ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

DK Shivakumar: ಕೇಂದ್ರ ಸರ್ಕಾರದ ಬೆಲೆ ಏರಿಕೆ ವಿರುದ್ಧ ಏ. 17ರಂದು ಪ್ರತಿಭಟನೆ: ಡಿಕೆಶಿ

DK Shivakumar: ಬಿಜೆಪಿಯ ಕೇಂದ್ರ ಸರ್ಕಾರದ ಬೆಲೆ ಏರಿಕೆ ವಿರುದ್ಧ ಹಾಗೂ ರಾಜ್ಯ ಬಿಜೆಪಿಯ ದ್ವಂದ್ವ ನಿಲುವಿನ ವಿರುದ್ಧ ಏ.17ರಂದು ಜಿಲ್ಲಾ ಕೇಂದ್ರಗಳು ಹಾಗೂ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ಬೆಲೆ ಏರಿಕೆ ಖಂಡಿಸಿ ಏ.17ರಂದು ಪ್ರತಿಭಟನೆ: ಡಿಕೆಶಿ

ಡಿಸಿಎಂ ಡಿ.ಕೆ.ಶಿವಕುಮಾರ್.

Profile Siddalinga Swamy Apr 10, 2025 9:04 PM

ಬೆಂಗಳೂರು: ಬಿಜೆಪಿಯ ಕೇಂದ್ರ ಸರ್ಕಾರದ ಬೆಲೆ ಏರಿಕೆ ವಿರುದ್ಧ ಹಾಗೂ ರಾಜ್ಯ ಬಿಜೆಪಿಯ ದ್ವಂದ್ವ ನಿಲುವಿನ ವಿರುದ್ಧ ಏ.17ರಂದು ಜಿಲ್ಲಾ ಕೇಂದ್ರಗಳು ಹಾಗೂ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar)‌ ತಿಳಿಸಿದರು. ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ನಡೆದ ‌ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಲೆ ಏರಿಕೆ ಹಾಗೂ ರಾಜ್ಯ ಬಿಜೆಪಿಯ ಇಬ್ಬಗೆ ನೀತಿಯ ವಿರುದ್ಧ ಸರಣಿ ವಾಗ್ದಾಳಿ ನಡೆಸಿದರು.

ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಈ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ಜಿಲ್ಲಾ ಹಾಗೂ ತಾಲೂಕು ಮಟ್ಟದ ಹೋರಾಟದ ಸ್ವರೂಪವನ್ನು ಶೀಘ್ರ ತಿಳಿಸಲಾಗುತ್ತದೆ. ಅವರ ಜನಾಕ್ರೋಶ ಯಾತ್ರೆಯ ವಿರುದ್ಧ ನಾವು ಏನಾದರೂ ಮಾಡಬೇಕಲ್ಲವೆ? ಎಂದು ಹೇಳಿದರು. ಬಿಜೆಪಿ ನಾಯಕರಾದ ಆರ್. ಅಶೋಕ್ ಹಾಗೂ ವಿಜಯೇಂದ್ರ ಅವರಿಗೆ ಕೇವಲ ರಾಜ್ಯ ಸರ್ಕಾರ ಏರಿಸಿದ ಹಾಲಿನ ದರ ಮಾತ್ರ ಕಣ್ಣಿಗೆ ಕಾಣುತ್ತಿದೆಯೇ? ಬಿಜೆಪಿ ರಾಜ್ಯದಲ್ಲಿ ನಡೆಸುತ್ತಿರುವ ಜನಾಕ್ರೋಶ ಯಾತ್ರೆ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಮಾಡುತ್ತಿರುವ ಯಾತ್ರೆ ಎಂದು ವ್ಯಂಗ್ಯವಾಡಿದರು.

