Science exhibition: ಬುರ್ಖಾ ಧರಿಸದಿದ್ದರೆ ಏನಾಗುತ್ತೆ?; ವಿವಾದಕ್ಕೀಡಾದ ಖಾಸಗಿ ಶಾಲೆಯ ಸೈನ್ಸ್ ಪ್ರಾಜೆಕ್ಟ್!
Science exhibition: ಬುರ್ಖಾ ಧರಿಸಿದರೆ ಏನಾಗುತ್ತದೆ, ಇಲ್ಲದಿದ್ದರೆ ಏನಾಗಲಿದೆ ಎಂಬುದರ ಬಗ್ಗೆ ವಿದ್ಯಾರ್ಥಿನಿಯೊಬ್ಬಳು ಮಾಡಿರುವ ಸೈನ್ಸ್ ಪ್ರಾಜೆಕ್ಟ್ ಚರ್ಚೆಗೆ ಗ್ರಾಸವಾಗಿದೆ. ಚಾಮರಾಜನಗರದ ಖಾಸಗಿ ಶಾಲೆಯೊಂದರಲ್ಲಿ ಏರ್ಪಡಿಸಿದ್ದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ವಿದ್ಯಾರ್ಥಿನಿ ಸೈನ್ಸ್ ಪ್ರಾಜೆಕ್ಟ್ ಮಾಡಿದ್ದಾಳೆ. ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೊ ವೈರಲ್ ಆಗುತ್ತಿದೆ.


ಚಾಮರಾಜನಗರ: ಜಿಲ್ಲೆಯ ಖಾಸಗಿ ಶಾಲೆಯೊಂದರಲ್ಲಿ ಏರ್ಪಡಿಸಿದ್ದ ವಿಜ್ಞಾನ ವಸ್ತು ಪ್ರದರ್ಶನ (Science exhibition) ವಿವಾದಕ್ಕೀಡಾಗಿದೆ. ಬುರ್ಖಾ ಧರಿಸಿದರೆ ಏನಾಗುತ್ತದೆ, ಇಲ್ಲದಿದ್ದರೆ ಏನಾಗಲಿದೆ ಎಂಬುದರ ಬಗ್ಗೆ ವಿದ್ಯಾರ್ಥಿನಿಯೊಬ್ಬಳು ಮಾಡಿರುವ ಸೈನ್ಸ್ ಪ್ರಾಜೆಕ್ಟ್ ಚರ್ಚೆಗೆ ಗ್ರಾಸವಾಗಿದ್ದು, ಶಾಲೆಯ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ಶಾಲೆಗಳಲ್ಲಿ ಚಿಕ್ಕವಯಸ್ಸಿನಿಂದಲೇ ಮಕ್ಕಳಿಗೆ ವ್ಯವಸ್ಥಿತವಾಗಿ ಬ್ರೈನ್ ವಾಶ್ ಮಾಡಲಾಗುತ್ತಿದೆಯಾ? ಏನೂ ಅರಿಯದ ಮಕ್ಕಳ ತಲೆಯಲ್ಲಿ ಧರ್ಮಾಂಧತೆ, ಮೌಢ್ಯ ತುಂಬಲಾಗುತ್ತಿದೆಯಾ? ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.
ವಿದ್ಯಾರ್ಥಿನಿ ಮಾಡಿರುವ ಸೈನ್ಸ್ ಪ್ರಾಜೆಕ್ಟ್‌ನಲ್ಲಿ, ಎರಡು ಗೊಂಬೆಗಳನ್ನು ಶವದಂತೆ ಪೆಟ್ಟಿಗೆಯಲ್ಲಿ ಮಲಗಿಸಿದ್ದು, ಒಂದು ಗೊಂಬೆಯನ್ನು ಕಪ್ಪು ಬಟ್ಟೆಯಿಂದ ಮುಚ್ಚಿದ್ದು, ಮತ್ತೊದ್ದು ಗೊಂಬೆಯನ್ನು ಚೇಳು, ಹಾವಿನ ಚಿತ್ರವಿರುವ ಬಟ್ಟೆಯಿಂದ ಮುಚ್ಚಲಾಗಿದೆ. ಇದಕ್ಕೆ ವಿದ್ಯಾರ್ಥಿನಿ ವಿವರಣೆಯನ್ನೂ ಸಹ ನೀಡಿದ್ದಾಳೆ.
