Star Interview: ಫ್ಯಾಷನ್ ಉದ್ಯಮಕ್ಕೆ ಕಾಲಿಟ್ಟ ನಟಿ ಮಾನ್ವಿತಾ ಕಾಮತ್
Star Interview: ಸ್ಯಾಂಡಲ್‌ವುಡ್ ನಟಿ ಮಾನ್ವಿತಾ ಕಾಮತ್ ಇದೀಗ ಫ್ಯಾಷನ್ ಕ್ಷೇತ್ರಕ್ಕೂ ಪದಾರ್ಪಣೆ ಮಾಡಿದ್ದಾರೆ. ಅವರ ಉದ್ದೇಶವೇನು? ಯಾವ ಫ್ಯಾಷನ್ ಬ್ರ್ಯಾಂಡ್ ಮೂಲಕ ಉದ್ಯಮಿಯಾಗಲಿದ್ದಾರೆ? ಈ ಎಲ್ಲದರ ಕುರಿತಂತೆ ಖುದ್ದು, ಮಾನ್ವಿತಾ ಅವರೇ ವಿಶ್ವವಾಣಿ ನ್ಯೂಸ್‌ನೊಂದಿಗೆ ಮಾತನಾಡಿದ್ದಾರೆ. ಅವರ ಸಂದರ್ಶನದ ಸಾರಾಂಶ ಇಲ್ಲಿದೆ.


ವಿಶೇಷ ಸಂದರ್ಶನ: ಶೀಲಾ ಸಿ. ಶೆಟ್ಟಿ, ಫ್ಯಾಷನ್ ಪತ್ರಕರ್ತೆ
ಸ್ಯಾಂಡಲ್‌ವುಡ್‌ನಿಂದ ಇದೀಗ ಫ್ಯಾಷನ್ ಕ್ಷೇತ್ರಕ್ಕೆ ನಟಿ ಮಾನ್ವಿತಾ ಕಾಮತ್ (Star Interview) ಪದಾರ್ಪಣೆ ಮಾಡಿದ್ದಾರೆ. ಹೌದು, ಮಾನ್ವಿತಾರ ಕನಸು ಇದೀಗ ನನಸಾಗಿದೆ. ತಮ್ಮದೇ ಆದ ಹೊಸ ಫ್ಯಾಷನ್ ಬ್ರ್ಯಾಂಡ್ ಶುರು ಮಾಡಿದ್ದಾರೆ. ಅಷ್ಟು ಮಾತ್ರವಲ್ಲ, ಅವರ ಈ ಬ್ರ್ಯಾಂಡ್ ಅಂತಾರಾಷ್ಟ್ರೀಯ ಮಟ್ಟದಲ್ಲೂ ಕಾಲಿಡಲಿದೆ. ಮೊದಲ ಬಾರಿ ಕರ್ನಾಟಕದ ಸಿಲ್ಕ್ ಫ್ಯಾಬ್ರಿಕ್ನಲ್ಲಿ, ಪವರ್ ಸೂಟ್‌ಗಳನ್ನು ಡಿಸೈನ್ ಮಾಡುವುದರ ಮುಖಾಂತರ ಫ್ಯಾಷನ್ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಿದ್ದಾರೆ.
ಈ ಕುರಿತಂತೆ ಖುದ್ದು ಮಾನ್ವಿತಾ, ವಿಶ್ವವಾಣಿ ನ್ಯೂಸ್‌ನೊಂದಿಗೆ ಮಾತನಾಡಿದ್ದು, ಅವರ ಸಂದರ್ಶನದ ಸಂಕ್ಷಿಪ್ತ ಸಾರಾಂಶ ಇಲ್ಲಿದೆ.

ವಿಶ್ವವಾಣಿ ನ್ಯೂಸ್: ಯಶಸ್ವಿ ನಟಿಯಾಗಿರುವ ನಿಮಗೆ ಫ್ಯಾಷನ್ ಉದ್ಯಮ ಪ್ರವೇಶಿಸಲು ಪ್ರೇರಣೆ ಸಿಕ್ಕಿದ್ದು ಹೇಗೆ?
