Kangana Ranaut: ರಶ್ಮಿಕಾ ಬೆಂಬಲಕ್ಕೆ ಧಾವಿಸಿದ ಕಂಗನಾ; ಡಿಕೆಶಿ ನಟ್ಟು ಬೋಲ್ಟ್ ಹೇಳಿಕೆಗೆ ಗರಂ
ಸ್ಯಾಂಡಲ್‌ವುಡ್ ಮೂಲಕ ಬಣ್ಣದ ಲೋಕಕ್ಕೆ ಪ್ರವೇಶಿಸಿ, ಟಾಲಿವುಡ್, ಬಾಲಿವುಡ್‌ಗೆ ಕಾಲಿಟ್ಟು ನ್ಯಾಶನಲ್ ಕ್ರಶ್ ಎನಿಸಿಕೊಂಡ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಇದೀಗ ವಿವಾದದ ಕೇಂದ್ರಬಿಂದು ಎನಿಸಿಕೊಂಡಿದ್ದಾರೆ. ಇದೇ ವೇಳೆ ಸಿನಿಮಾ ನಟರ ನಟ್ಟು ಬೋಲ್ಟು ಟೈಟ್ ಮಾಡುವುದು ಗೊತ್ತಿದೆ ಎಂದು ಹೇಳಿಕೆ ನೀಡಿದ್ದ ಡಿಕೆಶಿ ವಿರುದ್ಧ ಬಾಲಿವುಡ್ ನಟಿ, ಬಿಜೆಪಿ ಸಂಸದೆ ಕಂಗನಾ ರಾಣಾವತ್ ಕಿಡಿಕಾರಿದ್ದಾರೆ.

ಕಂಗನಾ ರಾಣಾವತ್ ಮತ್ತು ಡಿ.ಕೆ.ಶಿವಕುಮಾರ್.

ಉಡುಪಿ: ಸ್ಯಾಂಡಲ್‌ವುಡ್ ಮೂಲಕ ಬಣ್ಣದ ಲೋಕಕ್ಕೆ ಪ್ರವೇಶಿಸಿ, ಟಾಲಿವುಡ್, ಬಾಲಿವುಡ್‌ಗೆ ಕಾಲಿಟ್ಟು ನ್ಯಾಶನಲ್ ಕ್ರಶ್ ಎನಿಸಿಕೊಂಡ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna) ಇದೀಗ ವಿವಾದದ ಕೇಂದ್ರಬಿಂದು ಎನಿಸಿಕೊಂಡಿದ್ದಾರೆ. ಕರ್ನಾಟಕವನ್ನೇ ಮರೆತಂತೆ ಆಡುವ ಮೂಲಕ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಲ್ಲದೇ ರಾಜಕಾರಣಿಗಳಿಂದಲೂ ಟೀಕೆ ಎದುರಿಸುತ್ತಿದ್ದಾರೆ. ಬೆಂಗಳೂರು ಫಿಲ್ಮ್ ಫೆಸ್ಟಿವಲ್‌ಗೆ ಹಲವು ಬಾರಿ ಕರೆದರೂ ಆಗಮಿಸದೆ ದುರಹಂಕಾರದಿಂದ ವರ್ತಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಹೀಗಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (D.K.Shivakumar) ಇತ್ತೀಚೆಗೆ ಇದೇ ಕಾರಣಕ್ಕೆ ಕಲಾವಿದರಿಗೆ ಬುದ್ದಿ ಕಲಿಸುವ ಎಚ್ಚರಿಕೆ ನೀಡಿದ್ದರು. ಇದೀಗ ಈ ಕುರಿತಂತೆ ಬಾಲಿವುಡ್ ನಟಿ, ಬಿಜೆಪಿ ಸಂಸದೆ ಕಂಗನಾ ರಾಣಾವತ್ (Kangana Ranaut) ಪ್ರತಿಕ್ರಿಯಿಸಿ ಡಿಕೆಶಿ ಹೇಳಿಕೆಗೆ ಗರಂ ಆಗಿದ್ದಾರೆ.
