Tax Benefits: ಹಿರಿಯ ನಾಗರಿಕರಿಗೆ ಟ್ಯಾಕ್ಸ್ ಬೆನಿಫಿಟ್; ಹೆಚ್ಚು ಬಡ್ಡಿ ಆದಾಯ ಎಲ್ಲಿದೆ?
ಭಾರತದಲ್ಲಿ ಹಿರಿಯ ನಾಗರಿಕರಿಗೆ ಟ್ಯಾಕ್ಸ್ ಬೆನಿಫಿಟ್‌ಗಳು ಇತರರಿಗೆ ಹೋಲಿಸಿದರೆ ಜಾಸ್ತಿ. 2025ರ ಬಜೆಟ್‌ನಲ್ಲಿ ಎಲ್ಲ ಭಾರತೀಯರಿಗೂ ಹೊಸ ತೆರಿಗೆ ಪದ್ಧತಿಯಡಿಯಲ್ಲಿ ಆದಾಯ ತೆರಿಗೆ ವಿನಾಯಿತಿ ನೀಡಲಾಗಿದೆ. ಹಿರಿಯ ನಾಗರಿಕರೂ ಇದರ ಪ್ರಯೋಜನವನ್ನು ಪಡೆಯಬಹುದು. ಅದರ ಜತೆಗೆ ಹಿರಿಯ ನಾಗರಿಕರಿಗೆ ಹೆಚ್ಚುವರಿ ತೆರಿಗೆ ಬೆನಿಫಿಟ್‌ಗಳನ್ನೂ ನೀಡಲಾಗಿದೆ. ಆ ಕುರಿತಾದ ವಿವರ ಇಲ್ಲಿದೆ.

ಸಾಂದರ್ಭಿಕ ಚಿತ್ರ.

ಬೆಂಗಳೂರು: ಭಾರತದಲ್ಲಿ ಹಿರಿಯ ನಾಗರಿಕರಿಗೆ ಟ್ಯಾಕ್ಸ್ ಬೆನಿಫಿಟ್‌ಗಳು ಇತರರಿಗೆ ಹೋಲಿಸಿದರೆ ಜಾಸ್ತಿ. 2025ರ ಬಜೆಟ್‌ನಲ್ಲಿ ಎಲ್ಲ ಭಾರತೀಯರಿಗೂ ವಾರ್ಷಿಕ 12 ಲಕ್ಷ ರುಪಾಯಿ ತನಕ ಆದಾಯಕ್ಕೆ ಹೊಸ ತೆರಿಗೆ ಪದ್ಧತಿಯಡಿಯಲ್ಲಿ ಯಾವುದೇ ಆದಾಯ ತೆರಿಗೆ ಕಟ್ಟಬೇಕಾಗಿ ಬರುವುದಿಲ್ಲ (Tax Benefits). ಹಿರಿಯ ನಾಗರಿಕರೂ ಇದರ ಪ್ರಯೋಜನವನ್ನು ಪಡೆಯಬಹುದು. ಅದರ ಜತೆಗೆ ಹಿರಿಯ ನಾಗರಿಕರಿಗೆ ಹೆಚ್ಚುವರಿ ತೆರಿಗೆ ಬೆನಿಫಿಟ್‌ಗಳನ್ನೂ ನೀಡಲಾಗಿದೆ. ಅವುಗಳ ವಿವರಗಳನ್ನು ತಿಳಿದುಕೊಳ್ಳೋಣ. ಮೊದಲಿಗೆ ಆದಾಯ ತೆರಿಗೆಯ ಸ್ಲ್ಯಾಬ್ ಹಿರಿಯ ನಾಗರಿಕರಿಗೆ ಹೇಗೆ ಇರುತ್ತದೆ ಎಂಬುದನ್ನು ನೋಡೋಣ.
