ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

PM Modi in Namibia: ಪ್ರಧಾನಿ ಮೋದಿಗೆ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಿದ ನಮೀಬಿಯಾ ಸರ್ಕಾರ

Narendra Modi: ಭಾರತದ ಪ್ರಧಾನಿ ನರೆಂದ್ರ ಮೋದಿ ಅವರಿಗೆ ನಮೀಬಿಯಾ ಸರ್ಕಾರ ಅತ್ಯುನ್ನತ ನಾಗರಿಕ ಪ್ರಶಸ್ತಿ ಆರ್ಡರ್‌ ಆಫ್‌ ದಿ ಮೋಸ್ಟ್‌ ಏಷ್ಯೆಂಟ್‌ ವೆಲ್ವಿಟ್ಚಿಯಾ ಮಿರಾಬಿಲಿಸ್ ಅನ್ನು ನೀಡಿದೆ. ನಮೀಬಿಯಾ ಅಧ್ಯಕ್ಷರಾದ ನೆಟುಂಬೊ ನಂದಿ- ನದೈಟ್ವ್ ಈ ಗೌರವ ಪ್ರದಾನ ಮಾಡಿದರು.

ಪ್ರಧಾನಿ ಮೋದಿಗೆ ನಮೀಬಿಯಾ ಸರ್ಕಾರದ ಅತ್ಯುನ್ನತ ನಾಗರಿಕ ಪ್ರಶಸ್ತಿ

Profile Ramesh B Jul 9, 2025 7:44 PM

ವಿಂಡ್‌ಹೋಕ್: ನಮೀಬಿಯಾಕ್ಕೆ (Namibia) ಬಂದಿಳಿದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಬುಧವಾರ (ಜು. 9) ಆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಆರ್ಡರ್‌ ಆಫ್‌ ದಿ ಮೋಸ್ಟ್‌ ಏಷ್ಯೆಂಟ್‌ ವೆಲ್ವಿಟ್ಚಿಯಾ ಮಿರಾಬಿಲಿಸ್ (Order of the Most Ancient Welwitschia Mirabilis) ಅನ್ನು ನೀಡಲಾಯಿತು (PM Modi in Namibia). ನಮೀಬಿಯಾ ಅಧ್ಯಕ್ಷರಾದ ನೆಟುಂಬೊ ನಂದಿ- ನದೈಟ್ವ್ (Netumbo Nandi-Ndaitwah) ಈ ಗೌರವ ಪ್ರದಾನ ಮಾಡಿದರು. 5 ದೇಶಗಳ ಪ್ರವಾಸದ ಅಂಗವಾಗಿ ಮೋದಿ ನಮೀಬಿಯಾಕ್ಕೆ ತೆರಳಿದ್ದಾರೆ. ಮಂಗಳವಾರವಷ್ಟೇ ಮೋದಿ ಅವರಿಗೆ ಬ್ರೆಜಿಲ್‌ನ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಗ್ರ್ಯಾಂಡ್ ಕಾಲರ್ ಆಫ್ ದಿ ನ್ಯಾಷನಲ್ ಆರ್ಡರ್ ಆಫ್ ದಿ ಸದರ್ನ್ ಕ್ರಾಸ್ (Grand Collar of the National Order of the Southern Cross) ಅನ್ನು ಪ್ರದಾನ ಮಾಡಲಾಗಿತ್ತು.

ಮೋದಿ ಅವರ ಮೊದಲ ನಮೀಬಿಯಾ ಭೇಟಿ ಇದಾಗಿದೆ. ಈ ಮೂಲಕ ನಮೀಬಿಯಾಕ್ಕೆ ಒಟ್ಟು ಮೂವರು ಭಾರತದ ಪ್ರಧಾನಿಗಳು ಭೇಟಿ ನೀಡಿದಂತಾಗಿದೆ. 2014ರಿಂದ ಪ್ರಧಾನಿಯಾಗಿರುವ ಮೋದಿ ಈ 11 ವರ್ಷಗಳಲ್ಲಿ ಇದುವರೆಗೆ ಒಟ್ಟು 27 ಅಂತಾರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.



