Film Beat: 90ರ ದಶಕದಲ್ಲಿ ಕೋಟಿ ರೂ. ಸಂಭಾವನೆ, 33ರ ಪ್ರಾಯದಲ್ಲೇ ಚಿತ್ರರಂಗದಿಂದ ನಿವೃತ್ತಿ; ಯಾರೀ ನಟಿ?
ಇಂದು ಚಿತ್ರರಂಗದಲ್ಲಿ ನಟ-ನಟಿಯರ ಸಂಭಾವನೆ ಕೋಟಿಗಳ ಲೆಕ್ಕವನ್ನು ದಾಟಿ ಮುಂದೆ ಹೋಗಿದೆ. ಆದರೆ 90ರ ದಶಕದಲ್ಲಿ ಸೂಪರ್ ಸ್ಟಾರ್‌ಗಳಿಗೂ ಕೋಟಿ ಸಂಭಾವನೆ ಸಿಗದೇ ಇದ್ದ ಕಾಲದಲ್ಲಿ ಈ ನಟಿ ಕೋಟಿ ಸಂಭಾವನೆ ಪಡೆಯುತ್ತಿದ್ದರು. ಮಾತ್ರವಲ್ಲದೇ ತನ್ನ ಚಿತ್ರಗಳ ಮೂಲಕ ಹೆಡ್ ಲೈನ್ ನ್ಯೂಸ್ ಆಗುತ್ತಿದ್ದಳು. ಯಾರು ಆ ನಟಿ?

ಶ್ರೀದೇವಿ.

ಮುಂಬೈ: ಭಾರತೀಯ ಚಿತ್ರರಂಗದಲ್ಲಿ (Indian Film Industry) ನಟರದ್ದೇ ಪ್ರಾಬಲ್ಯವಿದ್ದ ಕಾಲವೊಂದಿತ್ತು. ಸಂಭಾವನೆ ವಿಚಾರದಲ್ಲಿ, ಸ್ಕ್ರಿಪ್ಟ್‌ಗಳ ಆಯ್ಕೆಯಲ್ಲಿ ಹೀಗೆ ಚಿತ್ರ ನಿರ್ಮಾಣದ ಹಲವು ವಿಭಾಗಗಳಲ್ಲಿ ನಾಯಕ ನಟರೇ ಮಾತೇ ಫೈನಲ್ ಎಂಬಂತಿದ್ದ ಕಾಲವಿತ್ತು. ಆ ಸಂದರ್ಭದಲ್ಲೇ ಕೆಲವು ನಟಿಯರು ತಮ್ಮ ಚಾರ್ಮ್ ಮತ್ತು ಪ್ರತಿಭೆ ಮೂಲಕ ಚಿತ್ರರಂಗದಲ್ಲಿ ತಮ್ಮ ಮಾತು ನಡೆಯುವಂತೆ ಮತ್ತು ಸಂಭಾವನೆ ವಿಚಾರದಲ್ಲೂ ನಟರಿಗಿಂತಲೂ ಒಂದು ಕೈ ಮೇಲೆಂಬಂತೆ ಚಿತ್ರರಂಗವನ್ನು ಆಳಿದ್ದರು. ಆ ಕಾಲ ಈಗಿಲ್ಲವಾದರೂ ಅಂದಿನ ಆ ಸ್ಥಿತಿಯನ್ನು ನಾವು ನೆನಪು ಮಾಡಿಕೊಳ್ಳುವುದಾದರೂ, ಬಾಲಿವುಡ್‌ನಲ್ಲಿ ಅತೀ ಹೆಚ್ಚು ಸಂಭಾವನೆ ಪಡೆದುಕೊಳ್ಳುತ್ತಿದ್ದ ಆ ನಟಿಯ ಬಗ್ಗೆ ವಿವರ ಇಲ್ಲಿದೆ.
