Earthquake: ನೇಪಾಳದಲ್ಲಿ 5.0 ತೀವ್ರತೆಯ ಭೂಕಂಪ; ಭಾರತದಲ್ಲಿಯೂ ಕಂಪಿಸಿದ ಭೂಮಿ
ಕೆಲವು ದಿನಗಳ ಹಿಂದೆ ಮ್ಯಾನ್ಮಾರ್‌ನಲ್ಲಿ ರಣಭೀಕರ ಭೂಕಂಪ ಸಂಭವಿಸಿ 3,000ಕ್ಕೂ ಹೆಚ್ಚು ಮಂದಿ ಬಲಿಯಾದ ಕಹಿ ಘಟನೆ ಮಾಸುವ ಮುನ್ನವೇ ನೇಪಾಳದಲ್ಲಿ ಶುಕ್ರವಾರ (ಏ. 4) ಭೂಮಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ 5.0 ತೀವ್ರತೆ ದಾಖಲಾಗಿದ್ದು, ಇದರ ಪರಿಣಾಮ ಉತ್ತರ ಪ್ರದೇಶದ ಕೆಲವೆಡೆಗಳಲ್ಲಿ ಅಲ್ಪ ಪ್ರಮಾಣದಲ್ಲಿ ಕಂಡುಬಂದಿದೆ.

ಸಾಂದರ್ಭಿಕ ಚಿತ್ರ.

ಕಾಠ್ಮಂಡು: ಕೆಲವು ದಿನಗಳ ಹಿಂದೆ ಮ್ಯಾನ್ಮಾರ್‌ನಲ್ಲಿ ರಣಭೀಕರ ಭೂಕಂಪ (Earthquake) ಸಂಭವಿಸಿ 3,000ಕ್ಕೂ ಹೆಚ್ಚು ಮಂದಿ ಬಲಿಯಾದ ಕಹಿ ಘಟನೆ ಮಾಸುವ ಮುನ್ನವೇ ನೇಪಾಳದಲ್ಲಿ ಶುಕ್ರವಾರ (ಏ. 4) ಭೂಮಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ 5.0 ತೀವ್ರತೆ ದಾಖಲಾಗಿದ್ದು, ಇದರ ಪರಿಣಾಮ ಉತ್ತರ ಪ್ರದೇಶದ ಕೆಲವೆಡೆಗಳಲ್ಲಿ ಅಲ್ಪ ಪ್ರಮಾಣದಲ್ಲಿ ಕಂಡುಬಂದಿದೆ. ಸಂಜೆ ಒಂದು ಕ್ಷಣ ಭೂಮಿ ಸ್ವಲ್ಪ ಅಲುಗಾಡಿದ ಅನುಭವವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾಗಿ ಸುದ್ದಿಸಂಸ್ಥೆ ಎಎನ್‌ಐ (ANI) ವರದಿ ಮಾಡಿದೆ.
ರಾಷ್ಟ್ರೀಯ ಭೂಕಂಪ ಶಾಸ್ತ್ರ ಕೇಂದ್ರ (National Center for Seismology)ದ ಪ್ರಕಾರ ಸಂಜೆ 7:52ಕ್ಕೆ ನೇಪಾಳದಲ್ಲಿ ಭೂಮಿಯ 20 ಕಿ.ಮೀ. ಆಳದಲ್ಲಿ ಭೂಕಂಪ ಕಾಣಿಸಿಕೊಂಡಿದೆ. ಘಟನೆಯಲ್ಲಿ ಯಾವುದೇ ಹಾನಿ ಉಂಟಾಗಿಲ್ಲ. ಈ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ. ನೇಪಾಳವು ಭೂಕಂಪ ಪೀಡಿತ ಪ್ರದೇಶವಾಗಿದ್ದು, ಭೂಕಂಪನ ವಲಯಗಳು IV ಮತ್ತು Vರೊಳಗೆ ಬರುತ್ತವೆ. ನೇಪಾಳದ ಇತಿಹಾಸದಲ್ಲಿ ಅತ್ಯಂತ ವಿನಾಶಕಾರಿ ಭೂಕಂಪ 2015ರಲ್ಲಿ ಸಂಭವಿಸಿತ್ತು. ರಿಕ್ಟರ್ ಮಾಪಕದಲ್ಲಿ 7.8 ತೀವ್ರತೆ ದಾಖಲಾದ ಈ ಭೂಕಂಪದಲ್ಲಿ 9,000ಕ್ಕೂ ಜನರು ಮೃತಪಟ್ಟಿದ್ದರು.