ಮಾನ್ವಿತಾ: ನಾನು ಚಿಕ್ಕವಳಿದ್ದಾಗ ನನ್ನಮ್ಮ ಟೈಲರಿಂಗ್, ಕಟ್ಟಿಂಗ್ ಹಾಗೂ ಡಿಸೈನಿಂಗ್ ಕ್ಲಾಸ್ ಹೇಳಿಕೊಡುತ್ತಿದ್ದರು. ಅವರನ್ನು ನೋಡುತ್ತಿದ್ದ ನನಗೂ ಕೂಡ ಡಿಸೈನಿಂಗ್ ಬಗ್ಗೆ ಒಲವು ಬೆಳೆದಿತ್ತು ಎನ್ನಬಹುದು. ಇದೀಗ ಅದಕ್ಕೆ ಕಾಲ ಕೂಡಿ ಬಂದಿದೆ. ಪತಿ ಅರುಣ್ ಹಾಗೂ ಡಿಸೈನರ್ ಸೌಮ್ಯ ಸಹಭಾಗಿತ್ವದೊಂದಿಗೆ ಬ್ರಾಂಡ್ ಲಾಂಚ್ ಮಾಡಲು ಸಾಧ್ಯವಾಗಿದೆ.
ವಿಶ್ವವಾಣಿ ನ್ಯೂಸ್: ನಿಮ್ಮ ಫ್ಯಾಷನ್ ಬ್ರ್ಯಾಂಡ್ ಮಾನೆಕಿನ್ ಕಾನ್ಸೆಪ್ಟ್ ಹಾಗೂ ಉದ್ದೇಶವೇನು?
ಮಾನ್ವಿತಾ: ನಮ್ಮ ಕರ್ನಾಟಕದ ರೇಷ್ಮೆ ಫ್ಯಾಬ್ರಿಕ್ ಬಳಸಿ, ಹೈ ಫ್ಯಾಷನ್ ಅಂದರೆ, ಕಾರ್ಪೋರೇಟ್, ಬಿಸ್‌ನೆಸ್ ಸೇರಿದಂತೆ ನಾನಾ ಕ್ಷೇತ್ರಗಳಲ್ಲಿ ಯಶಸ್ವಿಯಾದ ಹಾಗೂ ಯಶಸ್ಸಿನ ಹಾದಿಯಲ್ಲಿ ಸಾಗುವ ಉದ್ಯೋಗಸ್ಥ ಮಹಿಳೆಯರಿಗೆ, ಯುವತಿಯರಿಗೆ ಆತ್ಮವಿಶ್ವಾಸ ತುಂಬುವಂತಹ ಪವರ್ ಸೂಟ್ ಡಿಸೈನರ್‌ವೇರ್‌ಗಳನ್ನು ಸಿದ್ಧಪಡಿಸುವುದು.

ವಿಶ್ವವಾಣಿ ನ್ಯೂಸ್: ಈ ಪವರ್ ಸೂಟ್ಸ್ ವಿಶೇಷತೆಯೇನು?
ಮಾನ್ವಿತಾ: ಯೂನಿಕ್ ಡಿಸೈನ್! ಲಿಮಿಟೆಡ್ ಎಡಿಷನ್‌ನಲ್ಲಿ ಬಿಡುಗಡೆಗೊಳಿಸುವುದು. ಪ್ರತಿ ಮಹಿಳೆಯೂ ಧರಿಸಿದಾಗ, ವಿಭಿನ್ನವಾಗಿ ಕಾಣಿಸುವಂತಹ ಡಿಸೈನ್‌ನಲ್ಲಿ ರೂಪಿಸುವುದು.
ವಿಶ್ವವಾಣಿ ನ್ಯೂಸ್: ಯಾವ್ಯಾವ ಬಗೆಯ ಸಿಲ್ಕ್ ಬಳಸಲಾಗುತ್ತದೆ?
