#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Karun Nair: ರಣಜಿಯಲ್ಲೂ ಶತಕ ಸಿಡಿಸಿ ಬಿಸಿಸಿಐ ಆಯ್ಕೆದಾರರಿಗೆ ಕನ್ನಡಿಗ ತಿರುಗೇಟು!

Karun Nair hits anothre Century: ವಿದರ್ಭ ತಂಡದ ಹಿರಿಯ ಬ್ಯಾಟ್ಸ್‌ಮನ್‌ ಕರುಣ್‌ ನಾಯರ್‌ ಅವರು ತಮಿಳುನಾಡು ವಿರುದ್ದ 2024-25ರ ಸಾಲಿನ ರಣಜಿ ಟ್ರೋಫಿ ಟೂರ್ನಿಯ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಶತಕವನ್ನು ಸಿಡಿಸಿದ್ದಾರೆ. ಆ ಮೂಲಕ ಭಾರತ ತಂಡದಲ್ಲಿ ಸ್ಥಾನ ಸಿಗದೆ ಇದ್ದರೂ ತಾವು ವಿಶ್ವಾಸ ಕಳೆದುಕೊಂಡಿಲ್ಲವೆಂಬುದನ್ನು ಸಾಬೀತುಪಡಿಸಿದ್ದಾರೆ.

ಶತಕ ಸಿಡಿಸಿ ಬಿಸಿಸಿಐ ಸೆಲೆಕ್ಟರ್ಸ್‌ಗೆ ಕರುಣ್‌ ನಾಯರ್‌ ತಿರುಗೇಟು!

Karun Nair hits Hundred

Profile Ramesh Kote Feb 8, 2025 9:40 PM

ನಾಗ್ಪುರ್‌: ಕಳೆದ ವಿಜಯ್‌ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಐದು ಶತಕಗಳು ಸೇರಿದಂತೆ ಅತಿ ಹೆಚ್ಚು ರನ್‌ಗಳನ್ನು ಕಲೆ ಹಾಕಿದ್ದ ವಿದರ್ಭ ತಂಡದ ಹಿರಿಯ ಬ್ಯಾಟ್ಸ್‌ಮನ್‌ ಕರುಣ್‌ ನಾಯರ್‌, ತಮ್ಮ ಬ್ಯಾಟಿಂಗ್‌ ಲಯವನ್ನು ರಣಜಿ ಟ್ರೋಫಿ ಟೂರ್ನಿಯಲ್ಲಿಯೂ ಮುಂದುವರಿಸಿದ್ದಾರೆ. ತಮಿಳುನಾಡು ವಿರುದ್ದ ಶನಿವಾರ ಇಲ್ಲಿನ ವಿದರ್ಭ ಕ್ರಿಕೆಟ್‌ ಅಸೋಸಿಯೇಷನ್‌ ಕ್ರೀಡಾಂಗಣದಲ್ಲಿ ಆರಂಭವಾದ 2024-25ರ ಸಾಲಿನ ರಣಜಿ ಟ್ರೋಫಿ ಕ್ವಾರ್ಟರ್‌ಫೈನಲ್‌ ಪಂದ್ಯದ ಮೊದಲನೇ ದಿನ ಅತ್ಯುತ್ತಮ ಬ್ಯಾಟ್‌ ಮಾಡಿದ್ದ ಕನ್ನಡಿಗ ಮತ್ತೊಂದು ಶತಕವನ್ನು ದಾಖಲಿಸಿದ್ದಾರೆ.

ಈ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ವಿದರ್ಭ ತಂಡಕ್ಕೆ ನಿರೀಕ್ಷಿತ ಆರಂಭ ಸಿಗಲಿಲ್ಲ. ಅಥರ್ವ ಟೈಡೆ, ಆದಿತ್ಯ ಠಾಕ್ರೆ ಹಾಗೂ ಧ್ರುವ್‌ ಶೋರೆ ಬಹುಬೇಗ ವಿಕೆಟ್‌ ಕೈ ಚೆಲ್ಲಿಕೊಂಡರು. ವಿದರ್ಭ 44 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿದ್ದ ವೇಳೆ ಕ್ರೀಸ್‌ಗೆ ಬಂದಿದ್ದ ಕರುಣ್‌ ನಾಯರ್‌ ಸೊಗಸಾದ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದರು. ಮುರಿಯದ ನಾಲ್ಕನೇ ವಿಕೆಟ್‌ಗೆ ದಾನೀಶ್‌ ಮಾಲೆವರ್‌ ಅವರ ಜೊತೆ ಸೇರಿದ ಕನ್ನಡಿಗ, 98 ರನ್‌ಗಳನ್ನು ಕಲೆ ಹಾಕಿದ್ದರು. ಆ ಮೂಲಕ ಆರಂಭಿಕ ಆಘಾತ ಅನುಭವಿಸಿದ್ದ ವಿದರ್ಭ ತಂಡವನ್ನು ಮೇಲೆತ್ತಿದ್ದರು.