ಈ ಸುದ್ದಿಯನ್ನೂ ಓದಿ: Narendra Modi: ಪ್ರಧಾನಿ ಮೋದಿಗೆ ಬ್ರೆಜಿಲ್‌ನ ಅತ್ಯುನ್ನತ ನಾಗರಿಕ ಪ್ರಶಸ್ತಿ ಪ್ರದಾನ

ನಮೀಬಿಯಾ ಅಧ್ಯಕ್ಷರಾದ ನೆಟುಂಬೊ ನಂದಿ- ನದೈಟ್ವ್ ಅವರ ವಿಶೇಷ ಆಹ್ವಾನದ ಮೇರೆಗೆ ಭೇಟಿ ನೀಡಿರುವ ಮೋದಿ ಎರಡೂ ದೇಶಗಳ ಸಂಬಂಧ ವೃದ್ಧಿಗೆ ಕ್ರಮ ಕೈಗೊಂಡಿದ್ದಾರೆ. ಇಬ್ಬರು ನಾಯಕರು ಎರಡೂ ದೇಶಗಳ ನಡುವಿನ ಆರ್ಥಿಕ, ಆರೋಗ್ಯ, ಕಾರ್ಯತಂತ್ರ, ರಕ್ಷಣಾ ಮತ್ತು ಸಾಂಸ್ಕೃತಿಕ ಸಹಕಾರದ ಬಗ್ಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.

"ವೆಲ್ವಿಟ್ಚಿಯಾ ಮಿರಾಬಿಲಿಸ್ ಪ್ರಶಸ್ತಿಯನ್ನು ಪಡೆದಿರುವುದು ನನಗೆ ತುಂಬಾ ಹೆಮ್ಮೆ ಮತ್ತು ಗೌರವದ ವಿಷಯ. ನಮೀಬಿಯಾ ಸರ್ಕಾರ, ಅಧ್ಯಕ್ಷರು ಮತ್ತು ಅಲ್ಲಿನ ಜನತೆಗೆ ಹೃತ್ಪೂರ್ವಕ ಕೃತಜ್ಞತೆಯನ್ನು ಅರ್ಪಿಸುತ್ತೇನೆ. 140 ಕೋಟಿ ಭಾರತೀಯರ ಪರವಾಗಿ ನಾನು ಈ ಗೌರವವನ್ನು ವಿನಮ್ರವಾಗಿ ಸ್ವೀಕರಿಸುತ್ತೇನೆ" ಎಂದು ಮೋದಿ ತಿಳಿಸಿದ್ದಾರೆ.



ವಿಶಿಷ್ಟ ಸೇವೆ ಮತ್ತು ನಾಯಕತ್ವವನ್ನು ಗುರುತಿಸಿ ನೀಡುವ ಈ ಪ್ರಶಸ್ತಿಯನ್ನು ನಮೀಬಿಯಾ ಸರ್ಕಾರ 1995ರಲ್ಲಿ ಸ್ಥಾಪಿಸಿತು. ನಮೀಬಿಯಾದ ವಿಶಿಷ್ಟ ಮತ್ತು ಪ್ರಾಚೀನ ಮರುಭೂಮಿ ಸಸ್ಯ ವೆಲ್ವಿಟ್ಚಿಯಾ ಮಿರಾಬಿಲಿಸ್‌ನ ಹೆಸರನ್ನು ಈ ಪ್ರಶಸ್ತಿಗೆ ಇಡಲಾಗಿದೆ.

"ನಮೀಬಿಯಾ ಮತ್ತು ಜಾಗತಿಕ ಸಾಮಾಜಿಕ-ಆರ್ಥಿಕ ಅಭಿವೃದ್ಧಿ ಮತ್ತು ಶಾಂತಿ ಹಾಗೂ ನ್ಯಾಯದ ಉತ್ತೇಜನಕ್ಕೆ ಗಣನೀಯ ಕೊಡುಗೆ ನೀಡಿದ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆರ್ಡರ್‌ ಆಫ್‌ ದಿ ಮೋಸ್ಟ್‌ ಏಷ್ಯೆಂಟ್‌ ವೆಲ್ವಿಟ್ಚಿಯಾ ಮಿರಾಬಿಲಿಸ್ ಪ್ರಶಸ್ತಿ ನೀಡುವ ಗೌರವ ನನಗೆ ಸಿಕ್ಕಿದೆ" ಎಂದು ನೆಟುಂಬೊ ನಂದಿ- ನದೈಟ್ವ್ ಈ ಸಂದರ್ಭದಲ್ಲಿ ತಿಳಿಸಿದರು.

4 ಪ್ರಶಸ್ತಿ

5 ದೇಶಗಳ ಪ್ರವಾಸದಲ್ಲಿ ಮೋದಿ ಒಟ್ಟು 4 ಪ್ರಶಸ್ತಿ ಪಡೆದುಕೊಂಡಿದ್ದಾರೆ. ಬ್ರಜಿಲ್‌ ಜತೆಗೆ ಟ್ರಿನಿಡಾಡ್ ಮತ್ತು ಟೊಬೆಗೊ ಸರ್ಕಾರವೂ ತಮ್ಮ ದೇಶದ ಅತ್ಯುನ್ನತ ನಾಗರಿಕ ಗೌರವ ನೀಡಿದ್ದವು.