Pralhad Joshi: ಉಡುಪಿ ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠಕ್ಕೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಭೇಟಿ
ಉಡುಪಿ ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠಕ್ಕೆ ಇಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಭೇಟಿ ನೀಡಿ, ಶ್ರೀಕೃಷ್ಣನ ದರ್ಶನ ಪಡೆದರು. ಬಳಿಕ ಶ್ರೀಕೃಷ್ಣ ಮಠದಲ್ಲಿ ಭಕ್ತರ ಸುಗಮ ಸಂಚಾರಕ್ಕಾಗಿ ಮೇಲ್ಸೇತುವೆ ನಿರ್ಮಾಣಕ್ಕೆ ಭೂಮಿ ಪೂಜೆ ಸಹ ನೆರವೇರಿಸಿದರು. ಈ ಕುರಿತ ವಿವರ ಇಲ್ಲಿದೆ.


ಉಡುಪಿ: ಉಡುಪಿ ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠಕ್ಕೆ ಇಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಭೇಟಿ ನೀಡಿ, ಶ್ರೀಕೃಷ್ಣನ ದರ್ಶನ ಪಡೆದರು. ಬಳಿಕ ಶ್ರೀಕೃಷ್ಣ ಮಠದಲ್ಲಿ ಭಕ್ತರ ಸುಗಮ ಸಂಚಾರಕ್ಕಾಗಿ ಮೇಲ್ಸೇತುವೆ ನಿರ್ಮಾಣಕ್ಕೆ ಭೂಮಿ ಪೂಜೆ ಸಹ ನೆರವೇರಿಸಿದರು. ಈ ವೇಳೆ ಮಾತನಾಡಿದ ಸಚಿವರು, ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಸುಗುಣೇಂದ್ರತೀರ್ಥ ಶ್ರೀಪಾದಂಗಳವರು ಶ್ರೀಕೃಷ್ಣ ಮಠಕ್ಕೆ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಂಡಿದ್ದಾರೆ ಎಂದು ತಿಳಿಸಿದರು.ಮಹತ್ವದ್ದಾಗಿ ಗೀತಾ ಮಂದಿರ ಸಮೀಪದಿಂದ ರಥಬೀದಿ ಸಂಪರ್ಕಿಸುವ ಅತ್ಯಾಕರ್ಷಕ ಸುವರ್ಣ ಮೇಲ್ಸೇತುವೆ ಕಾಮಗಾರಿಗೆ ಉಭಯ ಶ್ರೀಪಾದರ ದಿವ್ಯೋಪಸ್ಥಿತಿಯಲ್ಲಿ ಭೂಮಿ ಪೂಜೆ ನೆರವೇರಿಸುತ್ತಿರುವುದು ನನ್ನ ಸೌಭಾಗ್ಯ ಎಂದು ಹೇಳಿದರು.
ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಪ್ರಲ್ಹಾದ್ ಜೋಶಿ ಅವರು, ಪರಮಪೂಜ್ಯ ಶ್ರೀಪಾದರು ವಿಶ್ವದಾದ್ಯಂತ ಮಠಗಳ ಮೂಲಕ ನಿರಂತರವಾಗಿ ಸಮಾಜಮುಖಿ ಕಾರ್ಯಕ್ರಮ ನಡೆಸುತ್ತಿದ್ದಾರೆ ಎಂದು ಮುಕ್ತವಾಗಿ ಶ್ಲಾಘಿಸಿದರು. ದೇಶದ ಮಹಾನ್ ಭಗವದ್ಗೀತಾ ಗ್ರಂಥ ಪ್ರಚಾರದ ಉದ್ದೇಶದಿಂದ ಪೂಜ್ಯರು ʼಕೋಟಿ ಗೀತಾ ಲೇಖನ ಯಜ್ಞದʼ ಆಂದೋಲನ ನಡೆಸುತ್ತಿರುವುದು ಸ್ತುತ್ಯಾರ್ಹವಾಗಿದೆ ಎಂದು ಸಚಿವ ಜೋಶಿ ಪ್ರಶಂಸೆ ವ್ಯಕ್ತಪಡಿಸಿದರು.
ಇದೇ ವೇಳೆ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ, ಪುತ್ತಿಗೆ ಮಠದ ಕಿರಿಯ ಸ್ವಾಮೀಜಿ ಅವರು ಸಚಿವ ಪ್ರಲ್ಹಾದ್ ಜೋಶಿ ಅವರಿಗೆ ಶ್ರೀಕೃಷ್ಣ ಗೀತಾನುಗ್ರಹದ ನೆನಪಿನ ಕಾಣಿಕೆ ನೀಡಿ ಗೌರವಿಸಿ, ಶುಭಾಶೀರ್ವಾದ ಮಾಡಿದರು.
