KGF Chapter 3: ಯಶ್ ಅಭಿಮಾನಿಗಳಿಗೆ ಗುಡ್ನ್ಯೂಸ್; 'ಕೆಜಿಎಫ್ 3' ಬರೋದು ಪಕ್ಕಾ: ಮಾಳವಿಕಾ ಅವಿನಾಶ್ ಕೊಟ್ರು ಬಿಗ್ ಅಪ್ಡೇಟ್
ಯಶ್-ಪ್ರಶಾಂತ್ ನೀಲ್ ಕಾಂಬಿನೇಷ್ನಲ್ಲಿ ಬಂದ ʼಕೆಜಿಎಫ್ʼ ಸರಣಿ ಸ್ಯಾಂಡಲ್ವುಡ್ನ ಲಕ್ ಅನ್ನೇ ಬದಲಿಸಿದ ಚಿತ್ರಗಳು. ಬಾಕ್ಸ್ ಆಫೀಸ್ ಚಿಂದಿ ಉಡಾಯಿಸಿ, ಪ್ಯಾನ್ ಇಂಡಿಯಾ ಪ್ರೇಕ್ಷಕರನ್ನು ಸೆಳೆದ ಈ ಚಿತ್ರದ 3ನೇ ಭಾಗ ಬರುತ್ತಾ ಎನ್ನುವ ಅಭಿಮಾನಿಗಳ ಮಿಲಿಯನ್ ಡಾಲರ್ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ.
ಬೆಂಗಳೂರು: ಇಡೀ ಭಾರತೀಯ ಚಿತ್ರರಂಗ ಅಷ್ಟೇಕೆ ಜಗತ್ತಿನ ಸಿನಿ ರಸಿಕರು ಕನ್ನಡದತ್ತ ತಿರು ನೋಡುವಂತೆ ಮಾಡಿದ ಸ್ಯಾಂಡಲ್ವುಡ್ನ ಹೆಮ್ಮೆಯ ಸಿನಿಮಾ ʼಕೆಜಿಎಫ್ʼ (KGF) ಸರಣಿ. ಹೊಂಬಾಳೆ ಫಿಲ್ಮ್ಸ್-ಪ್ರಶಾಂತ್ ನೀಲ್-ಯಶ್- ಈ ಡೆಡ್ಲಿ ಕಾಂಬಿನೇಷ್ನಲ್ಲಿ ಬಂದ ʼಕೆಜಿಎಫ್ʼ ಸರಣಿ ಬಾಕ್ಸ್ ಆಫೀಸ್ನಲ್ಲಿ ದೂಳೆಬ್ಬಿಸಿತ್ತು. ಚಿತ್ರದ 2 ಭಾಗಗಳು ಸ್ಯಾಂಡಲ್ವುಡ್ ಮತ್ತೊಮ್ಮೆ ಜಾಗತಿಕವಾಗಿ ಮಿಂಚುವಂತೆ ಮಾಡಿದ್ದವು. ಕಮರ್ಶಿಯಲ್ ಸಿಮಾಗಳಿಗೆ ಹೊಸ ಭಾಷ್ಯ ಬರೆದ ʼಕೆಜಿಎಫ್ʼ ಸರಣಿ ಚಿತ್ರಗಳನ್ನು ಮೆಚ್ಚಿಕೊಂಡವರಿಗೆ, ಯಶ್ ಅಭಿಮಾನಿಗಳಿಗೆ ಇದೀಗ ಗುಡ್ನ್ಯೂಸ್ ಹೊರ ಬಿದ್ದಿದೆ. ʼಕೆಜಿಎಫ್ʼ, ʼಕೆಜಿಎಫ್ 2ʼ ಕಣ್ತುಂಬಿಕೊಂಡು 3ನೇ (KGF Chapter 3) ಭಾಗಕ್ಕಾಗಿ ತುದಿಗಾಲಿನಲ್ಲಿ ಕಾಯುತ್ತಿದ್ದವರಿಗೆ ಹಿರಿಯ ನಟಿ, ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಮಾಳವಿಕಾ ಅವಿನಾಶ್ (Malavika Avinash) ಸಿಹಿ ಸುದ್ದಿ ನೀಡಿದ್ದಾರೆ.
ಕಿರಿಕ್ ಕೀರ್ತಿ ಅವರೊಂದಿಗೆ ನಡೆದ ಸಂದರ್ಶನದಲ್ಲಿ ಮಾತನಾಡಿದ ಮಾಳವಿಕಾ ಅವರು ಯಶ್ ಅಭಿಮಾನಿಗಳಿಗೆ ರೋಮಾಂಚನಕಾರಿ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. ಆ ಮೂಲಕ ʼಕೆಜಿಎಫ್ 3ʼ ಬಗ್ಗೆ ಹರಿದಾಡುತ್ತಿರುವ ವದಂತಿಗಳಿಗೆ ಫುಲ್ಸ್ಟಾಪ್ ಇಟ್ಟು ಈ ಸುದ್ದಿ ಖಚಿತ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ.
