#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Delhi Election Results 2025: ದಿಲ್ಲಿಯಲ್ಲಿ ಆಪ್‌ ನೆಲ ಕಚ್ಚಿದ್ದು ಹೇಗೆ? ಇಲ್ಲಿದೆ ಟಾಪ್‌ 6 ಕಾರಣಗಳು

ದಿಲ್ಲಿಯಲ್ಲಿ ಸುಮಾರು 27 ವರ್ಷಗಳ ಬಳಿಕ ಬಿಜೆಪಿ ಅಧಿಕಾರಕ್ಕೆ ಬಂದಿದೆ. 10 ವರ್ಷಗಳ ಕಾಲ ಆಡಳಿತ ನಡೆಸಿದ್ದ ಆಪ್‌ ನೆಲ ಕಚ್ಚಿದ್ದು, ಕಾಂಗ್ರೆಸ್‌ ಮತ್ತೆ ಖಾತೆ ತೆರೆಯುವಲ್ಲಿ ವಿಫಲವಾಗಿದೆ. ಹಾಗಾದರೆ ಆಪ್‌ ಸೋಲಿಗೆ ಕಾರಣವಾದ ಅಂಶವೇನು? ಬಿಜೆಪಿ ಗೆದ್ದಿದ್ದು ಹೇಗೆ? ಇಲ್ಲಿದೆ ವಿವರ.

ದಿಲ್ಲಿಯಲ್ಲಿ ಆಪ್‌ ನೆಲ ಕಚ್ಚಿದ್ದು ಹೇಗೆ? ಇಲ್ಲಿದೆ ಟಾಪ್‌ 6 ಕಾರಣಗಳು

ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ.

Profile Ramesh B Feb 8, 2025 7:23 PM

ಹೊಸದಿಲ್ಲಿ: ಭಾರಿ ಕುತೂಹಲ ಕೆರಳಿಸಿದ್ದ ದಿಲ್ಲಿ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರ ಬಿದ್ದಿದ್ದು, ಸುಮಾರು 27 ವರ್ಷಗಳ ಬಳಿಕ ಬಿಜೆಪಿ (BJP) ಅಧಿಕಾರ ಹಿಡಿದೆ (Delhi Election Results 2025). 70 ಕ್ಷೇತ್ರಗಳ ಪೈಕಿ ಕೇಸರಿ ಪಡೆ 48 ಸ್ಥಾನಗಳನ್ನು ವಶಪಡಿಸಿಕೊಂಡಿದ್ದು, ಆಮ್‌ ಆದ್ಮಿ ಪಾರ್ಟಿ (AAP) 22 ಕ್ಷೇತ್ರಗಳಿಗೆ ಸೀಮಿತವಾಗಿದೆ. ಸತತ 3ನೇ ಬಾರಿಗೆ ಕಾಂಗ್ರೆಸ್‌ ಖಾತೆ ತೆರಯುವಲ್ಲಿ ವಿಫಲವಾಗಿದೆ. ಅಚ್ಚರಿ ಎಂದರೆ ಆಪ್‌ ಮುಖ್ಯಸ್ಥ, ದಿಲ್ಲಿ ಮಾಜಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ (Arvind Kejriwal) ಅವರೂ ಬಿಜೆಪಿ ಅಲೆಯ ಎದುರು ಸೋತಿದ್ದಾರೆ. ಹಾಗಾದರೆ ಬಿಜೆಪಿಯ ಪ್ರಚಂಡ ಗೆಲುವಿಗೆ ಕಾರಣವಾಗಿರುವ ಅಂಶಗಳು ಯಾವುವು? ಆಪ್‌ ಸೋತಿದು ಹೇಗೆ? ಇಲ್ಲಿದೆ ವಿವರ.