ತೆರಿಗೆ ಇಲಾಖೆಯು ಜನರನ್ನು 3 ವಿಧವಾಗಿ ವಿಂಗಡಿಸಿದೆ. 60 ವರ್ಷ ವಯಸ್ಸಿನ ಒಳಗಿರುವವರು, 60 ವರ್ಷದಿಂದ 79 ವರ್ಷ ವಯಸ್ಸಿನ ಹಿರಿಯ ನಾಗರಿಕರು ಮತ್ತು 80 ವರ್ಷ ಮೇಲ್ಪಟ್ಟ ಅತಿ ಹಿರಿಯರು ಎಂದು ವಿಂಗಡಿಸಿದೆ.
60 ವರ್ಷ ಮೇಲ್ಪಟ್ಟವರು ಹಳೆಯ ಅಥವಾ ಹೊಸ ತೆರಿಗೆ ಪದ್ಧತಿಯ ಪ್ರಕಾರ ತೆರಿಗೆ ಪಾವತಿಸಬಹುದು. ಹೊಸ ತೆರಿಗೆ ಪದ್ಧತಿಯಲ್ಲಿ ಹಿರಿಯ ನಾಗರಿಕರು ತೆರಿಗೆಯಲ್ಲಿ ರಿಯಾಯಿತಿ, ಡಿಡಕ್ಷನ್‌ಗಳನ್ನು ಪಡೆಯಲು ಸೆಕ್ಷನ್ 115 ಬಿಎಸಿ ಅಡಿಯಲ್ಲಿ ಕ್ಲೇಮ್ ಮಾಡಿಕೊಳ್ಳಬಹುದು.
ಆದಾಯ ತೆರಿಗೆ ಇಲಾಖೆಯು 60ರಿಂದ 79 ವರ್ಷ ವಯಸ್ಸಿನ ಹಿರಿಯ ನಾಗರಿಕರಿಗೆ, ವಾರ್ಷಿಕ 3 ಲಕ್ಷ ರುಪಾಯಿ ತನಕ ಆದಾಯಕ್ಕೆ ತೆರಿಗೆ ವಿನಾಯಿತಿಯನ್ನು ನೀಡಿದೆ. 80 ವರ್ಷ ಮೇಲ್ಪಟ್ಟವರಿಗೆ 5 ಲಕ್ಷ ರುಪಾಯಿ ತನಕ ಆದಾಯ ತೆರಿಗೆ ವಿನಾಯಿತಿಯನ್ನು ನೀಡಿದೆ.
ಹೊಸ ತೆರಿಗೆ ಪದ್ಧತಿಯಲ್ಲಿ ವಾರ್ಷಿಕ 3 ಲಕ್ಷ ರುಪಾಯಿಯಿಂದ 7 ಲಕ್ಷ ರುಪಾಯಿ ತನಕದ ಆದಾಯಕ್ಕೆ 5%, 7ರಿಂದ 10 ಲಕ್ಷ ರುಪಾಯಿ ಆದಾಯಕ್ಕೆ 10%, 10 ಲಕ್ಷ ರುಪಾಯಿಗಳಿಂದ 12 ಲಕ್ಷ ರುಪಾಯಿ ಆದಾಯಕ್ಕೆ 15%, 12 ಲಕ್ಷದಿಂದ 15 ಲಕ್ಷ ರುಪಾಯಿ ತನಕ ಆದಾಯಕ್ಕೆ 20%, 15 ಲಕ್ಷದಿಂದ 50 ಲಕ್ಷ ರುಪಾಯಿ ತನಕ ಆದಾಯಕ್ಕೆ 30%, 50 ಲಕ್ಷ ರುಪಾಯಿ ಮೇಲ್ಪಟ್ಟ ಅದಾಯಕ್ಕೆ 30% ತೆರಿಗೆ ಇರುತ್ತದೆ.
ನೆನಪಿಡಿ, ಟ್ಯಾಕ್ಸ್ ದರದ ಸ್ಲ್ಯಾಬ್‌ಗಳು ವಾರ್ಷಿಕ 12 ಲಕ್ಷ ರುಪಾಯಿಗಿಂತ ಮೇಲಿನ ಆದಾಯ ಇರುವವರಿಗೆ ಮಾತ್ರ ಅನ್ವಯಿಸುತ್ತದೆ. ಒಂದು ವೇಳೆ 12 ಲಕ್ಷ ರುಪಾಯಿಯ ಒಳಗೆ ಆದಾಯ ಇದ್ದರೆ ಆದಾಯ ತೆರಿಗೆ ಇರುವುದಿಲ್ಲ.
