Metro fare hike: ಮೆಟ್ರೋ ಪ್ರಯಾಣಿಕರಿಗೆ ಬಿಗ್ ಶಾಕ್; ಟಿಕೆಟ್ ದರ ಶೇ.46 ಏರಿಕೆ, ನಾಳೆಯಿಂದಲೇ ಜಾರಿ
Metro fare hike: ಮೆಟ್ರೋ ಟಿಕೆಟ್ ಬಗ್ಗೆ ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್(BMRCL) ಅಧಿಕೃತ ಪ್ರಕಟಣೆ ಹೊರಡಿಸಿದೆ. ಕಳೆದ 8 ವರ್ಷದಿಂದ ಮೆಟ್ರೋ ಪ್ರಯಾಣ ದರ ಏರಿಕೆ ಆಗಿರಲಿಲ್ಲ. ಮೆಟ್ರೋ ಪ್ರಯಾಣ ದರ ಪರಿಷ್ಕರಣೆ ಸಂಬಂಧ ರಚಿಸಿದ್ದ ಸಮಿತಿ ಶಿಫಾರಸುಗಳ ಅನ್ವಯ ಇದೀಗ ದರ ಹೆಚ್ಚಿಸಲಾಗಿದೆ.
![ಮೆಟ್ರೋ ಪ್ರಯಾಣಿಕರಿಗೆ ಬಿಗ್ ಶಾಕ್; ಟಿಕೆಟ್ ದರ ಶೇ.46 ಏರಿಕೆ!](https://cdn-vishwavani-prod.hindverse.com/media/original_images/Metro.jpg)
![Profile](https://vishwavani.news/static/img/user.png)
ಬೆಂಗಳೂರು: ಸಾರಿಗೆ ಬಸ್ ಟಿಕೆಟ್ ದರ ಏರಿಕೆ ಬೆನ್ನಲ್ಲೇ ನಮ್ಮ ಮೆಟ್ರೋ ಪ್ರಯಾಣಿಕರಿಗೆ ದರ ಏರಿಕೆ (Metro fare hike) ಬಿಸಿ ತಟ್ಟಿದೆ. ಬೆಂಗಳೂರು ಮೆಟ್ರೋ ಟಿಕೆಟ್ ದರ ಶೇ.46 ವರೆಗೂ ಏರಿಕೆಯಾಗಲಿದ್ದು, ಭಾನುವಾರದಿಂದಲೇ ಅಧಿಕೃತವಾಗಿ ಪರಿಷ್ಕೃತ ದರ ಜಾರಿಯಾಗಲಿದೆ. ಟಿಕೆಟ್ ದರ ಗರಿಷ್ಠ 90 ರೂ.ಗೆ ಏರಿಕೆಯಾಗಲಿದ್ದು, ಕನಿಷ್ಠ 10 ರೂ.ನಲ್ಲೇ ಇರಲಿದೆ. ಈ ಬಗ್ಗೆ ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್(BMRCL) ಅಧಿಕೃತ ಪ್ರಕಟಣೆ ಹೊರಡಿಸಿದೆ. ಕಳೆದ 8 ವರ್ಷದಿಂದ ಮೆಟ್ರೋ ಪ್ರಯಾಣ ದರ ಏರಿಕೆ ಆಗಿರಲಿಲ್ಲ. ಮೆಟ್ರೋ ಪ್ರಯಾಣ ದರ ಪರಿಷ್ಕರಣೆ ಸಂಬಂಧ ರಚಿಸಿದ್ದ ಸಮಿತಿ ಶಿಫಾರಸುಗಳ ಅನ್ವಯ ಇದೀಗ ದರ ಹೆಚ್ಚಿಸಲಾಗಿದೆ.
