ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ

ಮೃತ ತಾಯಿಯ ಆಶೀರ್ವಾದ ಪಡೆದು ಪರೀಕ್ಷೆ ಬರೆದ ಪುತ್ರ; ಭಾವುಕ ಕ್ಷಣಕ್ಕೆ ನೆಟ್ಟಿಗರು ಸಾಕ್ಷಿ

ತಮಿಳುನಾಡಿನಲ್ಲಿ ದ್ವಿತೀಯ ಪಿಯುಸಿ ಪಬ್ಲಿಕ್‌ ಪರೀಕ್ಷೆ ಆರಂಭವಾಗಿದೆ. ಈ ಮಧ್ಯೆ ತಿರುನ್ವೇಲಿ ಜಿಲ್ಲೆಯ ವಲ್ಲಿಯೂರಿನಲ್ಲಿ ಹೈದತಸ್ಪರ್ಶಿ ಘಟನೆಯೊಂದು ನಡೆದಿದೆ. ಪರೀಕ್ಷೆ ಆರಂಭಕ್ಕೂ ಮೊದಲು ಸುನಿಲ್‌ ಕುಮಾರ್‌ ಎಂಬ ವಿದ್ಯಾರ್ಥಿಯ ತಾಯಿ ಮೃತಪಟ್ಟಿದ್ದರು. ಈ ನೋವಿನಲ್ಲಿಯೂ ಪರೀಕ್ಷೆ ಬರೆದು ತಾಯಿಯ ಕನಸು ನನಸಾಗಿಸಲು ಮುಂದಾಗಿದ್ದಾನೆ.

ಮೃತ ತಾಯಿಯ ಆಶೀರ್ವಾದ ಪಡೆದು ಪರೀಕ್ಷೆ ಬರೆದ ಪುತ್ರ

ಸಾಂದರ್ಭಿಕ ಚಿತ್ರ.

Profile Ramesh B Mar 4, 2025 9:56 PM

ಚೆನ್ನೈ: ತಮಿಳುನಾಡಿನಲ್ಲಿ ದ್ವಿತೀಯ ಪಿಯುಸಿ ಪಬ್ಲಿಕ್‌ ಪರೀಕ್ಷೆ ಆರಂಭವಾಗಿದೆ. ವಿದ್ಯಾರ್ಥಿಗಳೆಲ್ಲ ಉತ್ತಮ ಭವಿಷ್ಯ ಕಟ್ಟಿಕೊಳ್ಳಲು ಅಡಿಪಾಯ ಎನಿಸಿಕೊಂಡಿರುವ ಈ ಪರೀಕ್ಷೆಗೆ ಸಿದ್ಧತೆ ನಡೆಸುತಿದ್ದಾರೆ. ಈ ಮಧ್ಯೆ ತಿರುನ್ವೇಲಿ ಜಿಲ್ಲೆಯ ವಲ್ಲಿಯೂರು ಭಾವುಕ ಕ್ಷಣವೊಂದಕ್ಕೆ ಸಾಕ್ಷಿಯಾಗಿದೆ. ಪರೀಕ್ಷೆ ಆರಂಭಕ್ಕೂ ಮೊದಲು ಸುನಿಲ್‌ ಕುಮಾರ್‌ (Sunilkumar) ಎಂಬ ವಿದ್ಯಾರ್ಥಿಯ ತಾಯಿ ಮೃತಪಟ್ಟಿದ್ದಾರೆ. ಅನುದಾನಿತ ಶಾಲೆಯ ವಿದ್ಯಾರ್ಥಿಯಾಗಿರುವ ಆತ ಈ ದುಃಖದ ನಡುವೆಯೂ ತಮಿಳು ಪರೀಕ್ಷೆ ಬರೆದು ಶಿಕ್ಷಣದ ಮಹತ್ವ ಸಾರಿದ್ದಾನೆ. ಪರೀಕ್ಷೆಗೆ ತೆರೆಳುವ ಮುನ್ನ ಮೃತ ತಾಯಿಯ ಕಾಲಿಗೆರಗಿ ಆಶೀರ್ವಾದ ಪಡೆದಿದ್ದಾನೆ. ಸದ್ಯ ಈ ಹೃದಯಸ್ಪರ್ಶಿ ದೃಶ್ಯ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದು, (Viral News) ನೆಟ್ಟಿಗರು ಭಾವುಕರಾಗಿದ್ದಾರೆ.

ಘಟನೆಯ ವಿವರ

ಮಂಗಳವಾರ (ಮಾ. 4) ಬೆಳಗ್ಗೆ ಸುನಿಲ್‌ ಕುಮಾರ್‌ನ ತಾಯಿ ಸುಬ್ಬುಲಕ್ಷ್ಮೀ (40) ಮೃತಪಟ್ಟಿದ್ದರು. ಹೃದ್ರೋಗದಿಂದ ಬಳಲುತ್ತಿದ್ದ ಅವರು ಕುಸಿದು ಬಿದ್ದು ಇಹಲೋಕ ತ್ಯಜಿಸಿದ್ದರು. ಪರೀಕ್ಷೆಗಾಗಿ ಹಗಲಿರುಳು ಓದಿ ಸಿದ್ಧನಾಗಿದ್ದ ಸುನಿಲ್‌ ಕುಮಾರ್‌ ಇನ್ನೇನು ಶಾಲೆಗೆ ಹೊರಡಬೇಕು ಎನ್ನುವಷ್ಟರಲ್ಲಿ ಈ ದುರಂತ ನಡೆದಿತ್ತು. 6 ವರ್ಷಗಳ ಹಿಂದೆ ಪತಿಯನ್ನು ಕಳೆದುಕೊಂಡಿದ್ದ ಸುಬ್ಬುಲಕ್ಷ್ಮೀ ಒಬ್ಬರೇ ಸುನಿಲ್‌ ಕುಮಾರ್‌ ಮತ್ತು ಆತನ ಸಹೋದರಿ ಯುವಹಾಸಿನಿಯನ್ನು ಸಾಕುತಿದ್ದರು.



