ಉರಿಯೂತದ ಸ್ವರೂಪವು ಅರ್ಥವಾಗಲಿಲ್ಲ. ಇದಕ್ಕೆ ಟಿಫ್ಲೈಟಿಸ್, ಪೆರಿಟಿಫ್ಲೈಟಿಸ್, ಐಲಿಯಾಕ್ ಪ್ಯಾಶನ್ ಇತ್ಯಾದಿ ಹೆಸರುಗಳನ್ನು ನೀಡಿದರು. ಕೊನೆಗೆ ಅಮೆರಿಕದರೆಜಿನಾಲ್ಡ್ ಹೇಬರ್ ಫಿಟ್ಜ್ ಎಂಬ ರೋಗ ಶಾಸ್ತ್ರಜ್ಞನು 1886ರಲ್ಲಿ 257 ರೋಗಪ್ರಕರಣಗಳನ್ನು ಅಧ್ಯಯನಮಾಡಿದ. ನಂತರ ಉದರದ ಬಲ ಕೆಳಮೂಲೆಯಲ್ಲಿ ಕಂಡುಬರುವ ಉರಿಯೂತ, ನೋವಿಗೆ ಹುಳುಗರುಳಿನ ಉರಿಯೂತವೇ ಪ್ರಧಾನ ಕಾರಣ ಎಂದ. 1735 ರಲ್ಲಿ, ಜರ್ಮನ್ ಶಸ್ತ್ರವೈದ್ಯ ಲೋರೆಂಜ಼್ ಹೇಸ್ಟರ್, ಹುಳುಗರುಳುಛಿದ್ರವಾಗಿ ಮರಣ ಹೊಂದಿದ ವ್ಯಕ್ತಿಯ ಶವವಿಚ್ಛೇದನವನ್ನು ಮಾಡಿ, ಹುಳುಗರುಳು ಛಿದ್ರವಾಗಿ,ಸುತ್ತಮುತ್ತಲೂ ಊದಿಕೊಂಡು ಕೀವುಗಟ್ಟಿ ಬಾವು ರೂಪುಗೊಂಡಿರುವುದನ್ನು ಹಾಗೂ ಅದುವೇ ಸಾವಿಗೆಕಾರಣವಾಗಿರುವುದನ್ನು ನಿಖರವಾಗಿ ವಿವರಿಸಿದ.

ಹುಳುಗರುಳ ಉರಿಯೂತಕ್ಕೆ ಯುರೋಪಿನ ವೈದ್ಯರು ರಕ್ತಮೋಕ್ಷಣವನ್ನು ಮಾಡುತ್ತಿದ್ದರು. ಜಿಗಣೆಗಳಿಂದರಕ್ತವನ್ನು ಹೀರಿಸುತ್ತಿದ್ದರು. ಎನೀಮ ನೀಡಿ ಬೇಧಿಯನ್ನು ಮಾಡಿಸುತ್ತಿದ್ದರು. ಕುದುರೆಯ ಮೇಲೆ ಕೂರಿಸಿ ಊರೆಲ್ಲಸುತ್ತಿಸುತ್ತಿದ್ದರು. ಒಂದು ನಾಯಿ ಮರಿಯ ಉದರವನ್ನು ಸೀಳಿ, ಅದನ್ನು ರೋಗಿಯ ಹೊಟ್ಟೆಯ ಮೇಲೆಇಡುತ್ತಿದ್ದರು. ಇಂಥ ಚಿಕಿತ್ಸೆಗೆ ಒಳಗಾಗುತ್ತಿದ್ದ ಬಹುಪಾಲು ಜನರು ಸಾಯುವುದು ಅನಿವಾರ್ಯವಾಗಿತ್ತು.

ಸೆಪ್ಟೆಂಬರ್, 1731. ಇಂಗ್ಲೆಂಡಿನ ವಿಲಿಯಂ ಕಾಕೆಸ್ಲೆ ಎಂಬ ಶಸ್ತ್ರವೈದ್ಯನು, ಚಿಮಣಿಯ ಹೊಗೆಯನ್ನು ಹೆರೆದುತೆಗೆಯುವ ಅಬ್ರಹಾಮ್ ಪೈಕ್ ಎಂಬಾತನ ಸೋಂಕುಗ್ರಸ್ತ ಹುಳುಗರುಳನ್ನು ಛೇದಿಸಿ ತೆಗೆದದ್ದು, ಬಹುಶಃ ಜಗತ್ತಿನಮೊದಲ ಯಶಸ್ವಿ ‘ಹುಳುಗರುಳ ಛೇದನ’ (ಅಮೆರಿಕನ್ನರು ಅಪೆಂಡೆಕ್ಟಮಿ ಎಂದರೆ ಬ್ರಿಟಿಷರು ಅಪೆಂಡಿಸೆಕ್ಟಮಿ ಎನ್ನುತ್ತಾರೆ) ಶಸ್ತ್ರಚಿಕಿತ್ಸೆಯೆನ್ನಬಹುದು.