1990ರಲ್ಲಿ ಭಾರತ ಮುಕ್ತ ಆರ್ಥಿಕತೆಗೆ ತೆರೆದುಕೊಂಡಿತ್ತು. ಇದರಿಂದಾಗಿ ಎಲ್ಲ ರಂಗದಲ್ಲೂ ಹೊಸ ಹೊಸ ಅವಕಾಶಗಳು ತೆರೆದುಕೊಳ್ಳಲಾರಂಭಿಸಿತು. ಬಾಲಿವುಡ್‌ನಲ್ಲೂ ಸಹ ಜಾಗತೀಕರಣದ ಗಾಳಿ ಬೀಸಲಾರಂಭಿಸಿತ್ತು. ಬಾಲಿವುಡ್ ನಟರು ಸ್ಟಾರ್ ಪಟ್ಟಕ್ಕೇರಲಾರಂಭಿಸಿದ್ದರು. ನಟರ ಸಂಭಾವನೆಯು ಸಹ ಮೊದಲಿಗಿಂತ ಹಲವು ಪಟ್ಟು ಏರಲಾರಂಭಿಸಿತು. ಆ ಕಾಲದ ಸೌತ್ ಇಂಡಿಯನ್ ಸೂಪರ್ ಸ್ಟಾರ್ ತೆಲುಗು ನಟ ಚಿರಂಜೀವಿ (Chiranjeevi) ಅವರು ಚಿತ್ರವೊಂದಕ್ಕೆ ಒಂದು ಕೋಟಿ ಸಂಭಾವನೆ ಪಡೆದ ಮೊದಲ ನಟ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. 1992ರಲ್ಲಿ ತೆರೆ ಕಂಡಿದ್ದ ʼಆಪದ್ಭಾಂದವುಡುʼ ಎಂಬ ತೆಲುಗು ಚಿತ್ರದ ನಟನೆಗಾಗಿ ಚಿರು ಕೋಟಿ ಸಂಭಾವನೆ ಪಡೆದುಕೊಂಡಿದ್ದರು.
ಇನ್ನು ಕೋಟಿ ಸಂಭಾವನೆ ವಿಚಾರದಲ್ಲಿ ನಟರನ್ನೂ ಮೀರಿಸುವ ಟ್ಯಾಲೆಂಟೆಡ್, ಚಾರ್ಮಿಂಗ್ ನಟಿಯೊಬ್ಬಳು ಹೆಸರು ಮಾಡಿದ್ದಳು. ಆ ಕಾಲದಲ್ಲಿ ಬಾಲಿವುಡ್ ಅನ್ನು ಆಳುತ್ತಿದ್ದ ತ್ರಿವಳಿ ಖಾನ್ ಗಳೂ ಸಹ ಈಕೆಯ ಸ್ಟಾರ್ ಡಮ್ ಮುಂದೆ ಮಂಕಾಗಿ ಹೋಗಿದ್ದರು. ಆ ನಟಿಯೇ ಒಂದು ಕಾಲದಲ್ಲಿ ಬಾಲಿವುಡ್ ಸಹಿತ ಭಾರತೀಯ ಚಿತ್ರರಂಗದಲ್ಲಿ ಸಖತ್ ಸೌಂಡ್ ಮಾಡಿದ್ದ ಶ್ರಿದೇವಿ (Sridevi).