ಕೇಂದ್ರ ಬಿಜೆಪಿಯಿಂದ ರಾಜ್ಯ ಬಿಜೆಪಿಗೆ ಗಿಫ್ಟ್

ಬಿಜೆಪಿಯವರು ಯಾತ್ರೆ ಹೊರಟ ದಿನವೇ ಕೇಂದ್ರ ಸರ್ಕಾರದವರು ಪೆಟ್ರೋಲ್, ಡೀಸೆಲ್‌ಗೆ ತಲಾ 2 ರೂ. ಹಾಗೂ ಗ್ಯಾಸ್ ಸಿಲಿಂಡರ್ ಬೆಲೆಯನ್ನು 50 ರೂ. ಜಾಸ್ತಿ ಮಾಡಿ ಇವರ ಯಾತ್ರೆಗೆ 'ಗಿಫ್ಟ್' ಕಳಿಸಿದ್ದಾರೆ. ಇದರ ಬಗ್ಗೆ ಜನಸಾಮಾನ್ಯರು ಮಾಡುತ್ತಿರುವ ಗುಣಗಾನವನ್ನು ಎಲ್ಲರು ಕೇಳಬೇಕು. ಕೇಂದ್ರ ಸರ್ಕಾರದ ವಿರುದ್ಧ ಮಾಡುತ್ತಿರುವ ಜನಾಕ್ರೋಶ ಯಾತ್ರೆ ಎಂದು ಬಿಜೆಪಿಯವರು ಬೋರ್ಡ್ ಹಾಕಿಕೊಳ್ಳಬೇಕು ಎಂದರು.

ಬುಧವಾರ ಕಚ್ಚಾ ತೈಲದ ಬೆಲೆ ಶೇ. 4.23ರಷ್ಟು ಇಳಿಕೆಯಾಗಿದೆ. ಆದರೂ ಕೇಂದ್ರ ಸರ್ಕಾರ ಬೆಲೆ ಇಳಿಕೆ ಮಾಡಿಲ್ಲ. ಪೆಟ್ರೋಲ್‌ನ ಮೂಲ ದರ ಪ್ರತಿ ಲೀಟರ್‌ಗೆ 42.60 ಪೈಸೆ ಇದೆ. ದೇಶದಾದ್ಯಂತ ಪ್ರತಿ ಲೀಟರ್ ಪೆಟ್ರೋಲ್ ‌103 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಒಂದು ಲೀಟರ್‌ಗೆ 60 ರೂ. ಲಾಭ ಸರ್ಕಾರಕ್ಕೆ ಸಿಗುತ್ತಿದೆ. ಡೀಸಲ್ ಬೆಲೆ 91 ರೂ. ಇದೆ. ಇದರಲ್ಲಿ 43 ರೂ. ಲಾಭ ಮಾಡುತ್ತಿದ್ದಾರೆ. ಪೆಟ್ರೋಲ್, ಡೀಸೆಲ್ ಮೇಲೆ ಶೇ. 60ರಷ್ಟು ತೆರಿಗೆ ಹಾಕಿದ್ದಾರೆ ಎಂದು ಆರೋಪಿಸಿದರು.

ನಮ್ಮ ಸರ್ಕಾರ ರೈತರ ಬದುಕನ್ನು ಉಳಿಸಲು ಹಾಲಿನ ದರ ಏರಿಕೆ ಮಾಡಿದ್ದೇವೆ. ಶಾಸಕ ವಿನಯ್ ಕುಲಕರ್ಣಿ ಅವರು ಪಶುಸಂಗೋಪನೆ ಮಾಡುತ್ತಿದ್ದಾರೆ. ಎಷ್ಟು ಖರ್ಚು ವೆಚ್ಚಗಳು ಹೆಚ್ಚಾಗಿವೆ ಎಂದು ಅವರನ್ನೇ ಕೇಳಬೇಕು. ಬಿಜೆಪಿಯವರು ಜಾನುವಾರುಗಳ ಬೂಸಾ, ಹಿಂಡಿ ಬೆಲೆಯನ್ನು ಏಕೆ ಕಡಿಮೆ ಮಾಡಿಸಲಿಲ್ಲ? ಎಂದು ಪ್ರಶ್ನಿಸಿದರು.

