ಕರ್ನಾಟಕ ಬಜೆಟ್​ ವಿದೇಶ ಮಹಿಳಾ ದಿನಾಚರಣೆ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shishir Hegde Column: ಇಲ್ಲಿ ಜೇನು ಕೂಡ ಕೃಷಿ ದಿನಗೂಲಿ...

ಹೇಳಿ ಕೇಳಿ ಬೇಸಗೆ ಕಾಲ- ಸುಡುಬಿಸಿಲು, ವಿಪರೀತ ಸೆಖೆ. ನೆವಾಡಾದ ಸೆಖೆಯೇ ಅಂಥದ್ದು, ಎಷ್ಟು ನೀರು ಕುಡಿದರೂ ದಾಹ ತಣಿಯದು

ಶಿಶಿರ ಕಾಲ

ಶಿಶಿರ್‌ ಹೆಗಡೆ

shishirh@gmail.com

ಅಮೆರಿಕದ ಪಶ್ಚಿಮ ಭಾಗದಲ್ಲಿರುವ ನೆವಾಡಾ ರಾಜ್ಯದಿಂದ ಅದರ ಪಶ್ಚಿಮಕ್ಕಿರುವ ಕ್ಯಾಲಿಫೋರ್ನಿ ಯಾಕ್ಕೆ ನಾವೊಂದಿಷ್ಟು ಗೆಳೆಯರು ಕಾರ್ ಡ್ರೈವ್ ಮಾಡಿಕೊಂಡು ಹೊರಟಿದ್ದೆವು. ಹೇಳಿ ಕೇಳಿ ಬೇಸಗೆ ಕಾಲ- ಸುಡುಬಿಸಿಲು, ವಿಪರೀತ ಸೆಖೆ. ನೆವಾಡಾದ ಸೆಖೆಯೇ ಅಂಥದ್ದು, ಎಷ್ಟು ನೀರು ಕುಡಿದರೂ ದಾಹ ತಣಿಯದು.

ಎ.ಸಿ. ಇಲ್ಲದೆ ಬದುಕುವುದೇ ಅಸಾಧ್ಯ ಎನಿಸಿಬಿಡುತ್ತದೆ. ಅದರಲ್ಲೂ ನಾವು ಪಯಣಿಸುತ್ತಿದ್ದುದು ‘ಡೆತ್ ವ್ಯಾಲಿ’ಮೂಲಕ. ಅದು ಅಕ್ಷರಶಃ ಡೆತ್ ವ್ಯಾಲಿಯೇ. ಆ ಮರಳುಗಾಡಲ್ಲಿ ಲವಲೇಶವೂ ಹಸಿರಿಲ್ಲ. ಹಗಲಲ್ಲಿ ಉಷ್ಣಾಂಶ೫೦ ಡಿಗ್ರಿ ಸೆಲ್ಸಿಯಸ್ ದಾಟಿರುತ್ತದೆ. ಕಾರಿನ ಗಾಜು ಇಳಿಸಿದರೆ ಅಗ್ನಿಜ್ವಾಲೆ ತಾಗಿದ ಅನುಭವ. ಕಾರಿನಲ್ಲಿಟ್ಟು ಕೊಂಡಿದ್ದ ನೀರೆಲ್ಲಾ ಖಾಲಿಯಾಗಿತ್ತು. ಸುಮಾರು 70 ಮೈಲಿ ಪಯಣಿಸಿದರೂ ಒಂದೇ ಒಂದು ಅಂಗಡಿ ಸಿಗಲಿಲ್ಲ. ಮರಳುಗಾಡು ದಾಟಿ ಸಮತಟ್ಟು ಹಸಿರು, ಕ್ಯಾಲಿಫೋರ್ನಿಯಾವನ್ನು ಪ್ರವೇಶಿಸುವ ಜಾಗಕ್ಕೆ ಮುಟ್ಟಿದಾಗಲೇ ಒಂದು ಟೋಲ್ ಪ್ಲಾಜಾ ಕಾಣಿಸಿದ್ದು- ಮರುಭೂಮಿ ದಾಟಿ ಓಯಸಿಸ್ ತಲುಪಿದ ಅನುಭವ. ಪೂರ್ವದ ಐದಾರು ರಾಜ್ಯ ಗಳಿಂದ ಬರುವ ವಾಹನಗಳೆಲ್ಲ ಆ ಟೋಲ್ ಪ್ಲಾಜಾ ದಾಟಿಯೇ ಕ್ಯಾಲಿಫೋರ್ನಿಯಾ ಹೊಕ್ಕಬೇಕು. ಹತ್ತಾರುದೊಡ್ಡ ಟ್ರಕ್‌ಗಳು ನಿಂತಿದ್ದು ಕಂಡು, ‘ಇಲ್ಲಿ ಖಂಡಿತ ನೀರು ಸಿಗಬಹುದು’ ಎಂದುಕೊಂಡು ಟ್ರಕ್‌ಗಳ ಹಿಂದೆ ಕಾರನ್ನು ನಿಲ್ಲಿಸಿಕೊಂಡೆವು. ಕಾರಿಂದ ಕೆಳಗಿಳಿದರೆ ಸಮುದ್ರದ ಭೋರ್ಗರೆತದಂಥ ಸದ್ದು. ಅಲ್ಲೆಲ್ಲಿಯೂ ಸಮುದ್ರವೇನಿಲ್ಲ!

ಹಾಗಾದರೆ ಈ ಶಬ್ದ ಬರುತ್ತಿರುವುದೆಲ್ಲಿಂದ? ನಮ್ಮ ಮುಂದೆ ನಿಲ್ಲಿಸಿದ್ದ ಉದ್ದುದ್ದದ ಟ್ರಕ್ಕುಗಳಲ್ಲಿ ಡಬ್ಬಿಗಳು ತುಂಬಿದ್ದವು. ಹಸಿರು ಬಣ್ಣದ, ಆಚೀಚೆ ಕಾಣಿಸುವ ತೆಳ್ಳನೆಯ ಬಟ್ಟೆಯನ್ನು ಅವುಗಳ ಮೇಲೆ ಹೊದಿಸಲಾಗಿತ್ತು. ಅದರೊಳಗಿದ್ದ ಕೋಟ್ಯಂತರ ಜೇನುಹುಳುಗಳ ‘ಗುಂಯ್’ಗುಟ್ಟುವಿಕೆ ಯಿಂದಲೇ ಆ ಶಬ್ದ ಹೊಮ್ಮುತ್ತಿದೆ ಎಂದು ನಂತರ ಗೊತ್ತಾಯ್ತು. ಅವುಗಳ ಗಿಜಿಗಿಜಿಯೇ ಸಮುದ್ರದ ಅಬ್ಬರದಂತೆ ನಮಗೆ ಕೇಳಿಸಿದ್ದು!