ಶ್ರೀದೇವಿಯನ್ನು ಭಾರತಿಯ ಚಿತ್ರರಂಗದ ಮೊದಲ ಪ್ಯಾನ್ ಇಂಡಿಯಾ ಸ್ಟಾರ್ (Pan India Star) ಎಂದೇ ಕರೆಯಲಾಗುತ್ತದೆ. ಅಂತಹ ಪ್ರತಿಭಾವಂತ ನಟಿ ಶ್ರೀದೇವಿ ಕೋಟಿ ಸಂಭಾವನೆ ಪಡೆದ ಮೊದಲ ಭಾರತೀಯ ನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

1993ರಲ್ಲಿ ತೆರೆಕಂಡ ʼರೂಪ್ ಕಿ ರಾಣಿ ಚೋರೋಂಕಾ ರಾಜʼ ಚಿತ್ರಕ್ಕಾಗಿ ಶ್ರಿದೇವಿ ಒಂದು ಕೋಟಿ ರೂ. ಸಂಭಾವನೆ ಪಡೆದುಕೊಂಡಿದ್ದು ಆ ಕಾಲದಲ್ಲಿ ಭರ್ಜರಿ ಸುದ್ದಿಯಾಗಿತ್ತು. ಚಿರಂಜೀವಿ ಬಳಿಕ ಕೋಟಿ ಸಂಭಾವನೆ ಪಡೆದ ಕಲಾವಿದೆ ಎಂಬ ಸಾಲಿಗೆ ಶ್ರೀದೇವಿ ಸೇರ್ಪಡೆಗೊಂಡಿದ್ದರು. ಬಳಿಕ 90ರ ದಶಕದ ನಡುಭಾಗದಲ್ಲಿ ಕಮಲ್ ಹಾಸನ್ ಮತ್ತು ಅಮಿತಾಭ್ ಬಚ್ಚನ್ ಕೋಟಿ ಸಂಭಾವನೆ ಪಡೆದುಕೊಂಡ ಕಲಾವಿದರ ಪಟ್ಟಿಗೆ ಸೇರ್ಪಡೆಗೊಂಡಿದ್ದರು. ಇಂಟರೆಸ್ಟಿಂಗ್ ವಿಚಾರವೆಂದರೆ ಶ್ರೀದೇವಿ ಕೋಟಿ ಸಂಭಾವನೆ ಪಡೆದ ಮೊದಲ ನಟಿಯಷ್ಟೇ ಅಲ್ಲ, ಬದಲಾಗಿ ತನ್ನ ಚಿತ್ರದಲ್ಲಿ ನಟಿಸುತ್ತಿದ್ದ ನಟರಿಗಿಂತಲೂ ಹೆಚ್ಚು ಸಂಭಾವನೆ ಪಡೆದುಕೊಂಡಿದ್ದ ಖ್ಯಾತಿಗೂ ಪಾತ್ರರಾಗಿದ್ದರು.
ಆ ಕಾಲದಲ್ಲಿ ಬಾಲಿವುಡ್ ನ ಸೂಪರ್ ಸ್ಟಾರ್‌ಗಳೆಣಿಸಿದ್ದ ಶಾರುಖ್ ಖಾನ್, ಸಲ್ಮಾನ್ ಖಾನ್ ಮತ್ತು ಅಮೀರ್ ಖಾನ್ ಸಹಿತ ಸನ್ನಿ ಡಿಯೋಲ್, ಸಂಜಯ್ ದತ್ ಅವರಂತಹ ನಟರೂ ಆ ಕಾಲದಲ್ಲಿ ತಮ್ಮ ಒಂದು ಚಿತ್ರಕ್ಕೆ 50-75 ಲಕ್ಷ ರೂ. ಸಂಭಾವನೆಯನ್ನು ಪಡೆದುಕೊಳ್ಳುತ್ತಿದ್ದರು.
