ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

L2 Empuraan Row: ಸಂಘ ಪರಿವಾರ ಕೋಮು ದ್ವೇಷ ಹರಡುತ್ತಿದೆ; ʼಎಂಪುರಾನ್‌ʼ ವಿವಾದಕ್ಕೆ ತುಪ್ಪ ಸುರಿದ ಕೇರಳ ಸಿಎಂ ಪಿಣರಾಯಿ ವಿಜಯನ್‌

Pinarayi Vijayan: ಬಹು ನಿರೀಕ್ಷೆಯೊಂದಿಗೆ ತೆರೆಗೆ ಬಂದಿರುವ ಮಲಯಾಳಂ ಚಿತ್ರ ʼಎಲ್‌ 2: ಎಂಪುರಾನ್‌ʼ ಸದ್ಯ ಕೇರಳ ರಾಜಕೀಯದಲ್ಲಿ ಕೋಲಾಹಲ ಎಬ್ಬಿಸಿದೆ. ಸಿನಿಮಾದಲ್ಲಿ 2002ರಲ್ಲಿ ನಡೆದ ಗುಜರಾತ್‌ ಗಲಭೆಯ ವಿವರಗಳನ್ನು ತಪ್ಪಾಗಿ ನಿರೂಪಿಸಿ ಬಲ ಪಂಥೀಯರ ವಿರುದ್ದ ಜನರನ್ನು ಎತ್ತಿ ಕಟ್ಟಲಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಆರ್‌ಎಸ್‌ಎಸ್‌, ಸಂಘ ಪರಿವಾರ, ಬಿಜೆಪಿ ನಾಯಕರು ಧ್ವನಿ ಎತ್ತಿದ್ದಾರೆ. ಇದೀಗ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಚಿತ್ರತಂಡದ ಬೆಂಬಲಕ್ಕೆ ಧಾವಿಸಿದ್ದಾರೆ.

ಸಂಘ ಪರಿವಾರ ಕೋಮು ದ್ವೇಷ ಹರಡುತ್ತಿದೆ: ಪಿಣರಾಯಿ ವಿಜಯನ್‌

'ಎಂಪುರಾನ್‌ʼ ಚಿತ್ರದ ಪೋಸ್ಟರ್‌.

Profile Ramesh B Mar 31, 2025 5:27 PM

ತಿರುವನಂತಪುರಂ: ಬಹು ನಿರೀಕ್ಷೆಯೊಂದಿಗೆ ತೆರೆಗೆ ಬಂದಿರುವ ಮಲಯಾಳಂ ಚಿತ್ರ ʼಎಲ್‌ 2: ಎಂಪುರಾನ್‌ʼ (L2 Empuraan) ಸದ್ಯ ಕೇರಳ ರಾಜಕೀಯದಲ್ಲಿ ಕೋಲಾಹಲ ಎಬ್ಬಿಸಿದೆ (L2 Empuraan Row). ಸಿನಿಮಾದಲ್ಲಿ 2002ರಲ್ಲಿ ನಡೆದ ಗುಜರಾತ್‌ ಗಲಭೆಯ ವಿವರಗಳನ್ನು ತಪ್ಪಾಗಿ ನಿರೂಪಿಸಿ ಬಲ ಪಂಥೀಯರ ವಿರುದ್ದ ಜನರನ್ನು ಎತ್ತಿ ಕಟ್ಟಲಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಆರ್‌ಎಸ್‌ಎಸ್‌, ಸಂಘ ಪರಿವಾರ, ಬಿಜೆಪಿ ನಾಯಕರು ಧ್ವನಿ ಎತ್ತಿದ್ದಾರೆ. ಆ ಮೂಲಕ ದೇಶಾದ್ಯಂತ ಚರ್ಚೆ ಆರಂಭವಾಗಿದೆ. ಜತೆಗೆ ಚಿತ್ರತಂಡ 17 ಕಡೆ ಕತ್ತರಿ ಪ್ರಯೋಗ ಮಾಡಿದೆ. ಸುಮಾರು 3 ನಿಮಿಷಗಳ ಕಾಲ ಚಿತ್ರವನ್ನು ಟ್ರಿಮ್‌ ಮಾಡಲಾಗಿದೆ. ಇದೀಗ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ (Pinarayi Vijayan) ಚಿತ್ರತಂಡದ ಬೆಂಬಲಕ್ಕೆ ಧಾವಿಸಿದ್ದಾರೆ.

