ಕರ್ನಾಟಕ ಬಜೆಟ್​ ವಿದೇಶ ಮಹಿಳಾ ದಿನಾಚರಣೆ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ranjith H Ashwath Column: ಸಂಪ್ರದಾಯ ವಾಗದಿರಲಿ ಬೆಳಗಾವಿ ಅಧಿವೇಶನ

Ranjith H Ashwath Column: ಸಂಪ್ರದಾಯ ವಾಗದಿರಲಿ ಬೆಳಗಾವಿ ಅಧಿವೇಶನ

Ranjith H Ashwath Ranjith H Ashwath Dec 10, 2024 7:19 AM

ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡು ಕೊಳ್ಳಲು ಬೆಳಗಾವಿ ಅಧಿವೇಶನ ಉತ್ತಮ ವೇದಿಕೆ. ಆದರೆ, ಈವರೆಗೆ ನಡೆದಿರುವ ಎಲ್ಲ ಚರ್ಚೆಗಳ ಸಾರ ಹಾಗೂ ಕಂಡುಕೊಳ್ಳಲಾದ ಪರಿಹಾರವನ್ನು ನೋಡಿದರೆ, ವಿಪರ್ಯಾಸದ ಭಾವ ಮೂಡ ದಿರದು.

ಕುಂದಾನಗರಿ ಬೆಳಗಾವಿಯು ಮತ್ತೊಂದು ‘ಚಳಿಗಾಲ’ದ ಅಧಿವೇಶನಕ್ಕೆ ಸಜ್ಜಾಗಿದೆ. ಅಂತೆಯೇ, ಆಡಳಿತ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷ, ಅದರ ಸವಾಲಿಗೆ ಪ್ರತಿಸವಾಲು ಒಡ್ಡಲು ಆಡಳಿತ ಪಕ್ಷ ಸಜ್ಜಾಗಿವೆ. ಪ್ರತಿ ಬಾರಿ ಯಂತೆ ರೈತರ ಹೋರಾಟ, ಉತ್ತರ ಕರ್ನಾಟಕದ ಸಮಸ್ಯೆ, ಕೃಷ್ಣಾ ಮೇಲ್ದಂಡೆ ಯೋಜನೆ, ನಂಜುಂಡಪ್ಪ ವರದಿ ಜಾರಿ ಸೇರಿದಂತೆ ಹಲವು ಯೋಜನೆಗಳನ್ನು ಚರ್ಚಿಸಲು ಸೌಧ ಸಜ್ಜಾಗಿ ನಿಂತಿದೆ!

ಬಿಜೆಪಿ-ಜೆಡಿಎಸ್‌ನ ಮೊದಲ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಆರಂಭಗೊಂಡ ಬೆಳಗಾವಿಯ ಚಳಿಗಾಲದಅಧಿವೇಶನಕ್ಕೆ ಮುಂದಿನ ವರ್ಷಕ್ಕೆ ಭರ್ತಿ 20 ವರ್ಷಗಳಾಗುತ್ತವೆ. ಅತಿವೃಷ್ಟಿಯ ಕಾರಣದಿಂದಾಗಿ ಒಂದೆರಡು ವರ್ಷ, ಕರೋನಾದಿಂದಾಗಿ ೨ ವರ್ಷ ಬೆಳಗಾವಿಯ ಸುವರ್ಣ ಸೌಧ ದಲ್ಲಿ ಚಳಿಗಾಲದ ಅಧಿವೇಶನ ನಡೆದಿಲ್ಲ. ಇಷ್ಟನ್ನು ಹೊರತುಪಡಿಸಿದರೆ, ಅಲ್ಲಿ ಚಳಿಗಾಲದ ಅಧಿವೇಶನ ನಡೆಸುವುದು ಬಹುತೇಕ ‘ಸಂಪ್ರದಾಯ’ವಾಗಿದೆ.