Ranji Trophy: ಭಾರತ ತಂಡದಲ್ಲಿ ಸ್ಥಾನ ಸಿಗದ ಬಗ್ಗೆ ಕರುಣ್‌ ನಾಯರ್‌ ಪ್ರತಿಕ್ರಿಯೆ!

ಕರುಣ್‌ ನಾಯರ್‌ಗೆ ಮತ್ತೊಂದು ತುದಿಯಲ್ಲಿ ಸಾಥ್‌ ನೀಡಿದ್ದ ದಾನೀಶ್‌ ಮಾಲೆವರ್‌, 119 ಎಸೆತಗಳಲ್ಲಿ 13 ಬೌಂಡರಿಗಳೊಂದಿಗೆ 75 ರನ್‌ಗಳನ್ನು ಗಳಿಸಿ ವಿಜಯ್‌ ಶಂಕರ್‌ ಬೌಲಿಂಗ್‌ನಲ್ಲಿ ವಿಕೆಟ್‌ ಒಪ್ಪಿಸಿದ್ದರು. ಒಂದು ತುದಿಯಲ್ಲಿ ನಿರಂತರವಾಗಿ ವಿಕೆಟ್‌ ಒಪ್ಪಿಸಿದರೂ ಮತ್ತೊಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್‌ ಮಾಡಿದ ಕನ್ನಡಿಗ ಕರುಣ್‌ ನಾಯರ್‌ ತಮಿಳುನಾಡು ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು.

22ನೇ ಶತಕವನ್ನು ಪೂರ್ಣಗೊಳಿಸಿದ ಕರುಣ್‌ ನಾಯರ್‌

ವಿಜಯ್‌ ಹಝಾರೆ ಟ್ರೋಫಿ ಟೂರ್ನಿಯಲ್ಲಿ ತೋರಿದ ಪ್ರದರ್ಶನವನ್ನು ಇಲ್ಲಿಯೂ ಮುಂದುವರಿಸಿದ ಕರುಣ್‌ ನಾಯರ್‌, ತಮ್ಮ ಪ್ರಥಮ ದರ್ಜೆ ಕ್ರಿಕೆಟ್‌ ವೃತ್ತಿ ಜೀವನದಲ್ಲಿ 22ನೇ ಶತಕವನ್ನು ಪೂರ್ಣಗೊಳಿಸಿದರು. ಪಂದ್ಯದ ಮೊದಲನೇ ದಿನದಾಟದ ಅಂತ್ಯಕ್ಕೆ ಕರುಣ್‌ ನಾಯರ್‌ ಎದುರಿಸಿದ 180 ಎಸೆತಗಳಲ್ಲಿ ಒಂದು ಭರ್ಜರಿ ಸಿಕ್ಸರ್‌ ಹಾಗೂ 14 ಬೌಂಡರಿಗಳೊಂದಿಗೆ ಅಜೇಯ 100 ರನ್‌ಗಳನ್ನು ಕಲೆ ಹಾಕಿದ್ದಾರೆ. ಆ ಮೂಲಕ ಎರಡನೇ ದಿನದಾಟಕ್ಕೆ ತಮ್ಮ ಬ್ಯಾಟಿಂಗ್‌ ಅನ್ನು ಕಾಯ್ದುಕೊಂಡಿದ್ದಾರೆ.



ವಿದರ್ಭ: 264-6

ಯಶ್‌ ದುಬೇ (13) ಹಾಗೂ ನಾಯಕ ಅಕ್ಷಯ್‌ ವಾಡ್ಕರ್‌ (24) ಅವರು ಬಹುಬೇಗ ವಿಕೆಟ್‌ ಒಪ್ಪಿಸಿದರು. ಆದರೆ, ಹರ್ಷ್‌ ದುಬೇ ಅಜೇಯ 19 ರನ್‌ ಗಳಿಸಿ ಎರಡನೇ ದಿನದಾಟಕ್ಕೆ ತನ್ನ ವಿಕೆಟ್‌ ಅನ್ನು ಕಾಪಾಡಿಕೊಂಡಿದ್ದಾರೆ. ಒಟ್ಟಾರೆ ವಿದರ್ಭ ತಂಡ ಮೊದಲನೇ ದಿನದಾಟದ ಅಂತ್ಯಕ್ಕೆ 89 ಓವರ್‌ಗಳಿಗೆ 6 ವಿಕೆಟ್‌ಗಳ ನಷ್ಟಕ್ಕೆ 264 ರನ್‌ಗಳನ್ನು ಗಳಿಸಿದೆ. ತಮಿಳುನಾಡು ಪರ ಮೊದಲನೇ ದಿನ ಗಮನ ಸೆಳೆದ ವಿಜಯ್‌ ಶಂಕರ್‌ 2 ವಿಕೆಟ್‌ ಕಿತ್ತರೆ, ಎಂ ಮೊಹಮ್ಮದ್‌, ಸೋನು ಯಾದವ್‌, ಎಸ್‌ ಅಜಿತ್‌ ರಾಮ್‌ ಹಾಗೂ ಮೊಹಮ್ಮದ್‌ ಆಲಿ ತಲಾ ಒಂದೊಂದು ವಿಕೆಟ್‌ ಕಿತ್ತಿದ್ದಾರೆ.