ಹಾಲಿನ ದರ ನಮ್ಮ ರಾಜ್ಯದಲ್ಲಿ ಅತ್ಯಂತ ಕಡಿಮೆಯಿದೆ. ಕರ್ನಾಟಕದಲ್ಲಿ ಲೀಟರ್‌ಗೆ 42 ರೂ. ಇದ್ದರೆ, ಕೇರಳದಲ್ಲಿ 52 ರೂ., ಗುಜರಾತ್‌ನಲ್ಲಿ 53 ರೂ., ದಿಲ್ಲಿಯಲ್ಲಿ 55 ರೂ., ಮಹಾರಾಷ್ಟ್ರದಲ್ಲಿ 52 ರೂ., ತೆಲಂಗಾಣದಲ್ಲಿ 58 ರೂ., ಅಸ್ಸಾಂನಲ್ಲಿ 60 ರೂ., ಹರಿಯಾಣದಲ್ಲಿ 56 ರೂ., ರಾಜಸ್ಥಾನದಲ್ಲಿ 50 ರೂ., ಮಧ್ಯ ಪ್ರದೇಶದಲ್ಲಿ 52 ರೂ., ಪಂಜಾಬ್‌ನಲ್ಲಿ 56 ರೂ. ಮತ್ತು ಉತ್ತರ ಪ್ರದೇಶದಲ್ಲಿ 56 ರೂ. ಇದೆ ಎಂದು ವಿವರಿಸಿದರು‌.

ನೀರಿನ ಬೆಲೆ ಏರಿಕೆಯನ್ನು ಅತ್ಯಂತ ಕಡಿಮೆ ಏರಿಕೆ ಮಾಡಿದ್ದೇವೆ. ಕಸ ಸಂಗ್ರಹಣೆ ಶುಲ್ಕವನ್ನು ಈ ಹಿಂದಿನ ಬಿಜೆಪಿ ಸರ್ಕಾರ ನಿಗದಿ ಮಾಡಿದ್ದಕ್ಕಿಂತ ಕಡಿಮೆ ನಿಗದಿ ಮಾಡಿ ಬಡವರ ಪರವಾಗಿ ನಾವು ನಿರ್ಧಾರ ತೆಗೆದುಕೊಂಡಿದ್ದೇವೆ. ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದ್ದ ಜನರ ಬದುಕು ಹಸನಾಗಲಿ ಎಂದು ಗ್ಯಾರಂಟಿ ಯೋಜನೆ ಮೂಲಕ 52 ಸಾವಿರ ಕೋಟಿ ರೂ. ಮೀಸಲಿಟ್ಟಿದ್ದೇವೆ ಎಂದರು.

ಬಿಜೆಪಿಯವರ ಫೋಟೋ ಹಾಕಿಕೊಳ್ಳಲಿ

ಬಿಜೆಪಿಯವರು ಪ್ರತಿಭಟನಾ ಬ್ಯಾನರ್‌ನಲ್ಲಿ ನನ್ನ ಹಾಗೂ ಸಿದ್ದರಾಮಯ್ಯ ಅವರ ಫೋಟೊಗಳನ್ನು ಹಾಕುವ ಬದಲು ಕೇಂದ್ರ ನಾಯಕರ ಫೋಟೊ ಹಾಕಿಕೊಳ್ಳಲಿ. ನಮ್ಮ ಬೆಲೆ ಏರಿಕೆ ಬದಲು ಬಿಜೆಪಿಯವರು ಕೇಂದ್ರ ಬೆಲೆ ಏರಿಕೆಯನ್ನು ಪ್ರಶ್ನಿಸಲಿ. ನಿಮ್ಮ ಆಕ್ರೋಶ ನಿಮ್ಮ ನಾಯಕರ ಮೇಲಿರಲಿ, ಇದರಿಂದ ಜನರಿಗೆ, ಪಕ್ಷಕ್ಕೆ ಸೇರಿದಂತೆ ಎಲ್ಲರಿಗೂ ತೊಂದರೆಯಾಗುತ್ತಿದೆ ಎಂದು ವಿವರಿಸಬೇಕು ಎಂದು ಡಿ.ಕೆ. ಶಿವಕುಮಾರ್‌ ವ್ಯಂಗ್ಯವಾಡಿದರು.

