Shishir Hegde Column: ನೆನಪುಗಳ ವಾಸನೆ, ವಾಸನೆಗಳ ನೆನಪು ಎರಡೂ ಮಧುರ
ವಾಸನಾ ಬೇರೆ. ಹಾಗಂತ ಸುವಾಸನಾ, ದುರ್ವಾಸನಾ ಎಂಬ ಶಬ್ದಗಳು ಸಂಸ್ಕೃತ ಕಾವ್ಯದಲ್ಲಿ ಕೇಳಿ ಬರುವುದು ಅಪರೂಪ. ದುರ್ಗಂಧ, ಸುಗಂಧ ಎಂಬ ಪ್ರಯೋಗವೇ ಜಾಸ್ತಿ. ಈಗ ಕನ್ನಡದಲ್ಲಂತೂ


ಶಿಶಿರಕಾಲ
ಶಿಶಿರ್ ಹೆಗಡೆ
ಕುಮಟಾದ ಬುಧವಾರ ಸಂತೆಗೆ ಅದರದೇ ಆದ ಎರಡು ವಾಸನೆಗಳಿವೆ. ಬಿರು ಬೇಸಿಗೆಯಲ್ಲಿ ಸಂತೆ ತಳೆಯುವ ವಾಸನೆಯೇ ಬೇರೆ, ಗಿಜಿಗಿಜಿ-ಹಠ ಹಿಡಿದಂತೆ ಸುರಿಯುವ ಮಳೆಯಲ್ಲಿ ತೊಯ್ದ ಸಂತೆಯ ವಾಸನೆಯೇ ಬೇರೆ. ಒಂದೊಂದು ಊರಿನ ಸಂತೆಗೂ ಒಂದು ಅನನ್ಯ ವಾಸನೆಯಿರುತ್ತದೆ. ‘ವಾಸನೆ’- ವೆಂಕಟಸುಬ್ಬಯ್ಯನವರು ಗುರುತಿಸುವಂತೆ ಒಂದು ವಿಚಿತ್ರ ಶಬ್ದ ಹೌದು. ಸಂಸ್ಕೃತದಲ್ಲಿ ವಾಸ ಎಂದರೆ ಸುವಾಸನೆ.
ವಾಸನಾ ಬೇರೆ. ಹಾಗಂತ ಸುವಾಸನಾ, ದುರ್ವಾಸನಾ ಎಂಬ ಶಬ್ದಗಳು ಸಂಸ್ಕೃತ ಕಾವ್ಯದಲ್ಲಿ ಕೇಳಿ ಬರುವುದು ಅಪರೂಪ. ದುರ್ಗಂಧ, ಸುಗಂಧ ಎಂಬ ಪ್ರಯೋಗವೇ ಜಾಸ್ತಿ. ಈಗ ಕನ್ನಡದಲ್ಲಂತೂ ವಾಸನೆ ಎಂದರೆ ದುರ್ವಾಸನೆ ಎಂದೇ ಅರ್ಥಪಡೆದುಕೊಂಡಿದೆ. ಸುವಾಸನೆ ಎಂದರೆ ಹಾಗೆ, ದುರ್ವಾಸನೆ ಎಂದರೆ ಹೀಗೆ, ಆದರೆ ಬರೀ ವಾಸನೆ ಎಂದರೆ ಹೆಚ್ಚಿನಂಶ ಅರ್ಥವಾಗುವುದು ದುರ್ವಾಸನೆ ಎಂದೇ. ಈ ಲೇಖನದ ಮಟ್ಟಿಗೆ ವಾಸನೆ ಎಂದು ಬಂದಾಗಲೆಲ್ಲ ಅದು ನಿಷ್ಪಕ್ಷಪಾತ ‘ವಾಸನೆ’ ಎಂದಷ್ಟೇ ಗ್ರಹಿಸಿ ಓದಿಕೊಳ್ಳಬೇಕು.
ಸುವಾಸನೆ, ದುರ್ವಾಸನೆ, ‘ಹೂ-ಸು’ವಾಸನೆ ಎಂಬೆಲ್ಲ ಗುಣ ವಿಶೇಷ ಇಲ್ಲಿ ಸಂಬಂಧವಿಲ್ಲದ ವಿಷಯ. ಈ ಲೇಖನ ದಲ್ಲಿ ವಾಸನೆ ಎಂದಾಗಲೆಲ್ಲ ಅದು ಪಕ್ಷಪಾತಿಯಲ್ಲದ, ಒಂಟಿಯಾದರೂ ನಿರ್ಲಿಪ್ತವಾಗಿಯೇ ಉಳಿಯುವ ಶಬ್ದ- smell. ಹೊನ್ನಾವರ ಸಂತೆಯ ವಾಸನೆಯೇ ಬೇರೆ, ಗಾಮನಗಟ್ಟಿ ಎಪಿಎಂಸಿ ವಾಸನೆಯೇ ಬೇರೆ, ಬ್ರಹ್ಮಾವರದ ಹೂವಿನಂಗಡಿಯ ಮಲ್ಲಿಗೆ ಅಟ್ಟೆಯ ವಾಸನೆಯೇ ಬೇರೆ, ಸಿಗಂದೂರಿನ ದೇವಸ್ಥಾನದ ಮಲ್ಲಿಗೆಯ ವಾಸನೆಯೇ ಬೇರೆ. ಹುಬ್ಬಳ್ಳಿಯ ದುರ್ಗದ ಬೈಲಿನ ವಾಸನೆ ಕೆಆರ್ ಮಾರುಕಟ್ಟೆಗಿಲ್ಲ.
