MB Patil: ಸರ್ಕಾರಿ, ಖಾಸಗಿ ಉತ್ಪನ್ನಗಳ ಮಾರಾಟ, ಖರೀದಿಗೆ ಇ-ಕಾಮರ್ಸ್ ಪೋರ್ಟಲ್ ತೆರೆಯಲು ಸಿದ್ಧತೆ: ಎಂ.ಬಿ. ಪಾಟೀಲ್
MB Patil: ಸರ್ಕಾರಿ ಸ್ವಾಮ್ಯದ ಎಂಎಸ್ಐಎಲ್, ವಿವಿಧ ಉತ್ಪನ್ನಗಳ ಮಾರಾಟಕ್ಕೆ ಇ-ಕಾಮರ್ಸ್ ಪೋರ್ಟಲ್ ತೆರೆಯಲು ಸಿದ್ಧತೆ ನಡೆಸಿದೆ. ಕೇಂದ್ರ ಸರ್ಕಾರದ ಜೆಮ್ ಪೋರ್ಟಲ್ ಮಾದರಿಯಲ್ಲಿ ರಾಜ್ಯ ಸರ್ಕಾರಿ ಸೇರಿದಂತೆ ಖಾಸಗಿ ಒಡೆತನದ ವಿವಿಧ ಉತ್ಪನ್ನಗಳ ಮಾರಾಟದ ಜತೆಗೆ ಖರೀದಿ ವ್ಯವಸ್ಥೆಗೂ ಇದು ವೇದಿಕೆಯಾಗಲಿದೆ. ಈ ಸಂಬಂಧ ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್, ಶನಿವಾರ ಎಂಎಸ್‌ಐಎಲ್‌ನ ಹಿರಿಯ ಅಧಿಕಾರಿಗಳ ಸಭೆ ನಡೆಸಿ, ವಿಸ್ತೃತವಾಗಿ ಚರ್ಚಿಸಿದರು.


ಬೆಂಗಳೂರು: ಸರ್ಕಾರಿ ಸ್ವಾಮ್ಯದ ಎಂಎಸ್ಐಎಲ್ (MSIL), ವಿವಿಧ ಉತ್ಪನ್ನಗಳ ಮಾರಾಟಕ್ಕೆ ಇ-ಕಾಮರ್ಸ್ ಪೋರ್ಟಲ್ ತೆರೆಯಲು ಸಿದ್ಧತೆ ನಡೆಸಿದೆ. ಕೇಂದ್ರ ಸರ್ಕಾರದ ಜೆಮ್ ಪೋರ್ಟಲ್ ಮಾದರಿಯಲ್ಲಿ ರಾಜ್ಯ ಸರ್ಕಾರಿ ಸೇರಿದಂತೆ ಖಾಸಗಿ ಒಡೆತನದ ವಿವಿಧ ಉತ್ಪನ್ನಗಳ ಮಾರಾಟದ ಜತೆಗೆ ಖರೀದಿ ವ್ಯವಸ್ಥೆಗೂ ಇದು ವೇದಿಕೆಯಾಗಲಿದೆ. ಈ ಸಂಬಂಧ ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ (MB Patil) ಅವರು ಶನಿವಾರ ಎಂಎಸ್‌ಐಎಲ್‌ನ ಹಿರಿಯ ಅಧಿಕಾರಿಗಳ ಸಭೆ ನಡೆಸಿ, ವಿಸ್ತೃತವಾಗಿ ಚರ್ಚಿಸಿದರು. ಇದೊಂದು ಉತ್ತಮ ಕಾರ್ಯಕ್ರಮವಾಗಿದ್ದು, ಜಾರಿಗೆ ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಇದರ ಕಾರ್ಯಾಚರಣೆಯನ್ನು ನಾಲ್ಕು ಹಂತಗಳಲ್ಲಿ ಅಭಿವೃದ್ಧಿಪಡಿಸಲಾಗುವುದು. ಇದು ಕಾರ್ಯರೂಪಕ್ಕೆ ಬಂದರೆ ಸರ್ಕಾರಿ ಇಲಾಖೆಗಳು ಯಾವುದೇ ಟೆಂಡರ್ ಇಲ್ಲದೆ ತಮ್ಮ ಇಲಾಖೆಗೆ ಬೇಕಾಗುವ ಸಾಮಗ್ರಿಗಳನ್ನು ಇದರ ಮೂಲಕವೇ ಖರೀದಿಸಬಹುದು. ಹಾಗೆಯೇ, ಮಾರಾಟ ಕೂಡ ಮಾಡಬಹುದು. ಕೇಂದ್ರ ಸರ್ಕಾರದ ಮಟ್ಟದಲ್ಲಿ ಟೆಂಡರ್ ಇಲ್ಲದೆ ನೇರವಾಗಿ ಖರೀದಿಸಲು ಜೆಮ್ ಪೋರ್ಟಲ್ ಇದ್ದು, ಅದೇ ಮಾದರಿಯಲ್ಲಿ ಇದು ಕೂಡ ಕೆಲಸ ಮಾಡಲಿದೆ ಎಂದು ಸಚಿವ ಎಂ.ಬಿ. ಪಾಟೀಲ ವಿವರಿಸಿದರು.