ಗಡಿ ಜಿಲ್ಲೆ ಬೆಳಗಾವಿ ಸೇರಿದಂತೆ ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕದ ಸಮಸ್ಯೆಗಳ ಬಗ್ಗೆ ವಿಸ್ತೃತ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳಲು ಇದು ಅತ್ಯುತ್ತಮ ವೇದಿಕೆಯಾಗಿದೆ. ಆದರೆ, 2006ರಿಂದ ಈವರೆಗೆ ನಡೆದಿರುವ ಈ ಎಲ್ಲ ಚರ್ಚೆಗಳ ಸಾರ ಹಾಗೂ ಕಂಡುಕೊಳ್ಳಲಾಗಿರುವ ಪರಿಹಾರವನ್ನು ನೋಡಿದರೆ, ವಿಪರ್ಯಾ ಸದ ಭಾವ ಮೂಡದಿರದು.

ಹೌದು, ಚಳಿಗಾಲದ ಅಧಿವೇಶನದಲ್ಲಿ ಕಳೆದ 18-19 ವರ್ಷಗಳಿಂದ ಆಗಿರುವ ಚರ್ಚೆಗಳನ್ನು ಸೂಕ್ಷ್ಮವಾಗಿಗಮನಿಸಿದರೆ, ‘ಎಲ್ಲಿಂದ ಆರಂಭವಾಗಿದೆಯೋ ಅಲ್ಲಿಯೇ ನಿಂತಿದೆ’ ಎನಿಸುವುದರಲ್ಲಿ ಅನುಮಾನವಿಲ್ಲ. ಡಿಸೆಂಬರ್2ನೇ ವಾರದಲ್ಲಿ ಪ್ರಾರಂಭಿಸಿ ಕ್ರಿಸ್‌ಮಸ್‌ಗೂ ಮೊದಲು ಮುಗಿಸು ವುದು ಬೆಳಗಾವಿ ಅಧಿವೇಶನದ ಸಂಪ್ರದಾಯ.ಈ 2 ವಾರದ ಅವಧಿಯಲ್ಲಿ, 2 ದಿನ ಸರಕಾರಿ ರಜೆ. ಉಳಿಯುವ 10 ದಿನದಲ್ಲಿ ಮಧ್ಯಾಹ್ನದ ಅವಧಿಯಲ್ಲಿ, ಉತ್ತರ ಕರ್ನಾಟಕ ಭಾಗದ ಸಮಸ್ಯೆ ಬಗ್ಗೆ ಶಾಸಕರುಗಳಿಂದ ‘ಬೆಳಕು ಚೆಲ್ಲುವ ಯತ್ನ’.

ಸಾಧ್ಯವಾದರೆ ಇದಕ್ಕೆ ಸರಕಾರದಿಂದ ಸುದೀರ್ಘ ಉತ್ತರ. ಈ ಅವಧಿಯಲ್ಲಿ ಸದನದ ಹೊರಗೆ ಕೆಲ ಹೋರಾಟ ಗಾರರಿಂದ ಪ್ರತಿಭಟನೆ, ಬೆಳಗಾವಿ ಸುತ್ತಮುತ್ತಲಿನ ಶಾಲಾಮಕ್ಕಳಿಗೆ ಸುವರ್ಣಸೌಧಕ್ಕೆ ‘ಪಿಕ್‌ನಿಕ್’. ವಾಪಸಾಗುವಾಗ ‘ಬೆಳಗಾವಿ ಕುಂದ ಮತ್ತು ‘ಗೋಕಾಕ ಕರದಂಟು’ ಕಟ್ಟಿಸಿಕೊಂಡು ರಾಜಧಾನಿಯತ್ತ ಪಯಣ. ಇದರ ಹೊರತಾಗಿ ಏನಾದರೂ ಆಗಿದೆಯೇ ಎಂದು ಪ್ರಶ್ನಿಸಿದರೆ ‘ಇಲ್ಲ’ ಎಂಬುದೇ ಉತ್ತರವಾಗುತ್ತದೆ.

