ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ

Hydrogen Truck: ಭಾರತದ ಮೊದಲ ಹಸಿರು ಹೈಡ್ರೋಜನ್ ಟ್ರಕ್ ಪ್ರಾಯೋಗಿಕ ಸಂಚಾರಕ್ಕೆ ಜೋಶಿ, ಗಡ್ಕರಿ ಚಾಲನೆ

Hydrogen Truck: ದೇಶದ ಮೊದಲ ಹೈಡ್ರೋಜನ್ ಚಾಲಿತ ವಾಹನದ ಪ್ರಾಯೋಗಿಕ ಸಂಚಾರಕ್ಕೆ ಇಂದು ಚಾಲನೆ ಸಿಕ್ಕಿದೆ. ಟಾಟಾ ಮೋಟಾರ್ಸ್ ಬಿಡುಗಡೆ ಮಾಡಿದ ಹೈಡ್ರೋಜನ್ ಚಾಲಿತ ಹೆವಿ-ಡ್ಯೂಟಿ ಟ್ರಕ್‌ಗಳ ಮೊದಲ ಪ್ರಾಯೋಗಿಕ ಸಂಚಾರಕ್ಕೆ ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್ ಜೋಶಿ ಮತ್ತು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ನವದೆಹಲಿಯಲ್ಲಿ ಹಸಿರು ನಿಶಾನೆ ತೋರಿದರು.

ಭಾರತದ ಮೊದಲ ಹೈಡ್ರೋಜನ್ ಟ್ರಕ್ ಪ್ರಾಯೋಗಿಕ ಸಂಚಾರಕ್ಕೆ ಚಾಲನೆ

Profile Siddalinga Swamy Mar 4, 2025 8:43 PM

ನವದೆಹಲಿ: ಭಾರತ 2070ರ ವೇಳೆಗೆ ನಿವ್ವಳ-ಶೂನ್ಯ ಇಂಗಾಲ ಹೊರಸೂಸುವಿಕೆ ಗುರಿಯತ್ತ ಹೆಜ್ಜೆ ಹಾಕಿದ್ದು, ದೇಶದ ಮೊದಲ ಹೈಡ್ರೋಜನ್ ಚಾಲಿತ ವಾಹನದ ಪ್ರಾಯೋಗಿಕ ಸಂಚಾರಕ್ಕೆ ( Hydrogen Truck) ಇಂದು ಚಾಲನೆ ಸಿಕ್ಕಿದೆ. ಟಾಟಾ ಮೋಟಾರ್ಸ್ ಬಿಡುಗಡೆ ಮಾಡಿದ ಹೈಡ್ರೋಜನ್ ಚಾಲಿತ ಹೆವಿ-ಡ್ಯೂಟಿ ಟ್ರಕ್‌ಗಳ ಮೊದಲ ಪ್ರಾಯೋಗಿಕ ಸಂಚಾರಕ್ಕೆ ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಮತ್ತು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari) ನವದೆಹಲಿಯಲ್ಲಿ ಇಂದು ಹಸಿರು ನಿಶಾನೆ ತೋರಿದರು.

ಈ ವೇಳೆ ಸಚಿವ ಪ್ರಲ್ಹಾದ್‌ ಜೋಶಿ ಮಾತನಾಡಿ, ಎರಡು ವರ್ಷಗಳ ಕಾಲ 16 ಸುಧಾರಿತ ಹೈಡ್ರೋಜನ್ ವಾಹನಗಳ ಪ್ರಾಯೋಗಿಕ ಸಂಚಾರ ನಡೆಸಲಾಗುವುದು. H2 -ICE ಮತ್ತು ಇಂಧನ ಕೋಶ H 2 -FCEV ತಂತ್ರಜ್ಞಾನ ಹೊಂದಿರುವ ಈ ಟ್ರಕ್‌ಗಳು ಮುಂಬೈ, ಪುಣೆ, ದೆಹಲಿ-NCR, ಸೂರತ್, ವಡೋದರಾ, ಜಮ್ಶೆಡ್‌ಪುರ ಮತ್ತು ಕಳಿಂಗನಗರ ಸುತ್ತಮುತ್ತಲಿನ ಪ್ರದೇಶಗಳು ಸೇರಿದಂತೆ ಭಾರತದ ಪ್ರಮುಖ ಸರಕು ಸಾಗಣೆ ಮಾರ್ಗಗಳಲ್ಲಿ ಪರೀಕ್ಷಾರ್ಥ ಸಂಚಾರ ನಡೆಸಲಿವೆ ಎಂದು ಹೇಳಿದರು.