ಆ ತೆರೆದ ಟ್ರಕ್ಕುಗಳಿಗೆ ಬೀಸುಗಾಳಿ ಅಪ್ಪಳಿಸಿದಂತೆಲ್ಲಾ ಒಳಗಿದ್ದ ಜೇನುಗಳ ಗುಂಯ್‌ಗುಟ್ಟು ವಿಕೆಯೂ ಹೆಚ್ಚುತ್ತಿತ್ತು, ಅದೆಲ್ಲ ಸೇರಿ ಥೇಟ್ ಸಮುದ್ರದಲೆಯ ಸಪ್ಪಳದಂತೆ ಏರಿಳಿತವಾಗುತ್ತಿತ್ತು. ಸರತಿಯಲ್ಲಿ ನಿಂತ ಸಾಲು ಟ್ರಕ್ಕುಗಳು, ಅವುಗಳಲ್ಲಿ ತುಂಬಿದ ಜೇನುಹುಳುಗಳು, ಅವನ್ನು ಪರೀಕ್ಷಿ ಸಲು ಬಿಳಿ ಮುಸುಕುವಸ್ತ್ರ ಧರಿಸಿ ಬರುವ ವಿಜ್ಞಾನಿ ಗಳಂತೆ ಕಾಣುವವರು.

ಡಬ್ಬಿಗಳಿಗೆ ಹೊದಿಸಿದ್ದ ಮುಸುಕನ್ನು ಸರಿಸಿ ಅವರು ಏನೋ ಪರೀಕ್ಷಿಸುತ್ತಿದ್ದರೆ, ಅದೊಂದು ಅವಕಾಶವೆಂಬಂತೆ ಹತ್ತಿಪ್ಪತ್ತು ಜೇನುಹುಳುಗಳು ಆಚೆ ಹಾರಿಬಂದು ಅವರ ಮೈ ಕೈ ಮೇಲೆ ಕೂರುತ್ತಿದ್ದವು. ಟ್ರಕ್ ಡ್ರೈವರ್‌ಗಳು ಸ್ವಲ್ಪ ದೂರದಲ್ಲಿಯೇ ನಿಂತಿದ್ದರು. ಪಕ್ಕದಲ್ಲೇ ನಿಂತಿದ್ದ ನನಗಂತೂ ಎಲ್ಲಿ ಜೇನು ಕಡಿಯುವುದೋ ಎಂಬ ಹೆದರಿಕೆ. ಆದರೂ, ತೀರಾ ಅನಿರೀಕ್ಷಿತ ವಾದುದರಿಂದ ಈ ಜೇನುಹುಳುಗಳು ಎಲ್ಲಿಂದ ಬಂದವು, ಇವನ್ನು ಎಲ್ಲಿಗೆ ಒಯ್ಯ ಲಾಗುತ್ತಿದೆ? ಎಂಬ ಕುತೂಹಲ. ಅಷ್ಟು ಹೊತ್ತಿಗೆ ದಾಹ ಮರೆತುಹೋಗಿತ್ತು. ಏನೋ ಪರೀಕ್ಷೆ ನಡೆಯುತ್ತಿತ್ತು. ಕೆಲ ನಿಮಿಷದಲ್ಲಿ ಡ್ರೈವರ್‌ಗಳು ಗಡಿಬಿಡಿಯಲ್ಲಿ ಅವರಿಂದ ಕಾಗದವೊಂದನ್ನು ಪಡೆದು ಅಲ್ಲಿಂದ ಹೊರಡುತ್ತಿದ್ದರು. ಅದಾಗಲೇ ಇಂಥ ಜೇನುನೊಣ ತುಂಬಿಕೊಂಡ ಸುಮಾರು 15 ಟ್ರಕ್ಕುಗಳು ಅಲ್ಲಿ ನಿಂತಿದ್ದವು, ನೋಡ ನೋಡುತ್ತಲೇ ಇನ್ನೂ ನಾಲ್ಕೈದು ಬಂದು ಸೇರಿಕೊಂಡವು.

ಒಂದೊಂದು ಟ್ರಕ್‌ನಲ್ಲೂ ಸುಮಾರು 400-500 ಜೇನುಗೂಡುಗಳು. ಜೇನು ಸಾಕಿದ ಅನುಭವ ನನಗಿದೆ. ಆಗಾತ್ರದ ಒಂದೊಂದು ಗೂಡಿನಲ್ಲೂ ಕನಿಷ್ಠ 50000 ಜೇನುಹುಳುಗಳಿವೆ ಎಂದು ಅಂದಾ ಜಿಸಿದರೂ, ಪ್ರತಿ ಟ್ರಕ್ನಲ್ಲಿ ಏನಿಲ್ಲವೆಂದರೂ ಎರಡೂವರೆ ಕೋಟಿ ಹುಳುಗಳು.