ಹಳೆ ತೆರಿಗೆ ಪದ್ಧತಿಯಲ್ಲಿ 3 ಲಕ್ಷದಿಂದ 5 ಲಕ್ಷದ ತನಕ 5%, 5ರಿಂದ 10 ಲಕ್ಷದ ತನಕ 20%, 10 ಲಕ್ಷ ರುಪಾಯಿಗಳಿಂದ 30% ತೆರಿಗೆಯ ಸ್ಲ್ಯಾಬ್ ಇದೆ. ಹಿರಿಯ ನಾಗರಿಕರ ವಾರ್ಷಿಕ ಆದಾಯ 4 ಲಕ್ಷ ರುಪಾಯಿಯ ಒಳಗಿದ್ದರೆ, ಐಟಿ ರಿಟರ್ನ್ಸ್ ಸಲ್ಲಿಸುವುದು ಕೂಡ ಕಡ್ಡಾಯವಲ್ಲ.
ಹಿರಿಯ ನಾಗರಿಕರು ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80 ಡಿ ಅಡಿಯಲ್ಲಿ ಆರೋಗ್ಯ ವಿಮೆ ಪ್ರೀಮಿಯಂ ಮತ್ತು ವೈದ್ಯಕೀಯ ವೆಚ್ಚಗಳಿಗೆ ತೆರಿಗೆ ವಿನಾಯಿತಿಯನ್ನು ಪಡೆಯಬಹುದು. 2025ರ ಕೇಂದ್ರ ಬಜೆಟ್‌ನಲ್ಲಿ ಹಿರಿಯ ನಾಗರಿಕರಿಗೆ ಕೆಲವು ಬೆನಿಫಿಟ್‌ಗಳನ್ನು ನೀಡಲಾಗಿದೆ. ಅವುಗಳನ್ನು ತಿಳಿಯೋಣ.
ಬಜೆಟ್‌ನಲ್ಲಿ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80 CCA ಗೆ ತಿದ್ದುಪಡಿ ತರಲಾಗಿದ್ದು, 2024ರ ಆಗಸ್ಟ್ 29ರ ಬಳಿಕ ನ್ಯಾಶನಲ್ ಸೇವಿಂಗ್ಸ್ ಸ್ಕೀಮ್ ಅಥವಾ ಎನ್‌ಎಸ್‌ಎಸ್‌ನಿಂದ ವಿತ್ ಡ್ರಾವಲ್ ಮಾಡುವ ಹಿರಿಯ ನಾಗರಿಕರಿಗೆ ತೆರಿಗೆ ಇರುವುದಿಲ್ಲ.
ಬಜೆಟ್‌ನಲ್ಲಿ ಹಿರಿಯ ನಾಗರಿಕರಿಗೆ ಬಡ್ಡಿಆದಾಯಕ್ಕೆ ಸಂಬಂಧಿಸಿದ ಟಿಡಿಎಸ್ ಮಿತಿಯನ್ನು ವಾರ್ಷಿಕ 50,000 ರುಪಾಯಿಗಳಿಂದ 1 ಲಕ್ಷ ರುಪಾಯಿಗೆ ಏರಿಸಲಾಗಿದೆ. ಆದರೆ ಸ್ಟಾಕ್ ಇನ್ವೆಸ್ಟ್‌ಮೆಂಟ್ ಆದಾಯಕ್ಕೆ ಇದು ಅನ್ವಯಿಸುವುದಿಲ್ಲ. 2025ರ ಏಪ್ರಿಲ್ 1ರಿಂದ ಇದು ಅನ್ವಯವಾಗುತ್ತದೆ. ಹಿರಿಯ ನಾಗರಿಕರಿಗೆ 2025ರಲ್ಲಿ ಉತ್ತಮವಾದ 5 ಇನ್ವೆಸ್ಟ್‌ಮೆಂಟ್ ಪ್ಲಾನ್‌ಗಳ ಬಗ್ಗೆ ತಿಳಿಯೋಣ.