ಉಡುಪಿ ಜಿಲ್ಲೆಯ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಬ್ರಹ್ಮಕಲಶೋತ್ಸವದಲ್ಲಿ ಭಾಗವಹಿಸಿದ ಕಂಗನಾ ರಾಣಾವತ್ ಬಳಿಕ ಕಟೀಲು ದುರ್ಗಾಪರಮೇಶ್ವರು ದೇಗುಲಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿ ರಶ್ಮಿಕಾ ಮಂದಣ್ಣ ಅವರಿಗೆ ಪರೋಕ್ಷವಾಗಿ ಬೆಂಬಲ ಸೂಚಿಸಿದ್ದಾರೆ. ಸಿನಿಮಾ ನಟರ ನಟ್ಟು ಬೋಲ್ಟು ಟೈಟ್ ಮಾಡುವುದು ಗೊತ್ತಿದೆ ಎಂದು ಹೇಳಿಕೆ ನೀಡಿದ್ದ ಡಿಕೆಶಿ ವಿರುದ್ಧ ಕಿಡಿ ಕಾರಿದ್ದಾರೆ.
ʼʼಕೆಲವರು ನಟ್ಟು ಬೋಲ್ಟು ಟೈಟ್ ಮಾಡುವುದಾಗಿ ಹೇಳುತ್ತಿದ್ದಾರೆ. ದೇವರು ನಮ್ಮನ್ನು ಕಾಪಾಡುತ್ತಾನೆ. ಕಲೆಯ ದೇವತೆ ಸರಸ್ವತಿ. ಯಾರದ್ದಾದರೂ ನಟ್ಟು ಬೋಲ್ಟ್ ಅನ್ನು ಬಿಗಿಗೊಳಿಸಬೇಕಾದರೆ ಖಂಡಿತವಾಗಿಯೂ ವಿಷ್ಣು ದೇವರು ಹೊಸ ಅವತಾರ ತಾಳುತ್ತಾನೆ. ದೇವರು ಎಲ್ಲ ಕಲಾವಿದರನ್ನು ಕಾಪಾಡುತ್ತಾನೆʼʼ ಎಂದು ಕಂಗನಾ ಹೇಳಿದ್ದಾರೆ. ಆ ಮೂಲಕ ಕಲಾವಿದರು ಮತ್ತು ಕಾಂಗ್ರೆಸ್ ನಡುವೆ ನಡೆಯುತ್ತಿರುವ ಜಗಳವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದ್ದಾರೆ.
ಡಿಕೆಶಿ ಹೇಳಿದ್ದೇನು?
ಬೆಂಗಳೂರು ಚಿತ್ರೋತ್ಸವಕ್ಕೆ ಹಾಜರಾಗದ ಕಾರಣಕ್ಕೆ ಸ್ಯಾಂಡಲ್‌ವುಡ್ ಸ್ಟಾರ್ ಕಲಾವಿದರ ಮೇಲೆ ಸಿಟ್ಟಾಗಿದ್ದ ಡಿ.ಕೆ.ಶಿವಕುಮಾರ್, ʼʼಎಲ್ಲರೂ ಮುಂದೆ ನಮ್ಮ ಬಳಿಯೇ ಸಹಾಯ ಕೇಳಿಕೊಂಡು ಬರುತ್ತಾರೆ. ಎಲ್ಲರ ನಟ್ಟು ಬೋಲ್ಟ್ ಟೈಟ್ ಮಾಡೋದು ಹೇಗೆ ಎಂದು ನಮಗೆ ಗೊತ್ತಿದೆʼʼ ಎಂದಿದ್ದರು. ಅವರ ಹೇಳಿಕೆಗೆ ಈಗ ಚಿತ್ರರಂಗದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
ಈ ಸುದ್ದಿಯನ್ನೂ ಓದಿ: Ravi Ganiga: ಕರ್ನಾಟಕ ಎಲ್ಲಿದೆ ಎಂದವರಿಗೆ ಬುದ್ಧಿ ಕಲಿಸಬೇಕು: ರಶ್ಮಿಕಾ ವಿರುದ್ಧ ಶಾಸಕ ರವಿ ಗಣಿಗ ಕಿಡಿ
ರಶ್ಮಿಕಾ ವಿವಾದದ ಕೇಂದ್ರಬಿಂದುವಾಗಿದ್ದು ಹೇಗೆ?