ಅಂಥ ೨೦ ಟ್ರಕ್‌ಗಳೆಂದರೆ ಸುಮಾರು 50 ಕೋಟಿ ಹುಳುಗಳು ನಮ್ಮ ಸುತ್ತಮುತ್ತಲಿದ್ದವು. ಅಷ್ಟೊಂದು ಜೀವಗಳು ಇಷ್ಟು ಸನಿಹದಲ್ಲಿವೆ ಅಂದುಕೊಳ್ಳುವುದೇ ರೋಮಾಂಚಕಾರಿ, ಜತೆಗೆ ಅವು ಜೇನುನೊಣಗಳೆಂಬ ಕಾರಣಕ್ಕೆ ಸ್ವಲ್ಪ ಭಯ. ಜೇನುಹುಳು ಸಾಕಣೆಗೆ ಈ ಪ್ರಮಾಣದಲ್ಲಿ ಯಾರಾ ದರೂ ಖರೀದಿಸುತ್ತಿದ್ದಾರೆಯೇ? ಇದೆಂಥಾ ಬ್ಯುಸಿನೆಸ್ಸು? ಎಂಬೆಲ್ಲ ಪ್ರಶ್ನೆಗಳು ಕ್ಷಣಾರ್ಧದಲ್ಲಿ ಗಿರಕಿಹೊಡೆಯತೊಡಗಿದವು. ಆ ಟ್ರಕ್‌ಗಳೆಲ್ಲ ಒಂದೇ ರಾಜ್ಯದಿಂದ ಬಂದವು ಎಂಬುದು ನಂಬರ್ ಪ್ಲೇಟ್‌ನಿಂದ ತಿಳಿಯುತಿತ್ತು. ಇಬ್ಬರು ಟ್ರಕ್ ಡ್ರೈವರ್‌ಗಳನ್ನು ನಿಲ್ಲಿಸಿ, “ಏನಿದರ ಹಕೀಕತ್ತು?" ಎಂದು ಪ್ರಶ್ನಿಸಿ ದಾಗ, ಹೊಸತೊಂದು ವ್ಯವಹಾರದ ಜಗತ್ತೇ ತೆರೆದುಕೊಂಡಿತು.

ಈ ಜೇನುಗಳೆಲ್ಲ ಹೊರಟಿದ್ದು ಲೂಸಿಯಾನಾ ರಾಜ್ಯದಿಂದ; ಅಲ್ಲಿಂದ ಕ್ಯಾಲಿಫೋರ್ನಿಯಾ ಏನಿಲ್ಲ ವೆಂದರೂ ಎರಡೂವರೆ ಸಾವಿರ ಕಿ.ಮೀ. ಈ ಎಲ್ಲ ಜೇನುಗಳು ಮಾರಾಟಕ್ಕಲ್ಲ, ಕ್ಯಾಲಿಫೋರ್ನಿಯಾ ದ ಬಾದಾಮಿ ತೋಟ ಗಳಲ್ಲಿನ ಕೃಷಿಕಾರ್ಯಕ್ಕೆ. ನಿಜ, ಅಮೆರಿಕದಲ್ಲಿ ಜೇನನ್ನು ದುಡಿಸಿಕೊಳ್ಳುವ ಬೃಹತ್ ಉದ್ಯಮವೇ ಇದೆ. ಕ್ಯಾಲಿ ಫೋರ್ನಿಯಾದ ಸುಮಾರು 760000 ಎಕರೆ ಬಾದಾಮಿ ತೋಟಗಳಲ್ಲಿ ಮತ್ತು ದೇಶದ ಉದ್ದಗಲಕ್ಕೆ ಪರಾಗಸ್ಪರ್ಶ ಮಾಡುವುದೇ ಇವುಗಳ ಕೆಲಸ.

ಅಮೆರಿಕದಲ್ಲಿ ಅತಿಹೆಚ್ಚು ಬಾದಾಮಿ ಬೆಳೆವ ರಾಜ್ಯ ಕ್ಯಾಲಿಫೋರ್ನಿಯಾ. ಬಾದಾಮಿಯ ಇಳುವರಿ ಸೊಗಸಾ ಗಿರಬೇಕೆಂದರೆ ಕೀಟಮುಖೇನ ಪರಾಗಸ್ಪರ್ಶವಾಗಬೇಕು. ಕೆಲ ದಶಕಗಳ ಹಿಂದೆ ಬಾದಾಮಿ ಕೃಷಿ ಅಲ್ಪ ಪ್ರಮಾಣದಲ್ಲಿದ್ದಾಗ, ಅಲ್ಲಿನ ಸ್ಥಳೀಯ ಕೀಟಗಳು ಮತ್ತು ಜೇನುಹುಳುಗಳು ಪರಾಗ ಸ್ಪರ್ಶ ಮಾಡುತ್ತಿದ್ದವು. ದಿನಗಳೆದಂತೆ, ಅಮೆರಿಕದಲ್ಲಿನ ಕೃಷಿ ಕ್ರಾಂತಿಯಿಂದಾಗಿ ಬಾದಾಮಿಯ ಬೇಡಿಕೆ ಹೆಚ್ಚಿತು;

ಬಾದಾಮಿಯ ರಫ್ತು ಲಾಭದಾಯಕವಾದದ್ದರಿಂದ ಕ್ಯಾಲಿಫೋರ್ನಿಯಾದಲ್ಲಿ ಬಾದಾಮಿ ತೋಟ ಗಳು ವಿಸ್ತರಿಸತೊಡಗಿದವು. ಆದರೆ ಸಮಸ್ಯೆಯೆಂದರೆ, ಅಲ್ಲಿ ಆ ಪ್ರಮಾಣದ ಪರಾಗಸ್ಪರ್ಶಕ್ಕೆ ಜೇನುಹುಳುಗಳೇ ಇರಲಿಲ್ಲ.