ಶಿಕ್ಷಣ ಎನ್ನುವುದು ತಾಯಿಯ ಬಹುದೊಡ್ಡ ಕನಸು ಎಂದು ಅರಿತಿದ್ದ ಸುನಿಲ್‌ ಕುಮಾರ್‌ ಈ ನೋವಿನ ವೇಳೆಯಲ್ಲಿಯೂ ಬಹುದೊಡ್ಡ ನಿರ್ಧಾರಕ್ಕೆ ಬಂದಿದ್ದ. ಅದರಂತೆ ತಾಯಿಯ ಕಾಲಿಗೆ ಎರಗಿ, ಬರುತಿದ್ದ ಕಣ್ಣೀರನ್ನು ಒರೆಸಿಕೊಂಡು ಶಾಲೆಗೆ ತೆರಳಿ ಪರೀಕ್ಷೆ ಬರೆದಿದ್ದಾನೆ. ಪರೀಕ್ಷೆ ಮುಗಿಸಿ ಮನೆಗೆ ಮರಳಿದ ಬಳಿಕ ತಾಯಿಯ ಅಂತಿಮ ವಿಧಿ ವಿಧಾನ ನೆರವೇರಿಸಿದ್ದಾನೆ. ಈ ವೇಳೆ ಆತನ ಸಹಪಾಠಿಗಳು ಮನೆಗೆ ಧಾವಿಸಿ ಅವನಿಗೆ ಧೈರ್ಯ ತುಂಬಿದ್ದಾರೆ.‌ ಸದ್ಯ ಈ ವಿಚಾರ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಆತನ ಮನೋಧೈರ್ಯಕ್ಕೆ, ತಾಯಿಯ ಆಸೆಯನ್ನು ನೆರವೇರಿಸಲು ಪಣ ತೊಟ್ಟ ಆತನ ವಿಲ್‌ ಪವರ್‌ಗೆ ನೆಟ್ಟಿಗರು ಜೈ ಎಂದಿದ್ದಾರೆ.

ಈ ಸುದ್ದಿಯನ್ನೂ ಓದಿ: Viral News: ಪರೀಕ್ಷೆ ಬರೆಯಲು ಬಂದ ತುಂಬು ಗರ್ಭಿಣಿ- ಎಕ್ಸಾಂ ಹಾಲ್‌ನಿಂದ ನೇರವಾಗಿ ಹೆರಿಗೆ ಕೋಣೆಗೆ! ಹೆಣ್ಣು ಮಗುವಿಗೆ ಜನ್ಮ

ಪೋಸ್ಟ್‌ ಹಂಚಿಕೊಂಡ ಸಿಎಂ

ಸುನಿಲ್‌ ಕುಮಾರ್‌ನ ಈ ಹೃದಯಸ್ಪರ್ಶಿ ಕ್ಷಣವನ್ನು ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್‌ ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸುನಿಲ್‌ ಕುಮಾರ್‌ ತನ್ನ ತಾಯಿಯ ಕಾಲಿಗೆರಗಿ ಆಶೀರ್ವಾದ ಪಡೆದುಕೊಳ್ಳುತ್ತಿರುವ ಫೋಟೊವನ್ನು ಹಂಚಿಕೊಂಡ ಅವರು, ʼʼಇದು ತಮಿಳು ಸಮಾಜ.‌ ಇಲ್ಲಿ ನಮ್ಮ ಜೀವಕ್ಕಿಂತಲೂ ಶಿಕ್ಷಣ ಮುಖ್ಯʼʼ ಎಂದು ಬರೆದುಕೊಂಡಿದ್ದಾರೆ. ತಮಿಳುನಾಡು ಶಾಲಾ ಶಿಕ್ಷಣ ಸಚಿವ ಅನ್ಬಿಲ್‌ ಮಹೇಶ್‌ ಪೊಯ್ಯಮೊಝಿ ಸುನಿಲ್‌ ಕುಮಾರ್‌ ಮನೆಗೆ ತೆರಳಿ ಸುಬ್ಬುಲಕ್ಷ್ಮೀ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಅಲ್ಲದೆ ಸುನಿಲ್‌ ಕುಮಾರ್‌ಗೆ ಧೈರ್ಯ ತುಂಬಿದ್ದಾರೆ. ʼʼತಾಯಿಯ ಆಸೆಯಂತೆ ಸುನಿಲ್‌ ಕುಮಾರ್‌ ಶಿಕ್ಷಣ ಪಡೆದು ಜೀವನದಲ್ಲಿ ಯಶಸ್ವಿಯಾಗುತ್ತಾನೆʼʼ ಎಂದು ಅವರು ಹೇಳಿದ್ದಾರೆ. ಸದ್ಯ ಸುನಿಲ್‌ ಕುಮಾರ್‌ಗೆ ಎಲ್ಲೆಡೆಯಿಂದ ಬೆಂಬಲ ಲಭ್ಯವಾಗುತ್ತಿದೆ.