IND vs ENG: ರೋಹಿತ್-ಕೊಹ್ಲಿಯಿಂದ ಸಾಧ್ಯವಾಗದ ಅಪರೂಪದ ದಾಖಲೆ ಬರೆದ ಶುಭಮನ್ ಗಿಲ್!
Shubman Gill creates history in ODIs: ಇಂಗ್ಲೆಂಡ್ ವಿರುದ್ಧ ಮೊದಲನೇ ಏಕದಿನ ಪಂದ್ಯದಲ್ಲಿ ಅರ್ಧಶತಕ ಸಿಡಿಸುವ ಮೂಲಕ ಭಾರತ ತಂಡದ ಯುವ ಬ್ಯಾಟ್ಸ್‌ಮನ್ ಶುಭಮನ್ ಗಿಲ್ ವಿಶೇಷ ದಾಖಲೆಯನ್ನು ಬರೆದಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ 20 ಬಾರಿ 50 ಕ್ಕೂ ಅಧಿಕ ರನ್ ಗಳಿಸಿದ ಭಾರತದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.
ನಾಗ್ಪರ: ಇಂಗ್ಲೆಂಡ್ ವಿರುದ್ಧದ ಮೊದಲನೇ ಏಕದಿನ ಪಂದ್ಯದಲ್ಲಿ ಭಾರತ ತಂಡದ ಯುವ ಬ್ಯಾಟ್ಸ್‌ಮನ್ ಶುಭಮನ್ ಗಿಲ್ ಅವರು 96 ಎಸೆತಗಳಲ್ಲಿ 87 ರನ್‌ಗಳನ್ನು ಕಲೆ ಹಾಕುವ ಮೂಲಕ ಭಾರತ ತಂಡದ ನಾಲ್ಕು ವಿಕೆಟ್‌ಗಳ ಗೆಲುವಿಗೆ ನೆರವು ನೀಡಿದ್ದರು ಹಾಗೂ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಇಂಗ್ಲೆಂಡ್ ನೀಡಿದ್ದ 249 ರನ್‌ಗಳ ಗುರಿಯನ್ನು ಹಿಂಬಾಲಿಸಿದ್ದ ಭಾರತ ತಂಡ, 38.4 ಓವರ್‌ಗಳಿಗೆ 251 ರನ್‌ಗಳನ್ನು ಗಳಿಸುವ ಗೆಲುವು ಪಡೆದಿತ್ತು. ಈ ಪಂದ್ಯದಲ್ಲಿ 87 ರನ್‌ಗಳನ್ನು ಕಲೆ ಹಾಕುವ ಮೂಲಕ ಶುಭಮನ್ ಗಿಲ್ ಭಾರತದ ಪರ ಏಕದಿನ ಕ್ರಿಕೆಟ್‌ನಲ್ಲಿ ಅಪರೂಪದ ದಾಖಲೆಯನ್ನು ಬರೆದಿದ್ದಾರೆ.
ಏಕದಿನ ಕ್ರಿಕೆಟ್‌ನಲ್ಲಿ ಅತ್ಯಂತ ವೇಗವಾಗಿ 20 ಬಾರಿ ಅರ್ಧಶತಕಕ್ಕಿಂತ ಅಧಿಕ ರನ್ ಗಳಿಸಿದ ಭಾರತದ ಮೊದಲ ಬ್ಯಾಟ್ಸ್‌ಮನ್ ಎಂಬ ಅಪರೂಪದ ದಾಖಲೆಯನ್ನು ಶುಭಮನ್ ಗಿಲ್ ಬರೆದಿದ್ದಾರೆ. ಈ ಮೈಲುಗಲ್ಲು ತಲುಪಲು ಶುಭಮನ್ ಗಿಲ್ ಅವರು ಒಟ್ಟು 48 ಇನಿಂಗ್ಸ್‌ಗಳನ್ನು ತೆಗೆದುಕೊಂಡಿದ್ದಾರೆ. 50 ಇನಿಂಗ್ಸ್‌ಗಳಿಗೂ ಒಳಗಾಗಿ ಈ ಸಾಧನೆ ಮಾಡಿದ ಭಾರತೀಯ ಬ್ಯಾಟ್ಸ್‌ಮನ್ ಆಗಿದ್ದಾರೆ.
IND vs ENG: ಇಂಗ್ಲೆಂಡ್ ವಿರುದ್ಧ ಗೆದ್ದು ಏಕದಿನ ಸರಣಿಯಲ್ಲಿ ಶುಭಾರಂಭ ಕಂಡ ಭಾರತ!