ಇದಲ್ಲದೆ ಚಲನಚಿತ್ರೋತ್ಸವಕ್ಕೆ ಆಹ್ವಾನ ಕೊಟ್ಟರೂ ಆಕೆ ಬಂದಿಲ್ಲ ಎಂದು ಹೇಳುವ ಮೂಲಕ ರಶ್ಮಿಕಾ ಮಂದಣ್ಣ ವಿರುದ್ಧ ಶಾಸಕ ರವಿ ಗಣಿಗ ಕಿಡಿಕಾರಿದ್ದರು. ವಿಧಾನಸೌಧದಲ್ಲಿ ಮಾತನಾಡಿದ ಅವರು, ʼʼರಶ್ಮಿಕಾ ಮಂದಣ್ಣ ʼಕಿರಿಕ್ ಪಾರ್ಟಿʼ ಸಿನಿಮಾದಿಂದ ಬೆಳೆದವರು. ಅವರನ್ನು ಕಳೆದ ವರ್ಷ ಚಲನಚಿತ್ರೋತ್ಸವಕ್ಕೆ ಅಹ್ವಾನಿಸಿದ್ದೆವು. ಆದರೆ ನಾನು ಹೈದರಾಬಾದ್‌ನಲ್ಲಿ ಇರೋದು, ನನಗೆ ಟೈಂ ಇಲ್ಲ. ಬರಲ್ಲ ಎಂದು ಹೇಳಿದ್ದರು. ಇವರಿಗೆ ಬುದ್ಧಿ ಕಲಿಸಬೇಕಲ್ವಾ? ನಾನು ಸಿಎಂ-ಡಿಸಿಎಂಗೆ ಪತ್ರ ಬರೆಯುತ್ತೇನೆ. ಸಿನಿಮಾ ಸಬ್ಸಿಡಿಗಳನ್ನು ನಿಲ್ಲಿಸುವ ಬಗ್ಗೆ ಯೋಚಿಸಬೇಕುʼʼ ಎಂದು ಅಕ್ರೋಶ ಹೊರ ಹಾಕಿದ್ದರು.
ʼʼಕಳೆದ ವರ್ಷ ಚಲನಚಿತ್ರೋತ್ಸವಕ್ಕೆ ಆಹ್ವಾನಿಸಲು ಹೋದಾಗ, ನನ್ನ ಮನೆ ಇರುವುದು ಹೈದರಾಬಾದ್‌ನಲ್ಲಿ, ಕರ್ನಾಟಕ ಎಲ್ಲಿದೆ ಅಂತ ಗೊತ್ತಿಲ್ಲ ಎಂದು ರಶ್ಮಿಕಾ ಹೇಳಿದ್ದರು. ಇನ್ನು ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಾಯಿ ಮುಚ್ಚಿಕೊಂಡು ಇರಬೇಕು. ಕನ್ನಡ ನೆಲ, ಭಾಷೆ ವಿಚಾರಕ್ಕೆ ಕರೆದರೆ ಇವರು ಬರಲ್ಲʼʼ ಎಂದು ಹೇಳಿದ್ದರು. ಈ ಎಲ್ಲ ಕಾರಣಗಳಿಂದ ರಶ್ಮಿಕಾ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.