“ಬುರ್ಖಾ ಧರಿಸಿದರೆ ಸತ್ತ ಮೇಲೆ ಶವಕ್ಕೆ ಏನೂ ಆಗಲ್ಲ. ಒಂದು ವೇಳೆ ತುಂಡು ಉಡುಗೆ ತೊಟ್ಟರೆ ನರಕಕ್ಕೆ ಹೋಗುವುದರ ಜತೆಗೆ ನಿಮ್ಮ ದೇಹವನ್ನು ಹಾವು, ಚೇಳು ತಿನ್ನುತ್ತವೆ” ಎಂದು ವಿದ್ಯಾರ್ಥಿನಿ ತಿಳಿಸಿದ್ದಾಳೆ. ಸದ್ಯ ಈ ದೃಶ್ಯ ಸಾಮಾಜಿಕ ಜಾಲತಣಾದಲ್ಲಿ ವೈರಲ್ ಆಗುತ್ತಿದೆ.
ಈ ವಿಡಿಯೊವನ್ನು ಸರವಣಪ್ರಸಾದ್ ಬಾಲಸುಬ್ರಮಣಿಯನ್ ಎಂಬುವರು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿ, “ಕರ್ನಾಟಕದ ಚಾಮರಾಜನಗರದಲ್ಲಿನ ಶಾಲೆಯಲ್ಲಿ ವಿಜ್ಞಾನ ಪ್ರದರ್ಶನ ನಡೆಸಲಾಗಿದೆ. ಇದರಲ್ಲಿ ವಿದ್ಯಾರ್ಥಿನಿಯೊಬ್ಬಳ ಸೈನ್ಸ್ ಪ್ರಾಜೆಕ್ಟ್ ಈ ರೀತಿ ಇದೆ. ಬುರ್ಖಾ ಧರಿಸಿದರೆ ಸಮಾಧಿ ಹೂವುಗಳಿಂದ ತುಂಬಿರುತ್ತದೆ. ನೀವು ತುಂಡು ಉಡುಗೆ ತೊಟ್ಟರೆ, ಸಾವಿನ ನಂತರ ಸಮಾಧಿಯಲ್ಲಿ ಚೇಳುಗಳು ಮತ್ತು ಹಾವುಗಳು ಇರುತ್ತವೆ ಮತ್ತು ನರಕಕ್ಕೆ ಹೋಗುತ್ತೀರಿ ಎಂದು ವಿದ್ಯಾರ್ಥಿನಿ ಹೇಳಿದ್ದಾಳೆ” ಎಂದು ಅವರು ಬರೆದಿದ್ದಾರೆ.
A science exhibition for schools was held in Chamraj Nagar, Karnataka. This is the science creation of a student who participated in it.
— Saravanaprasad Balasubramanian (Modi ka Pariwar) (@BS_Prasad) March 24, 2025
If you wear a burqa, the grave will be full of flowers. If you wear half-dressed clothes, after death, there will be scorpions and snakes in… pic.twitter.com/mZdC36coje
”ಇದು ಕರ್ನಾಟಕದಲ್ಲಿನ ಅದ್ಭುತ ಶಾಲಾ ಶಿಕ್ಷಣ. ನೀವು ಆ ಶಾಲೆಯ ಯೂಟ್ಯೂಬ್ ಚಾನೆಲ್‌ಗೆ ಭೇಟಿ ನೀಡಿದರೆ ಇದೇ ರೀತಿಯ ಬಹಳಷ್ಟು ವಿಡಿಯೊಗಳನ್ನು ನೋಡಬಹುದು” ಹೇಳಿದ್ದಾರೆ. ಈ ಪೋಸ್ಟ್ಗೆ ಹಲವರು ಕಾಮೆಂಟ್ ಮಾಡಿದ್ದು, “ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಇದೆಂತ ಅಜ್ಞಾನ ನಡೆ. ಚಿಕ್ಕ ವಯಸ್ಸಿನ ಮಕ್ಕಳಲ್ಲಿ ಶಾಲೆಗಳು ಇತರ ಸಮುದಾಯದ ಮಹಿಳೆಯರ ಬಗ್ಗೆ ದ್ವೇಷ ಭಾವನೆ ಹುಟ್ಟು ಹಾಕುತ್ತಿವೆಯೇ?” ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Nagpur Violence: ನಾಗ್ಪುರ ಹಿಂಸಾಚಾರ- ಆರೋಪಿ ಫಾಹೀಮ್ ಖಾನ್ ಅಕ್ರಮ ಆಸ್ತಿಯ ಮೇಲೆ ಬುಲ್ಡೋಜರ್ ಕಾರ್ಯಾಚರಣೆ