ಹೀಗಾಗಿ ಇಳುವರಿ ಕ್ರಮೇಣ ಕುಸಿಯಿತು. ಅದೆಷ್ಟೇ ಜೇನುಹುಳುಗಳನ್ನು ಸಾಕಿದರೂ, ಪ್ರತಿವರ್ಷದ ಬೇಸಗೆಯ ಸೆಖೆಗೆ, ನೀರಿನ ಕೊರತೆಗೆ, ಬಾದಾಮಿ ಬೆಳೆವ ಸಮಯ ಬಿಟ್ಟರೆ ಬೇರೆ ಕಾಲದಲ್ಲಿ ಹೊಟ್ಟೆ ಗಿಲ್ಲದೆ ಬಹುಪಾಲು ಜೇನು ಹುಳುಗಳು ಸಾಯುತ್ತಿದ್ದವು. ಆಗ ಅವನ್ನು ಪರರಾಜ್ಯಗಳಿಂದ ಕೆಲಸಕ್ಕೆ ತರುವ ಪದ್ಧತಿ ಶುರುವಾಯಿತು.ಇಂದು ಅಮೆರಿಕದಲ್ಲಿ ಜೇನುತುಪ್ಪಕ್ಕಿಂತ ಪರಾಗಸ್ಪರ್ಶದ ಕೆಲಸಕ್ಕೆ ಜೇನುಹುಳುಗಳನ್ನು ಸಾಕಿ ಬೆಳೆಸುವುದು ಲಾಭದಾಯಕವಾಗಿದೆ. ಲೂಸಿಯಾನಾದ ಹಸನಾದ ವಾತಾವರಣದಲ್ಲಿ ಇದು ನಡೆಯುತ್ತದೆ (!). ನಂತರ ಅವನ್ನು ಟ್ರಕ್‌ಗಳಲ್ಲಿ ತುಂಬಿಕೊಂಡು, ಬಾದಾಮಿ ಗಿಡಗಳು ಹೂಬಿಡುವ ವೇಳೆಗೆ ಕ್ಯಾಲಿಫೋರ್ನಿಯಾಕ್ಕೆ ತಂದು ಪರಾಗಸ್ಪರ್ಶ ಮಾಡಲು ಬಿಡಲಾಗುತ್ತದೆ.

ಕೃಷಿಯಲ್ಲಿ ಎಷ್ಟೇ ಆಧುನಿಕತೆ ಬಂದಿದ್ದರೂ ಪರಾಗಸ್ಪರ್ಶದಂಥ ಅತಿಸೂಕ್ಷ್ಮ ಕೆಲಸಕ್ಕೆ ಯಾವುದೇ ಯಂತ್ರ/ತಂತ್ರಜ್ಞಾನವನ್ನು ಕಂಡುಹಿಡಿಯಲಾಗಿಲ್ಲ; ಅದಕ್ಕೆ ಜೇನುಹುಳುಗಳೇ ಬೇಕು. ಅಲ್ಲಿ ಪರಾಗಸ್ಪರ್ಶ ಮುಗಿದ ನಂತರ ಈ ಕೋಟ್ಯಂತರ ಜೇನುಹುಳುಗಳನ್ನು ಅನ್ಯರಾಜ್ಯಗಳಿಗೆ, ಮತ್ತೊಂದು ತೋಟಕ್ಕೆ ಒಯ್ಯಲಾಗುತ್ತದೆ. ಹೀಗೆ ಒಯ್ಯುವ ಕೆಲಸ ಅಂದುಕೊಂಡಷ್ಟು ಸುಲಭ ವಲ್ಲ. ಉಳಿದ ಸಾಮಾನುಗಳಂತೆ ಜೇನುಹುಳುಗಳನ್ನು ಬೇಕಾಬಿಟ್ಟಿಯಾಗಿ, ಫ್ರಿಜ್ಜಿನಲ್ಲಿ ಒಯ್ಯ ಲಾಗುವುದಿಲ್ಲ. ಅವು ಸೂಕ್ಷ್ಮ ದೇಹ ಪ್ರಕೃತಿಯ ಜೀವಿಗಳು, ಮಾರ್ಗಮಧ್ಯೆ ಬಿಸಿಲಿನ ತಾಪ ಹೆಚ್ಚಿದಲ್ಲಿ ೫ ನಿಮಿಷದೊಳಗೆ ಸಾಯುತ್ತವೆ. ಅವನ್ನು ಒಯ್ಯುವ ಟ್ರಕ್ಕುಗಳು ಎಲ್ಲಿಯೂ ನಿಲ್ಲದೆ ಸಾಗುತ್ತಿರ ಬೇಕು. ಹಾಗಾಗಿ ಸರತಿಯಲ್ಲಿ ಡ್ರೈವ್ ಮಾಡಲು ಇಬ್ಬರು ಚಾಲಕರು ಇರುತ್ತಾರೆ. ಜತೆಗೆ ಪಯಣವು ಹೆಚ್ಚೆಂದರೆ ಒಂದೂವರೆ ದಿನದಲ್ಲಿ ಮುಗಿಯಲೇಬೇಕು. 2 ದಿನಕ್ಕಿಂತ ಹೆಚ್ಚಿನ ಸಮಯ ಬಂಧಿಸಿಟ್ಟರೆ ಜೇನುಹುಳುಗಳು ಬದುಕುವುದಿಲ್ಲ. ಈ ಡ್ರೈವರ್‌ಗಳು ಊಟಕ್ಕೆ, ವಿಶ್ರಾಂತಿಗೆ ಮಾರ್ಗಮಧ್ಯೆ ನಿಲ್ಲುವಂತಿಲ್ಲ.