ಅಮೆರಿಕದ ಸಿಯಾಟಲ್ಲಿನ ಮೀನು ಮಾರುಕಟ್ಟೆಯ ವಾಸನೆ ಮಂಗಳೂರಿನ ಮೀನು ಮಾರುಕಟ್ಟೆಯಲ್ಲಿ ಬರುವು ದಿಲ್ಲ. ಬಾಳೆದಿಂಡು, ಸಗಣಿ, ಕುತ್ತುಂಬ್ರಿ ಸೊಪ್ಪು, ಕರ್ಪೂರ, ಕೊಳೆತ, ಕೊಲೆಯಾದ ಹೂವು, ಗೇರುಬೀಜ, ಜನರ ಬೆವರು ಇವೆಲ್ಲ ವಾಸನೆಗಳ ಮಿಸಾಳ ಭಾಜಿಯಾಗಿ ಅನುಭವಕ್ಕೆ ಬರುವ ನಮ್ಮೂರಿನ ಸಂತೆಗೆ ಅನನ್ಯ ವಾಸನೆ ಇದೆ, ಹೌದು. ಆದರೆ ನಾ ಕಂಡಂತೆ ಎಲ್ಲಾ ದೇಶಗಳ ಊರುಗಳ ಸಂತೆಗಳಿಗೆ ಯಾವು ದೋ ಒಂದು ವಾಸನೆ ಸಾಮಾನ್ಯ ವಾಗಿರುತ್ತದೆ, ಅನುಭವಕ್ಕೆ ಬರುತ್ತದೆ. ಹೂವುಗಳಲ್ಲಿ ಪ್ರತಿಯೊಂದರ ವಾಸನೆ ಅನನ್ಯವಾಗಿದ್ದರೂ ಎಲ್ಲ ಹೂವುಗಳ ವಾಸನೆಯಲ್ಲಿ ಒಮ್ಮತವಿದೆ.
ಹಾಗೆಯೇ ಎಲ್ಲ ವಸ್ತುಗಳಿಗೂ. ಪ್ರತಿ ಊರಿಗೂ ಒಂದೊಂದು ವಾಸನೆಯಿದೆ. ನೀವು ಹಳಿಯಾಳದ ದಾಂಡೇಲಿಗೆ ಹೋದರೆ, ಇಡೀ ಊರಿಗೆ ಊರೇ ಪೇಪರ್ ಮಿಲ್ಲಿನ ವಾಸನೆ ತಳೆದದ್ದು ಅನುಭವಕ್ಕೆ ಬರುತ್ತದೆ. ದಾಂಡೇಲಿಯನ್ನು ಪೇಪರ್ ಮಿಲ್‌ನಲ್ಲಿ ಮರದ ಪುಡಿಯನ್ನು ಪಲ್ಪ ಆಗಿಸುವ ಪ್ರಕ್ರಿಯೆಯಲ್ಲಿ ಹುಟ್ಟುವ ರಾಸಾಯನಿಕದ ವಾಸನೆ ಯಿಂದ ಪ್ರತ್ಯೇಕಿಸಿ ಕಲ್ಪಿಸಿಕೊಳ್ಳುವಂತಿಲ್ಲ. ಕಾಶಿಗೆ, ರಾಮೇಶ್ವರಕ್ಕೆ, ಗೋಕರ್ಣಕ್ಕೆ, ಅಥಣಿಗೆ ಹೀಗೆ ಒಂದೊಂದು ಊರಿಗೆ ಒಂದೊಂದು ವಾಸನೆ. ಯಾವುದೇ ಊರಿರಲಿ, ಅವುಗಳನ್ನು ಅವುಗಳ ಅಸಲಿ ವಾಸನೆಯಿಂದ ಪ್ರತ್ಯೇಕಿಸಿ ನೋಡುವುದು ಅಪರಾಧ. ಫೋಟೋ- ವಿಡಿಯೋದಲ್ಲಿ ಅನುಭವಕ್ಕೆ ಬಾರದ್ದು ಊರಿನ ವಾಸನೆ. ಅದನ್ನು ಮಾತ್ರ ಅಲ್ಲಿಗೆ ಹೋಗಿಯೇ ಅನುಭವಿಸಬೇಕು, ಪರ್ಯಾಯವಿಲ್ಲ.
ಬ್ಯಾಂಕಾಕ್, ಫಿಲಿಪೈನ್ಸ್ ಮನಿಲಾ, ಅಮೆರಿಕದ ಫ್ಲೋರಿಡಾ ದಕ್ಷಿಣ ಭಾಗ ಇವೆಲ್ಲ ಊರಿಗೆ ಊರೇ ಮೀನಿನ ವಾಸನೆ ಯವು. ಮೈಸೂರಿಗೊಂದು ವಾಸನೆಯಿದೆ, ಕೊಡಗಿನ ವಿರಾಜಪೇಟೆಗೆ ಇನ್ನೊಂದು. ಸುಮಾರು ಹತ್ತು ವರ್ಷದ ಹಿಂದೆ ನೆದರ್ಲ್ಯಾಂಡಿನ ಆಮ್‌ಸ್ಟರ್ಡ್ಯಾಮ್‌ನ ಬೆಳಗೆಂದರೆ ಬೇಕರಿಯ ಬ್ರೆಡ್ಡುಗಳನ್ನು ತಯಾರಿಸುವಾಗಿನ, ಕಾಫಿಯ ಘಮ. ಅದೇ ಆಮ್‌ಸ್ಟರ್ಡ್ಯಾಮ್ ಈಗ ಬೇರೆಯದೇ ವಾಸನೆ ಹೊಡೆಯುತ್ತದೆ. ಧರಿಸಿದ ಬಟ್ಟೆಗೆ ವಾಸನೆ ಹತ್ತುವಷ್ಟು ಗಾಂಜಾ ವಾಸನೆ ಇಡೀ ಊರಿನ ಕಲ್ಚರಲ್ ಶಿಫ್ಟ್- ಸಾಂಸ್ಕೃತಿಕ ಸ್ಥಿತ್ಯಂತರವನ್ನು ಸಾರಿ ಹೇಳುತ್ತದೆ. ಬೆಂಗಳೂರಿಗೆ ಒಂದು ವಾಸನೆಯಿದ್ದರೆ ಅದರೊಳಗೆ ಶಿವಾಜಿ ನಗರಕ್ಕೆ, ರಸಲ್ ಮಾರ್ಕೆಟಿಗೆ, ಎಸ್‌ಪಿ ರೋಡಿಗೆ ಕೂಡ ಪ್ರತ್ಯೇಕವಾದ ವಾಸನೆಯಿದೆ.