ಮಾಳವಿಕಾ ಹೇಳಿದ್ದೇನು?
ʼಕೆಜಿಎಫ್ 3ʼ ಚಿತ್ರದ ಶೂಟಿಂಗ್ ಈಗಾಗಲೇ ಆರಂಭವಾಗಿದ್ದು, ಅದರಲ್ಲಿ ಪಾಲ್ಗೊಂಡಿದ್ದಾಗಿ ಮಾಳವಿಕಾ ತಿಳಿಸಿದ್ದಾರೆ. ʼʼಕೆಜಿಎಫ್ 3 ಬರುತ್ತಾ?ʼʼ ಎನ್ನುವ ಕಿರಿಕ್ ಕೀರ್ತಿ ಪ್ರಶ್ನೆಗೆ ಉತ್ತರಿಸಿದ ಅವರು ಈ ಬಿಗ್ ಅಪ್ಡೇಟ್ ನೀಡಿದ್ದಾರೆ. ''ಕೆಜಿಎಫ್ 3ʼ ಶೂಟಿಂಗ್ನಲ್ಲಿ ನಾನು ಪಾಲ್ಗೊಂಡಿದ್ದೇನೆ. ಆ ಸೆಟ್ ಹೇಗಿತ್ತು ಎಂದರೆ ನಾನು ಒಂದು ಕ್ಷಣ ಬೆರಗಾಗಿದ್ದೆ. ಲೈಬ್ರರಿ ಥರ ಇತ್ತು. ಹಾಲಿವುಡ್ನ ʼಮಮ್ಮಿʼ ಚಿತ್ರದ ರೀತಿ ಇದರ ಸೆಟ್ ಇತ್ತು. ನನ್ನನ್ನು, ಪ್ರಕಾಶ್ ರೈ, ನಾಗಭರಣ ಅವರನ್ನು ಕರೆಸಿ ಪ್ರಶಾಂತ್ ನೀಲ್ ಶೂಟಿಂಗ್ ನಡೆಸಿದ್ದಾರೆ. ಪ್ರಶಾಂತ್ ನೀಲ್ ಕಲ್ಪನೆ ಬೇರೆಯದೇ ಲೆವಲ್ನಲ್ಲಿದೆʼʼ ಎಂದು ಮಾಳವಿಕಾ ಹೇಳಿದ್ದಾರೆ. ಈ ಮೂಲಕ ʼಕೆಜಿಎಫ್ 3ʼ ಕನಸಿಗೆ ರೆಕ್ಕೆ-ಪುಕ್ಕ ತೊಡಿಸಿದ್ದಾರೆ.
ಇದರ ಜತೆಗೆ ʼಕೆಜಿಎಫ್ʼ ಹೇಗೆ ಸ್ಯಾಂಡಲ್ವುಡ್ನ ಲಕ್ ಅನ್ನೇ ಬದಲಾಯಿಸಿತು ಎಂಬುದರ ಕುರಿತೂ ಮಾತನಾಡಿದ್ದಾರೆ. ʼʼಈ ಹಿಂದೆ, ತಮಿಳು, ತೆಲುಗು ಇಂಡಸ್ಟ್ರಿಗೆ ಹೋದಾಗ ಕನ್ನಡವಾ ಎಂದು ಒಂದು ರೀತಿಯಲ್ಲಿ ಕೇಳುತ್ತಿದ್ದರು. ಆದರೆ ಈಗ ಇಡೀ ಪ್ರಪಂಚ ರಾಕಿ ಭಾಯಿ ಎಂದರೆ ತಿರುಗಿ ನೋಡುತ್ತೆʼʼ ಎಂದಿದ್ದಾರೆ.
ʼಕೆಜಿಎಫ್ 2ʼನಲ್ಲೇ ಹಿಂಟ್ ಸಿಕ್ಕಿತ್ತು
ಹಾಗೆ ನೋಡಿದರೆ ʼಕೆಜಿಎಫ್ 3ʼ ಬಗ್ಗೆ 2ನೇ ಭಾಗದ ಕೊನೆಯಲ್ಲಿ ಸುಳಿವು ಸಿಕ್ಕಿತ್ತು. ನಿರ್ದೇಶಕ ಪ್ರಶಾಂತ್ ನೀಲ್ ಕೂಡ ಈ ಹಿಂದೆ ಪಾರ್ಟ್ 3 ಬಂದೇ ಬರುತ್ತದೆ ಎಂದಿದ್ದರು. ಸದ್ಯ ಚಿತ್ರತಂಡ ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಬೇಕಿದೆ.
