RCB vs GT: ಸೋಲಿನೊಂದಿಗೆ ಅನಗತ್ಯ ದಾಖಲೆ ಬರೆದ ಆರ್‌ಸಿಬಿ
IPL 2025: ಆರ್‌ಸಿಬಿ ತಂಡ ಇನ್ನೂ ಅಂಕಪಟ್ಟಿಯಲ್ಲಿ ಮೊದಲ ಮೂರು ಸ್ಥಾನಗಳಲ್ಲಿ ಇರುವುದರಿಂದ ಈ ಸೋಲನ್ನು ಮರೆತು ಮುಂದಿನ ಪಂದ್ಯಕ್ಕೆ ಸಜ್ಜುಗೊಳ್ಳಬೇಕಿದೆ. ಎ.7 ರಂದು ಮುಂಬೈ ವಾಂಖೆಡೆ ಕ್ರೀಡಾಂಗಣದಲ್ಲಿ ಐದು ಬಾರಿಯ ಚಾಂಪಿಯನ್ ಮುಂಬೈ ವಿರುದ್ಧ ಸೆಣಸಾಡಲಿದೆ.


ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ತಂಡ ಬುಧವಾರ ಎಂ. ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂ(M Chinnaswamy Stadium)ನಲ್ಲಿ ನಡೆದ ಐಪಿಎಲ್(IPL 2025) ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್(RCB vs GT) ವಿರುದ್ಧ 8 ವಿಕೆಟ್ ಅಂತರದ ಸೋಲು ಕಾಣುವ ಮೂಲಕ ಅನಗತ್ಯ ದಾಖಲೆಯೊಂದನ್ನು ತನ್ನ ಹೆಸರಿಗೆ ಸೇರಿಸಿಕೊಂಡಿದೆ. ತವರಿನಲ್ಲಿ ಅತ್ಯಧಿಕ ಬಾರಿ ಸೋಲು ಕಂಡ ತಂಡಗಳ ಪೈಕಿ ಜಂಟಿ ಅಗ್ರಸ್ಥಾನ ಪಡೆದಿದೆ.
ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಆರ್‌ಸಿಬಿ ಆರಂಭಿಕ ಆಘಾತದ ಹೊರತಾಗಿಯೂ 169 ರನ್ ಬಾರಿಸಿತು. ಗುರಿ ಬೆನ್ಬಟ್ಟಿದ ಗುಜರಾತ್ 17.5 ಓವರ್‌ಗಳಲ್ಲಿ ಕೇವಲ 2 ವಿಕೆಟ್‌ನಷ್ಟಕ್ಕೆ 170 ರನ್ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು.
ಆರ್‌ಸಿಬಿಗೆ ಇದು ತವರಿನಲ್ಲಿ ಎದುರಾದ 44ನೇ ಸೋಲಾಗಿದೆ. ತವರಿನಲ್ಲಿ ಒಟ್ಟು 92 ಪಂದ್ಯಗಳನ್ನು ಆಡಿದೆ. ಇದುವರೆಗೂ ತವರಿನಲ್ಲಿ ಅತ್ಯಧಿಕ ಬಾರಿ ಸೋಲು ಕಂಡ ದಾಖಲೆ ಡೆಲ್ಲಿ ತಂಡದ ಹೆಸರಿನಲ್ಲಿತ್ತು. ಡೆಲ್ಲಿ 82 ಪಂದ್ಯಗಳಲ್ಲಿ 44 ಸೋಲು ಕಂಡಿತ್ತು. ಇದೀಗ ಆರ್‌ಸಿಬಿ ಕೂಡ 44 ಸೋಲಿನಿಂದಿಗೆ ಡೆಲ್ಲಿ ಜತೆ ಜಂಟಿ ಅಗ್ರಸ್ಥಾನ ಪಡೆದಿದೆ. 86 ಪಂದ್ಯಗಳಲ್ಲಿ 33 ಪಂದ್ಯ ಸೋತ ಮುಂಬೈ 2ನೇ ಸ್ಥಾನದಲ್ಲಿದ್ದರೆ, 60 ಪಂದ್ಯಗಳಲ್ಲಿ 30 ಪಂದ್ಯ ಸೋತ ಪಂಜಾಬ್ ಕಿಂಗ್ಸ್ ಮೂರನೇ ಸ್ಥಾನದಲ್ಲಿದೆ.