‘ವಾಸನೆ’ ಶಬ್ದದಂತೆಯೇ ವಿಚಿತ್ರವಾದ ಗ್ರಹಿಕೆ. ನೀವೇ ಸ್ವಲ್ಪ ಅಂತರ್ಮುಖಿಯಾಗಿ ಗ್ರಹಿಸಿ ನೋಡಿ. ನಮ್ಮೆಲ್ಲರಬಾಲ್ಯದ ಬಹುತೇಕ ನೆನಪುಗಳು ವಾಸನೆಯ ಜತೆಯಲ್ಲಿ ಹೊಂದಿಕೊಂಡಿರುತ್ತವೆ. ನನ್ನ ಅಜ್ಜ ನಿತ್ಯ ಬೆಳಗ್ಗೆ ಸ್ನಾನ ಮಾಡಿ ಮಡಿಯುಟ್ಟು ಪೂಜೆಗೆ ಗಂಧ ತೇಯುತ್ತಿದ್ದರು. ಕೊರಡಿನ ಮೇಲಿದ್ದ ಗಂಧ ಮತ್ತು ಚಂದನದ ಮಿಶ್ರಣದ ವಾಸನೆ ದೇವರ ಕೋಣೆಯಾಚೆಯೂ ಆವರಿಸುತ್ತಿತ್ತು. ಇವತ್ತಿಗೂ ಪ್ರತಿ ಬಾರಿ ದೇವಸ್ಥಾನದಲ್ಲಿ ಗಂಧ-ಮಂಗಳ ತೆಗೆದುಕೊಳ್ಳುವಾಗಿನ ಕ್ಷಣಾರ್ಧದಲ್ಲಿ ಆ ಘಮ, ಅಜ್ಜನೆದುರು ಕೂತ ನನ್ನೆದುರಿಗಿದ್ದ 360 ಡಿಗ್ರಿ ದೃಶ್ಯ ಪ್ರಕಟ ಗೊಳಿಸುತ್ತದೆ.
ಉತ್ಪ್ರೇಕ್ಷೆಗೆ ಹೇಳುತ್ತಿಲ್ಲ, ಇದೆಲ್ಲ ನಿಮ್ಮ ಅನುಭವಕ್ಕೂ ಬಂದಿರುತ್ತದೆ- ವಾಸನೆಯ ಜತೆಗಿನ ನೆನಪುಗಳೇ ಹಾಗೆ, ಅಷ್ಟು ಉತ್ಕಟ. ಇವತ್ತಿಗೂ ಧೂಪದ ಪರಿಮಳ ಬಾಲ್ಯದ ಮುಸ್ಸಂಜೆಯ ಸೀನ್ ಕಣ್ಣೆದುರು ತರುತ್ತದೆ. ನಮ್ಮೂರ ತೋಟಗಳಲ್ಲಿ ಕೇನೆಗಡ್ಡೆ ಎಂಬ ಒಂದು ಕೊಳವೆಯಾಕೃತಿಯ ಹೂವು ಮಳೆಗಾಲದಲ್ಲಿ ಅರಳುತ್ತದೆ. ಅದನ್ನ ಇಂಗ್ಲಿಷಿನಲ್ಲಿ Corpse Flower ಎಂದೇ ಕರೆಯುವುದು. Corpse ಎಂದರೆ ಹೆಣ. ಅಷ್ಟು ಗಬ್ಬು ನಾರುವ ವಾಸನೆಯ ಹೂವು ಅದು. ಅದು ಮೂಡುವುದು ಹೆಚ್ಚು ಕಡಿಮೆ ಗಣೇಶ ಚತುರ್ಥಿಯ ಸಮಯದಲ್ಲಿ. ಆ ಗಬ್ಬು ವಾಸನೆಯ ಹೂವು ಅಮೆಜಾನ್ ಕಾಡಿನಲ್ಲಿ ತಿರುಗುವಾಗ ಕಾಣಿಸಿತ್ತು. ಆಗ, ಆ ಕ್ಷಣ ಆ ವಾಸನೆಗೆ ನನಗೆ ನೆನಪಾದದ್ದು ನಮ್ಮೂರಿನ ಗಣೇಶ ಚತುರ್ಥಿಯ ಪೂರ್ಣ ಸನ್ನಿವೇಶ. ಅಪ್ಪನ ಕಬ್ಬಿಣದ ಕಪಾಟಿಗೆ, ಅಂಗಿಗೆ, ಅಮ್ಮನ ಸೀರೆಗೆ, ದೊಡ್ಡಪ್ಪನ ಪಂಚೆಗೆ, ಸೋದರತ್ತೆಯ ಉಸಿರಿಗೆ, ಎಲೆ ಚಿವುಟಿದ ತಮ್ಮನ ಉಗುರಿಗೆ, ಎಲ್ಲದಕ್ಕೂ ಅನನ್ಯ ವಾಸನೆ ಗಳಿದ್ದವು. ನಮ್ಮ ಮನೆಯಲ್ಲಿ ನೆಂಟರು ಬಂದಾಗ ಬಳಸುವ ಚಾದರ, ಬೆಡ್ ಶೀಟ್‌ಗಳನ್ನು ಚಿಕ್ಕದೊಂದು ಕಪಾಟಿ ನಲ್ಲಿರಿಸುತ್ತಿದ್ದರು. ಅದರ ಜತೆಯಲ್ಲಿ ಅಗರಬತ್ತಿಯ ಖಾಲಿಯಾದ ಕವರ್ ಅನ್ನು ಒಳಗೆ ಎಸೆದಿಡುವುದಿತ್ತು. ಅವು ತೊಳೆದಿಟ್ಟ ಚಾದರದ ಸೋಪಿನ ವಾಸನೆಯ ಜತೆ ಸೇರಿ ಒಂದು ಅನನ್ಯ ವಾಸನೆಯನ್ನು ಪಡೆಯುತ್ತಿದ್ದವು.