ತಮಾಷೆಯೆಂದರೆ, ಈ ಅಧಿವೇಶನದ ವರದಿಗಾರಿಕೆಗೆಂದು ಬರುವ ಪತ್ರಕರ್ತರಿಗೆ ಯಾರು ಭಾಷಣ ಮಾಡುತ್ತಾರೆ ಎಂಬುದನ್ನು ಮೊದಲಿಗೇ ಹೇಳಿದರೆ, ಆ ಶಾಸಕರು ಯಾವ ವಿಷಯವನ್ನು ಎತ್ತಿ ಕೊಳ್ಳುತ್ತಾರೆ? ಏನನ್ನುಮಾತಾಡುತ್ತಾರೆ? ಎಂಬುದನ್ನು ಊಹಿಸುವಷ್ಟು ‘ವಿಷಯ’ ಗಳು ಹಳತಾ ಗಿವೆ. ಹಾಗೆಂದ ಮಾತ್ರಕ್ಕೆ, ಈ ಯಾವ ಸಮಸ್ಯೆಗಾದರೂ ಪರಿಹಾರ ಕಂಡುಕೊಳ್ಳುವ ಯತ್ನವಾಗಿ ದೆಯೇ ಎಂದರೆ ಅದೂ ಇಲ್ಲ. ಬೆಳಗಾವಿಯಲ್ಲಿ ಅಧಿವೇಶನ ನಡೆಸಬೇಕೆಂಬ ಸಂಪ್ರದಾಯವನ್ನು ಸರಕಾರ ಹಾಕಿಕೊಂಡಿರುವಂತೆ, ‘ತಾವು ಮಾತನಾಡಬೇಕು’ ಎಂಬುದು ಕೂಡ ಉತ್ತರ ಕರ್ನಾಟಕ ಭಾಗದ ಶಾಸಕರು ಹಾಕಿಕೊಂಡಿರುವ ಒಂದು ಸಂಪ್ರದಾಯವಾಗಿದೆ.

ಶಾಸಕರಿಂದ ಸಮಸ್ಯೆಗಳ ಪ್ರಸ್ತಾಪ ಮತ್ತು ಅವುಗಳ ಬಗ್ಗೆ ನಾಯಕರು ಮಾಡಿರುವ ‘ಭಾಷಣ’ಗಳ ಬಗ್ಗೆ ವಿಧಾನಸಭೆ ಮತ್ತು ವಿಧಾನ ಪರಿಷತ್‌ನ ದಾಖಲೆಗಳನ್ನು ತೆಗೆಸಿ ನೋಡಿದರೆ, ಹೊಸ ಸಮಸ್ಯೆಗಳ ಬಗ್ಗೆ ಯಾವುದೇ ಪ್ರಸ್ತಾಪ ವಿರುವುದಿಲ್ಲ. ಇನ್ನೊಂದು ಪ್ರಮುಖ ವಿಷಯವೆಂದರೆ, ಉತ್ತರ ಕರ್ನಾಟಕದ ಸಮಸ್ಯೆಗಳ ಚರ್ಚೆಗೆಂದು ಮೀಸಲಿ ಡುವ ಸಮಯದಲ್ಲಿ, ಭಾಷಣ ಮಾಡುವ ಶಾಸಕರನ್ನು ಹೊರತುಪಡಿಸಿ ಬೇರಾವ ಶಾಸಕರೂ ಸದನದಲ್ಲಿರುವುದಿಲ್ಲ (ಶಾಸಕರ ಹಾಜರಾತಿ ಬೆಂಗಳೂರಿನಲ್ಲೂ ಇದೆ ಎಂಬುದು ಬೇರೆ ಮಾತು). ಇದರೊಂದಿಗೆ, ಶಾಸಕರ ಮಾತನ್ನಾಲಿಸಲು ಸಂಬಂಧಿತ ಸಚಿವರೂ ಇರುವುದಿಲ್ಲ.