ಸಂಘ ಪರಿವಾರ ಮತ್ತು ಆರ್‌ಎಸ್‌ಎಸ್‌ ಕೋಮುವಾದ ಹರಡುತ್ತಿದೆ ಎಂದು ಅವರು ಕಿಡಿಕಾರಿದ್ದಾರೆ. ʼʼಚಿತ್ರದಲ್ಲಿ ಗುಜರಾತ್‌ ಕೋಮು ಗಲಭೆಯನ್ನು ಪ್ರಸ್ತಾವಿಸಿದ್ದು ಸಂಘ ಪರಿವಾರದ ನಾಯಕರ ಕೋಪಕ್ಕೆ ಕಾರಣವಾಗಿದೆ. ಯಾಕೆಂದರೆ ಇದು ದೇಶ ಕಂಡ ಅತ್ಯಂತ ಕ್ರೂರ ನರಮೇಧಗಳಲ್ಲಿ ಒಂದು" ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್‌ ಹೇಳಿದ್ದಾರೆ.

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಪೋಸ್ಟ್‌ ಇಲ್ಲಿದೆ:



ಈ ಸುದ್ದಿಯನ್ನೂ ಓದಿ: L2: Empuraan: ಪ್ರೇಕ್ಷಕರ ಆಕ್ರೋಶಕ್ಕೆ ಮಂಡಿಯೂರಿದ ʼಎಂಪುರಾನ್‌ʼ ಚಿತ್ರತಂಡ; ನಟ ಮೋಹನ್‌ಲಾಲ್‌ ಕ್ಷಮೆ ಕೋರಿದ್ಯಾಕೆ?

ಮಾಲಿವುಡ್‌ ಸೂಪರ್‌ ಸ್ಟಾರ್‌ ಮೋಹನ್‌ಲಾಲ್‌ ನಟನೆಯ, ಪೃಥ್ವಿರಾಜ್‌ ನಿರ್ದೇಶನದ ಪಾಲಿಟಿಕಲ್‌ ಆ್ಯಕ್ಷನ್‌ ಥ್ರಿಲ್ಲರ್‌ 'ಎಂಪುರಾನ್‌' ಚಿತ್ರದಲ್ಲಿ ಗುಜರಾತ್‌ ಗಲಭೆಯನ್ನು ಉಲ್ಲೇಖಿಸಲಾಗಿದೆ. ಅಲ್ಲದೆ ಸಿನಿಮಾದಲ್ಲಿನ ಗರ್ಭಿಣಿಯನ್ನು ಅತ್ಯಾಚಾರ ಎಸಗುವ ದೃಶ್ಯ, ವಿಲನ್‌ಗೆ ಹಿಂದೂ ಪರ ಸಂಘಟನೆಯ ನಾಯಕರನ್ನು ಹೋಲುವ ಹೆಸರಿಟ್ಟಿರುವುದು ವಿವಾದಕ್ಕೆ ಕಾರಣವಾಗಿದೆ. ಆ ಮೂಲಕ ಹಿಂದೂ ವಿರುದ್ಧ ಮತ್ತು ಬಿಜೆಪಿ ವಿರುದ್ಧ ನಿಲುವು ತಳೆಯಲಾಗಿದೆ ಎಂದು ನಾಯಕರ ಜತೆಗೆ ಆರ್‌ಎಸ್‌ಎಸ್‌ ಮುಖವಾಣಿ ʼಆರ್ಗನೈಸರ್‌ʼ ಕೂಡ ಇದರ ವಿರುದ್ದ ಧ್ವನಿ ಎತ್ತಿದೆ.

ಪಿಣರಾಯಿ ವಿಜಯನ್‌ ಹೇಳಿದ್ದೇನು?

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಪಿಣರಾಯಿ ವಿಜಯನ್‌, ʼʼಎಂಪುರಾನ್‌ʼ ಮತ್ತು ಚಿತ್ರತಂಡ ವಿರುದ್ಧ ಕೋಮು ದ್ವೇಷ ಬಿತ್ತುವ ಅಭಿಯಾನ ನಡೆಯುತ್ತಿದೆ. ಭಿನ್ನಾಭಿಪ್ರಾಯವನ್ನು ಮೌನಗೊಳಿಸಲು ಬೆದರಿಕೆಯನ್ನು ಬಳಸುವ ತಂತ್ರಕ್ಕೆ ಇದು ಮತ್ತೊಂದು ಉದಾಹರಣೆ - ಇದು ಸರ್ವಾಧಿಕಾರದ ಲಕ್ಷಣʼʼ ಎಂದು ಹೇಳಿದ್ದಾರೆ.