ಹೀಗಾಗಿ ಮೂತ್ರಕ್ಕೂ ಟ್ರಕ್ಕಿನೊಳಗೇ ವ್ಯವಸ್ಥೆಯಿರುತ್ತದೆ. ಗೂಡುಗಳ ಮೂಲಕ ಗಾಳಿ ಹಾಯುತ್ತಿದ್ದ ರಷ್ಟೇ ಒಳಗಿನಉಷ್ಣಾಂಶವು ಹದವಾಗಿ, ತಂಪಾಗಿರಲು ಸಾಧ್ಯ. ಹೀಗಿರುವಾಗ ಟ್ರಕ್‌ಗಳನ್ನು ಈ ಟೋಲ್ ಪ್ಲಾಜಾದಲ್ಲಿ ನಿಲ್ಲಿಸಿದ್ದೇಕೆ?ಇಲ್ಲಿ ನಡೆಯುತ್ತಿರುವುದೇನು? ಅಸಲಿಗೆ ಅದು ಟೋಲ್ ಪ್ಲಾಜಾ ಆಗಿರದೆ, ಹಾಗೆ ಕಾಣಿಸುವ ಕ್ಯಾಲಿಫೋರ್ನಿಯಾದ ಕೃಷಿ ಇಲಾಖೆಯ ಚೆಕ್ ಪಾಯಿಂಟ್ ಎಂದು ನಂತರ ತಿಳಿಯಿತು. ಕ್ಯಾಲಿಫೋರ್ನಿಯಾವನ್ನು ಪ್ರವೇಶಿಸುವ ಜೇನು ತುಂಬಿದ ಟ್ರಕ್ಕುಗಳೆಲ್ಲವನ್ನೂ ಅಲ್ಲಿ ಪರೀಕ್ಷಿಸಲಾಗುತ್ತಿತ್ತು. ಜೇನಿನ ಜತೆಗೆ ಇನ್ಯಾವುದೋ ಕೀಟವು ಒಳಬಂದರೆ ಅವು ಬಾದಾಮಿ ಮತ್ತು ಉಳಿದ ಬೆಳೆಗಳಿಗೆ ಮಾರಕವಾಗಬಹುದು. ಹಾಗಾಗಿ ಜೇನಿನ ಟ್ರಕ್ಕುಗಳನ್ನು ಪರೀಕ್ಷಿಸಿ ಮುಂದೆ ಬಿಡಲಾಗುತ್ತಿತ್ತು. ಜೇನಿನ ಜತೆಗೆ ಬೇರಾವುದೇ ಹುಳು ಕಾಣಿಸಿಕೊಂಡರೆ, ಆ ಚೆಕ್ ಪಾಯಿಂಟ್ ನ ತಜ್ಞರು ಅದರ ಫೋಟೋ ತೆಗೆದು ಕೃಷಿ ಕೇಂದ್ರಾಲಯಕ್ಕೆ ಇ-ಮೇಲ್ ಮೂಲಕ ರವಾನಿಸುತ್ತಿದ್ದರು.

ಅಲ್ಲಿ ಸುಮಾರು 2-3 ನಿಮಿಷದೊಳಗೆ ಅದು ಯಾವ ಹುಳು, ಅದರ ಜತೆಗೆ ಈ ಟ್ರಕ್ಕನ್ನು ರಾಜ್ಯ ದೊಳಗೆ ಬಿಟ್ಟು ಕೊಳ್ಳಬಹುದೇ ಎಂಬಿತ್ಯಾದಿ ನಿರ್ಣಯವಾಗಬೇಕು. ಇದು ನಿರ್ದಿಷ್ಟ ಸಮಯ ದೊಳಗೆ ನಡೆಯದಿದ್ದರೆ ಆ ಜೇನುಹುಳುಗಳೆಲ್ಲ ಸಾಯುತ್ತವೆ. ನಿಲ್ಲಿಸಿದ ಒಂದೈದು ನಿಮಿಷದಲ್ಲಿ ಉಷ್ಣಾಂಶ ತಗ್ಗಿಸಿ ಗೂಡುಗಳನ್ನುತಂಪಾಗಿಸಲು ನೀರಿನ ಸ್ಪ್ರೇ ಮಾಡುವ ವ್ಯವಸ್ಥೆಯಿದ್ದರೂ ಅದು ತಾತ್ಕಾಲಿಕ ಪರಿಹಾರವಷ್ಟೇ. ಒಂದೊಮ್ಮೆ ಬೇಡದ/ ಹಾನಿಕಾರಕ ಹುಳುಗಳು ಅಧಿಕವಾಗಿ ಕಾಣಿಸಿಕೊಂಡರೆ ಆ ಟ್ರಕ್ಕು ಕ್ಯಾಲಿಫೋರ್ನಿಯಾವನ್ನು ಪ್ರವೇಶಿಸು ವಂತಿಲ್ಲ.

ಇಂಥ ಟ್ರಕ್‌ನಲ್ಲಿನ ಹುಳುಗಳನ್ನು ಮಾರ್ಗಮಧ್ಯದ ಬೇರಾವ ರಾಜ್ಯದಲ್ಲೂ ಬಿಡುವಂತಿಲ್ಲ. ಹಾಗೆ ಬಿಟ್ಟರೆ, ಅಲ್ಲಿನ ಕೃಷಿ ಮೇಲೆ ಅಡ್ಡಪರಿಣಾಮವಾಗುತ್ತದೆ. ಮರಳಿ ಲೂಸಿಯಾನಾಕ್ಕೆ ಪಯಣಿಸ ಬೇಕೆಂದರೆ ಮತ್ತೆರಡು ದಿನ ಬೇಕು. ಹಾಗಾಗಿ ಇಂಥ ಟ್ರಕ್‌ಗಳು ತಿರಸ್ಕೃತಗೊಂಡರೆ ಸುಮಾರು ಎರಡೂವರೆ ಕೋಟಿ ಜೀವಗಳು ಸತ್ತವೆಂದೇ ಅರ್ಥ.ಜೇನುಹುಳು ಬದುಕುವುದೇ ಸುಮಾರು 120-150 ದಿನ. ಹಾಗಾಗಿ, ಲೂಸಿಯಾನಾದಲ್ಲಿ ಹುಟ್ಟಿದ ಜೇನು ಮತ್ತೆಲೂಸಿಯಾನಾವನ್ನು ನೋಡುವುದೇ ಇಲ್ಲ. ಅತ್ತ ಕ್ಯಾಲಿಫೋರ್ನಿಯಾದಲ್ಲಿರುವಾಗ ಹುಟ್ಟಿದ ಹುಳುಗಳು ಮರಳಿ ಕ್ಯಾಲಿಫೋರ್ನಿಯಾವನ್ನು ನೋಡುವುದೇ ಇಲ್ಲ.

