Sheikh Hasina: ಪ್ರತಿಭಟನಾಕಾರರ ವಿರುದ್ಧ ಗುಂಡು ಹಾರಿಸಲು ಆದೇಶಿಸಿದ್ದ ಶೇಖ್ ಹಸೀನಾ? ಸದ್ದು ಮಾಡುತ್ತಿದೆ ಆಡಿಯೊ
ಪ್ರತಿಭಟನಾಕಾರರ ವಿರುದ್ಧ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಗುಂಡು ಹಾರಿಸಲು ಆದೇಶ ನೀಡಿದ್ದರೆ ಎನ್ನುವ ಪ್ರಶ್ನೆ ಈಗ ಕೇಳಿ ಬರುತ್ತಿದೆ. ಈ ಕುರಿತು ಹಳೆಯ ಆಡಿಯೊವೊಂದು ಸೋರಿಕೆಯಾಗಿದ್ದು, ಇದು ಈಗ ಶೇಖ್ ಹಸೀನಾ ಅವರಿಗೆ ಸಂಕಷ್ಟ ತಂದೊಡ್ಡುವ ಭೀತಿ ಉಂಟು ಮಾಡಿದೆ.


ಢಾಕಾ: ಪ್ರತಿಭಟನಾಕಾರರ ವಿರುದ್ಧ ಬಾಂಗ್ಲಾದೇಶದ (Bangladesh) ಮಾಜಿ ಪ್ರಧಾನಿ (Ex Prime Minister) ಶೇಖ್ ಹಸೀನಾ (Sheikh Hasina) ಗುಂಡು ಹಾರಿಸಲು ಆದೇಶ ನೀಡಿದ್ದರೆ ಎನ್ನುವ ಅನುಮಾನ ಮೂಡಿದೆ. ಈ ಕುರಿತು ಹಳೆಯ ಆಡಿಯೊವೊಂದು ಸೋರಿಕೆಯಾಗಿದ್ದು, ಇದು ಈಗ ಶೇಖ್ ಹಸೀನಾ ಅವರಿಗೆ ಸಂಕಷ್ಟ ತಂದೊಡ್ಡುವ ಭೀತಿ ಉಂಟು ಮಾಡಿದೆ. ಆದರೆ ಈ ಆರೋಪವನ್ನು ತಳ್ಳಿ ಹಾಕಿರುವ ಅವಾಮಿ ಲೀಗ್‌ನ ವಕ್ತಾರರು, ಶೇಖ್ ಹಸೀನಾ ಅವರದೆಂದು ಹೇಳಲಾಗುವ ಆಡಿಯೊ ಯಾವುದೇ ಕಾನೂನುಬಾಹಿರ ಆದೇಶವನ್ನು ಪ್ರತಿಬಿಂಬಿಸುವುದಿಲ್ಲ ಎಂದು ಹೇಳಿದೆ.
ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾ ಆಡಳಿತದ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ಭುಗಿಲೆದ್ದಾಗ ಮಾಜಿ ಪ್ರಧಾನಿ ಶೇಖ್ ಹಸೀನಾ ವಿದ್ಯಾರ್ಥಿಗಳ ನೇತೃತ್ವದ ಪ್ರತಿಭಟನೆಗಳನ್ನು ಮಾರಣಾಂತಿಕವಾಗಿ ಧಮನ ಮಾಡುವ ಪ್ರಯತ್ನ ಮಾಡಿದ್ದರು ಎನ್ನುವುದನ್ನು ತಿಳಿಸುವ ಆಡಿಯೊವೊಂದು ಸೋರಿಕೆಯಾಗಿದೆ.
ಈ ಅಡಿಯೊದಲ್ಲಿ ಹಸೀನಾ ಹಿರಿಯ ಅಧಿಕಾರಿಯೊಬ್ಬರಿಗೆ ಹೇಳಿರುವ ಮಾತುಗಳು ರೆಕಾರ್ಡ್ ಆಗಿವೆ. ಇದರಲ್ಲಿ ಅವರು ಭದ್ರತಾ ಸಿಬ್ಬಂದಿಗೆ ಪ್ರತಿಭಟನಾಕಾರರು ಎಲ್ಲೇ ಸಿಕ್ಕರೂ ಗುಂಡು ಹಾರಿಸಬೇಕು ಎಂದು ಹೇಳಿದ್ದಾರೆ. 2024ರ ಜುಲೈ 18ರಂದು ಹಸೀನಾ ಢಾಕಾದಲ್ಲಿರುವ ತಮ್ಮ ಅಧಿಕೃತ ನಿವಾಸವಾದ ಗಣಭಬನ್‌ನಲ್ಲಿದ್ದಾಗ ಈ ಆದೇಶ ನೀಡಿದ್ದರು ಎನ್ನಲಾಗಿದೆ.
