ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: 5 ವಿಕೆಟ್‌ ಕಿತ್ತು ಅನಿಲ್‌ ಕುಂಬ್ಳೆಯ 16 ವರ್ಷಗಳ ಹಳೆಯ ದಾಖಲೆ ಮುರಿದ ಹಾರ್ದಿಕ್‌ ಪಾಂಡ್ಯ!

Hardik Pandya breaks Anil kumble's Record: ಲಖನೌ ಸೂಪರ್‌ ಜಯಂಟ್ಸ್‌ ವಿರುದ್ಧ 5 ವಿಕೆಟ್‌ ಕಬಳಿಸುವ ಮೂಲಕ ಮುಂಬೈ ಇಂಡಿಯನ್ಸ್‌ ನಾಯಕ ಹಾರ್ದಿಕ್‌ ಪಾಂಡ್ಯ, ಸ್ಪಿನ್‌ ದಿಗ್ಗಜ ಅನಿಲ್‌ ಕುಂಬ್ಳೆ ಅವರ 16 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದ್ದಾರೆ.

IPL 2025: ಅನಿಲ್‌ ಕುಂಬ್ಳೆ ದಾಖಲೆ ಮುರಿದ ಹಾರ್ದಿಕ್‌ ಪಾಂಡ್ಯ!

ಅನಿಲ್‌ ಕುಂಬ್ಳೆ ದಾಖಲೆ ಮುರಿದ ಹಾರ್ದಿಕ್‌ ಪಾಂಡ್ಯ.

Profile Ramesh Kote Apr 4, 2025 10:45 PM

ಲಖನೌ: ಲಖನೌ ಸೂಪರ್‌ ಜಯಂಟ್ಸ್‌ (LSG) ವಿರುದ್ದದ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌(IPL 2025) ಟೂರ್ನಿಯ ಪಂದ್ಯದಲ್ಲಿ ಪರಿಣಾಮಕಾರಿಯಾಗಿ ಬೌಲಿಂಗ್‌ ದಾಳಿ ನಡೆಸಿದ ಮುಂಬೈ ಇಂಡಿಯನ್ಸ್‌ ನಾಯಕ ಹಾರ್ದಿಕ್‌ ಪಾಂಡ್ಯ (Hardik Pandya) ಅವರು ಐದು ವಿಕೆಟ್‌ ಸಾಧನೆ ಮಾಡಿದ್ದಾರೆ. ಆ ಮೂಲಕ ಐಪಿಎಲ್‌ ಟೂರ್ನಿಯ ಇತಿಹಾಸದಲ್ಲಿಯೇ 5 ವಿಕೆಟ್‌ ಸಾಧನೆ ಮಾಡಿದ ಮೊದಲ ನಾಯಕ ಎಂಬ ದಾಖಲೆಯನ್ನು ಬರೆದಿದ್ದಾರೆ. ಅಲ್ಲದೆ, ಐಪಿಎಲ್‌ನಲ್ಲಿಯೇ ಅತ್ಯುತ್ತಮ ಬೌಲಿಂಗ್‌ ಸ್ಪೆಲ್‌ ಮಾಡಿದ ಮೊದಲ ನಾಯಕ ಎಂಬ ಸಾಧನೆಗೆ ಭಾಜನರಾಗುವ ಮೂಲಕ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮಾಜಿ ನಾಯಕ ಹಾಗೂ ಸ್ಪಿನ್‌ ದಿಗ್ಗಜ ಅನಿಲ್‌ ಕುಂಬ್ಳೆ ಅವರ 16 ವರ್ಷಗಳ ಹಳೆಯ ದಾಖಲೆಯನ್ನು ಹಾರ್ದಿಕ್‌ ಪಾಂಡ್ಯ ಮುರಿದಿದ್ದಾರೆ.