ಇದನ್ನೂ ಓದಿ: Niveditha Gowda: ಕ್ಯಾಸಿನೋದಲ್ಲಿ ನಿವೇದಿತಾ ಗೌಡಗೆ ಬೆಂಡೆತ್ತಿದ ಕನ್ನಡಿಗರು: ವಿಡಿಯೋ ವೈರಲ್

ಆದರೆ 1997ರಲ್ಲಿ ಶ್ರೀದೇವಿ ಚಿತ್ರರಂಗದಿಂದ ದಿಢೀರ್ ವಿದಾಯ ಪಡೆದುಕೊಂಡ ಬಳಿಕವಷ್ಟೇ ಖಾನ್ ತ್ರಯರು ಕೋಟಿ ಸಂಭಾವನೆ ವೀರರೆಂದೆಣಿಸಿಕೊಂಡರು. ಬಾಲಿವುಡ್ ಮಾತ್ರವಲ್ಲದೇ ಭಾರತೀಯ ಚಿತ್ರರಂಗದಲ್ಲೇ ಹೆಸರು ಮಾಡಿದ್ದ ನಟಿ ಶ್ರೀದೇವಿ 90ರ ದಶಕದ ಮಧ್ಯ ಭಾಗದಲ್ಲಿ ತಮಿಳು ಮತ್ತು ತೆಲುಗು ಚಿತ್ರಗಳಲ್ಲೂ ಮಿಂಚಿದ್ದರು. ಮಾಧುರಿ ದೀಕ್ಷಿತ್, ಜಯಪ್ರದಾ ಅವರಂತೆ ಶ್ರೀದೇವಿ ಸಹ ಆ ಕಾಲದಲ್ಲಿ ಹೆಡ್ ಲೈನ್ ಸುದ್ದಿಯಾಗುತ್ತಿದ್ದ ನಟಿಯಾಗಿದ್ದರು. ʼಗುಮ್ರಾʼ, ʼಆರ್ಮಿʼ ಮತ್ತು ʼಲಾಡ್ಲಾʼ ಚಿತ್ರಗಳು ಆಕೆಯನ್ನು ಜನಪ್ರಿಯವಾಗಿಸಿದ್ದವು.
1997ರಲ್ಲಿ ನಟಿ ಶ್ರೀದೇವಿ ಇದ್ದಕ್ಕಿದ್ದಂತೆ ಚಿತ್ರರಂಗಕ್ಕೆ ದಿಢೀರ್ ವಿದಾಯ ಘೋಷಿಸಿಬಿಟ್ಟಿದ್ದರು. ಇದಕ್ಕೆ ಕಾರಣ ಆಕೆ ತನ್ನ ಮೊದಲ ಮಗುವಿಗೆ ತಾಯಿಯಾಗುವ ಸಂಭ್ರಮದಲ್ಲಿದ್ದರು. ಕೇವಲ 33 ವರ್ಷ ಪ್ರಾಯದಲ್ಲೇ ಚಿತ್ರರಂಗಕ್ಕೆ ವಿದಾಯ ಹೇಳಿದ್ದ ಶ್ರೀದೇವಿಯ ಕೊನೆ ಚಿತ್ರ 1997ರಲ್ಲಿ ಬಿಡುಗಡೆಗೊಂಡ 'ಜುದಾಯಿ' ಆಗಿತ್ತು.
ಆ ಬಳಿಕ ಶ್ರಿದೇವಿ ಕಿರುತೆರೆ ಮೂಲಕ ರಿ ಎಂಟ್ರಿಯಾಗಿದ್ದರು. 2004-05ರಲ್ಲಿ ಮಾಲಿನಿ ಅಯ್ಯರ್ ಎಂಬ ಕಾರ್ಯಕ್ರಮದಲ್ಲಿ ಈ ನಟಿ ಕಾಣಿಸಿಕೊಂಡಿದ್ದರು. ಆದರೆ ಶ್ರೀದೇವಿ 2012ರಲ್ಲಿ ಇಂಗ್ಲಿಷ್ ವಿಂಗ್ಲಿಷ್ ಚಿತ್ರದ ಮೂಲಕ ಮತ್ತೆ ಹಿರಿತೆರೆಗೆ ರಿ ಎಂಟ್ರಿಯಾಗಿದ್ದರು. ಆ ಬಳಿಕ ಶ್ರಿದೇವಿ 'ಪುಲಿ' (2015) ಮತ್ತು 'ಮಾಮ್' (2017) ಚಿತ್ರಗಳಲ್ಲಿ ನಟಿಸಿದ್ದರು. 'ಮಾಮ್' ಚಿತ್ರದ ನಟನೆಗಾಗಿ ರಾಷ್ಟ್ರ ಚಲನಚಿತ್ರ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದರು. ಶ್ರೀದೇವಿ 2018ರಲ್ಲಿ ತಮ್ಮ 54ನೇ ವಯಸ್ಸಿನಲ್ಲಿ ನಿಧನ ಹೊಂದಿದರು.