ಅಹಮದಾಬಾದ್ ಎಐಸಿಸಿ ಅಧಿವೇಶನದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬೆಳಗಾವಿಯ ಅಧಿವೇಶನದಲ್ಲಿ ಈ ವರ್ಷವನ್ನು ಸಂಘಟನೆಯ ವರ್ಷ ಎಂದು ಘೋಷಣೆ ಮಾಡಲಾಗಿತ್ತು. ಸ್ಥಳೀಯ ಮಟ್ಟದ ನಾಯಕರಿಗೆ ಹೆಚ್ಚಿನ ಅಧಿಕಾರ ಕೊಡಬೇಕು ಎನ್ನುವ ಚರ್ಚೆ ನಡೆಸಲಾಯಿತು. ಬಡ, ಹಿಂದುಳಿದ ವರ್ಗಗಳ ರಕ್ಷಣೆಗೆ ಹೊಸ ಕಾರ್ಯಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ತೀರ್ಮಾನ ಮಾಡಲಾಯಿತು. ಪಕ್ಷಕ್ಕೆ ಹೊಸದಿಕ್ಕು ನೀಡುವುದಕ್ಕೆ ಹೆಚ್ಚಿನ ಒತ್ತು ನೀಡಲಾಯಿತು ಎಂದರು.

ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಸೇರಿದಂತೆ ಇತರೆ ಚರ್ಚೆಗಳ ಬಗ್ಗೆ ಕೇಳಿದಾಗ ಯಾವುದೇ ಬದಲಾವಣೆಯಿಲ್ಲ. ಒಂದಷ್ಟು ಪದಾಧಿಕಾರಿಗಳನ್ನು ನೇಮಕ ಮಾಡುತ್ತಾರೆ. ಒಂದಷ್ಟು ಜಿಲ್ಲಾ ಅಧ್ಯಕ್ಷರನ್ನು ಬದಲಾವಣೆ ಮಾಡುತ್ತಾರೆ. ಇದು ಹೊರತಾಗಿ ಯಾರೂ ಸಹ ಯಾವುದೇ ವಿಷಯವನ್ನು ನನ್ನ ಬಳಿ ಚರ್ಚೆ ಮಾಡಿಲ್ಲ ಎಂದು ತಿಳಿಸಿದರು.

ವಿಧಾನಪರಿಷತ್ ಸದಸ್ಯರ ನಾಮನಿರ್ದೇಶನದ ಬಗ್ಗೆ ಕೇಳಿದಾಗ ಏ.17ರಂದು ಪ್ರಧಾನ ಕಾರ್ಯದರ್ಶಿ ರಾಜ್ಯಕ್ಕೆ ಬರಲಿದ್ದಾರೆ ಎಂದು ತಿಳಿಸಿದರು. ಬೆಂಗಳೂರು ಬಿಟ್ಟು ಬೇರೆ ಕಡೆ ಎರಡನೇ ವಿಮಾನ ನಿಲ್ದಾಣವಾಗಲಿ ಎಂದು ಒಂದಷ್ಟು ಶಾಸಕರು ಪತ್ರ ಬರೆದಿರುವ ಬಗ್ಗೆ ಕೇಳಿದಾಗ ನನಗೆ ಈ ಬಗ್ಗೆ ತಿಳಿದಿಲ್ಲ. ನನಗೆ ಇಡೀ ಕರ್ನಾಟಕವೇ ಒಂದು. ಚಾಮರಾಜನಗರ, ಬೀದರ್, ಕಲಬುರಗಿ ಎಲ್ಲವೂ ನನಗೆ ಒಂದೇ. ಒಂದಷ್ಟು ಜನ ತಮ್ಮ ಆಸೆ ಹೇಳಿಕೊಂಡಿದ್ದಾರೆ. ಅವರಲ್ಲಿ ಭೂಮಿ ಬೆಲೆ ಕಡಿಮೆಯಿದೆ ಆದ ಕಾರಣಕ್ಕೆ ಹೇಳಿರಬಹುದು. ಇದರ ಬಗ್ಗೆ ಕೇಂದ್ರ ಸರ್ಕಾರ ತೀರ್ಮಾನ ಮಾಡುತ್ತದೆ ಹೊರತು ನಾವಲ್ಲ ಎಂದು ಹೇಳಿದರು.