ಶುಭಮನ್ ಗಿಲ್‌ಗೂ ಮುನ್ನ ಈ ದಾಖಲೆ ಶ್ರೇಯಸ್ ಅಯ್ಯರ್ ಅವರ ಹೆಸರಿನಲ್ಲಿತ್ತು. ಶ್ರೇಯಸ್ ಅಯ್ಯರ್ ಈ ದಾಖಲೆ ಬರೆಯಲು ಒಟ್ಟು 50 ಇನಿಂಗ್ಸ್‌ಗಳನ್ನು ತೆಗೆದುಕೊಂಡಿದ್ದರು. ನವಜೋತ್ ಸಿಂಗ್ ಸಿಧು ಅವರು ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಅವರು 52 ಇನಿಂಗ್ಸ್‌ಗಳಲ್ಲಿ 20 ಬಾರು ಅರ್ಧಶತಕಕ್ಕಿಂತ ಹೆಚ್ಚಿನ ರನ್‌ಗಳನ್ನು ಗಳಿಸಿದ್ದರು. 56 ಇನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿರುವ ವಿರಾಟ್ ಕೊಹ್ಲಿ ನಾಲ್ಕನೇ ಸ್ಥಾನದಲ್ಲಿದ್ದರೆ, ಕೆಎಲ್ ರಾಹುಲ್ (56) ಹಾಗೂ ಶಿಖರ್ ಧವನ್ (57) ಕ್ರಮವಾಗಿ ಐದು ಮತ್ತು ಆರನೇ ಸ್ಥಾನಗಳನ್ನು ಅಲಂಕರಿಸಿದ್ದಾರೆ.
2019ರಲ್ಲಿ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ
ಶುಭಮನ್ ಗಿಲ್ ಅವರು 2019ರಲ್ಲಿ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಅಂದಿನಿಂದ ಇಲ್ಲಿಯವರೆಗೂ ಆಡಿದ 48 ಏಕದಿನ ಪಂದ್ಯಗಳಿಂದ 58.90ರ ಸ್ಟ್ರೈಕ್ ರೇಟ್‌ನಲ್ಲಿ 2415 ರನ್‌ಗಳನ್ನು ಗಳಿಸಿದ್ದಾರೆ. ಇದರಲ್ಲಿ ಅವರು 6 ಶತಕಗಳು ಮತ್ತು 14 ಅರ್ಧಶತಕಗಳನ್ನು ಸಿಡಿಸಿದ್ದಾರೆ. 208 ರನ್‌ಗಳು ಶುಭಮನ್ ಗಿಲ್ ಅವರ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ.
IND vs ENG: ಕಳೆದ ವರ್ಷ ಭಾರತ ತಂಡದಿಂದ ಶ್ರೇಯಸ್ ಅಯ್ಯರ್ ಹೊರಗಿದ್ದಿದ್ದೇಕೆ? ರಿಕಿ ಪಾಂಟಿಂಗ್ ಪ್ರಶ್ನೆ!
ಮೊದಲನೇ ಏಕದಿನ ಪಂದ್ಯ ಗೆದ್ದ ಭಾರತ
ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಗುರುವಾರ ನಡೆದಿದ್ದ ಮೊದಲನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ಇಂಗ್ಲೆಂಡ್ ತಂಡ, 47.4 ಓವರ್‌ಗಳಿಗೆ 248 ರನ್‌ಗಳಿಗೆ ಆಲ್‌ಔಟ್ ಆಗಿತ್ತು. ಇಂಗ್ಲೆಂಡ್ ಪರ ನಾಯಕ ಜೋಸ್ ಬಟ್ಲರ್ 52 ರನ್ ಗಳಿಸಿದ್ದರೆ, ಜಾಕೋಬವ್ ಬೆಥೆಲ್ 51 ರನ್‌ಗಳನ್ನು ಕಲೆ ಹಾಕಿದ್ದರು. ಭಾರತದ ಪರ ಹರ್ಷಿತ್ ರಾಣಾ ಹಾಗೂ ರವೀಂದ್ರ ಜಡೇಜಾ ತಲಾ 3 ವಿಕೆಟ್‌ಗಳನ್ನು ಕಬಳಿಸಿದ್ದರು.
ಬಳಿಕ ಗುರಿ ಹಿಂಬಾಲಿಸಿದ್ದ ಭಾರತ ತಂಡ, 38.4 ಓವರ್‌ಗಳಿಗೆ 6 ವಿಕೆಟ್‌ಗಳ ನಷ್ಟಕ್ಕೆ 251 ರನ್‌ಗಳನ್ನು ಕಲೆ ಹಾಕಿ 4 ವಿಕೆಟ್‌ಗಳಿಂದ ಗೆಲುವು ಪಡೆದಿತ್ತು. ಭಾರತದ ಪರ ಅತ್ಯುತ್ತಮ ಬ್ಯಾಟ್ ಮಾಡಿದ್ದ ಶ್ರೇಯಸ್ ಅಯ್ಯರ್ 57 ರನ್, ಶುಭಮನ್ ಗಿಲ್ 87 ರನ್ ಹಾಗೂ ಅಕ್ಷರ್ ಪಟೇಲ್ 52 ರನ್‌ಗಳನ್ನು ಕಲೆ ಹಾಕಿದ್ದರು. ಇನ್ನು ಎರಡನೇ ಏಕದಿನ ಪಂದ್ಯ ಫೆಬ್ರವರಿ 9 ರಂದು ಭಾನುವಾರ ಕಟಕ್‌ನಲ್ಲಿ ನಡೆಯಲಿದೆ.