"ಭಯ ಮತ್ತು ಬೆದರಿಕೆಗಳ ಮೂಲಕ ಸೃಜನಶೀಲ ಸ್ವಾತಂತ್ರ್ಯವನ್ನು ದುರ್ಬಲಗೊಳಿಸುವುದು ಪ್ರಜಾಪ್ರಭುತ್ವದ ತಿರುಳಿಗೆ ಹೊಡೆದಂತೆ. ಅಭಿವ್ಯಕ್ತಿ ಸ್ವಾತಂತ್ರ್ಯವು ಮೂಲಭೂತ ಹಕ್ಕು; ಅದನ್ನು ರಕ್ಷಿಸಲು ನಾವು ಒಗ್ಗಟ್ಟಾಗಿ ನಿಲ್ಲಬೇಕು" ಎಂದು ಅವರು ಕರೆ ನೀಡಿದ್ದಾರೆ.

ಕುಟುಂಬ ಸಮೇತ ಚಿತ್ರ ವೀಕ್ಷಿಸಿದ ಸಿಎಂ

ಈ ಮಧ್ಯೆ ಚಿತ್ರತಂಡಕ್ಕೆ ಬೆಂಬಲ ನೀಡಲು ಪಿಣರಾಯಿ ವಿಜಯನ್‌ ಕುಟುಂಬ ಸಮೇತ ಸಿನಿಮಾ ವೀಕ್ಷಿಸಿದ್ದಾರೆ. ಈ ಬಗ್ಗೆ ಅವರು ಫೇಸ್‌ಬುಕ್‌ನಲ್ಲಿ ತಿಳಿಸಿದ್ದಾರೆ. "ಮಲಯಾಳಂ ಚಿತ್ರೋದ್ಯಮವನ್ನು
ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಿರುವ ʼಎಂಪುರಾನ್‌ʼ ಚಿತ್ರವನ್ನು ನಾನು ನೋಡಿದೆ. ಸಂಘ ಪರಿವಾರವು ಚಿತ್ರ ಮತ್ತು ಚಿತ್ರತಂಡದ ವಿರುದ್ಧ ವ್ಯಾಪಕ ದ್ವೇಷ ಅಭಿಯಾನಗಳ ಮೂಲಕ ಕೋಮುವಾದವನ್ನು ಬಿತ್ತುತ್ತಿರುವ ಸಮಯದಲ್ಲಿ ನಾನು ಈ ಚಿತ್ರವನ್ನು ನೋಡಿದ್ದೇನೆ. ಈ ಚಿತ್ರವು ದೇಶ ಕಂಡ ಅತ್ಯಂತ ಕ್ರೂರ ನರಮೇಧಗಳ ಪೈಕಿ ಒಂದನ್ನು ಉಲ್ಲೇಖಿಸುತ್ತದೆ. ಇದೇ ಕಾರಣಕ್ಕೆ ಸಂಘ ಪರಿವಾರ, ಅದರ ನಾಯಕರು ಕೆರಳಿದ್ದಾರೆ. ಜತೆಗೆ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ನಾಯಕರು ಬೆದರಿಕೆ ಒಡ್ಡುತ್ತಿದ್ದಾರೆʼʼ ಎಂದು ಹೇಳಿದ್ದಾರೆ.

ಕಲಾವಿದರನ್ನು ಬೆದರಿಸುವ ಇಂತಹ ಅಭಿಯಾನಗಳು ಫ್ಯಾಸಿಸ್ಟ್ ಮನೋಭಾವದ ಅಭಿವ್ಯಕ್ತಿ ಎಂದು ಕರೆದಿದ್ದಾರೆ. ʼʼಸಂಘ ಪರಿವಾರ ಸೃಷ್ಟಿಸಿರುವ ಈ ಭಯದ ವಾತಾವರಣ ಆತಂಕಕಾರಿ. ಕೋಮುವಾದದ ವಿರುದ್ಧ ನಿಲುವು ತಳೆದು ಅದರ ಭಯಾನಕತೆಯನ್ನು ಚಿತ್ರಿಸಿದ್ದಾರೆ ಎಂಬ ಕಾರಣಕ್ಕೆ ಬೆದರಿಕೆ ಒಡ್ಡುವುದು ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ" ಎಂದು ಆತಂಕ ವ್ಯಕ್ತಪಡಿಸಿದ್ದಾರೆ.