ಆ ಚಾದರವನ್ನು ನಾವು ಮಕ್ಕಳು, ಮನೆಯವರೇ ಬಳಸುವ ಸನ್ನಿವೇಶ ಅಪರೂಪಕ್ಕೆ ಬರುತ್ತಿತ್ತು. ಅದೊಂದು ಫ್ರೆಶ್‌ನೆಸ್- ತಾಜಾತನದ ವಾಸನೆ. ಆ ವಾಸನೆ ಇವತ್ತಿಗೂ ತಾಜಾತನದ ಅನುಭವ ಕೊಡಬಲ್ಲದು ಇತ್ಯಾದಿ ಇತ್ಯಾದಿ.. ಅಸಂಖ್ಯ ನೆನಪುಗಳಂತೆಯೇ ಅಸಂಖ್ಯ ವಾಸನೆಗಳು.
ಅಮ್ಮ ಮಾಡಿದ ಉಪ್ಪಿನಕಾಯಿಯ ಘಮ, ಸಾರಿನ ಘಮ ಇತ್ಯಾದಿ ಟಿವಿಗಳಲ್ಲಿ ಜಾಹೀರಾತಾಗುವುದನ್ನು ಕಾಣುತ್ತೇವೆ. ವಾಸನೆ ಎಂದರೆ ನೆನಪುಗಳು, ಏನೇನೋ ಎಮೋಷನ್- ಭಾವಲಹರಿ. ಪುನಃ ಅಘ್ರಾಣಿಸಿದಾಗ ಟೈಮ್ ಟ್ರಾವೆಲ್. ಗತಿಸಿದ ಕಾಲಘಟ್ಟಕ್ಕೆ ಧುತ್ತನೆ ಒಯ್ಯುವ ನೆನಪಿನ ವ್ಯವಸ್ಥೆಯಲ್ಲಿ ವಾಸನೆಗೆ ಒಂದು ವಿಶೇಷ ಜಾಗವಿದೆ.ಹಾಗಾದರೆ, ವಾಸನೆಗೂ ನೆನಪಿಗೂ ಇರುವ ಸಂಬಂಧವನ್ನು ಆಧುನಿಕ ವಿಜ್ಞಾನ ಹೇಗೆ ವಿವರಿಸುತ್ತದೆ? ಅಸಲಿಗೆ ನಾವು ವಾಸನೆಯನ್ನು ಗ್ರಹಿಸುವುದು ಹೇಗೆ? ನಾವು ಉಸಿರಾಡುವ ಗಾಳಿಯಲ್ಲಿ ಬಹುಪಾಲು ನೈಟ್ರೋಜನ್, ಆಮ್ಲಜನಕ ಮತ್ತು ಇಂಗಾಲದ ಡೈಆಕ್ಸೈಡ್ ಮತ್ತು ಅರ್ಗಾನ್. ಈ ನಾಲ್ಕು ಅನಿಲಗಳು ಶೇ. 99ಕ್ಕಿಂತಜಾಸ್ತಿ.
ಈ ಯಾವ ಅನಿಲಕ್ಕೂ ವಾಸನೆಯಿಲ್ಲ. ವಾಸನೆ ಇಲ್ಲ ಎಂದರೇನು ಅರ್ಥ? ಅವು ಮೂಗಿನೊಳಕ್ಕೆ ಹಾಯುವಾಗನಮ್ಮ ಗ್ರಾಹ್ಯ ಅಂಗ ಅವನ್ನು ಗುರುತಿಸುವುದಿಲ್ಲ.
ಅವನ್ನು ವಾಸನೆಯಾಗಿ ಗ್ರಹಿಸಬೇಕಾದ ಅವಶ್ಯಕತೆಯಿಲ್ಲದ್ದರಿಂದ ಅವನ್ನು ಮೂಗು-ವ್ಯವಸ್ಥೆ ವಾಸನೆಯಾಗಿ ಗ್ರಹಿಸುವುದನ್ನು ಕಲಿತಿಲ್ಲ. ಈ ನಾಲ್ಕು ಅನಿಲ ಮಿಶ್ರಣ ಖಾಲಿ ಕ್ಯಾನ್ವಾಸ್ ಇದ್ದಂತೆ. ಇವು ಬಿಟ್ಟು ಉಳಿದ ಯಾವುದೇ ರಾಸಾಯನಿಕಗಳು ವಾಸನೆಗಳಾಗಿ ಗ್ರಹಿಸಲ್ಪಡುವವು. ಆ ಕ್ಯಾನ್ವಾಸಿನ ಮೇಲೆ ವ್ಯಕ್ತವಾಗುವ ಬಣ್ಣಗಳಂತೆ. ಅದೇ ಕಾರಣಕ್ಕೆ ಸಂತೆಯಲ್ಲಿ ನಡೆಯುವುದೆಂದರೆ ವಾಸನೆಗಳ ಸಂಗೀತ ಕಛೇರಿಯಂಥ ಅನುಭವವಾಗುವುದು. ಊರಿಗೆ ಹೋದಾಗಲೆಲ್ಲ ಕುಮಟಾದ ಸಂತೆ ಮತ್ತು ಬೆಂಗಳೂರಿನ ಗಾಂಧಿಬಜಾರಿನಲ್ಲಿ ತಿರುಗಾಡದೇ ಇರಲಾಗುವುದಿಲ್ಲ.