ಅವು ಕ್ಯಾಲಿಫೋರ್ನಿಯಾದ ಬಾದಾಮಿ ತೋಟಗಳಲ್ಲಿ ಪರಾಗಸ್ಪರ್ಶ ಮಾಡಿದ ನಂತರ, ಪೂರ್ವದ ನ್ಯೂಯಾರ್ಕ್ ಮತ್ತು ನ್ಯೂಜೆರ್ಸಿಯ ಸೇಬು ತೋಟಗಳಿಗೆ ಒಯ್ಯಲ್ಪಡುತ್ತವೆ. ಅಲ್ಲಿನ ಕೆಲಸವಾದ ನಂತರ ಮೈನ್ ರಾಜ್ಯದ ಬ್ಲೂಬೆರ್ರಿ ತೋಟಕ್ಕೆ, ನಂತರ ಮೆಸ್ಯಾಚುಸೆಟ್ಸ್‌ನ ಕ್ಯಾನ್‌ಬೆರ್ರಿ ತೋಟಕ್ಕೆ. ನಂತರ ಅವು ಮತ್ತೆ ಲೂಸಿಯಾನಾಕ್ಕೆ ಮರಳುತ್ತವೆ. ಮಾರ್ಗಮಧ್ಯದಲ್ಲಾಗುವ ಸಾವುನೋವಿಗೆ ಲೆಕ್ಕವಿಲ್ಲ. ಎಷ್ಟೇ ಮುತುವರ್ಜಿ ವಹಿಸಿದರೂ ಕೆಲವೊಮ್ಮೆ ಅರ್ಧಕ್ಕೂ ಹೆಚ್ಚು ಜೇನುಹುಳುಗಳು ಸಾಯುತ್ತವೆ. ಹೀಗಾಗಿ ಅವಶ್ಯವಿರುವುದಕ್ಕಿಂತಲೂ ದುಪ್ಪಟ್ಟು ಜೇನುಹುಳು ಗಳನ್ನು ಲೂಸಿಯಾನಾ ದಿಂದ ಕಳಿಸಿಕೊಡಲಾಗುತ್ತದೆ. ಹೀಗೆ ಕಳುಹಿಸಿಕೊಟ್ಟ ಗೂಡುಗಳು ಮರಳುವಾಗ ಹೊಸ ತಲೆಮಾರಿನ ಹುಳುಗಳು ಅಲ್ಲಿರುತ್ತವೆ.

ಹೀಗೆ ಅರ್ಧದೇಶವನ್ನು 2 ದಿನದೊಳಗೆ ಸುತ್ತುವ ಈ ಪುಟ್ಟಜೀವಿಗಳು ಮಾನಸಿಕ ಒತ್ತಡಕ್ಕೆ ಒಳಗಾಗುತ್ತವೆ. ಸದಾ ಚಟುವಟಿಕೆಯಿಂದ ಸ್ವಚ್ಛಂದವಾಗಿ ಹಾರುವ ಜೇನನ್ನು 2 ದಿನದ ಪಯಣದ ಸಮಯದಲ್ಲಿ ಬಂಧಿಸಿಟ್ಟಾಗ ಅವುಗಳಮಾನಸಿಕ ಉದ್ವೇಗ ಹೆಚ್ಚಿರುತ್ತದೆ. ತಲುಪಬೇಕಾದ ತೋಟಕ್ಕೆ ತಂದು, ಪರದೆ ತೆರೆದಾಕ್ಷಣ ಅವು ಗುಂಪಾಗಿ, ಕಾರ್ಮೋ ಡಸ ದೃಶವಾಗಿ ಮೇಲಕ್ಕೆ ಹಾರುತ್ತವೆ, ಕಚ್ಚಾಡಿಕೊಳ್ಳುತ್ತವೆ, ಭಾರಿ ಪ್ರಮಾಣದಲ್ಲಿ ಸಾಯುತ್ತವೆ. ಜೇನುಹುಳು ತೀರಾ ಸೂಕ್ಷ್ಮ ಗ್ರಾಹಿ. ಆಧುನಿಕ ಕೃಷಿಯಲ್ಲಿ ಅಳತೆಗೆಟ್ಟ ಪ್ರಮಾಣದಲ್ಲಿ ಬಳಕೆಯಾಗುವ ಕೀಟನಾಶಕಗಳು, ಅವು ಪರಾಗ ಸ್ಪರ್ಶ ಮಾಡುವಾಗ ಮೈಗೆ ಅಂಟಿಕೊಳ್ಳುತ್ತವೆ. ಹೀಗೆ ಕೀಟನಾಶಕ ವನ್ನು ಬಳಿದುಕೊಂಡು ಗೂಡಿಗೆ ಮರಳುವ ಹುಳುಗಳನ್ನು ದ್ವಾರಪಾಲಕ ಹುಳುಗಳು ತಡೆಯುವುದರಿಂದ, ಅವು ಗೂಡಿನ ಹೊರಗೇ ಉಳಿದು ಸಾಯುತ್ತವೆ. ಅಲ್ಲದೆ, ಒಂದೇ ತರಕಾರಿಯನ್ನು ಜೀವಮಾನಪೂರ್ತಿ ತಿನ್ನಲು ಕೊಟ್ಟರೆ ನಮಗಾಗುವ ಸ್ಥಿತಿಯೇ ಈ ಜೇನುಹುಳುಗಳಿಗೂ ಒದಗುತ್ತದೆ.

ಅಂದರೆ, ಸುಮಾರು 2 ತಿಂಗಳು ಅವನ್ನು ಸಾವಿರಾರು ಎಕರೆಯಷ್ಟಿರುವ ಒಂದೇ ಬೆಳೆಯ ಮಧ್ಯೆ ಬಿಡುವುದರಿಂದ,ಅವಕ್ಕೆ ವೈವಿಧ್ಯಮಯ ಸಮತೋಲನ ಆಹಾರದ ಕೊರತೆಯೂ ಆಗುತ್ತದೆ. ಮನುಷ್ಯನು ಜೇನುಹುಳುವಿಲ್ಲದೆ ಸಾಕಷ್ಟು ಬೆಳೆಗಳನ್ನು ಬೆಳೆಯಲು ಸಾಧ್ಯವೇ ಇಲ್ಲ. ಒಂದು ಲೆಕ್ಕಾಚಾರದಂತೆ, ನಾವು ತಿನ್ನುವ 3 ತುತ್ತಿನಲ್ಲಿ ಒಂದರ ಉತ್ಪಾದನೆಯಲ್ಲಿ ಜೇನುಹುಳು ಭಾಗಿ ಯಾಗಿರುತ್ತದೆ. ಇಂಥ ಜೇನು ಈ ಭೂಮಿಯಿಂದ ಮಾಯವಾದಲ್ಲಿ ಮನುಷ್ಯ ಮೂರೇ ವರ್ಷದಲ್ಲಿ ನಾಶವಾಗುತ್ತಾನೆ ಎನ್ನುತ್ತದೆ ವೈಜ್ಞಾನಿಕ ಲೆಕ್ಕಾಚಾರ. ಕೆಲ ಬೆಳೆಗಳಿಗೆ ಜೇನುಹುಳುವಿನ ಅವಶ್ಯಕತೆ ಅಷ್ಟಿರುವುದಿಲ್ಲ, ಬೀಸುವ ಗಾಳಿಯಿಂದಲೇ ಅವುಗಳ ಪರಾಗಸ್ಪರ್ಶವಾಗುತ್ತದೆ.