ಆಡಳಿತ ವಿರೋಧಿ ಅಲೆ

ಸತತ 10 ವರ್ಷಗಳಿಂದ ಅಧಿಕಾರದಲ್ಲಿರುವ ಆಪ್‌ಗೆ ಆಡಳಿತ ವಿರೋಧಿ ಅಲೆ ಮುಳುವಾಗಿದೆ. 2015ರಲ್ಲಿ 67 ಸ್ಥಾನಗಳಲ್ಲಿ ಮತ್ತು 2020ರಲ್ಲಿ 62 ಸ್ಥಾನಗಳನ್ನು ಗೆದ್ದುಕೊಂಡಿದ್ದ ಆಪ್‌ನ ಹ್ಯಾಟ್ರಿಕ್‌ ಕನಸು ನುಚ್ಚುನೂರಾಗಿದೆ. ಈ ಹಿಂದಿನ ಆಡಳಿತದಲ್ಲಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ತಂದ ಕ್ರಾಂತಿಕಾರಕ ಬದಲಾವಣೆಗೆ ಮೆಚ್ಚುಗೆ ಪಡೆದಿದ್ದ ಆಪ್‌ ಬಳಿಕ ಅವನತಿಯತ್ತ ಸಾಗಿತು. ಅದರಲ್ಲಿಯೂ ಗಂಭೀರ ಸಮಸ್ಯೆಯಾದ ಕುಸಿದಿದ್ದ ವಾಯು ಗುಣಮಟ್ಟ ಹೆಚ್ಚಿಸುವ ಭರವಸೆಯನ್ನು ಜಾರಿಗೆ ತರದೇ ಇದ್ದುದು ಆಡಳಿತ ರೂಢ ಆಪ್‌ಗೆ ದುಬಾರಿಯಾಗಿ ಪರಿಣಮಿಸಿತು. ಅಲ್ಲದೆ ಆಪ್‌ ನಾಯಕರು ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ದ ಪದೇ ಪದೆ ಆರೋಪ ಹೊರಿಸುತ್ತಿದ್ದುದು ಕೂಡ ಮತದಾರರ ಅಸಮಾಧಾನಕ್ಕೆ ಕಾರಣವಾಯಿತು. ಅಲ್ಲದೆ ಬಿಜೆಪಿ ಅಧಿಕಾರಕ್ಕೆ ಬಂದರೆ ಡಬಲ್‌ ಎಂಜಿನ್‌ ಸರ್ಕಾರವು ಜನರಿಗೆ ಅತ್ಯುತ್ತಮ ಆಡಳಿತ ನೀಡಲಿದೆ ಎಂದು ಭರವಸೆ ನೀಡಿದ್ದು ಕೂಡ ಜನರ ಮೇಲೆ ಪ್ರಭಾವ ಬೀರಿತು.



ಮದ್ಯ ಹಗರಣ ಮತ್ತು ಶೀಷ್‌ ಮಹಲ್‌ ವಿವಾದ

ದಿಲ್ಲಿ ಮದ್ಯ ನೀತಿ ಜಾರಿ ವೇಳೆ ನಡೆದ ಹಗರಣದ ಆರೋಪ ಆಪ್‌ನ ವಿಶ್ವಾಸಾರ್ಹತೆಗೆ ಬಹು ದೊಡ್ಡ ಪೆಟ್ಟು ಕೊಟ್ಟಿತು. ಆಪ್‌ ಕುಡುಕರ ನಗರವನ್ನಾಗಿ ದಿಲ್ಲಿಯನ್ನು ಪರಿವರ್ತಿಸುತ್ತದೆ ಎಂದು ಬಿಜೆಪಿ ಪದೇ ಪದೆ ಆರೋಪಿಸುತ್ತ ಬಂದಿತ್ತು. ಅಲ್ಲದೆ ಇದೇ ಹಗರಣದಲ್ಲಿ ಆಪ್‌ ನಾಯಕರಾದ ಅರವಿಂದ್‌ ಕೇಜ್ರಿವಾಲ್‌, ಮನೀಶ್‌ ಸಿಸೋಡಿಯಾ, ಸಂಜಯ್‌ ಸಿಂಗ್‌ ಮತ್ತಿತರರು ಬಂಧನಕ್ಕೊಳಗಾಗಿದ್ದು, ಜನರಿಗೆ ಪಕ್ಷದ ಮೇಲಿನ ನಂಬಿಕೆಯನ್ನು ಮತ್ತಷ್ಟು ಕುಗ್ಗುವಂತೆ ಮಾಡಿತು. ಮುಖ್ಯಮಂತ್ರಿಯಾಗಿದ್ದ ಅರವಿಂದ್‌ ಕೇಜ್ರಿವಾಲ್‌ ಸುಮಾರು 33.66 ಕೋಟಿ ರೂ. ವೆಚ್ಚದಲ್ಲಿ ತಮ್ಮ ಅದಿಕೃತ ನಿವಾಸ ಶೀಷ್‌ ಮಹಲ್‌ ಅನ್ನು ನವೀಕರಿಸಿದ್ದು ವ್ಯಾಪಕ ಟೀಕೆಗೆ ಕಾರಣವಾಗಿತ್ತು.

ಸೂಕ್ತ ನಾಯಕತ್ವದ ಕೊರತೆ

ಆಪ್‌ ಪ್ರಾರಂಭದಿಂದಲೂ ಅರವಿಂದ್ ಕೇಜ್ರಿವಾಲ್ ಅವರ ನಾಯಕತ್ವದಲ್ಲೇ ಮುಂದುವರಿಯುತ್ತಿದೆ. ಅದಾಗ್ಯೂ ಭ್ರಷ್ಟಾಚಾರದ ಆರೋಪದಲ್ಲಿ 2024ರ ಮಾರ್ಚ್‌ನಲ್ಲಿ ಅವರ ಬಂಧನ ಮತ್ತು ನಂತರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಸಮರ್ಥ ನಾಯಕತ್ವದ ಕೊರತೆಯನ್ನು ಆಪ್‌ ಎದುರಿಸಿತು. ಅತಿಶಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರೂ, ಕೇಜ್ರಿವಾಲ್ ಅವರ ರಾಜೀನಾಮೆಯ ಸಂದರ್ಭದಲ್ಲಿನ ಬೆಳವಣಿಗೆಯು ಪಕ್ಷದ ಚಿತ್ರಣ ಮತ್ತು ಆಂತರಿಕ ಒಗ್ಗಟ್ಟನ್ನು ತೀವ್ರವಾಗಿ ಹಾನಿಗೊಳಿಸಿತು.

ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಳ್ಳದೇ ಇದ್ದುದು

ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಳ್ಳದೇ ಇದ್ದುದು ಆಪ್‌ಗೆ ಬಹು ದೊಡ್ಡ ಹೊಡೆತ ನೀಡಿತು. ಕಾಂಗ್ರೆಸ್‌ ಕೂಡ ಆಡಳಿತರೂಢ ಆಪ್‌ ವಿರುದ್ಧ ಅಭಿಯಾನ ಹಮ್ಮಿಕೊಂಡಿತ್ತು. ಕಾಂಗ್ರೆಸ್‌ ನಾಯಕರಾದ ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾಧ್ರಾ ಇಲ್ಲಿ ಪ್ರಚಾರ ಕೈಗೊಂಡಿದ್ದರು. ಇವರು ಆಪ್‌ ವಿರುದ್ದ ವಾಗ್ದಾಳಿ ನಡೆಸಿದ್ದರು.

ಮೂಲ ಸೌಕರ್ಯ ಅಭಿವೃದ್ಧಿಯ ಕೊರತೆ

ಆಪ್‌ ಪರಿಚಯಿಸಿದ ಉಚಿತ ವಿದ್ಯುತ್‌ ಮತ್ತು ಮಹಿಳೆಯರಿಗೆ ಬಸ್‌ನಲ್ಲಿ ಉಚಿತ ಪ್ರಯಾಣ ಯೋಜನೆಗಳು ಜನಪ್ರಿಯವಾಗಿದ್ದರೂ, ದಿಲ್ಲಿಯಲ್ಲಿನ ಮೂಲಸೌಕರ್ಯ ಅಭಿವೃದ್ಧಿಯ ಕೊರತೆ ಆಪ್‌ಗೆ ಬಹುದೊಡ್ಡ ಹಿನ್ನಡೆಯಾಗಿ ಪರಿಣಮಿಸಿದೆ. ಹದಗೆಟ್ಟ ರಸ್ತೆ, ಮುಚ್ಚಿದ ಚರಂಡಿ ಮತ್ತು ಅನಿಯಮಿತ ಕಸ ಸಂಗ್ರಹಣೆಯು ಮತದಾರರನ್ನು ವಿಶೇಷವಾಗಿ ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗದ ಜನರನ್ನು ಕೆರಳಿಸಿದೆ. ದಿಲ್ಲಿ ಮುನ್ಸಿಪಲ್ ಕಾರ್ಪೊರೇಷನ್ (MCD) ಅನ್ನು ನಿಯಂತ್ರಿಸುತ್ತಿದ್ದ ಆಪ್‌ಗೆ ಈ ವಿಷಯಗಳಲ್ಲಿ ಬಿಜೆಪಿಯನ್ನು ದೂರಲು ಸಾಧ್ಯವಾಗಲಿಲ್ಲ.

ಈ ಸುದ್ದಿಯನ್ನೂ ಓದಿ: Delhi Election Results 2025: 27 ವರ್ಷಗಳ ಬಿಜೆಪಿಯ ವನವಾಸ ಅಂತ್ಯ; ಪ್ರಚಂಡ ಗೆಲುವಿಗೆ ಕಾರ್ಯಕರ್ತರ ಸಂಭ್ರಮಾಚರಣೆ

ಬಿಜೆಪಿಯ ಸಮರ್ಥ ನಾಯಕತ್ವ

ಬಿಜೆಪಿ ತನ್ನ ಎಂದಿನ ಹಿಂದುತ್ವ ವಿಚಾರದಿಂದ ದೂರ ಸರಿದು ಅರವಿಂದ್ ಕೇಜ್ರಿವಾಲ್ ಮತ್ತು ಅವರ ಆಡಳಿತವನ್ನು ಗುರಿಯಾಗಿಸಿಕೊಂಡು ಪ್ರಚಾರ ನಡೆಸಿತು. ಪಕ್ಷವು ಭ್ರಷ್ಟಾಚಾರ, ವಾಯುಮಾಲಿನ್ಯದಂತಹ ವಿಷಯಗಳಿಗೆ ಒತ್ತು ನೀಡಿತು. ಆಪ್‌ ಅನ್ನು ಗುರಿಯಾಗಿಸಿಕೊಂಡು ಎಐ-ಆಧಾರಿತ ಮೀಮ್‌ಗಳನ್ನು ಒಳಗೊಂಡ ಬಿಜೆಪಿಯ ಡಿಜಿಟಲ್ ಅಭಿಯಾನವು ಮತದಾರರ ಗಮನ ಸೆಳೆಯಿತು.