ನಾನು ಪ್ರತ್ಯೇಕ ಮನವಿ ನೀಡಿಲ್ಲ

ನೀವು ಪ್ರತ್ಯೇಕವಾಗಿ ವಿಮಾನ ನಿಲ್ದಾಣಕ್ಕೆ ಮನವಿ ನೀಡಿರುವ ಬಗ್ಗೆ ಕೇಳಿದಾಗ ನಾನು ಯಾವುದೇ ಮನವಿ ನೀಡಿಲ್ಲ. ಇದಕ್ಕೆ ಮಂತ್ರಿಗಳು ಇದ್ದಾರೆ ಅವರು ಇದನ್ನು ನಿಭಾಯಿಸುತ್ತಿದ್ದಾರೆ ಎಂದರು. ಎಐಸಿಸಿ ಅಧಿವೇಶನದಲ್ಲಿ ರಾಯಚೂರಿನ ಸಾಮಾನ್ಯ ಕಾರ್ಯಕರ್ತನಿಗೆ ಮಾತನಾಡಲು ಅವಕಾಶ ಸಿಕ್ಕಿತು ನಿಮಗೆ ಸಿಕ್ಕಿಲ್ಲ ಎಂದು ಕೇಳಿದಾಗ ಯಾರು ಹೇಳಿದವರು.‌ ನಾವು ಆಂತರಿಕ ಸಭೆಯಲ್ಲಿ ಮಾತನಾಡಿದ್ದೇವೆ. ಅದನ್ನೆಲ್ಲಾ ನೇರಪ್ರಸಾರ ಮಾಡಲು ಆಗುತ್ತದೆಯೇ? ಮುಖ್ಯಮಂತ್ರಿ ರಾಜ್ಯದ ಸಂಗತಿಗಳ ಬಗ್ಗೆ ಮಾತನಾಡಿದ್ದಾರೆ. ನಾವೆಲ್ಲರೂ ಕಾರ್ಯಕಾರಿ ಸಮಿತಿಯ ಸದಸ್ಯರು. ವೀರಪ್ಪ ಮೊಯಿಲಿ, ಶ್ರೀನಿವಾಸ್ ಸೇರಿದಂತೆ ಅನೇಕರು ಮಾತನಾಡಿದ್ದಾರೆ ಎಂದರು.

ಈ ಸುದ್ದಿಯನ್ನೂ ಓದಿ | Bangalore News: ಅವಧಿಗೂ ಮುನ್ನ ಜನಿಸಿದ 830 ಗ್ರಾಂ ತೂಕದ ಶಿಶುವನ್ನು ರಕ್ಷಿಸುವಲ್ಲಿ ಯಶಸ್ವಿಯಾದ ವೈದ್ಯರು!

ಸಿಎಂ ವಿರುದ್ಧ ಸುಳ್ಳು ಆರೋಪ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಗಣಿ ಗುತ್ತಿಗೆ ಕಿಕ್ ಬ್ಯಾಕ್ ಪಡೆದ ಆರೋಪದ ಬಗ್ಗೆ ಕೇಳಿದಾಗ ರಾಜಕೀಯವಾಗಿ ಆರೋಪ‌ ಮಾಡಲು ಪ್ರಯತ್ನ ಮಾಡುತ್ತಿರಬಹುದು. ಇದರಲ್ಲಿ ಯಾವುದೇ ಸತ್ಯವಿಲ್ಲ. ಕಾನೂನಿನ ಚೌಕಟ್ಟು ಬಿಟ್ಟು ಯಾರೂ ಈ ರೀತಿ ಮಾಡಲು ಆಗುವುದಿಲ್ಲ. ಈ ವಿಚಾರದಲ್ಲಿ ಮುಖ್ಯಮಂತ್ರಿಯವರು ಜವಾಬ್ದಾರಿಯಿಂದ ನಡೆದುಕೊಂಡಿದ್ದಾರೆ. ಎಲ್ಲವು ಸುಳ್ಳು ಆರೋಪ ಎಂದು ತಿಳಿಸಿದರು.