ಮೆಟ್ರೋ ರೈಲ್ವೇ (ಕಾರ್ಯಾಚರಣೆ ಮತ್ತು ನಿರ್ವಹಣೆ) 2002ರ ಸೆಕ್ಷನ್ 34 ಕಾಯ್ದೆ ಅಡಿಯಲ್ಲಿ, ಕೇಂದ್ರ ಸರ್ಕಾರ ಆದೇಶದ ಅನುಸಾರ 2024ರ ಜುಲೈ 7ರಂದು ಹೈಕೋರ್ಟ್ ಮಾಜಿ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ದರ ಪರಿಷ್ಕರಣೆಗಾಗಿ ಸಮಿತಿಯನ್ನು ರಚಿಸಲಾಗಿತ್ತು. ದರ ಪರಿಷ್ಕರಣೆ ಸಮಿತಿಯು ಪರಿಷ್ಕೃತ ದರದ ಶಿಫಾರಸು ವರದಿಯನ್ನು ದಿನಾಂಕ 2024ರ ಡಿ.16ರಂದು ರಂದು ಸಲ್ಲಿಸಿತ್ತು. ಇದಕ್ಕೆ ಬಿಎಂಆರ್‌ಸಿಎಲ್ ಆಡಳಿತ ಮಂಡಳಿಯ ಅನುಮೋದನೆ ದೊರೆದಿದ್ದು, ಪರಿಷ್ಕೃತ ಟಿಕೆಟ್ ದರ ಫೆ. 9ರಿಂದ ಜಾರಿಗೆ ಬರಲಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.
ದರ ವಲಯ | ದೂರ (ಕಿಮೀ.) | ಶಿಫಾರಸು ಮಾಡಲಾದ ಪರಿಷ್ಕೃತ ದರ
F1 (0-2 ಕಿ.ಮೀ) 10 ರೂ.
F2 (2-4 ಕಿ.ಮೀ) 20 ರೂ.
F3 (4-6 ಕಿ.ಮೀ) 30 ರೂ
F4 (6-8 ಕಿ.ಮೀ) 40 ರೂ.
F5 (8-10 ಕಿ.ಮೀ) 50 ರೂ.
F6 (10-15 ಕಿ.ಮೀ) 60 ರೂ.
F7 (15-20 ಕಿ.ಮೀ) 70 ರೂ.
F8 (20-25 ಕಿ.ಮೀ) 80 ರೂ.
F9 (25-30ಕಿ.ಮೀ) 90 ರೂ.
F10 (30 ಕಿ.ಮೀ.ಕ್ಕಿಂತ ಹೆಚ್ಚು) 90 ರೂ.
![Metro Fare (1)](https://cdn-vishwavani-prod.hindverse.com/media/images/Metro_Fare_1.width-800.jpg)
ಸಮಿತಿಯ ಇತರ ಶಿಫಾರಸುಗಳು
- ಸ್ಮಾರ್ಟ್ ಕಾರ್ಡ್ ಗಳ ಮೇಲೆ ಮಾತ್ರ ಅಸ್ತಿತ್ವದಲ್ಲಿರುವ ಶೇ. 5 ರಿಯಾಯಿತಿಯನ್ನು ಮುಂದುವರಿಸಿದೆ.
- ಆಫ್-ಪೀಕ್ ಸಮಯದಲ್ಲಿ ಪ್ರಯಾಣಕ್ಕಾಗಿ ಮೆಟ್ರೋ ವ್ಯವಸ್ಥೆಗೆ ಪ್ರವೇಶಿಸುವ ಸಮಯವನ್ನು ಆಧರಿಸಿ ಸ್ಮಾರ್ಟ್ ಕಾರ್ಡ್‌ಗಳ ಮೇಲೆ ಹೆಚ್ಚುವರಿ ಶೇ. 5 ರಿಯಾಯಿತಿ, (ಶೇ. 5 ಪೀಕ್ ಅವರ್ + ಶೇ.5 ಆಫ್ ಪೀಕ್ ಅವರ್- ಒಟ್ಟು ಶೇ. 10 ರಿಯಾಯಿತಿ) ಆಫ್-ಪೀಕ್ ಸಮಯ: ವಾರದ ದಿನಗಳಲ್ಲಿ, ಬೆಳಗ್ಗೆ ಕಾರ್ಯಾಚರಣೆ ಆರಂಭದಿಂದ 8 ಗಂಟೆಯವರೆಗೆ, ಮಧ್ಯಾಹ್ನ 12 ಗಂಟೆಯಿಂದ 4 ಗಂಟೆಯವರೆಗೆ ಮತ್ತು ರಾತ್ರಿ 9 ಗಂಟೆಯಿಂದ ಕಾರ್ಯಾಚರಣೆ ಮುಕ್ತಾಯದವರೆಗೆ.