ಭಾರತದಲ್ಲಿ ಹಿರಿಯ ನಾಗರಿಕರಿಗೆ ಹಲವಾರು ಉಳಿತಾಯ ಯೋಜನೆಗಳು ಲಭ್ಯವಿದೆ. ಅವುಗಳು ಆಕರ್ಷಕವಾಗಿಯೂ ಇವೆ.
ಮೊದಲನೆಯದಾಗಿ ಸೀನಿಯರ್ ಸಿಟಿಜನ್ ಸೇವಿಂಗ್ಸ್ ಸ್ಕೀಮ್ (SCSS) ಬಗ್ಗೆ ತಿಳಿಯೋಣ. ಈ ಯೋಜನೆ ಅತ್ಯಂತ ಸುರಕ್ಷಿತವಾಗಿದ್ದು ರೆಗ್ಯುಲರ್ ಇನ್‌ಕಮ್ ನೀಡುತ್ತದೆ. ಭಾರತ ಸರಕಾರವೇ ಇದಕ್ಕೆ ಗ್ಯಾರಂಟಿ ಕೊಡುತ್ತದೆ. 60 ವರ್ಷ ಮೇಲ್ಪಟ್ಟವರು ಇದರಲ್ಲಿ ಹೂಡಿಕೆ ಮಾಡಬಹುದು. ಈಗ ಇದರ ಬಡ್ಡಿ ದರ 8.2%. ಪ್ರತಿ ಮೂರು ತಿಂಗಳಿಗೊಮ್ಮೆ ಬಡ್ಡಿ ಪಡೆಯಬಹುದು. ಇದರಲ್ಲಿ ಕನಿಷ್ಠ 1,000 ರುಪಾಯಿ ಹಾಗೂ ಗರಿಷ್ಠ 30 ಲಕ್ಷ ರುಪಾಯಿ ಇನ್ವೆಸ್ಟ್ ಮಾಡಬಹುದು. ಈ ಯೋಜನೆಯ ಗರಿಷ್ಠ ಅವಧಿ 5 ವರ್ಷಗಳು. ಮತ್ತೆ 3 ವರ್ಷ ವಿಸ್ತರಿಸಬಹುದು. ಪೋಸ್ಟ್ ಅಫೀಸ್, ಪಬ್ಲಿಕ್, ಪ್ರೈವೇಟ್ ಬ್ಯಾಂಕ್‌ಗಳಲ್ಲಿ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.
ಎರಡನೆಯದಾಗಿ ಪ್ರಧಾಮ ಮಂತ್ರಿ ವಯ ವಂದನ ಪಿಂಚಣಿ ಯೋಜನೆ. ಇದರಲ್ಲಿ 60 ವರ್ಷ ಮೇಲಿನವರು ಹೂಡಿಕೆ ಮಾಡಬಹುದು. ಇದರಲ್ಲಿ 8%ರಿಂದ 8.3% ತನಕ ಬಡ್ಡಿ ಆದಾಯವನ್ನು ಪಡೆಯಬಹುದು. 1.15 ಲಕ್ಷ ರುಪಾಯಿಯಿಂದ 7.5 ಲಕ್ಷ ರುಪಾಯಿ ತನಕ ಹೂಡಿಕೆ ಮಾಡಬಹುದು. ಈ ಪಾಲಿಸಿಯ ಅವಧಿ 10 ವರ್ಷಗಳಾಗಿದೆ. ಉಳಿದಂತೆ ಪೋಸ್ಟ್ ಆಫೀಸ್ ಮಂತ್ಲಿ ಇನ್‌ಕಮ್ ಸ್ಕೀಮ್‌ನಲ್ಲಿ 7.4% ಬಡ್ಡಿ ಆದಾಯ ಸಿಗುತ್ತದೆ.