ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Maha Kumbh Mela: ಮಹಾ ಕುಂಭಮೇಳ ಮುಕ್ತಾಯಕ್ಕೆ ದಿನಗಣನೆ; 62 ಕೋಟಿ ಭಕ್ತರ ಭೇಟಿ

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ತೆರೆ ಬೀಳಲು ದಿನಗಣನೆ ಆರಂಭವಾಗಿದೆ. ಜ. 13ರಂದು ಆರಂಭವಾದ ಈ ಬೃಹತ್‌ ಧಾರ್ಮಿಕ ಮೇಳ ಫೆ. 26ರಂದು ಮುಕ್ತಾಯವಾಗಲಿದೆ. ಈಗಾಗಲೇ 62 ಕೋಟಿ ಭಕ್ತರ ಭೇಟಿ ನೀಡಿದ್ದಾರೆ.

ಮಹಾ ಕುಂಭಮೇಳಕ್ಕೆ 62 ಕೋಟಿ ಭಕ್ತರ ಭೇಟಿ

ಮಹಾ ಕುಂಭಮೇಳ.

Profile Ramesh B Feb 23, 2025 4:54 PM

ಲಖನೌ: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳ (Maha Kumbh Mela)ಕ್ಕೆ ತೆರೆ ಬೀಳಲು ದಿನಗಣನೆ ಆರಂಭವಾಗಿದೆ. ಜ. 13ರಂದು ಆರಂಭವಾದ ಈ ಬೃಹತ್‌ ಧಾರ್ಮಿಕ ಕಾರ್ಯಕ್ರಮ ಫೆ. 26ರಂದು ಮುಕ್ತಾಯಗೊಳ್ಳಲಿದೆ. ಈಗಾಗಲೇ ದೇಶ-ವಿದೇಶಗಳಿಂದ ಕೋಟ್ಯಂತರ ಭಕ್ತರು ಆಗಮಿಸಿ ಪವಿತ್ರ ಸ್ನಾನಗೈದಿದ್ದಾರೆ. ಈ ಶತಮಾನದ ಅಪರೂಪದ ಧಾರ್ಮಿಕ ಕಾರ್ಯಕ್ರಮದಲ್ಲಿ ಇದುವರೆಗೆ 62 ಕೋಟಿ ಭಕ್ತರು ಭಾಗವಹಿಸಿದ್ದಾರೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ (Yogi Adityanath) ತಿಳಿಸಿದ್ದಾರೆ.

ಆಗ್ರಾದಲ್ಲಿ ನಡೆದ ಯುನಿಕಾರ್ನ್ ಕಂಪನಿಗಳ ಸಮಾವೇಶದಲ್ಲಿ ಮಾತನಾಡಿದ ಯೋಗಿ ಈ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ʼʼಆಧ್ಯಾತ್ಮಿಕ ಅಥವಾ ಯಾವುದೇ ಪ್ರವಾಸೋದ್ಯಮ ಸಮಾರಂಭವಿರಲಿ ಒಂದು ನಿರ್ದಿಷ್ಟ ಅವಧಿಯಲ್ಲಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಜನರು ಒಂದೆಡೆ ಸೇರುವುದು ಶತಮಾನದ ಅಪರೂಪದ ಘಟನೆಗಳಲ್ಲಿ ಒಂದುʼʼ ಎಂದು ಅವರು ಮಹಾ ಕುಂಭಮೇಳವನ್ನು ‍ಬಣ್ಣಿಸಿದ್ದಾರೆ.

ಈ ಬಾರಿ ಮಹಾ ಕುಂಭಮೇಳಕ್ಕೆ ಒಟ್ಟು 45 ಕೋಟಿ ಭಕ್ತರು ಆಗಮಿಸಲಿದ್ದಾರೆ ಎಂದು ಅಂದಾಜಿಸಲಾಗಿತ್ತು. ಆದರೆ ಕುಂಭಮೇಳ ಮುಕ್ತಾಯಕ್ಕೆ ಇನ್ನೂ 3 ದಿನ ಬಾಕಿ ಇರುವಂತೆಯೇ ಈಗಾಗಲೇ 62 ಕೋಟಿ ಮಂದಿ ಭೇಟಿ ನೀಡಿದ್ದಾರೆ. ಮಹಾ ಕುಂಭಮೇಳದಲ್ಲಿ ಒಟ್ಟು 65 ಕೋಟಿ ಭಕ್ತರು ಭೇಟಿ ನೀಡುವ ಸಾಧ್ಯತೆ ಇದೆ.