ಶುಕ್ರವಾರ ಇಲ್ಲಿನ ಏಕನಾ ಕ್ರೀಡಾಂಗಣದಲ್ಲಿ ನಡೆದ ಹದಿನೆಂಟನೇ ಆವೃತ್ತಿಯ ಐಪಿಎಲ್‌ ಟೂರ್ನಿಯ 16ನೇ ಪಂದ್ಯದಲ್ಲಿ ಟಾಸ್‌ ಗೆದ್ದು ಬೌಲಿಂಗ್‌ ಆಯ್ದುಕೊಂಡಿದ್ದ ಮುಂಬೈ ಇಂಡಿಯನ್ಸ್‌ ನಾಯಕ ಹಾರ್ದಿಕ್‌ ಪಾಂಡ್ಯ, ಅತ್ಯುತ್ತಮ ಬೌಲಿಂಗ್‌ ಪ್ರದರ್ಶನ ತೋರಿದರು. ಅವರು ಬೌಲ್‌ ಮಾಡಿದ ನಾಲ್ಕು ಓವರ್‌ಗಳ ಸ್ಪೆಲ್‌ನಲ್ಲಿ 36 ರನ್‌ ನೀಡಿ ಪ್ರಮುಖ 5 ವಿಕೆಟ್‌ಗಳನ್ನು ಕಬಳಿಸಿದರು. ಇದರೊಂದಿಗೆ ಐಪಿಎಲ್‌ ಇತಿಹಾಸದಲ್ಲಿಯೇ ಅತ್ಯುತ್ತಮ ಬೌಲಿಂಗ್‌ ಸ್ಪೆಲ್‌ ಮಾಡಿದ ಮೊದಲ ನಾಯಕ ಎನಿಸಿಕೊಂಡರು. ಇದಕ್ಕೂ ಮುನ್ನ ಈ ದಾಖಲೆ ಕನ್ನಡಿಗ ಅನಿಲ್‌ ಕುಂಬ್ಳೆ ಹೆಸರಿನಲ್ಲಿತ್ತು.

IPL 2025: ʻಎಂಎಸ್‌ ಧೋನಿ ನನ್ನ ತಂದೆಯಿದ್ದಂತೆʼ-ಸಿಎಸ್‌ಕೆ ದಿಗ್ಗಜನಿಗೆ ಮತೀಶ ಪತಿರಣ ಗೌರವ!

ಡೆಕ್ಕನ್‌ ಚಾರ್ಜರ್ಸ್‌ ವಿರುದ್ಧದ 2009ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪಂದ್ಯದಲ್ಲಿ ಆರ್‌ಸಿಬಿ ನಾಯಕನಾಗಿ ಅನಿಲ್‌ ಕುಂಬ್ಳೆ ಬೌಲ್‌ ಮಾಡಿದ್ದ ನಾಲ್ಕು ಓವರ್‌ಗಳಲ್ಲಿ ಕೇವಲ 16 ರನ್‌ ನೀಡಿ 4 ವಿಕೆಟ್‌ಗಳನ್ನು ಕಬಳಿಸಿದ್ದರು. ದಕ್ಷಿಣ ಆಫ್ರಿಕಾದ ಜೋಹನ್ಸ್‌ಬರ್ಗ್‌ನ ವಾಂಡರರ್ಸ್‌ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆದಿತ್ತು. 2010ರಲ್ಲಿ ನವಿ ಮುಂಬೈನ ಡಿವೈ ಪಾಟೀಲ್‌ ಸ್ಟೇಡಿಯಂನಲ್ಲಿ ನಡೆದಿದ್ದ ಐಪಿಎಲ್‌ ಟೂರ್ನಿಯಲ್ಲಿ ಡೆಕನ್‌ ಚಾರ್ಜರ್ಸ್‌ ವಿರುದ್ಧದ ಪಂದ್ಯದಲ್ಲಿಯೂ ಅನಿಲ್‌ ಕುಂಬ್ಳೆ 3.3 ಓವರ್‌ ಬೌಲ್‌ ಮಾಡಿ ಕೇವಲ 16 ರನ್‌ ನೀಡಿದ್ದರು ಹಾಗೂ 4 ವಿಕೆಟ್‌ಗಳನ್ನು ಕಬಳಿಸಿದ್ದರು.



ಜೆಪಿ ಡುಮಿನಿ, ಶೇನ್‌ ವಾರ್ನ್‌ ಹಾಗೂ ಯುವರಾಜ್‌ ಸಿಂಗ್‌ ಅವರು ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದ ನಾಯಕರಾಗಿದ್ದಾರೆ. ಮುಂಬೈ ಇಂಡಿಯನ್ಸ್‌ ನಾಯಕನಾಗಿ ಹಾರ್ದಿಕ್‌ ಪಾಂಡ್ಯ ಈ ಹಿಂದೆ 4 ಓವರ್‌ಗಳಿಗೆ 31 ರನ್‌ ನೀಡಿ 3 ವಿಕೆಟ್‌ ಕಬಳಿಸಿದ್ದರು. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ಹಾರ್ದಿಕ್‌ ಈ ಸಾಧನೆ ಮಾಡಿದ್ದರು.