ಏಕೆಂದರೆ ಗ್ರಂಥಿಗೆ ಅಂಗಡಿಗಳ ಮಧ್ಯೆ ನಡೆಯುವಾಗಿನ ವಾಸನೆಯ ಅನುಭವ ಅಮೆರಿಕದ ಬದುಕಿನಲ್ಲಿ ಸಿಗುವು ದಿಲ್ಲ. ವಾಸನೆಯ ಗ್ರಹಿಕೆ ವಿಕಸನದಲ್ಲಿ ಎಲ್ಲ ಪ್ರಾಣಿಗಳಿಗೂ ಅತ್ಯಂತ ಮಹತ್ವದ್ದು. ನಮ್ಮ ಪೂರ್ಜಜರಿಗೆ ಕೂಡ. ಅವರು ಬದುಕಿದ್ದ ಜಗತ್ತು ಅಂಥzಗಿತ್ತು. ಲಕ್ಷ ವರ್ಷ ಹಿಂದಿನ ಜಗತ್ತು- ಪ್ರಾಣಿಗಳಿಂದಾಗಿ, ವಿಷಕಾರಿ ಸಸ್ಯಗಳಿಂದಾಗಿ ಅಪಾಯ ಎಡೆ. ಕಣ್ಣಿಗೆ ಕಾಣದೇ, ಅಡಗಿ ಕುಳಿತ ಭಕ್ಷಕ ಪ್ರಾಣಿಯ ಇರುವನ್ನು ಗ್ರಹಿಸುವುದು ಸಾವು ಬದುಕಿನ ವಿಷಯವಾಗಿತ್ತು. ವಾಸನೆಗಳ ಚಿಕ್ಕ ವ್ಯತ್ಯಾಸ ಗ್ರಹಿಸುವುದು ಕೂಡ ತೀರಾ ಅವಶ್ಯವಿತ್ತು. ಉದಾಹರಣೆಗೆ, ನಾಗರ ಹಾವಿಗೊಂದು ವಾಸನೆಯಿದೆ, ಅದರ ಇರುವು ಅನುಭವಕ್ಕೆ ಬರುತ್ತದೆ. ಅದು ಹೆಚ್ಚು ಕಡಿಮೆ ಭತ್ತ ಮತ್ತು ಅಕ್ಕಿ ಗೊಂದು ವಾಸನೆಗೆ ಹೋಲುವಂಥದ್ದು.
ಸಣ್ಣಕ್ಕಿಯ ವಾಸನೆ, ನಾಗರಹಾವಿನ ವಾಸನೆ ಅವೆರಡೂ ಒಂದೇ ವಾಸನೆ. ಅಕ್ಕಿಯ, ಹುಲ್ಲಿನ ವಾಸನೆ ಬಂದು ಅಲ್ಲೂ ಭತ್ತದ ತ್ರಿ(ರಾಶಿ) ಇಲ್ಲವೆಂದರೆ ಅಲ್ಲಿ ನಾಗರಹಾವಿದೆ ಎಂದು ಎಚ್ಚರವಾಗಬಹುದು. ಆದರೆ ಅಕ್ಕಿಯ ರಾಶಿಯ ಪಕ್ಕ ದಲ್ಲಿ ನಾಗರಹಾವಿದ್ದರೆ ಆ ವ್ಯತ್ಯಾಸವನ್ನು ಕೂಡ ಗ್ರಹಿಸಲು ಸಾಧ್ಯವಾಗುತ್ತದೆ. ಇದು ಸಾವು ಬದುಕಿನ ಪ್ರಶ್ನೆಯಉದಾಹರಣೆ. ಸಾಕಿದ ನಾಯಿ, ಆಕಳು, ಕುರಿ, ಮೇಕೆಯ ಮಂದೆಯ ನಡುವೆ ಹುಲಿಯ ವಾಸನೆಯನ್ನು ಪ್ರತ್ಯೇಕವಾಗಿಗ್ರಹಿಸುವುದು ಅವಶ್ಯವಿತ್ತು. ನಾವು ಎಷ್ಟು ರೀತಿಯ ವಾಸನೆಯನ್ನು ಗ್ರಹಿಸಬವು ಊಹಿಸಿ? ಆರೋಗ್ಯಕರ ಕಿವಿಗೆ 34 ಸಾವಿರ ಟೋನ್- ಧ್ವನಿಗಳನ್ನು ಕೇಳಿಸಿಕೊಳ್ಳವ ಶಕ್ತಿಯಿದೆ.
ಆರೋಗ್ಯಕರ ಕಣ್ಣು ಸುಮಾರು ಹತ್ತು ಲಕ್ಷದಷ್ಟು ಬಣ್ಣವನ್ನು ಪ್ರತ್ಯೇಕಿಸಿ ಗ್ರಹಿಸಬಲ್ಲದು. ಇನ್ನು ವಾಸನೆ? ಒಂದು ಟ್ರಿಲಿಯನ್- ಹತ್ತರ ಹದಿನೆಂಟನೇ ಘಾತ- ಅಷ್ಟು ವೈವಿಧ್ಯದ ವಾಸನೆಯನ್ನು ಗ್ರಹಿಸುವ ಸಾಮರ್ಥ್ಯ ನಮ್ಮಇಂದ್ರಿಯ ವ್ಯವಸ್ಥೆಗೆ ಇದೆ. ಇದು ಉಳಿದ ಯಾವ ಇಂದ್ರಿಯದ ವ್ಯಾಪ್ತಿಗೂ ಹೋಲಿಸುವಂತೆಯೇ ಇಲ್ಲ. ಮೂಗಿನ ರಚನೆಯನ್ನ ಉಸಿರೆಳೆಯುವಾಗ ಗ್ರಹಿಸಿ. ಪ್ರತಿ ಬಾರಿ ಶ್ವಾಸ, ಗಾಳಿ ಆರಾಮಾಗಿ ಶ್ವಾಸಕೋಶಕ್ಕೆ ಹೋಗಬೇಕು.ಆದರೆ ಅಲ್ಲಿ ಎಷ್ಟು ಬೇಕೋ ಅಷ್ಟು ತಿರುವೂ ಬೇಕು.