ದುಬಾರಿ ವಿಮಾನ ಟಿಕೆಟ್‌

ಪ್ರಯಾಗ್‌ರಾಜ್‌ಗೆ ಭಕ್ತ ಜನ ಪ್ರವಾಹ ಹರಿದು ಬರುತ್ತಿದ್ದು, ರೈಲು, ವಿಮಾನ ಟಿಕೆಟ್‌ ದರ ಗಗನಮುಖಿಯಾಗಿದೆ. ಮಹಾಕುಂಭ ಮೇಳಕ್ಕೆ ವಿಮಾನದಲ್ಲಿ ತೆರಳುವವರ ಪೈಕಿ ಶೇ. 87ರಷ್ಟು ಭಕ್ತರು ಶೇ. 50-300ರಷ್ಟು ಹೆಚ್ಚುವರಿ ಹಣ ಪಾವತಿಸುತ್ತಿದ್ದಾರೆ ಎನ್ನುವ ಸಂಗತಿ ಲೋಕಲ್‌ಸರ್ಕಲ್‌ನ ಸಮೀಕ್ಷೆಯಲ್ಲಿ ಬಹಿರಂಗಗೊಂಡಿದೆ. ಕುಂಭಮೇಳಕ್ಕೆ ತೆರಳಿದ ವಿವಿಧ ಭಾಗಗಳ ಭಕ್ತರ ಅಭಿಪ್ರಾಯ ಸಂಗ್ರಹಿಸಲಾಗಿದೆ. ವಿಮಾನ ಟಿಕೆಟ್‌ ದರ, ವಾಸ್ತವ್ಯ ಮತ್ತು ಪ್ರಯಾಣ ವೆಚ್ಚದ ಆಧಾರದಲ್ಲಿ ಸಮೀಕ್ಷೆ ನಡೆಸಲಾಗಿದೆ.

ಈ ಸುದ್ದಿಯನ್ನೂ ಓದಿ: Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ



ಕೊನೆಯ ದಿನಕ್ಕಾಗಿ ಸಿದ್ಧತೆ

ಫೆ. 26ರಂದು ಮಹಾ ಕುಂಭಮೇಳದ ಕೊನೆಯ ಪವಿತ್ರ ಸ್ನಾನ ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಸಾಕಷ್ಟು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ. ಜತೆಗೆ ಅದೇ ದಿನ ಶಿವರಾತ್ರಿಯೂ ಇರುವುದರಿಂದ ಸೂಕ್ತ ಸಿದ್ಧತೆ ನಡೆಸಲಾಗುತ್ತಿದೆ.
ಜನ ಸಂದಣಿಯನ್ನು ನಿಯಂತ್ರಿಸಲು ಪ್ರಮುಖ ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಡಿಐಜಿ ವೈಭವ್‌ ಕೃಷ್ಣ ತಿಳಿಸಿದ್ದಾರೆ.

ವಾಹನಗಳ ಸುಗಮ ಸಂಚಾರಕ್ಕಾಗಿ ಟ್ರಾಫಿಕ್‌ ವ್ಯವಸ್ಥೆ ಸಜ್ಜುಗೊಳಿಸಲಾಗುತ್ತಿದೆ. ಪರೀಕ್ಷೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮಹಾ ಕುಂಭಮೇಳ ನಡೆಯುತ್ತಿರುವ ಪ್ರದೇಶದಲ್ಲಿನ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಕಾರ್ಯ ನಿರ್ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮೇಳಕ್ಕೆ ತೆರಳುವ ಯಾತ್ರಾರ್ಥಿಗಳ ಪ್ರವಾಹದಿಂದಾಗಿ ವಿಶೇಷವಾಗಿ ಚುಂಗಿಯಿಂದ ಜುಸಿ ರಸ್ತೆಯಲ್ಲಿ ಗಮನಾರ್ಹ ದಟ್ಟಣೆ ಕಂಡುಬಂದಿದೆ. ಮಕರ ಸಂಕ್ರಾಂತಿ, ಮೌನಿ ಅಮಾವಾಸ್ಯೆ ಮತ್ತು ಬಸಂತ್ ಪಂಚಮಿಯಂದು ಈಗಾಗಲೇ ಅಮೃತ ಸ್ನಾನಗಳನ್ನು ಕೈಗೊಳ್ಳಲಾಗಿದೆ. ಇನ್ನು ಮಹಾ ಶಿವರಾತ್ರಿಯಂದು ಅಂತಿಮ ಪವಿತ್ರ ಸ್ನಾನ ನಡೆಯಲಿದೆ. ಜನರ ಸುರಕ್ಷತೆ, ಸುಗಮ ಸಂಚಾರಕ್ಕೆ ಈಗಾಗಲೇ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.