2018ರಲ್ಲಿ ʼಕೆಜಿಎಫ್: ಚಾಪ್ಟರ್ 1ʼ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಕಂಡಿತ್ತು. ಕನ್ನಡದ ಜತೆಗೆ ಹಿಂದಿ ಸೇರಿದಂತೆ ಪರಭಾಷಿಕರು ಎರಡೂ ಕೈ ಚಾಚಿ ಸ್ವಾಗತಿಸಿದ್ದರು. ಸುಮಾರು 80 ಕೋಟಿ ರೂ. ಬವಜೆಟ್ನಲ್ಲಿ ತಯಾರಾದ ಚಿತ್ರ 250 ಕೋಟಿ ರೂ. ಬಾಚಿಕೊಂಡಿತ್ತು. ಇನ್ನು ʼಕೆಜಿಎಫ್: ಚಾಪ್ಟರ್ 2ʼ 2022ರಲ್ಲಿ ಬಿಡುಗಡೆಯಾಗಿ ಗಲ್ಲಾ ಪೆಟ್ಟಿಗೆ ದೋಚಿತ್ತು. ಪ್ರಪಂಚದಾದ್ಯಂತ ಬರೋಬ್ಬರಿ 1,250 ಕೋಟಿ ರೂ. ಗಳಿಸಿದ ಈ ಚಿತ್ರ ಈಗಲೂ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಟಾಪ್ 5 ಭಾರತೀಯ ಚಿತ್ರಗಳ ಲಿಸ್ಟ್ನಲ್ಲಿದೆ. ಪ್ರಶಾಂತ್ ನೀಲ್ ನಿರ್ದೇಶನ, ಯಶ್ ಅಭಿನಯ, ರವಿ ಬಸ್ರೂರು ಸಂಗೀತ, ಶ್ರೀನಿಧಿ ಶೆಟ್ಟಿ ಚೆಲುವು, ಭುವನ್ ಗೌಡ ಕ್ಯಾಮೆರಾ, ಬಿಗಿಯಾದ ಕಥೆ, ಚಿತ್ರಕಥೆ, ತಾಯಿ ಸೆಂಟಿಮೆಂಟ್, ಆ್ಯಕ್ಷನ್ ದೃಶ್ಯಗಳು, ಚುರುಕಾದ ಸಂಭಾಷಣೆ...ಹೀಗೆ ಚಿತ್ರಗಳ ಗೆಲುವಿನಲ್ಲಿ ಅನೇಕ ಅಂಶಗಳು ಪ್ರಭಾವ ಬೀರಿದ್ದವು. ಅಲ್ಲದೆ ಅನಂತ್ನಾಗ್, ಮಾಳವಿಕಾ ಅವಿನಾಶ್, ಅರ್ಚನಾ ಜೋಯಿಸ್, ಸಂಜಯ್ ದತ್, ರವೀನಾ ಟಂಡನ್, ಪ್ರಕಾಶ್ ರೈ, ವಸಿಷ್ಠ ಸಿಂಹ, ನಾಗಭರಣ, ಅಚ್ಯುತ್ ಕುಮಾರ್, ಗೋವಿಂದ ಗೌಡ, ರಾಮಚಂದ್ರ ರಾಜು. ತಾರಕ್ ಪೊನ್ನಪ್ಪ ಮುಂತಾದವರ ಅಭಿನಯವೂ ಪ್ಲಸ್ ಪಾಯಿಂಟ್ ಆಗಿತ್ತು.
ಈ ಸುದ್ದಿಯನ್ನೂ ಓದಿ: Yash Birthday: ಬರ್ತ್ಡೇ ಬಾಯ್ ಯಶ್ ಈಗ ಗ್ಲೋಬಲ್ ಸ್ಟಾರ್; 'ಟಾಕ್ಸಿಕ್' ಜತೆ ಒಪ್ಪಿಕೊಂಡ ಇತರ ಚಿತ್ರಗಳು ಯಾವ್ಯಾವು?
ʼಕೆಜಿಎಫ್ 3ʼ ಭಾರತೀಯ ಚಿತ್ರರಂಗದಲ್ಲೇ ಮತ್ತೊಂದು ಮೈಲಿಗಲ್ಲು ನೆಡುವುದರಲ್ಲಿ ಸಂದೇಹವೇ ಇಲ್ಲ ಎನ್ನುವ ಲೆಕ್ಕಾಚಾರ ಈಗಲೇ ಆರಂಭವಾಗಿದೆ.