ಏಕೆಂದರೆ ಆ ತಿರುವುಗಳಲ್ಲಿಯೇ ಟ್ರಿಲಿಯನ್ ವಾಸನೆಗಳನ್ನು ಗ್ರಹಿಸುವ ಕೋಶಗಳಿರುವುದು. ಅಲ್ಲಿ ಈ ವಾಸನೆ ಯೆಂಬ ರಾಸಾಯನಿಕ ಹೋಗಿ, ತಾಗಿ, ರಾಸಾಯನಿಕ ಕ್ರಿಯೆಯಾಗಿ, ಆ ಗ್ರಹಿಕೆ ಮಿದುಳಿಗೆ ವಿದ್ಯುತ್ತಾಗಿ ರವಾನೆಯಾಗಿ, ಅದು ಮಿದುಳಿನಲ್ಲಿ ಸಂಸ್ಕರಿಸಿ ಇಂಥದ್ದೇ ವಾಸನೆ ಎಂದು ತಿಳಿಯುವುದು. ಇದೆಲ್ಲವೂ ಕ್ಷಣಮಾತ್ರದಲ್ಲಿ ಆಗಬೇಕು. ಅಷ್ಟರೊಳಗೆ ಗಾಳಿಯಲ್ಲಿ ಎಲ್ಲಿಯದೋ ಕೊಳೆತ ವಾಸನೆ, ಪಕ್ಕದ ಮನೆಯ ದೋಸೆಯ ವಾಸನೆ ಇತ್ಯಾದಿ ಕ್ಷಣಕ್ಷಣಕ್ಕೆ ಒಂದೊಂದು ವಾಸನೆ. ಅವುಗಳನ್ನೆಲ್ಲ ಪ್ರತ್ಯೇಕಿಸಿ ಒಂದಾದ ಮೇಲೊಂದರಂತೆ ಮತ್ತು ಸಮಾನಾಂತರವಾಗಿ ಸಂಸ್ಕರಿಸುತ್ತಲೇ ಇರಬೇಕು. ಅಬ್ಬಾ, ನಮಗರಿವಿಲ್ಲದಂತೆ ಅದೆಷ್ಟೋ ಕೋಟಿ ಕೆಲಸಗಳು ಒಂದು ಉಸಿರು ಒಳಗೆಳೆದು ಹೊರಬರುವುದರೊಳಗೆ ಸಂಭವಿಸಬೇಕು. ನಿರಂತರ ಪ್ರತಿಕ್ಷಣ ನಡೆಯುತ್ತಲೇ ಇರಬೇಕು. ಅದು ಮೂಗು- ವಾಸನೇಂದ್ರಿಯ.
ಹುಲಿ ಮೊದಲಾದ ಪ್ರಾಣಿಗಳು ಮೂತ್ರ ಸಿಂಪಡಿಸುವುದು ಇತ್ಯಾದಿಯಿಂದ ತಮ್ಮ ಸರಹದ್ದನ್ನು ಗುರುತು ಮಾಡುವುದು ಗೊತ್ತಿರುತ್ತದೆ. ಅಂತೆಯೇ ಮನುಷ್ಯನ ಸರಹದ್ದಿಗೂ, ವಾಸನೆಗೂ ಸಂಬಂಧವಿದೆ. ನಮ್ಮ ಮನೆ, ಬಟ್ಟೆ, ಕಾರು ಇತ್ಯಾದಿಯ ಅನನ್ಯ ವಾಸನೆ ನಮ್ಮ ಇರುವಿನ ಭಾಗವೇ ಆಗಿದೆ. ಅಂತೆಯೇ ವಾಸನೆ ಸಾಂಸ್ಕೃತಿಕವೂ ಹೌದು. ಈಗ ಕೆಲವು ವರ್ಷದ ಹಿಂದೆ ಅಮೆರಿಕದಲ್ಲಿ ಮನೆ ಖರೀದಿಸುವಾಗ ಈಗಾಗಲೇ ವಾಸಿಸುತ್ತಿದ್ದ, ಮಾರಾಟಕ್ಕಿದ್ದ ಮನೆಗಳನ್ನು ಸಂದರ್ಶಿಸುತ್ತಿzವು. ಹಾಗೆ ನೋಡುವಾಗ ಆ ಮನೆಯ ಮಾಲೀಕ ಅಲ್ಲಿ ಇರುವಂತಿಲ್ಲ. ಸಾಮಾನ್ಯವಾಗಿ ಮಾರಾಟಕ್ಕಿರುವ ಮನೆಯಲ್ಲಿ ಯಾರು ವಾಸಿಸುತ್ತಿದ್ದಾರೆ ಎಂದೇ ತಿಳಿಯದ ರೀತಿಯಲ್ಲಿ ರಿಯಲ್ ಎಸ್ಟೇಟ್ ಏಜೆಂಟುಗಳು ಮನೆಯನ್ನು ಶೃಂಗರಿಸಿಟ್ಟಿರುತ್ತಾರೆ.