3 ಹೈಡ್ರೋಜನ್ ಚಾಲಿತ ಹೆವಿ-ಡ್ಯೂಟಿ ಟ್ರಕ್‌ಗಳ ಮೊದಲ ಬ್ಯಾಚ್ ಫರಿದಾಬಾದ್-ದೆಹಲಿ NCR ಮತ್ತು ಅಹಮದಾಬಾದ್-ಸೂರತ್-ವಡೋದರಾ ಮಾರ್ಗಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಇದಕ್ಕಾಗಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL) ಫರಿದಾಬಾದ್, ವಡೋದರಾ, ಪುಣೆ ಮತ್ತು ಬಾಲಸೋರ್‌ನಲ್ಲಿ ಹೈಡ್ರೋಜನ್ ಮರುಪೂರಣ ಕೇಂದ್ರಗಳನ್ನು ಸ್ಥಾಪಿಸುತ್ತಿದೆ ಎಂದು ತಿಳಿಸಿದರು.

ಹಸಿರು ಹೈಡ್ರೋಜನ್‌ನಲ್ಲಿ ಜಗತ್ತನ್ನೇ ಮುನ್ನಡೆಸಲಿದೆ ಭಾರತ

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ಹಸಿರು ಇಂಧನ ಪರಿವರ್ತನೆಯಲ್ಲಿ ಜಾಗತಿಕವಾಗಿ ಮುಂಚೂಣಿಯಲ್ಲಿದೆ. ₹19,744 ಕೋಟಿ ಬೃಹತ್ ಆರ್ಥಿಕ ನೆರವಿನಲ್ಲಿ ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್ ಅಭೂತಪೂರ್ವ ಗುರಿ ಸಾಧನೆ ತೋರುತ್ತಿದೆ ಎಂದು ಹೇಳಿದರು.

ಹಸಿರು ಹೈಡ್ರೋಜನ್ ವಲಯದಲ್ಲಿ ಭಾರತ ಈಗಾಗಲೇ ಗಮನಾರ್ಹ ಪ್ರಗತಿ ಸಾಧಿಸಿದೆ. ವರ್ಷಕ್ಕೆ 4,12,000 ಟನ್ ಹಸಿರು ಹೈಡ್ರೋಜನ್ ಉತ್ಪಾದನೆ ನೀಡಿದೆ. 3 GW ಎಲೆಕ್ಟ್ರೋಲೈಸರ್ ಉತ್ಪಾದನಾ ಸಾಮರ್ಥ್ಯವನ್ನು ಅನುಮೋದಿಸಿದೆ. ಅಲ್ಲದೇ, ಸಾರಿಗೆ, ಸಾಗಣೆ, ಉಕ್ಕು ಮತ್ತು ಸಂಗ್ರಹಣೆಯಲ್ಲಿ ಹೊಸದಾಗಿ 7 ಪೈಲಟ್ ಯೋಜನೆಗಳನ್ನು ಸಹ ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.

5 ಮಿಲಿಯನ್ ಮೆಟ್ರಿಕ್ ಟನ್ ಹಸಿರು ಹೈಡ್ರೋಜನ್ ಉತ್ಪಾದನೆ

ಮುಂಬರುವ ದಿನಗಳಲ್ಲಿ ವಾರ್ಷಿಕವಾಗಿ 5 ಮಿಲಿಯನ್ ಮೆಟ್ರಿಕ್ ಟನ್ (MMT) ಹಸಿರು ಹೈಡ್ರೋಜನ್ ಉತ್ಪಾದಿಸುವ ಗುರಿ ಹೊಂದಿದೆ. 2030ರ ವೇಳೆಗೆ 60-100 GW ಎಲೆಕ್ಟ್ರೋಲೈಸರ್ ಸಾಮರ್ಥ್ಯದ ಸ್ಥಾಪನೆ ಮತ್ತು ಹೈಡ್ರೋಜನ್ ಉತ್ಪಾದನೆಗೆ ಮೀಸಲಾಗಿರುವ 125 GW ನವೀಕರಿಸಬಹುದಾದ ಇಂಧನ ಸಾಮರ್ಥ್ಯ ಸಾಧಿಸುವ ಗುರಿ ಹಾಕಿಕೊಳ್ಳಲಾಗಿದೆ ಎಂದರು.

ಈ ಕ್ರಮಗಳಿಂದಾಗಿ ಭಾರತ ವಾರ್ಷಿಕವಾಗಿ 50 ಮಿಲಿಯನ್ ಮೆಟ್ರಿಕ್ ಟನ್ CO₂ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಹಾಗೂ ಆಮದುಗಳಲ್ಲಿ ₹1 ಲಕ್ಷ ಕೋಟಿ ಉಳಿತಾಯ ಹಾಗೂ ₹8 ಲಕ್ಷ ಕೋಟಿ ಮೌಲ್ಯದ ಹೂಡಿಕೆಗಳನ್ನು ಆಕರ್ಷಿಸುವ ನಿರೀಕ್ಷೆಯಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ತಿಳಿಸಿದರು.

ಹೈಡ್ರೋಜನ್ ಚಾಲಿತ ಟ್ರಕ್ ಪ್ರಾಯೋಗಿಕ ಸಂಚಾರ ಆರಂಭ ಭಾರತದ ಚಲನಶೀಲತೆ ವಲಯದಲ್ಲಿ ಒಂದು ಆಮೂಲಾಗ್ರ ಬದಲಾವಣೆಗೆ ಕಾರಣವಾಗಲಿದೆ. ಇದು ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಮತ್ತು ಇಂಧನ ಸುರಕ್ಷತೆಯನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದರು.

ಈ ಸುದ್ದಿಯನ್ನೂ ಓದಿ | CISF Recruitment 2025: ಕೇಂದ್ರ ಕೈಗಾರಿಕಾ ಭದ್ರತಾ ಪಡೆಯಲ್ಲಿದೆ 1,161 ಹುದ್ದೆ; 10ನೇ ತರಗತಿ ಪಾಸಾದವರು ಅಪ್ಲೈ ಮಾಡಿ

ಭಾರತ 3ನೇ ಅತಿ ದೊಡ್ಡ ತೈಲ ಗ್ರಾಹಕ ಮತ್ತು 4ನೇ ಅತಿ ದೊಡ್ಡ ಕಚ್ಚಾ ತೈಲ ಆಮದುದಾರ ರಾಷ್ಟ್ರವಾಗಿದ್ದು, ಈ ಅವಲಂಬನೆಯನ್ನು ಕಡಿಮೆ ಮಾಡುವಲ್ಲಿ ಹೈಡ್ರೋಜನ್ ತಂತ್ರಜ್ಞಾನ ಪ್ರಮುಖ ಪಾತ್ರ ವಹಿಸುತ್ತದೆ. ಹೈಡ್ರೋಜನ್ ಚಾಲಿತ ಚಲನಶೀಲತೆಯನ್ನು ಉತ್ತೇಜಿಸುವಲ್ಲಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರ ಕೊಡುಗೆ ಸಹ ಅನನ್ಯವಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಶ್ಲಾಘಿಸಿದರು.