ಈ ಆದೇಶದ ಸುಮಾರು ಒಂದು ಗಂಟೆಗಳ ಬಳಿಕ ಕಾನೂನು ಜಾರಿ ಅಧಿಕಾರಿಗಳು ರಾಜಧಾನಿಯಾದ್ಯಂತ ಕಾರ್ಯಾಚರಣೆಗಳಲ್ಲಿ ಮಿಲಿಟರಿ ದರ್ಜೆಯ ಶಸ್ತ್ರಾಸ್ತ್ರಗಳನ್ನು ಬಳಸಿದ್ದಾರೆ ಎನ್ನಲಾಗಿದೆ. ಬಾಂಗ್ಲಾದೇಶದಲ್ಲಿ ನಡೆದ ಪ್ರತಿಭಟನೆಯ ಸಮಯದಲ್ಲಿ ಸುಮಾರು 1,400 ಮಂದಿ ಸಾವನ್ನಪ್ಪಿದ್ದರು ಎಂದು ವಿಶ್ವಸಂಸ್ಥೆ ತಿಳಿಸಿದೆ.
ಇದನ್ನೂ ಓದಿ: Jack Dorsey: ಇಂಟರ್‌ನೆಟ್ ಬೇಡ, ವೈಫೈ ಬೇಕಿಲ್ಲ... ಹೊಸ ಮೆಸೆಂಜರ್ ಆ್ಯಪ್ ಆವಿಷ್ಕಾರ!
ಬಾಂಗ್ಲಾದೇಶದಲ್ಲಿ ನಡೆದ ಹಿಂಸಾಚಾರವು ಹಸೀನಾ ಅವರ ಅವಾಮಿ ಲೀಗ್ ಸರ್ಕಾರದ ಪತನಕ್ಕೆ ಕಾರಣವಾಗಿತ್ತು. ಕೊನೆಗೆ ಹಸೀನಾ ಅವರು 2024ರ ಆಗಸ್ಟ್ 5ರಂದು ದೇಶವನ್ನು ತೊರೆದು ಭಾರತಕ್ಕೆ ಬಂದರು. ಹಸೀನಾ ಬಾಂಗ್ಲಾದೇಶದ ವಿಶೇಷ ನ್ಯಾಯಮಂಡಳಿಯಲ್ಲಿ ವಿವಿಧ ಆರೋಪಗಳನ್ನು ಎದುರಿಸುತ್ತಿದ್ದು, ಬಾಂಗ್ಲಾದೇಶ ಸರ್ಕಾರವು ಅವರನ್ನು ಹಸ್ತಾಂತರಿಸುವಂತೆ ಮನವಿ ಸಲ್ಲಿಸಿದೆ. ಅಲ್ಲಿನ ಪ್ರಾಸಿಕ್ಯೂಟರ್‌ಗಳು ಹಸೀನಾ ವಿರುದ್ಧ ಪ್ರಾಥಮಿಕ ಪುರಾವೆಯಾಗಿ ಆಡಿಯೊವನ್ನು ಪ್ರಸ್ತುತಪಡಿಸಲು ಉದ್ದೇಶಿಸಿದ್ದಾರೆ ಎನ್ನಲಾಗಿದೆ.
ದೇಶದಿಂದ ಪಲಾಯನ ಮಾಡಿದ ಬಳಿಕ ಹಸೀನಾ ಈ ಆಡಿಯೊ ಕುರಿತು ಪ್ರತಿಕ್ರಿಯಿಸಿದ್ದು, ಸಾವಿಗೆ ಕಾರಣವಾಗುವ ಯಾವುದೇ ಬಲಪ್ರಯೋಗಕ್ಕೆ ಆದೇಶಿಸಿಲ್ಲ ಎಂದು ಹೇಳಿದ್ದಾರೆ. ಆದರೆ ಈಗ ಸೋರಿಕೆಯಾದ ಆಡಿಯೊ ಅವರ ವಿರುದ್ಧದ ತನಿಖೆಗೆ ಪ್ರಾಮುಖ್ಯ ಸಾಕ್ಷಿಯಾಗಿ ಪರಿಗಣಿಸುವ ಸಾಧ್ಯತೆ ಇದೆ. ಅವಾಮಿ ಲೀಗ್‌ನ ವಕ್ತಾರರು ಹಸೀನಾ ಅವರ ವಿರುದ್ದದ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಈ ಆಡಿಯೊದಲ್ಲಿ ಅವರು ಯಾವುದೇ ಕಾನೂನುಬಾಹಿರ ಆದೇಶವನ್ನು ನೀಡಿಲ್ಲ ಎಂದು ವಾದಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಮಂಡಳಿಗೆ ಸಲಹೆ ನೀಡುವ ಇಂಗ್ಲೆಂಡ್ ಮೂಲದ ಮಾನವ ಹಕ್ಕುಗಳ ವಕೀಲ ಟೋಬಿ ಕ್ಯಾಡ್‌ಮನ್, ಹಸೀನಾ ಅವರ ಈ ಆಡಿಯೊ ಅವರ ವಿಚಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ . ಇದರಲ್ಲಿ ಅವರ ಮಾತುಗಳು ಸ್ಪಷ್ಟವಾಗಿವೆ ಮತ್ತು ಸರಿಯಾಗಿ ದೃಢೀಕರಿಸಲ್ಪಟ್ಟಿವೆ ಎಂದು ತಿಳಿಸಿದ್ದಾರೆ.