ಆದರೆ ಅದೇನೇ ಮಾಡಿದರೂ ಮನೆಯ ವಾಸನೆ ಬದಲಿಸಲಿಕ್ಕೆ ಅಷ್ಟು ಸುಲಭದಲ್ಲಿ ಸಾಧ್ಯವಾಗುವುದಿಲ್ಲ. ಈ ಮನೆಯಲ್ಲಿ, ಕೊರಿಯನ್, ಇಂಡಿಯನ್, ಆಫ್ರಿಕನ್ ಹೀಗೆ ಇಂಥ ಸಂಸ್ಕೃತಿಯಲ್ಲಿರುವವರೇ ಇದ್ದಾರೆ ಎಂಬುದು ಮುಂಬಾಗಿಲು ದಾಟುವಾಗಲೇ ವಾಸನೆಯಿಂದ ತಿಳಿದುಬಿಡುತ್ತಿತ್ತು. ಮೃಗಾಲಯದ ಹುಲಿಯ ಎದುರಿಗಿನ ಬೋನಿಗೂ ಹಕ್ಕಿಗಳ ಬೋನಿಗೂ ಇರುವ ವ್ಯತ್ಯಾಸದಂತೆ. ಬಹಳ ಹಿಂದೆ ಅಮೆರಿಕ ಮೊದಲಾದ ಹೊರದೇಶಗಳಿಗೆ ಬರುವ ಭಾರತೀಯರು ತಮ್ಮ ಸಾಂಬಾರ ಪದಾರ್ಥವನ್ನು ಅಡುಗೆಗೆ ಬಳಸುವಾಗ ಹೆದರುತ್ತಿದ್ದರಂತೆ.
ಅವರಿದ್ದದ್ದು ಅಮೆರಿಕನ್ನರ ಮನೆಗಳ ನಡುವೆ. ಅವರ ಅಡುಗೆಯ ವಾಸನೆ ಪ್ರತ್ಯೇಕವಾಗಿ ರಸ್ತೆಗಳಲ್ಲಿ ಹರಡಿ ಕೊಳ್ಳುತ್ತಿತ್ತು. ಅದು ಅವರನ್ನು ಸಾಮಾಜಿಕವಾಗಿ ಪ್ರತ್ಯೇಕಿಸುತ್ತಿತ್ತು, ಅಸಹನೆಗೂ ಕಾರಣವಾಗುತ್ತಿತ್ತು. ಒಟ್ಟಾರೆ ವಾಸನೆ ಎಂಬುದು ಸಂಸ್ಕೃತಿಯೂ, ಗುರುತೂ ಹೌದು. ಈಗ 3 ವರ್ಷದ ಹಿಂದಿನ ಆ ದಿನ ನನಗಿನ್ನೂ ನೆನಪಿದೆ. ಅದೊಂದು ಮುಂಜಾನೆ ಎದ್ದು ಟೂತ್ ಬ್ರಷ್‌ಗೆ ಪೇ ಹಚ್ಚಿ ಹಲ್ಲಿಗಿಟ್ಟುಕೊಳ್ಳುತ್ತಿದ್ದೇನೆ, ಯಾಕೋ ವಿಚಿತ್ರ ವೆನಿಸತೊಡಗಿತು. ಪೇಸ್ಟಿಗೆ ‘ಅಹಾ-ಹಾಹಾ’ ಎಂಬ ಯಾವುದೇ ವಾಸನೆ ತಿಳಿಯುತ್ತಲೇ ಇಲ್ಲ.
ಆ ಕ್ಷಣ ಸಿಡಿಲು ಬಡಿದಂತಾಯಿತು. ತಕ್ಷಣ ಹಿತ್ತಲಿಗೆ ಓಡಿ, ಲಿಂಬು ಗಿಡದ ಎಲೆಯನ್ನು ಚಿವುಟಿ ಮೂಸಿ ನೋಡಿದೆ. ಪಕ್ಕದಲ್ಲಿ ಮಜ್ಜಿಗೆ ಹುಲ್ಲಿತ್ತು, ಕುತ್ತುಂಬರಿ ಸೊಪ್ಪಿತ್ತು. ಊಹುಂ, ಯಾವುದಕ್ಕೂ ವಾಸನೆಯೇ ಇಲ್ಲ. ಮನೆಯೊಳಕ್ಕೆ ಬಂದು ಒಳ್ಳೆಯ ಸೆಂಟ್ ಅನ್ನು ಗಾಳಿಯಲ್ಲಿ ಹಾರಿಸಿ ಮೂಸಿ ನೋಡಿದೆ. ಬರ್ಬರಿ ಸೆಂಟ್‌ಗೆ ವಾಸನೆಯೇ ಇಲ್ಲ.ನನಗಂತೂ ಆ ಕ್ಷಣ ಕೋವಿಡ್ ಬಂದಿದೆ ಎಂಬುದಕ್ಕಿಂತ ದೊಡ್ಡ ಆಘಾತವಾಗಿದ್ದು ವಾಸನೆಯನ್ನು ಕಳೆದುಕೊಂಡಸ್ಥಿತಿಯಿಂದಾಗಿ. ಆ ದಿನ ಏನಿಲ್ಲವೆಂದರೂ ಸುಮಾರು ನೂರು ವಸ್ತುಗಳನ್ನು ಮೂಸಿರಬೇಕು. ನೆಗಡಿಯಾದಾಗವಾಸನೆ ಮಂದವಾಗುವ ಸ್ಥಿತಿಯೇ ಬೇರೆ- ಸಂಪೂರ್ಣ ವಾಸನೆಯೇ ತಿಳಿಯದ ಸ್ಥಿತಿಯೇ ಬೇರೆ. ಜೀವಮಾನವಿಡೀಆಗದ ಅನುಭವ ಅದು. ಅನುಭವಿಸಿದರೆ ನಿಮಗೆ ಗೊತ್ತಿರುತ್ತದೆ. ನಂತರದ ಕೋವಿಡ್ ಸೋಂಕಿನಿಂದಾಗಿ ಕಳೆದು ಕೊಂಡ ವಾಸನಾಶಕ್ತಿ ಮರಳುವಲ್ಲಿಯವರೆಗೆ ಕಂಡಕಂಡದ್ದನ್ನೆ ಮೂಸುವುದೇ ಕಾಯಕವಾಗಿಬಿಟ್ಟಿತ್ತು.