ಮೊದಲ ಹಂತದಲ್ಲಿ ಕೇವಲ ಎಂಎಸ್‌ಐಎಲ್ ಉತ್ಪನ್ನಗಳನ್ನು ಮಾರಾಟ ಮಾಡುವುದು. ಎರಡನೇ ಹಂತದಲ್ಲಿ ಮೈಸೂರು ಸ್ಯಾಂಡಲ್ ಸೋಪು, ಲಿಡ್ಕರ್ ಉತ್ಪನ್ನ, ಮೈಸೂರು ರೇಷ್ಮೆ ಬಟ್ಟೆ, ಕಾವೇರಿ ಎಂಪೋರಿಯಂ ಉತ್ಪನ್ನ, ನಂದಿನಿ ಉತ್ಪನ್ನ ಇತ್ಯಾದಿ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಉತ್ಪನ್ನಗಳನ್ನು ಮಾರಾಟ ಮಾಡಲಾಗುವುದು. ಇದರಲ್ಲಿ ಎಂಎಸ್‌ಎಂಇ ಉತ್ಪನ್ನಗಳು ಹಾಗೂ ಮಹಿಳಾ ಸ್ವಸಹಾಯ ಸಂಘಗಳು ತಯಾರಿಸುವ ಉತ್ಪನ್ನಗಳಿಗೂ ವೇದಿಕೆ ಕಲ್ಪಿಸಲಾಗುವುದು ಎಂದು ಅವರು ತಿಳಿಸಿದರು.
ಮೂರನೇ ಹಂತದಲ್ಲಿ ಗ್ರಾಹಕ ಉತ್ಪನ್ನಗಳು ಮತ್ತು ಎಲೆಕ್ಟ್ರಾನಿಕ್ ಉತ್ಪನ್ನಗಳು ಹಾಗೂ ನಾಲ್ಕನೇ ಹಂತದಲ್ಲಿ ತಾಜಾ ಉತ್ಪನ್ನಗಳನ್ನು ಇ-ಕಾಮರ್ಸ್ ಮೂಲಕ ಮಾರಾಟ ಮಾಡುವ ಉದ್ದೇಶ ಇದೆ ಎಂದು ಅವರು ಹೇಳಿದ್ದಾರೆ.
ದೇಶದ ಇ-ಕಾಮರ್ಸ್ ವಹಿವಾಟು ಈಗ ವಾರ್ಷಿಕ 75 ಬಿಲಿಯನ್ ಡಾಲರ್ ಇದೆ. 2030ರ ಹೊತ್ತಿಗೆ ಇದು 350 ಬಿಲಿಯನ್ ಡಾಲರ್ ಮುಟ್ಟಲಿದೆ ಎಂದು ಅಂದಾಜಿಸಲಾಗಿದೆ. ನಮ್ಮಲ್ಲಿ ಈಗ 900 ಮಿಲಿಯನ್ ಇಂಟರ್ನೆಟ್ ಬಳಕೆದಾರರು ಇದ್ದಾರೆ. ಇವೆಲ್ಲವೂ ಇ-ಕಾಮರ್ಸ್ ಬೆಳವಣಿಗೆಗೆ ಪೂರಕವಾಗಿ ಒದಗಿ ಬರಲಿವೆ ಎಂದು ಸಚಿವ ಎಂ.ಬಿ. ಪಾಟೀಲ ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ | Karnataka Weather: ನಾಳೆ ದಕ್ಷಿಣ ಕನ್ನಡ, ಕೊಡಗು ಸೇರಿ ಈ ಜಿಲ್ಲೆಗಳಲ್ಲಿ ಹಗುರ ಮಳೆ ಸಾಧ್ಯತೆ
ಎಂಎಸ್‌ಐಎಲ್ ವ್ಯವಸ್ಥಾಪಕ ನಿರ್ದೇಶಕ ಮನೋಜಕುಮಾರ್, ನಿರ್ದೇಶಕ ಚಂದ್ರಪ್ಪ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.