ಇದನ್ನೂ ಓದಿ IPL 2025 Points Table: ಅಗ್ರಸ್ಥಾನ ಕಳೆದುಕೊಂಡ ಆರ್‌ಸಿಬಿ
ತವರಿನಲ್ಲಿ ಅತ್ಯಧಿಕ ಬಾರಿ ಸೋತ ತಂಡ
ಆರ್‌ಸಿಬಿ-44 ಸೋಲು
ಕೆಕೆಆರ್-44 ಸೋಲು
ಮುಂಬೈ ಇಂಡಿಯನ್ಸ್-33 ಸೋಲು
ಪಂಜಾಬ್ ಕಿಂಗ್ಸ್-30 ಸೋಲು
ಮೊಹಮ್ಮದ್ ಸಿರಾಜ್‌ರ ಮಾರಕ ಸ್ಪೆಲ್ ಆರ್‌ಸಿಬಿಯನ್ನು ಕಂಗೆಡಿಸಿತ್ತು.ತಂಡಕ್ಕೆ ಆಸರೆಯಾಗಿದ್ದು ಲಿಯಾಮ್ ಲಿವಿಂಗ್‌ಸ್ಟೋನ್ ಹಾಗೂ ಜಿತೇಶ್ ಶರ್ಮಾ ಮಾತ್ರ. ಈ ಜೋಡಿ ಅರ್ಧಶತಕ ಜತೆಯಾಟವಾಡಿ ತಂಡ ಸ್ಪರ್ಧಾತ್ಮಕ ಮೊತ್ತ ದಾಖಲಿಸುವಂತೆ ಮಾಡಿದರು. ಜಿತೇಶ್ 33, ಲಿವಿಂಗ್‌ಸ್ಟೋನ್ 54 ರನ್ ಗಳಿಸಿದರು. ಕೊನೆಯಲ್ಲಿ ಅಬ್ಬರಿಸಿದ ಟಿಮ್ ಡೇವಿಡ್ 18 ಎಸೆತಕ್ಕೆ 32 ರನ್ ಚಚ್ಚಿ, ತಂಡದ ಮಾನ ಉಳಿಸಿದರು. ಗುಜರಾತ್ ಪರ ಸಾಯಿ ಸುದರ್ಶನ್ 36 ಎಸೆತಕ್ಕೆ 49 ರನ್ ಗಳಿಸಿದರೆ, ಜಾಸ್ ಬಟ್ಲರ್ 39 ಎಸೆತಗಳಲ್ಲಿ ಅಜೇಯ 73 ರನ್ ಸಿಡಿಸಿ ತಂಡವನ್ನು ಗೆಲ್ಲಿಸಿದರು.
ಆರ್‌ಸಿಬಿ ತಂಡ ಇನ್ನೂ ಅಂಕಪಟ್ಟಿಯಲ್ಲಿ ಮೊದಲ ಮೂರು ಸ್ಥಾನಗಳಲ್ಲಿ ಇರುವುದರಿಂದ ಸೋಲನ್ನು ಮರೆತು ಮುಂದಿನ ಪಂದ್ಯಕ್ಕೆ ಸಜ್ಜುಗೊಳ್ಳಬೇಕಿದೆ. ಎ.7 ರಂದು ಮುಂಬೈ ವಾಂಖೆಡೆ ಕ್ರೀಡಾಂಗಣದಲ್ಲಿ ಐದು ಬಾರಿಯ ಚಾಂಪಿಯನ್ ಮುಂಬೈ ವಿರುದ್ಧ ಸೆಣಸಾಡಲಿದೆ.