೨ ದಿನದ ಮಟ್ಟಿಗೆ ಉತ್ತರ ಕರ್ನಾಟಕ ಸಂಬಂಧಿತ ಚರ್ಚೆಯಾದರೆ, ಅದರಲ್ಲಿ ಅರ್ಧದಿನ ರಾಜ ಕೀಯ ಹೇಳಿಕೆಗಳಲ್ಲಿ ಮುಗಿದಿರುತ್ತದೆ. ಉಳಿದರ್ಧ ದಿನದಲ್ಲಿ ‘ನಾಮ್-ಕೆ-ವಾಸ್ತೆ’ ಚರ್ಚೆ ನಡೆಸಿ, ಅದಕ್ಕೆ ಸರಕಾರದಿಂದ ‘ಸಾಂಪ್ರದಾಯಿಕ ಉತ್ತರ’ ನೀಡಿ ಸಮಾಪ್ತಿ ಮಾಡಲಾಗುತ್ತದೆ. ಹೀಗೆ ಸದನ ನಡೆಸುವುದು ಯಾವುದೇ ಒಂದು ಪಕ್ಷಕ್ಕೆ ಸೀಮಿತವಾಗಿಲ್ಲ; ಬಿಜೆಪಿ ಅಧಿಕಾರದಲ್ಲಿದ್ದಾಗ ವಿಪಕ್ಷ ಸ್ಥಾನದಲ್ಲಿದ್ದ ಕಾಂಗ್ರೆಸ್ ನಾಯಕರು ಮಾಡಿದ್ದ ಆರೋಪವನ್ನೇ ಇದೀಗ ಬಿಜೆಪಿನಾಯಕರು ಮಾಡುತ್ತಿದ್ದಾರೆ. ಈ ಆರೋಪಕ್ಕೆ ಬಿಜೆಪಿ ಅವಧಿಯಲ್ಲಿ ಸಿದ್ಧಪಡಿಸಲಾಗಿದ್ದ ಉತ್ತರದ ಆಸುಪಾಸಿ ನಲ್ಲೇಕಾಂಗ್ರೆಸ್ ಸರಕಾರದಿಂದಲೂ ಉತ್ತರ ಬರುತ್ತದೆ!

ಹೀಗಾಗಿ ಬೆಳಗಾವಿ ಅಧಿವೇಶನದಲ್ಲಿನ ಈ ‘ಸಾಂಪ್ರದಾಯಿಕ ಹೋರಾಟ’ಗಳು ಸಾಕೆನಿಸಿವೆ. ಉತ್ತರ ಕರ್ನಾಟಕ ಭಾಗದಲ್ಲಿ ಈಗಲೂ ಇರುವ ನೈಜಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಬೇಕಿದೆ. ಅವು ಕೇವಲ ಭಾಷಣಕ್ಕೆ ಅಥವಾ ಕಲಾಪದಲ್ಲಿ ನೀಡುವ ಉತ್ತರಕ್ಕೆ ಸೀಮಿತವಾಗಿರದೇ, ವಾಸ್ತವಿಕ ವಾಗಿ ಜಾರಿಯಾಗಬೇಕು ಎಂಬುದು ಬಹುಜನರ ಕನಸಾಗಿದೆ.

ಇದು ಸುವರ್ಣಸೌಧದ ಒಳಗಿನ ಮಾತಾಯಿತು. ಹೊರಬರುತ್ತಿದ್ದಂತೆ ಮತ್ತೊಂದು ವೇದಿಕೆ ಸಜ್ಜಾಗಿ ರುತ್ತದೆ. ಅದುವೇ, ಪ್ರತಿಭಟನೆ ನಡೆವ ಸ್ಥಳ. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯದ ಮೂಲೆಮೂಲೆಯ ರೈತಸಂಘಗಳು, ವಿವಿಧ ಕ್ಷೇತ್ರದ ಸಂಘಗಳ ಸದಸ್ಯರು ಬೆಳಗಾವಿಗೆ ಆಗಮಿಸಿ, ‘ಬೃಹತ್ ಪ್ರತಿಭಟನೆ’ಯ ಫ್ಲೆಕ್ಸ್‌ಗಳನ್ನು ಅಳವಡಿಸು ತ್ತಾರೆ. ಕಳೆದ ಬಾರಿ ಕುಡುಕರ ಸಂಘದವರೂ ‘ನಮ್ಮದೂ ಒಂದು ಇರಲಿ’ ಎನ್ನುವಂತೆ ಪ್ರತಿಭಟನೆ ಮಾಡಿದ್ದು ಬೇರೆ ಮಾತು! ಇಂಥ ಪ್ರತಿಭಟನಾ ನಿರತರಿಗೆ ಸರಕಾರವೇ ಊಟ-ನೀರಿನ ವ್ಯವಸ್ಥೆ ಮಾಡುವುದರೊಂದಿಗೆ ಪ್ರತಿಭಟನೆ ನಡೆಸಲು ‘ಮಳಿಗೆ’ ರೀತಿಯ ವೇದಿಕೆಗಳನ್ನು ನಿರ್ಮಿಸಿ ಕೊಡುತ್ತದೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆಗಳನ್ನು ಮಾಡುವುದು ತಪ್ಪಲ್ಲ; ಆದರೆ ಇಲ್ಲಾಗುವ ಪ್ರತಿಭಟನೆಗಳಲ್ಲಿ ಸರಕಾರದ ಮುಂದಿಡುವ ಎಷ್ಟು ಬೇಡಿಕೆಗಳಿಗೆ ತಾರ್ಕಿಕ ಅಂತ್ಯ ಸಿಕ್ಕಿವೆ? ತಾರ್ಕಿಕ ಅಂತ್ಯ ಸಿಗುವುದಿರಲಿ, ಎಷ್ಟುಪ್ರತಿಭಟನಾ ನಿರತರ ಸಮಸ್ಯೆಯನ್ನು ಸರಕಾರದ ಪ್ರತಿನಿಧಿಗಳು ಶಾಂತವಾಗಿ ಆಲಿಸುತ್ತಾರೆ? ಅನೇಕ ವೇಳೆ, ಪ್ರತಿಭಟನೆ ಆರಂಭಗೊಂಡು ಸರಕಾರದ ಪ್ರತಿನಿಧಿಗಳು ಬರುವಷ್ಟರಲ್ಲಿ, ಪ್ರತಿಭಟನಾನಿರತರೇ ಸ್ಥಳದಿಂದ ಕಾಲ್ಕಿತ್ತಿರುತ್ತಾರೆ. ಇಂಥ ಪ್ರತಿಭಟನೆಗಳಿಂದ ಏನಾದರೂ ಫಲಿತಾಂಶವನ್ನು ನಿರೀಕ್ಷಿಸಲಾದೀತೇ? ಹಾಗಾದರೆ, ಈ ಬೆಳಗಾವಿ ಅಧಿವೇಶನದಿಂದ ಈವರೆಗೆ ಯಾವ ರೀತಿಯಲ್ಲೂ ಬದಲಾವಣೆಯಾಗಿಲ್ಲವೇ? ಎಂಬ ಪ್ರಶ್ನೆ ಮೂಡ ಬಹುದು.

ನ್ಯೂನತೆಗಳೇನೇ ಇರಲಿ, ಇಲ್ಲಿ ಪ್ರತಿವರ್ಷ ಅಧಿವೇಶನ ನಡೆಸುವುದರಿಂದಾಗಿ ಗಡಿ ಸಮಸ್ಯೆ ಮತ್ತು ಎಂಇಎಸ್‌ನ ಪುಂಡಾಟಿಕೆಗೆ ಬಹುತೇಕ ಪೂರ್ಣವಿರಾಮ ಬಿದ್ದಿರುವುದಂತೂ ಸತ್ಯ. ಈ ಒಂದು ವಿಷಯದಲ್ಲಿ ಮಾಜಿ ಮುಖ್ಯ ಮಂತ್ರಿ ಕುಮಾರಸ್ವಾಮಿ ಅವರ ‘ನಡೆ’ಯನ್ನು ಬೆಳಗಾವಿಯ ಸ್ಥಳೀಕರು ಇಂದಿಗೂ ಪ್ರಶಂಸಿಸುತ್ತಾರೆ.

ಈ ಹಿಂದೆ ಬೆಳಗಾವಿಯಲ್ಲಿ ಎಂಇಎಸ್‌ನ ಪುಂಡಾಟಿಕೆ, ಅದಕ್ಕೆ ಅಲ್ಲಿನ ರಾಜಕಾರಣಿಗಳ ‘ಮೌನ ಸಮ್ಮತಿ’ ವಾಡಿಕೆ ಯಾಗಿತ್ತು. ಈ ಕಾರಣಕ್ಕಾಗಿಯೇ ಅಲ್ಲಿ ಕನ್ನಡಪರವಾದ ಯಾವುದೇ ಕಾರ್ಯ ಕ್ರಮ/ಸಮಾವೇಶ ನಡೆದರೆ ಅದಕ್ಕೆ ವಿರುದ್ಧವಾಗಿ ‘ಕರಾಳದಿನ’ವು ಎಂಇಎಸ್‌ನಿಂದ ಆಯೋಜನೆ ಗೊಂಡಿರುತ್ತಿತ್ತು. ಆದರೆ ಈ ‘ಕುಂದಾನಗರಿ’ಯಲ್ಲಿ ಶುರುವಾದ ಒಗ್ಗಟ್ಟು ಪ್ರದರ್ಶನ ಹಾಗೂ ಜಿಲ್ಲಾಡಳಿತದ ಕೆಲ ಕಠಿಣ ನಿಯಮಗಳಿಂದಾಗಿ, ಇಲ್ಲಿನ ‘ಕನ್ನಡ-ವಿರೋಧಿ’ಚಟುವಟಿಕೆಗಳಿಗೆ ಬ್ರೇಕ್ ಬಿದ್ದಿದೆ.

ಹೀಗಾಗುವುದಕ್ಕೆ ಎಂಇಎಸ್ ರಾಜಕೀಯವಾಗಿ ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಶಕ್ತಿ ಕಳೆದುಕೊಂಡಿರುವುದು ಒಂದು ಕಾರಣ. ಆದರೆ ಇದನ್ನು ಮೀರಿ, ಕುಮಾರಸ್ವಾಮಿಯವರು ಹಾಗೂ ಅವರ ನಂತರದ ಮುಖ್ಯಮಂತ್ರಿಗಳು ಪಕ್ಷಾತೀತವಾಗಿ ಕೈಗೊಂಡ ಕೆಲ ತೀರ್ಮಾನಗಳು ಬೆಳಗಾವಿ ಯಲ್ಲಿನ ಪರಿಸ್ಥಿತಿಯನ್ನು ಬದಲಿಸಿವೆ ಎಂದರೆ ತಪ್ಪಾಗುವುದಿಲ್ಲ. ಚಳಿಗಾಲದ ಅಧಿವೇಶನದ ನೆಪದಲ್ಲಿ ಇಡೀ ಸರಕಾರಿ ವ್ಯವಸ್ಥೆ ಬೆಳಗಾವಿಗೆ ಶಿಫ್ಟ್‌ ಆಗುವುದ ರಿಂದಲೂ ಎಂಇಎಸ್‌ನ ಹೋರಾ ಟಕ್ಕೆ ಸ್ಥಳೀಯರ ಬೆಂಬಲ ಸಿಗುತ್ತಿಲ್ಲ ಎಂಬುದನ್ನು ಒಪ್ಪಿಕೊಳ್ಳಬೇಕು.