ಮಾನ್ವಿತಾ: ನಾನಾ ಬಗೆಯ ಜರಿ, ಬ್ರೋಕೇಡ್, ಹ್ಯಾಂಡ್ಲೂಮ್ ರೇಷ್ಮೆ, ಪವರ್‌ಲೂಮ್ ರೇಷ್ಮೆ ಸೇರಿದಂತೆ ಬಹುತೇಕ ಎಲ್ಲಾ ಬಗೆಯ ಸಿಲ್ಕ್, ಪವರ್ ಸೂಟ್‌ಗಳಲ್ಲಿ ಬಳಸಲಾಗುತ್ತದೆ.

ವಿಶ್ವವಾಣಿ ನ್ಯೂಸ್: ಫ್ಯಾಷನ್ ಉದ್ಯಮಕ್ಕೆ ಕಾಲಿಡುವ ಮುನ್ನ, ಅಧ್ಯಯನ ನಡೆಸಿದ್ದೀರಾ?
ಮಾನ್ವಿತಾ: ಖಂಡಿತಾ. ನಾನು ಹಾಗೂ ನಮ್ಮ ಪ್ರೊಫೆಷನಲ್ ಡಿಸೈನರ್ ಸೌಮ್ಯ ಅವರ ಜತೆಗೂಡಿ, ಊರೂರು ತಿರುಗಾಡಿ, ರಿಸರ್ಚ್ ನಡೆಸಿದ್ದೇನೆ. ಅಷ್ಟೇಕೆ! ಒಂದೊಂದು ಬಗೆಯ ರೇಷ್ಮೆಯ ಬಗ್ಗೆ ಸವಿವರವಾಗಿ ಅಧ್ಯಯನ ನಡೆಸಿದ್ದೇನೆ.
ಈ ಸುದ್ದಿಯನ್ನೂ ಓದಿ | Republic Day Saree Fashion 2025: ಗಣರಾಜ್ಯೋತ್ಸವ ಸಂಭ್ರಮಕ್ಕೆ ಬಂತು ವೈವಿಧ್ಯಮಯ ಕಾಟನ್ ಮಿಕ್ಸ್ ಸೀರೆಗಳು
ವಿಶ್ವವಾಣಿ ನ್ಯೂಸ್: ಮಾನೆಕಿನ್ ಮುಂದಿನ ಪ್ಲಾನ್ ಏನು?
ಮಾನ್ವಿತಾ: ಇ-ಕಾಮರ್ಸ್ ಮೂಲಕ ಆರಂಭಿಸಿದ್ದು, ವರ್ಚುವಲ್ ಆಗಿ ಎಲ್ಲಾ ಚಟುವಟಿಕೆಗಳು ನಡೆಯುತ್ತಿವೆ. ಮುಂದೊಮ್ಮೆ ದುಬೈನಲ್ಲೂ ಕಾರ್ಯಚಟುವಟಿಕೆ ನಡೆಸಲಿದ್ದೇವೆ. ಹೈ ಫ್ಯಾಷನ್ ಎಕ್ಸಿಬಿಷನ್‌ನಲ್ಲಿ ಪ್ರದರ್ಶನ ನಡೆಸಲಿದ್ದೇವೆ. ಫ್ಯಾಷನ್ ಶೋಗಳ ಮೂಲಕವೂ ಪರಿಚಯಿಸಲಿದ್ದೇವೆ. ಹಂತಹಂತವಾಗಿ ಎಲ್ಲವೂ ಅಭಿವೃದ್ಧಿಗೊಳ್ಳಲಿದೆ. ಸೋಷಿಯಲ್ ಮೀಡಿಯಾದಲ್ಲಿ ಈಗಾಗಲೇ ಬಿಡುಗಡೆಗೊಳಿಸಿರುವ ಬ್ರಾಂಡ್ ಇಂಟ್ರೊ ಮ್ಯೂಸಿಕ್ ಕೂಡ ಸ್ವಂತದ್ದಾಗಿದೆ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)