ಹಾಗಾಗಿ, ಅಂಥ ಬೆಳೆಗಳಲ್ಲಿ ಕೀಟನಾಶಕಗಳ ಯಥೇಚ್ಛ ಬಳಕೆಯಾಗುತ್ತದೆ. ಅವು ಸ್ಥಳೀಯ ಜೇನುಹುಳುಗಳಿಗೆ/ಕೀಟಗಳಿಗೆ ಮಾರಕವಾಗುತ್ತವೆ. ಜೇನುಹುಳುಗಳ ಮೇಲೆಯೇ ಮನುಷ್ಯನ ಆಹಾರ ಸರಪಳಿ ನಿಂತಿರುವ ಸತ್ಯ ತಿಳಿದಿದ್ದರೂ, ಅದರ ಪರಿವೆಯಿಲ್ಲದಂತೆ ನಮ್ಮ ಇಂದಿನ ಕೃಷಿ ಸಾಗಿರುವುದು ದುರಂತ. ಕೀಟನಾಶಕದ ಪ್ರಮಾಣವನ್ನು ಅಂದಾಜಿಸಿ ನಂತರ ಈ ಜೇನುಹುಳು ಗಳನ್ನು ತೋಟಕ್ಕೆ ಬಿಡಬೇಕೆಂಬ ಕಾನೂನಿದೆ. ದುರಂತ ವೆಂದರೆ, ಈ ಪರೀಕ್ಷೆ ನಡೆಸುವವರು ಕೀಟನಾಶಕ ಕಂಪನಿಯವರೇ!

ಅಮೆರಿಕದಲ್ಲಿ ಕೀಟನಾಶಕ ಮತ್ತಿತರ ಕಾರಣಗಳಿಂದಾಗಿ 2005ರಲ್ಲಿ ಅರ್ಧಕ್ಕರ್ಧ ಜೇನುಹುಳುಗಳು ಸತ್ತವು. ಹೀಗಾಗಿ ಆಸ್ಟ್ರೇಲಿಯಾದಿಂದ ಅವನ್ನು ವಿಮಾನದಲ್ಲಿ ತರಿಸಿಕೊಳ್ಳಲಾಯಿತು. ಹೀಗೆ ಭೂಮಿಯ ಒಂದು ಭಾಗದಿಂದ, ಭೂಮಧ್ಯ ರೇಖೆ ದಾಟಿ ಮತ್ತೊಂದು ಭಾಗಕ್ಕೆ ಬಂದ ಹುಳುಗಳು ವಾತಾವರಣ ಮತ್ತು ಋತು ಬದಲಾವಣೆಯಿಂದಾಗಿ ಬದುಕಲಿಲ್ಲ. ಯುರೋಪ್‌ನ ಜೇನುಗಳು ಹೆಚ್ಚು ಶಕ್ತಿಶಾಲಿ, ಚಟುವಟಿಕೆಯವು ಎಂಬ ಕಾರಣಕ್ಕೆ ಅವನ್ನೂ ಅಲ್ಲಿಂದ ಆಮದು ಮಾಡಿ ಕೊಂಡರೂ, ಅವೂ ಬದುಕಲಿಲ್ಲ.

ಮನುಷ್ಯರ ದಾಹ/ ಅವಶ್ಯಕತೆ ಎಷ್ಟೇ ಇದ್ದರೂ, ತನಗೆ ವಿರುದ್ಧವಾಗಿ ನಡೆದಲ್ಲಿ ಪ್ರಕೃತಿಯು ಅದನ್ನು ಸುಲಭದಲ್ಲಿ ಒಪ್ಪುವುದಿಲ್ಲ. ಆದರೆ ಮನುಷ್ಯ ಕೂಡ ಪಟ್ಟುಸಡಿಲಿಸುವ ಜಾಯಮಾನ ದವನಲ್ಲ. ಕ್ಷಮತೆಯ ಏಕೈಕ ಕಾರಣಕ್ಕೆ ಯುರೋಪ್‌ನ ಜೇನುತಳಿ ಯನ್ನು ಅಮೆರಿಕದಲ್ಲಿ ಅಭಿವೃದ್ಧಿಪಡಿಸಲಾಯಿತು. ಇಂದು ಅಮೆರಿಕದಲ್ಲಿರುವ ಕೂಲಿಜೇನಿನಲ್ಲಿ ಹೆಚ್ಚಿನವು ಯುರೋಪ್ ಮೂಲದವು. ಅವುಗಳ ಜೀನ್‌ಗಳು ಇಂದಿಗೂ ಅಮೆರಿಕದ ಬೆಳೆ/ಹೂವುಗಳಿಗೆ ಒಗ್ಗಿಕೊಳ್ಳದ್ದರಿಂದ ಹತ್ತಾರು ರೋಗಗಳಿಂದ ಬಾಧಿಸಲ್ಪಡುತ್ತವೆ.