- ಎಲ್ಲಾ ಭಾನುವಾರ ಮತ್ತು ರಾಷ್ಟ್ರೀಯ ರಜಾದಿನಗಳಲ್ಲಿ (ಜನವರಿ 26, ಆಗಸ್ಟ್ 15, ಅಕ್ಟೋಬರ್ 02) ದಿನವಿಡೀ ಏಕರೂಪವಾಗಿ ಸ್ಮಾರ್ಟ್ ಕಾರ್ಡ್‌ಗಳ ಮೇಲೆ ಶೇ 10% ರಿಯಾಯಿತಿ.
- ಪ್ರಯಾಣಕ್ಕೆ ಬಳಸುವ ಸ್ಮಾರ್ಟ್ ಕಾರ್ಡಿನಲ್ಲಿ ಕನಿಷ್ಠ ಮೊತ್ತ ರೂ. 90 ಹೊಂದಿರಬೇಕು.
ಪ್ರಯಾಣ ದರ ಏರಿಕೆ ಕುರಿತ ಮಾಹಿತಿ:
— ನಮ್ಮ ಮೆಟ್ರೋ (@OfficialBMRCL) February 8, 2025
ದರ ಪರಿಷ್ಕರಣೆ ಸಮಿತಿಯ ಶಿಫಾರಸ್ಸಿನಂತೆ, ಇದೇ ಫೆಬ್ರವರಿ 9/2025 ರಿಂದ ನಮ್ಮ ಮೆಟ್ರೋ ದಲ್ಲಿ ಪರಿಷ್ಕೃತ ದರ ಜಾರಿಯಾಗಲಿದೆ. ಸ್ಮಾರ್ಟ್ ಕಾರ್ಡ್‌ಗಳ ಮೇಲೆ ಶೇ. 5 ರಷ್ಟು ರಿಯಾಯಿತಿ ಮುಂದುವರಿಯುತ್ತದೆ. ಹೆಚ್ಚಿನ ಮಾಹಿತಿಗಾಗಿ ಮಾಧ್ಯಮ ಪ್ರಕಟಣೆಯನ್ನು ಪರಿಶೀಲಿಸಿ. pic.twitter.com/jFNMnePq7L
ಪರಿಷ್ಕೃತ ಪ್ರವಾಸಿ ಕಾರ್ಡ್ (ದಿನದ ಪಾಸ್‌ಗಳು) ಮತ್ತು ಗ್ರೂಪ್ ಟಿಕೆಟ್ ದರಗಳು ಈ ಕೆಳಕಂಡಂತಿವೆ.
ಪ್ರವಾಸಿ ಕಾರ್ಡ್ (ದಿನದ ಪಾಸ್‌ಗಳು) ಮತ್ತು ಗ್ರೂಪ್ ಟಿಕೆಟ್ ದರಗಳನ್ನೂ ಬದಲಾವಣೆ ಮಾಡಲಾಗಿದೆ. ಪರಿಷ್ಕೃತ ದರ ಇಲ್ಲಿದೆ.
![Metro fare](https://cdn-vishwavani-prod.hindverse.com/media/images/Metro_fare.width-800.jpg)