ಜೋಶಿ ಆದರ್ಶ - ನಿಷ್ಕಳಂಕ ರಾಜಕಾರಣಿ: ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಸುಗುಣೇಂದ್ರತೀರ್ಥ ಶ್ರೀಪಾದರು, ಪ್ರಹ್ಲಾದ್ ಜೋಶಿ ಅವರನ್ನು ಒಬ್ಬ ಆದರ್ಶ ಮತ್ತು ನಿಷ್ಕಳಂಕ ರಾಜಕಾರಣಿ ಎಂದು ಬಣ್ಣಿಸಿದರು. ಜೋಶಿ ಅವರ ಉದಾತ್ತವಾದ ಕಾರ್ಯತತ್ಪರತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತ, ಶ್ರೀಕೃಷ್ಣನ ಪರಮಾನುಗ್ರಹದಲ್ಲಿ ಜೋಶಿ ಅವರಿಂದ ನಾಡಿಗೆ ಒಳಿತಾಗಲಿ ಮತ್ತು ಇನ್ನೂ ಹೆಚ್ಚಿನ ಸಾಧನೆ ಸಾಧ್ಯವಾಗಲಿ ಎಂದು ಹಾರೈಸಿ, ಸನ್ಮಾನಿಸಿದರು ಉಭಯ ಶ್ರೀಗಳು. ಈ ಸಂದರ್ಭದಲ್ಲಿ ಸಚಿವ ಜೋಶಿ ದಂಪತಿಗೆ ʼಕೋಟಿ ಗೀತಾ ಲೇಖನ ಯಜ್ಞದ ದೀಕ್ಷೆʼ ಸಹ ನೀಡಿದರು.
ಇದೇ ವೇಳೆ ಕೋಟಿ ಗೀತಾಲೇಖನ ಯಜ್ಞದಲ್ಲಿ ದೀಕ್ಷಿತರಾಗಿ 110 ಬಾರಿ ಗೀತೆಯನ್ನು ಬರೆದ ನಿರ್ಮಲಾ ಕಾಮತ್ ಅವರು 110 ಪುಸ್ತಕಗಳನ್ನು ಶ್ರೀಪಾದರಿಗೆ ಸಮರ್ಪಿಸಿದರು. 85 ಬಾರಿ ಗೀತೆ ಬರೆದ ಶೋಭಾ ಕಿಣಿ ಅವರೂ ಪಸ್ತಕ ಸಮರ್ಪಿಸಿದರು. ಶ್ರೀಪಾದರು ಈರ್ವರ ಸಾಧನೆ ಪ್ರಶಂಸಿಸಿ, ಶ್ರೀಕೃಷ್ಣ ಮುಖ್ಯಪ್ರಾಣ ದೇವರ ಪ್ರಸಾದವನ್ನು ನೀಡಿ ಅನುಗ್ರಹಿಸಿದರು.
ಈ ಸುದ್ದಿಯನ್ನೂ ಓದಿ | Book Release: ಮಾ.16 ರಂದು ಡಿವಿಜಿ ಬಳಗ ಪ್ರತಿಷ್ಠಾನದಿಂದ ಎರಡು ಪುಸ್ತಕಗಳ ಲೋಕಾರ್ಪಣೆ
ಸಭೆಯಲ್ಲಿ ಪ್ರಹ್ಲಾದ ಜೋಶಿ ಅವರ ಆಪ್ತ ಕಾರ್ಯದರ್ಶಿ ನಾರಾಯಣ ಗಂಭೀರ್, ಮಠದ ದಿವಾನರಾದ ನಾಗರಾಜ ಆಚಾರ್ಯರು, ಶ್ರೀಗಳ ಅಂತಾರಾಷ್ಟ್ರೀಯ ಕಾರ್ಯದರ್ಶಿ ಎಂ.ಪ್ರಸನ್ನ ಆಚಾರ್ಯ, ಶ್ರೀಗಳ ಆಪ್ತ ಕಾರ್ಯದರ್ಶಿ ರತೀಶ್ ತಂತ್ರಿ, ಸಂತೋಷ್ ಶೆಟ್ಟಿ, ಸುಗುಣ ಮಾಲಾ ಪತ್ರಿಕೆ ಸಂಪಾದಕ ಮಹಿತೋಷ ಆಚಾರ್ಯ ಹಾಗೂ ಇತರರು ಉಪಸ್ಥಿತರಿದ್ದರು.