ಎಎನ್‌ಐ ಸುದ್ದಿಸಂಸ್ಥೆಯ ಪೋಸ್ಟ್ ಇಲ್ಲಿದೆ:
An earthquake of magnitude 5.0 on the Richter scale struck Nepal, with light tremors being felt in North India. pic.twitter.com/u9IY0WIcjX
— ANI (@ANI) April 4, 2025
ಈ ಸುದ್ದಿಯನ್ನೂ ಓದಿ: Myanmar Earthquake: ಮ್ಯಾನ್ಮಾರ್ ರಣಭೀಕರ ಭೂಕಂಪದ ಸ್ಯಾಟಲೈಟ್ ಫೊಟೋಗಳು ರಿಲೀಸ್!
3,000ಕ್ಕೂ ಹೆಚ್ಚು ಮಂದಿಯನ್ನು ಬಲಿ ತೆರೆದುಕೊಂಡ ಮ್ಯಾನ್ಮಾರ್ ಭೂಕಂಪ
ಮ್ಯಾನ್ಮಾರ್‌ನಲ್ಲಿ ಮಾ. 28ರಂದು ರಿಕ್ಟರ್ ಮಾಪಕದಲ್ಲಿ 7.7 ತೀವ್ರತೆ ದಾಖಲಾದ ಭೂಕಂಪ ಸಂಭವಿಸಿತ್ತು. ಇದರಲ್ಲಿ 3,000ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು, 4,500 ಮಂದಿ ಗಾಯಗೊಂಡಿದ್ದಾರೆ. 341 ಮಂದಿ ನಾಪತ್ತೆಯಾಗಿದ್ದಾರೆ.
ಈ ಭೂಕಂಪ ಪರಿಣಾಮ ನೆರೆಯ ರಾಷ್ಟ್ರಗಳಾದ ಭಾರತದ ಕೆಲವು ಭಾಗಗಳಲ್ಲಿ, ಚೀನಾ ಥಾಯ್ಲೆಂಡ್, ವಿಯೆಟ್ನಾಂನಲ್ಲಿಯೂ ಕಂಡು ಬಂದಿತ್ತು. ಭಾರತ ಸೇರಿದಂತೆ ವಿಶ್ವದ ನಾನಾ ದೇಶಗಳು ಮ್ಯಾನ್ಮರ್‌ಗೆ ಸಹಾಯಹಸ್ತ ಚಾಚಿವೆ. ಮ್ಯಾನ್ಮಾರ್ ಅನ್ನು ತಲ್ಲಣಗೊಳಿಸಿದ 7.7 ತೀವ್ರತೆಯ ಭೂಕಂಪವು 300 ಕ್ಕೂ ಹೆಚ್ಚು ಪರಮಾಣು ಬಾಂಬ್‌ಗಳಿಗೆ ಸಮಾನವಾದ ಶಕ್ತಿಯನ್ನು ಬಿಡುಗಡೆ ಮಾಡಿದೆ ಎಂದು ಭೂವಿಜ್ಞಾನಿಗಳು ತಿಳಿಸಿದ್ದಾರೆ. ಮ್ಯಾನ್ಮಾರ್‌ನ ಮಂಡಲೇ ನಗರದಲ್ಲಿ ಕೇಂದ್ರಬಿಂದುವಾಗಿರುವ ಈ ಭೂಕಂಪವು ಮಧ್ಯಾಹ್ನ 10 ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ ಎಂದು ಯುನೈಟೆಡ್ ಸ್ಟೇಟ್ಸ್ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ.