ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Narendra Modi: ಪ್ರಧಾನಿ ಮೋದಿಗೆ ಬ್ರೆಜಿಲ್‌ನ ಅತ್ಯುನ್ನತ ನಾಗರಿಕ ಪ್ರಶಸ್ತಿ ಪ್ರದಾನ

ಬ್ರಜಿಲ್‌ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಂಗಳವಾರ (ಜು. 8) ಅಲ್ಲಿನ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಗ್ರ್ಯಾಂಡ್ ಕಾಲರ್ ಆಫ್ ದಿ ನ್ಯಾಷನಲ್ ಆರ್ಡರ್ ಆಫ್ ದಿ ಸದರ್ನ್ ಕ್ರಾಸ್ ಅನ್ನು ಪ್ರದಾನ ಮಾಡಲಾಯಿತು. ಪ್ರಧಾನಿಯಾದ ಬಳಿಕ ಮೋದಿ ಅವರಿಗೆ ದೊರೆತ 26ನೇ ಅಂತಾರಾಷ್ಟ್ರೀಯ ಗೌರವ ಇದಾಗಿದೆ.

ಪ್ರಧಾನಿ ಮೋದಿಗೆ ಬ್ರೆಜಿಲ್‌ನ ಅತ್ಯುನ್ನತ ನಾಗರಿಕ ಪ್ರಶಸ್ತಿ ಪ್ರದಾನ

Profile Ramesh B Jul 8, 2025 11:26 PM

ಬ್ರೆಜಿಲಿಯಾ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಮಂಗಳವಾರ (ಜು. 8) ಬ್ರೆಜಿಲ್‌ನ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಗ್ರ್ಯಾಂಡ್ ಕಾಲರ್ ಆಫ್ ದಿ ನ್ಯಾಷನಲ್ ಆರ್ಡರ್ ಆಫ್ ದಿ ಸದರ್ನ್ ಕ್ರಾಸ್ (Grand Collar of the National Order of the Southern Cross) ಅನ್ನು ಪ್ರದಾನ ಮಾಡಲಾಯಿತು. ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸಲು ಮತ್ತು ಪ್ರಮುಖ ಜಾಗತಿಕ ವೇದಿಕೆಗಳಲ್ಲಿ ಭಾರತ-ಬ್ರೆಜಿಲ್ ಸಹಕಾರವನ್ನು ಹೆಚ್ಚಿಸಲು ಪ್ರಧಾನಿ ಮೋದಿ ನೀಡಿದ ಗಮನಾರ್ಹ ಕೊಡುಗೆಗಳನ್ನು ಗುರುತಿಸಿ ಬ್ರೆಜಿಲ್ ಅಧ್ಯಕ್ಷ ಲೂಯಿಝ್‌ ಇನಾಸಿಯೊ ಲುಲಾ ಡ ಸಿಲ್ವಾ (Luiz Inacio Lula da Silva) ಈ ಗೌರವವನ್ನು ಪ್ರದಾನ ಮಾಡಿದರು.

"ಬ್ರೆಜಿಲ್‌ ಅಧ್ಯಕ್ಷರಿಂದ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಪಡೆದಿರುವುದು ನನಗೆ ಮಾತ್ರವಲ್ಲದೆ 140 ಕೋಟಿ ಭಾರತೀಯರಿಗೆ ಹೆಮ್ಮೆಯ ಕ್ಷಣ. ಅಧ್ಯಕ್ಷರಿಗೆ, ಬ್ರೆಜಿಲ್ ಸರ್ಕಾರಕ್ಕೆ ಮತ್ತು ಬ್ರೆಜಿಲ್ ಜನರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ಅರ್ಪಿಸುತ್ತೇನೆ" ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ. 2014ರಲ್ಲಿ ಪ್ರಧಾನಿ ಪಟ್ಟಕ್ಕೇರಿದಾಗಿನಿಂದ ಮೋದಿ ಅವರಿಗೆ ದೊರೆತ 26ನೇ ಅಂತಾರಾಷ್ಟ್ರೀಯ ಗೌರವ ಇದಾಗಿದೆ.



ಈ ಸುದ್ದಿಯನ್ನೂ ಓದಿ: PM Modi: ಬ್ರಿಕ್ಸ್ ಶೃಂಗಸಭೆಯಲ್ಲಿ ಉಗ್ರ ಪೋಷಕ ಪಾಕ್‌ ವಿರುದ್ಧ ಮೋದಿ ಗುಡುಗು..!

ಏನಿದು ಗ್ರ್ಯಾಂಡ್ ಕಾಲರ್ ಆಫ್ ದಿ ನ್ಯಾಷನಲ್ ಆರ್ಡರ್ ಆಫ್ ದಿ ಸದರ್ನ್ ಕ್ರಾಸ್ ಪ್ರಶಸ್ತಿ?

1822ರಲ್ಲಿ ಚಕ್ರವರ್ತಿ ಪೆಡ್ರೊ I ಸ್ಥಾಪಿಸಿದ ನ್ಯಾಷನಲ್ ಆರ್ಡರ್ ಆಫ್ ದಿ ಸದರ್ನ್ ಕ್ರಾಸ್ (Ordem Nacional do Cruzeiro do Sul) ಬ್ರೆಜಿಲ್‌ನ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ. ಬ್ರೆಜಿಲ್‌ಗೆ ವಿಶಿಷ್ಟ ಸೇವೆ ಸಲ್ಲಿಸಿದ ಅಥವಾ ದ್ವಿಪಕ್ಷೀಯ ಸಂಬಂಧಗಳಿಗೆ ಗಣನೀಯ ಕೊಡುಗೆ ನೀಡಿದ ವಿದೇಶಿ ಪ್ರಜೆಗಳಿಗೆ ಮಾತ್ರ ಇದನ್ನು ನೀಡಲಾಗುತ್ತದೆ.

ಗ್ರ್ಯಾಂಡ್ ಕಾಲರ್ ಆಫ್ ದಿ ನ್ಯಾಷನಲ್ ಆರ್ಡರ್ ಆಫ್ ದಿ ಸದರ್ನ್ ಕ್ರಾಸ್ ಪ್ರಶಸ್ತಿಯನ್ನು ಈ ಹಿಂದೆ ಅಮೆರಿಕ ಮಾಜಿ ಅಧ್ಯಕ್ಷ ಡ್ವೈಟ್ ಡಿ. ಐಸೆನ್‌ಹೋವರ್, ರಾಣಿ ಎಲಿಜಬೆತ್ II, ಪೋಪ್ ಜಾನ್ ಪಾಲ್ II, ಫ್ರೆಂಚ್ ಮಾಜಿ ಅಧ್ಯಕ್ಷ ಚಾರ್ಲ್ಸ್ ಡಿ. ಗೌಲ್, ಅರ್ಜೆಂಟೀನಾದ ಮಾಜಿ ಅಧ್ಯಕ್ಷ ಜುವಾನ್ ಪೆರಾನ್, ವೆನೆಜುವೆಲಾದ ಮಾಜಿ ಅಧ್ಯಕ್ಷ ಹ್ಯೂಗೋ ಚಾವೆಜ್, ಸ್ಪ್ಯಾನಿಷ್ ರಾಜನಾಗಿದ್ದ ಜುವಾನ್ ಕಾರ್ಲೋಸ್ I, ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸೇರಿದಂತೆ ಪ್ರಮುಖ ವಿಶ್ವ ನಾಯಕರಿಗೆ ನೀಡಲಾಗಿದೆ.

ಅದ್ಧೂರಿ ಸ್ವಾಗತ

ಅರ್ಜೆಂಟೀನಾ ಪ್ರವಾಸದ ಬಳಿಕ ನರೇಂದ್ರ ಮೋದಿ 4 ದಿನಗಳ ಭೇಟಿಗಾಗಿ ಜು. 6ರಂದು ಬ್ರೆಜಿಲ್‌ಗೆ ಬಂದಿಳಿದರು. ಗಲಿಯಾ ಅಂತಾರಾಷ್ಟ್ರೀಯ ವಿಮಾನಕ್ಕೆ ಬಂದಿಳಿದ ಮೋದಿ ಅವರನ್ನು ಸಾಂಪ್ರಾದಾಯಿಕವಾಗಿ ಸ್ವಾಗತಿಸಲಾಯಿತು. ಜು. 7 ಮತ್ತು ಜು. 8ರಂದು ರಿಯೊ ಡಿ ಜನೈರೊದಲ್ಲಿ ನಡೆದ ಬ್ರಿಕ್ಸ್‌ ಶೃಂಗಸಭೆಯಲ್ಲಿ ಮೋದಿ ಪಾಲ್ಗೊಂಡಿದ್ದಾರೆ. ಅಲ್ಲದೆ ಬ್ರೆಸಿಲಿಯಾದಲ್ಲಿ ಪ್ರಧಾನಿ ಮೋದಿ ಅಧ್ಯಕ್ಷ ಲೂಲಾ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಭಾರತ ಮತ್ತು ಬ್ರೆಜಿಲ್ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವುದು ಈ ಮಾತುಕತೆ ಉದ್ದೇಶ.