ಎರಡನೇ ನಾಯಕ ಹಾರ್ದಿಕ್‌

ಐಪಿಎಲ್‌ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಕಬಳಿಸಿದ ಎರಡನೇ ನಾಯಕ ಎಂಬ ದಾಖಲೆ ಕೂಡ ಹಾರ್ದಿಕ್‌ ಪಾಂಡ್ಯ ಹೆಸರಿನಲ್ಲಿದೆ. ಐಪಿಎಲ್‌ ಟೂರ್ನಿಯಲ್ಲಿ ನಾಯಕನಾಗಿ ಹಾರ್ದಿಕ್‌ ಪಾಂಡ್ಯ 30 ವಿಕೆಟ್‌ಗಳನ್ನು ಕಿತ್ತಿದ್ದಾರೆ. ಐಪಿಎಲ್‌ ಟೂರ್ನಿಯಲ್ಲಿ ನಾಯಕನಾಗಿ ಶೇನ್‌ ವಾರ್ನ್‌ 57 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಆ ಮೂಲಕ ಈ ಸಾಧಕರ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಅನಿಲ್‌ ಕುಂಬ್ಳೆ, ಆರ್‌ ಅಶ್ವಿನ್‌ ಹಾಗೂ ಪ್ಯಾಟ್‌ ಕಮಿನ್ಸ್‌ ಅವರು ನಾಯಕರಾಗಿ ಐಪಿಎಲ್‌ ಟೂರ್ನಿಯಲ್ಲಿ ಕ್ರಮವಾಗಿ 30, 25 ಹಾಗೂ 21 ವಿಕೆಟ್‌ಗಳನ್ನು ಕಬಳಿಸಿದ್ದರು.

ಐಪಿಎಲ್ ನಾಯಕರ ಅತ್ಯುತ್ತಮ ಬೌಲಿಂಂಗ್ ಪ್ರದರ್ಶನಗಳು

  1. ಹಾರ್ದಿಕ್‌ ಪಾಂಡ್ಯ : 4-0-36-5, ಎಕಾನಮಿ 9.00, ಎಲ್‌ಎಸ್‌ಜಿ ವಿರುದ್ಧ, ಲಕ್ನೋ, ಏಪ್ರಿಲ್ 4, 2025 (ಮುಂಬೈ ಇಂಡಿಯನ್ಸ್)
  2. ಅನಿಲ್‌ ಕುಂಬ್ಳೆ: 4-0-16-4, ಎಕಾನಮಿ 4.00, ಚಾರ್ಜರ್ಸ್ ವಿರುದ್ಧ, ಜೋಹಾನ್ಸ್‌ಬರ್ಗ್, ಮೇ 24, 2009 (ರಾಯಲ್ ಚಾಲೆಂಜರ್ಸ್ ಬೆಂಗಳೂರು)
  3. ಅನಿಲ್‌ ಕುಂಬ್ಳೆ: 3.3-0-16-4, ಎಕಾನಮಿ 4.57, ಚಾರ್ಜರ್ಸ್ ವಿರುದ್ಧ, ಡಿವೈ ಪಾಟೀಲ್, ಏಪ್ರಿಲ್ 24, 2010 (ರಾಯಲ್ ಚಾಲೆಂಜರ್ಸ್ ಬೆಂಗಳೂರು)
  4. ಜೆಪಿ ಡುಮಿನಿ: 3-0-17-4, ಎಕಾನಮಿ 5.66, ಎಸ್‌ಆರ್‌ಎಚ್ ವಿರುದ್ಧ, ವಿಶಾಖಪಟ್ಟಣ, ಏಪ್ರಿಲ್ 18, 2015 (ದೆಹಲಿ ಡೇರ್‌ಡೆವಿಲ್ಸ್)
  5. ಶೇನ್‌ ವಾರ್ನ್: 4-0-21-4, ಎಕಾನಮಿ 5.25, ಚಾರ್ಜರ್ಸ್ ವಿರುದ್ಧ, ನಾಗ್ಪುರ, ಏಪ್ರಿಲ್ 5, 2010 (ರಾಜಸ್ಥಾನ ರಾಯಲ್ಸ್)
  6. ಯುವರಾಜ್ ಸಿಂಗ್: 4-0-29-4, ಎಕಾನಮಿ 7.25, ಡೇರ್‌ಡೆವಿಲ್ಸ್ ವಿರುದ್ಧ, ಡಿವೈ ಪಾಟೀಲ್, 17 ಏಪ್ರಿಲ್ 2011 (ಪುಣೆ ವಾರಿಯರ್ಸ್)