ಅಲ್ಲದೆ, ಹೀಗೆ ಅನ್ಯಪ್ರಭೇದದ ಹುಳುಗಳ ಪ್ರಮಾಣ ಹೆಚ್ಚಿದ್ದರಿಂದ, ಸ್ಥಳೀಯ ಜೇನುಗಳ ಪ್ರಮಾಣ ಗಣನೀಯವಾಗಿ ತಗ್ಗುತ್ತಿದೆ. ಈ ವ್ಯವಹಾರ ತೀರಾ ಕೃತ್ರಿಮ ಪದ್ಧತಿಯೆನಿಸಿದರೂ, ಇದೊಂದು ಲಾಭದಾಯಕ ಉದ್ಯಮವಾಗಿಬಿಟ್ಟಿದೆ. ಹಾಗಾಗಿ ಪ್ರಕೃತಿಯೊಡ್ಡುವ ಎಲ್ಲ ಸವಾಲುಗಳ ನಡುವೆ ಯೂ ಈ ಜೇನುಗಳಿಂದ ದುಡಿಸಿಕೊಳ್ಳುವ ಮನುಷ್ಯನ ಅಮಾನವೀಯ ಕೃತ್ಯ ಮುಂದುವರಿದಿದೆ. ಪ್ರದೂಷಣೆ ಮಾಡುವುದರೊಂದಿಗೆ, ಪ್ರಕೃತಿಯ ಜೀವಿಗಳ ಜತೆಗೂ ಮನುಷ್ಯ ಅನಾಚಾರಕ್ಕಿಳಿ ದಿರುವ ಉದಾಹರಣೆಗಳಲ್ಲಿ ಇದೂ ಒಂದು. ಆಕಳು, ಮೇಕೆಯಂಥ ಪ್ರಾಣಿಗಳನ್ನು ಸ್ವಾರ್ಥಕ್ಕೆ ಬಳಸುವುದನ್ನು, ಅದೊಂದು ಉದ್ಯಮ/ಆಧುನಿಕತೆ ಎಂಬುದನ್ನು ಒಪ್ಪಿಕೊಳ್ಳುವ ನಾವು, ಇದನ್ನೂ ಆಧುನಿಕ ಕೃಷಿ ಪದ್ಧತಿಯ ಭಾಗ ಎಂದು ಒಪ್ಪಬೇಕಾಗಿದೆ.

ಭಾರತ ಸೇರಿದಂತೆ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲೂ ಕೃಷಿಕ್ರಾಂತಿಯಾಗಬೇಕೆಂದರೆ ಇಂಥ ವಿಕೃತಿಗಳನ್ನು ಮುಂದೆ ನೆಚ್ಚಬೇಕಾಗಬಹುದೇನೋ? ಆ ಹಂತವನ್ನು ಮುಟ್ಟುವ ಮೊದಲು, ಸುಸ್ಥಿರ - ಸಮತೋಲನದ ಕೃಷಿ ಪದ್ಧತಿಯನ್ನು ನಮ್ಮದಾಗಿಸಿಕೊಳ್ಳಲು ವಿಚಾರ ಮಾಡುವ, ಹೆಜ್ಜೆ ಯಿಡುವ ಅಗತ್ಯವಿದೆ. ಜೇನುಹುಳುವಿನಮಹತ್ವ ನಮ್ಮಲ್ಲಿಂದು ಬಹುತೇಕ ಕೃಷಿಕರಿಗೆ ಇದ್ದಂತಿಲ್ಲ, ಅದು ಕೇವಲ ಜೇನುತುಪ್ಪಕ್ಕೋಸ್ಕರ ಎಂಬ ಭಾವನೆ ಯಿದೆ ಬಹುತೇಕರಲ್ಲಿ.

ಎರೆಹುಳುವಿನಂತೆ ಜೇನುಹುಳುವೂ ‘ಕೃಷಿಕ ಸ್ನೇಹಿ’ ಎಂಬುದನ್ನು ನಾವು ಅರಿಯಬೇಕಿದೆ. ಜೇನನ್ನು ಸಹಜವಾಗಿ ಸಾಕಿದಲ್ಲಿ ಉತ್ತಮ ಇಳುವರಿ ಸಾಧ್ಯ ಎಂಬ ಸೂಕ್ಷ್ಮ ಸಂಗತಿಯನ್ನು ನಮ್ಮ ಕೃಷಿಕರಿಗೆ ತಲುಪಿಸಿ ಪ್ರೋತ್ಸಾಹಿಸುವಹೊಣೆ ಕೃಷಿ ಇಲಾಖೆಯದ್ದು. ಉತ್ತರ ಕನ್ನಡದ ಕುಮಟಾ, ಹೊನ್ನಾವರ ಸೇರಿದಂತೆ ಕರಾವಳಿಯ ಹಲವೆಡೆಯಿರುವ‘ಜೇನು ಸೊಸೈಟಿಗಳು’ ಜೇನಿನೆಡೆಗಿನ ಈ ಜಾಗೃತಿಯನ್ನು ಮೂಡಿಸುವಲ್ಲಿ ಕೊಂಚ ವ್ಯಸ್ತವಾಗಿರುವುದೇನೋ ನಿಜ.ಆದರೆ ಸರಕಾರದ ಅಸಡ್ಡೆಯಿಂದಾಗಿ ಅವು ತಮ್ಮ ಕೆಲಸವನ್ನು ಜೇನುಸಂಗ್ರಹ ಮತ್ತು ಮಾರಾಟಕ್ಕಷ್ಟೇ ಸೀಮಿತಗೊಳಿಸಿಕೊಂಡಿವೆ.

ಕೃಷಿ ಇಲಾಖೆಯಂತೂ ಜೇನಿನೆಡೆಗೆ ದಿವ್ಯ ನಿರ್ಲಕ್ಷ್ಯ ವಹಿಸಿದಂತಿದೆ. ನಮ್ಮ ಕೃಷಿಕರೂ ಜೇನು ಸಾಕಣೆಯನ್ನುಮರೆತಂತಿದೆ. ಇಂಥ ನಿರ್ಲಕ್ಷ್ಯವು ನಮ್ಮನ್ನೂ ಮುಂದೊಂದು ದಿನ ಅಮೆರಿಕದ ಸ್ಥಿತಿಗೆ ದೂಡಬಹುದು. ಹಾಗಾದಲ್ಲಿ,‘ಕೂಲಿಜೇನು ಸಾಕಣೆ’ ಒಂದೊಳ್ಳೆಯ ಬ್ಯುಸಿನೆಸ್ ಆಗಿ, ಹತ್ತಾರು ಕುಟುಂಬದ ಹೊಟ್ಟೆ ತುಂಬಬಹುದು, ಅಲ್ಲವೇ?

ಇದನ್ನೂ ಓದಿ: shishirhegdecolumn