ಆದರೆ ಗಡಿಸಮಸ್ಯೆಯನ್ನು ಮೀರಿ, ಉಭಯ ಸದನದ ಕಲಾಪದಿಂದ ರಾಜ್ಯಕ್ಕೆ, ರಾಜ್ಯದ ಜನರಿಗೆ ಯಾವುದೇ ‘ಔಟ್‌ ಪುಟ್’ ಸಿಗುತ್ತಿಲ್ಲ. ಈ ನಿಟ್ಟಿನಲ್ಲಿ ಆಡಳಿತ ಪಕ್ಷ ಮತ್ತು ವಿಪಕ್ಷಗಳು ಆಲೋಚಿಸ ಬೇಕಾದ ಅಗತ್ಯವಿದೆ. ಬೆಳಗಾವಿಯ ಅಧಿವೇಶನದಲ್ಲಿ ರಚನಾತ್ಮಕ ಚರ್ಚೆಗಳಿಗೆ ಹೆಚ್ಚಿನ ಅವಕಾಶ ವಾಗಬೇಕು, ಅವಕ್ಕೆ ಪರಿಹಾರ ಸಿಗಬೇಕು ಎಂಬುದು ಎಲ್ಲರ ಆಶಯವಾಗಿದೆ.

ಹಾಗೆ ನೋಡಿದರೆ, ಬೆಂಗಳೂರಿನಲ್ಲಿ ನಡೆಯುವ ಇತರ ಕಲಾಪಗಳಿಗೆ ಹೋಲಿಸಿದರೆ, ಬೆಳಗಾವಿ ಯದ್ದು ಸರಕಾರಕ್ಕೆಆರ್ಥಿಕವಾಗಿ ಮತ್ತು ಅಧಿಕಾರಿಗಳಿಗೆ ಹೆಚ್ಚುವರಿ ಶ್ರಮದ ಕಲಾಪ. ಬೆಂಗಳೂರಿ ನಲ್ಲಿನ ಸರಕಾರಿ ಸಜ್ಜಿಕೆಯನ್ನು 15ದಿನದ ಮಟ್ಟಿಗೆ ಬೆಳಗಾವಿಗೆ ಒಯ್ದು, ಅಲ್ಲಿಂದ ಕಾರ್ಯ ನಿರ್ವಹಿ ಸುವುದು ಸುಲಭದ ಮಾತಲ್ಲ. ಇಷ್ಟೊಂದುಶ್ರಮಹಾಕಿ ಅಲ್ಲಿ ಪ್ರತಿವರ್ಷ ನಡೆಸುವ ಅಧಿವೇಶನ ದಿಂದ ಕೆಲವಷ್ಟು ಸಂದೇಶವಾದರೂ ರವಾನೆಯಾಗದಿದ್ದರೆ, ಆಅಧಿಕಾರಿಗಳ ಶ್ರಮದಾನ ಮತ್ತು ಸರಕಾರಿ ಬೊಕ್ಕಸಕ್ಕಾಗುವ ಕೋಟಿಗಟ್ಟಲೆ ಖರ್ಚು ವ್ಯರ್ಥವಾಗುತ್ತವೆ. ಉತ್ತರಕರ್ನಾಟಕದ ಸಮಸ್ಯೆಗಳಿಗೆ ಸಂಬಂಧಿಸಿ ಈ ವರ್ಷವೂ ‘ಅದೇ ರಾಗ, ಅದೇ ಹಾಡು’ ಹಾಡುವ ಬದಲು, ಆ ಸಮಸ್ಯೆ ಗಳಿಗೆ ಪರಿಹಾರ ಕಂಡುಕೊಳ್ಳುವ ಕೆಲಸವಾಗಬೇಕಿದೆ.

ಇದನ್ನೂ ಓದಿ: Ranjith H Ashwath Column: ಸೈನಿಕ, ದಳದ ನಡುವೆ ಕಮಲ ಪಡೆ !