ಎರಡನೆಯ ಶಸ್ತ್ರಚಿಕಿತ್ಸೆಯು ಡಿಸೆಂಬರ್ 6, 1735ರಂದು ನಡೆಯಿತು. ಲಂಡನ್ನಿನ ಸೇಂಟ್ ಜಾರ್ಜ್ ಆಸ್ಪತ್ರೆಯಲ್ಲಿ ಫ್ರೆಂಚ್ ಸರ್ಜನ್ ಕ್ಲಾಡಿಯಸ್ ಅಮ್ಯಾಂಡ್ ಮೊದಲ ಯಶಸ್ವಿ ಹುಳುಗರುಳ ಛೇದನವನ್ನು ಮಾಡಿದ. ಹ್ಯಾನ್ವಿಲ್ ಆಂಡರ್ಸನ್ ಎಂಬ 11 ವರ್ಷದ ಹುಡುಗನಿಗೆ ಇಂಗ್ವೆ ನಲ್ ಹರ್ನಿಯ ಮತ್ತು ಹುಳುಗರುಳ ಉರಿಯೂತ ಎರಡೂ ಸಮಸ್ಯೆಗಳು ಇದ್ದವು. ಈತ ಹರ್ನಿಯವನ್ನು ದುರಸ್ತಿಗೊಳಿಸುವುದರ ಜತೆಯಲ್ಲಿ ಹುಳುಗರುಳನ್ನು ಛೇದಿಸಿ, ಆ ಹುಡುಗನ ಜೀವವನ್ನು ಉಳಿಸಿದ. ಇದು ಅಧಿಕೃತವಾಗಿ ದಾಖಲಾಗಿದೆ.

1889. ನ್ಯೂಯಾರ್ಕ್ ನಗರ. ಚಾರ್ಲ್ಸ್ ಹೇಬರ್ ಮ್ಯಾಕ್ಬರ್ನಿ ಎಂಬ ಅಮೆರಿಕನ್ ಶಸವೈದ್ಯನು ಹುಳುಗರುಳ ಸೋಂಕಿನ ಸಮಗ್ರ ವಿವರಣೆಯನ್ನು ನೀಡಿದ. ಹುಳುಗರುಳ ಉರಿಯೂತ ನಿದಾನದಲ್ಲಿ ನೆರವಾಗುವ ‘ಮ್ಯಾಕ್ಬರ್ನಿಪಾಯಿಂಟ್’ ಎನ್ನುವ ವಿಧಾನವನ್ನು ಸೂಚಿಸಿದ. ಜತೆಗೆ ಉರಿಯೂತಕ್ಕೆ ಒಳಗಾದ ಹುಳುಗರುಳನ್ನು ಛೇದಿಸಿತೆಗೆಯುವುದೇ ಅತ್ಯುತ್ತಮ ಚಿಕಿತ್ಸೆ ಎಂದ. ಇಂದು ಹುಳುಗರುಳ ಉರಿಯೂತವನ್ನು ನಿಗ್ರಹಿಸಲು, ಮೊದಲು ಪ್ರತಿಜೈವಿಕ ಔಷಧಗಳನ್ನು ನೀಡುವ ಪದ್ಧತಿಯಿದೆ. ಇದು ಅನೇಕ ಹುಳುಗರುಳ ಛೇದನವನ್ನು ತಪ್ಪಿಸಿದೆ.

ಸಾಧ್ಯವಾದಲ್ಲಿ ಶಸ್ತ್ರಚಿಕಿತ್ಸೆಯನ್ನು ತಪ್ಪಿಸುವುದು ಒಳಿತು. ಹುಳುಗರುಳು ನಮ್ಮ ಆರೋಗ್ಯವನ್ನು ಕಾಪಾಡುವಅಂಗ. ಶಸ್ತ್ರಚಿಕಿತ್ಸೆಯು ಅನಿವಾರ್ಯವೆಂದಲ್ಲಿ, ಅದನ್ನು ಮಾಡಿಸಿ. ಅದು ಛಿದ್ರವಾಗಲು ಬಿಡಬೇಡಿ. ಸಾಂಪ್ರದಾಯಿಕ ಶಸ್ತ್ರಚಿಕಿತ್ಸೆ ಹಾಗೂ ಉದರದರ್ಶಕ ಶಸ್ತ್ರಚಿಕಿತ್ಸೆಗಳು ಲಭ್ಯವಿವೆ. ನಮ್ಮ ಜೇಬಿನ ತೂಕಕ್ಕೆ ಅನುಗುಣವಾಗಿ ಯಾವುದಾದರೂ ಒಂದು ಶಸ್ತ್ರಚಿಕಿತ್ಸೆಯನ್ನು ಆಯ್ದುಕೊಳ್ಳಬಹುದು.