ಅಯ್ಯೋ ನಗಬೇಡಿ. ತಮಾಷೆಗಳಲ್ಲ, ಇಡೀ ಜಗತ್ತಿನ ಸಕಲ ಚರಾಚರ ವಸ್ತುಗಳಿಗೆ ಯಾವುದೇ ವಾಸನೆ ಇಲ್ಲದಿರುವ ವಿಚಿತ್ರ ಲೋಕವೊಂದರ ಅನುಭವವೇ ಇಂದಿಗೂ ನನ್ನ ಕೋವಿಡ್ ನೆನಪುಗಳು. ಆ ಸಮಯದಲ್ಲಿ ನನ್ನನ್ನು ಅತ್ಯಂತ ಕಾಡಿದ್ದು ವಾಸನೆಯನ್ನು ಗ್ರಹಿಸುವ ಸಾಮರ್ಥ್ಯವನ್ನು ಕಳೆದುಕೊಂಡದ್ದು ಕೂಡ ಅಲ್ಲ. ಬದಲಿಗೆ ನನ್ನ ಸುತ್ತಲಿನ ಎಲ್ಲ ವಸ್ತುಗಳು ಏಕಾಏಕಿ ನಿರ್ಭಾವುಕವಾಗಿಬಿಟ್ಟಿದ್ದವು. ಅಜ್ಜಿ ಮಾಡಿ ಕಳುಹಿಸಿದ ಅಪ್ಪೆ ಮಿಡಿಯ ಉಪ್ಪಿನಕಾಯಿ ಮೂಸಿದರೆ ಅಜ್ಜಿ ಮನೆ ನೆನಪಾಗುವುದು ಬಿಡಿ, ಕನಿಷ್ಠ ಸೌಜನ್ಯಕ್ಕೆ ಬಾಯಿನೀರು ಕೂಡ ಬರುತ್ತಿಲ್ಲ. ಏನನ್ನು ಮೂಸಿದರೂ ಅದೇ ನಿರ್ಭಾವುಕ ಕೃತಘ್ನ ಭಾವ. ಅಪಾಯದ ಸ್ಥಿತಿ ಕೂಡ ಹೌದು.
ಮನೆಯ ಯಾವುದೇ ಮಿಥೇನ್ ಲೀಕ್ ಕೂಡ ಗ್ರಹಿಕೆಗೆ ಬರುತ್ತಿಲ್ಲ! ದೇವರೇ, ಕಿವುಡನನ್ನಾದರೂ ಮಾಡು, ಕುರುಡ ನನ್ನಾದರೂ ಮಾಡು, ಮೂಗನ್ನು ಮಾತ್ರ ಇನ್ಯಾವತ್ತೂ ಕಿತ್ತುಕೊಳ್ಳಬೇಡಪ್ಪ ಎಂದು ಅನಿಸಿದ್ದು ಸುಳ್ಳಲ್ಲ! ಮೂಗಿಗೆ ಬಿದ್ದ ವಾಸನೆ, ರಾಸಾಯನಿಕ ಸಂಸ್ಕರಣೆಯಾಗುವುದು ಮಿದುಳಿನ Amygdala Hippocampus ಎಂಬ ಭಾಗದಲ್ಲಿ. ನೆನಪುಗಳು ಮತ್ತು ಭಾವನೆಗಳು ಸಂಸ್ಕರಣೆಯಾಗುವುದು ಕೂಡ ಮಿದುಳಿನ ಇದೇ ಭಾಗದಲ್ಲಿ.
ಎಂದರೆ ನೆನಪು, ಭಾವನೆ ಮತ್ತು ವಾಸನೆ ಇದು ಮೂರೂ ಏಕಕಾಲದಲ್ಲಿ ಒಂದೇ ಕಡೆ ಸಂಸ್ಕಾರವಾಗುವುದು. ಇದರರ್ಥ ನಾವೇನು ವಾಸನೆ ಮೂಸುತ್ತೇವೆಯೋ ಅದು ಆ ಸನ್ನಿವೇಶ, ವಸ್ತುವನ್ನು ಗ್ರಹಿಸುವಲ್ಲಿ ಬಹುಮುಖ್ಯ ವಾದದ್ದು, ಜತೆಯಲ್ಲಿಯೇ ನಡೆಯುವುದು ಎಂದಾಯಿತು. What we smell is what we feel ಎಂಬ ಮಾತಿದೆ. ಅದು ಹೀಗೂ ಸತ್ಯ. ಅಸಂಖ್ಯ ವಾಸನೆಗಳಿಗೆ ದುರ್ವಾಸನೆ, ಸುವಾಸನೆ ಇತ್ಯಾದಿಯ ಆಚೆಗೆ ಈ ಮಹತ್ವವಿದೆ. ಬದುಕುತ್ತಲೇ ವಾಸನೆಗಳನ್ನು ಜಾಗ್ರತವಾಗಿ ಅನುಭವಿಸುವುದು ಮಜಕೂರಿನ ವಿಷಯ. ವಾಸನೆಯ ನಿರಂತರ ಅರಿವಿನ ಜಾಗ್ರತೆ ಇದ್ದರೆ ನೆನಪುಗಳನ್ನು ಯಾವಾಗ ಬೇಕಾದರೂ ಸರಾಗವಾಗಿ ಕರೆದುಬಿಡಬಹುದು.
ನಮ್ಮೆಲ್ಲರ ದೇಹ, ಉಸಿರು, ಬಟ್ಟೆ, ಸೋಪು, ಬಳಸುವ ಸೆಂಟು, ಮನೆ ಹೀಗೆ ವಾಸನೆಗಳು ನಮ್ಮ ಇರುವಿನ ಸಾಕ್ಷ್ಯಗಳು, ಮುಂದೊಂದು ದಿನ ಇನ್ನೊಬ್ಬರ ನೆನಪಾಗಿ ಉಳಿಯುವವು.
ಇದನ್ನೂ ಓದಿ: Shishir Hegde Column: ನಂಬಿಕೆ- ಎರಡು ಕಥೆಗಳು