Kiccha Sudeep: ಸರಿಗಮಪ ವೇದಿಕೆಯಲ್ಲಿ ಸ್ಯಾಂಡಲ್‌ವುಡ್ ಬಾದ್ ಷಾ ಸುದೀಪ್; ಅಮ್ಮನ ಪ್ರತಿಮೆ ತಬ್ಬಿ ಕಿಚ್ಚ ಕಣ್ಣೀರು
Kiccha Sudeep: ಈ ವೀಕೆಂಡ್ ನ ಸರಿಗಮಪ ಮೆರಗು ಹೆಚ್ಚಿಸಲು ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಸುದೀಪ್(Sudeep) ಅತಿಥಿಯಾಗಿ ಬಂದಿದ್ದಾರೆ.
Sushmitha Jain
Jan 3, 2025 11:38 AM
ಬೆಂಗಳೂರು: ಜೀ ಕನ್ನಡ (Zee kannada) ವಾಹಿನಿಯಲ್ಲಿ ಪ್ರಸಾರವಾಗುವ ರಿಯಾಲಿಟಿ ಶೋಗಳಲ್ಲಿ ಸರಿಗಮಪ (Saregamapa) ಕೂಡ ಒಂದು. ಈ ರಿಯಾಲಿಟಿ ಶೋಗಾಗಿ ಸಂಗೀತ ಪ್ರಿಯರು ಎದುರು ನೋಡುತ್ತಲೇ ಇರುತ್ತಾರೆ. ಮ್ಯೂಸಿಕ್ ಜತೆ ಒಂದಿಷ್ಟು ಎಂಟರ್‌ಟೈನ್‌ಮೆಂಟ್ ಹೊತ್ತು ಬರುವ ಈ ರಿಯಾಲಿಟಿ ಶೋ ಕನ್ನಡಿಗರ ಮನ ಗೆದ್ದಿದೆ.
ಒಂದು ಕಡೆ ಹೊಸ ಪ್ರತಿಭೆಗಳು ತಮ್ಮ ಕಂಠದಿಂದ ಮನಸೆಳೆಯುತ್ತಿದ್ದರೆ, ಇನ್ನೊಂದು ಕಡೆ ಜಡ್ಜ್‌ಗಳು ಎಂಟರ್‌ಟೈನ್‌ಮೆಂಟ್ ಕೊಡುತ್ತಾರೆ. ಅರ್ಜುನ್ ಜನ್ಯ, ವಿಜಯ್ ಪ್ರಕಾಶ್ ಹಾಗೂ ರಾಜೇಶ್ ಕೃಷ್ಣನ್ ಮೂವರೂ ಕಿರುತೆರೆಯ ಈ ಮ್ಯೂಸಿಕ್ ರಿಯಾಲಿಟಿ ಶೋನಲ್ಲಿ ಚಿಂದಿ ಉಡಾಯಿಸಿ ಬಿಡುತ್ತಿದ್ದಾರೆ.
ಇದೀಗ ಈ ವಾರದ ಎಪಿಸೋಡ್‌ನ ಪ್ರೋಮೋ ಸದ್ಯ ವೀಕ್ಷಕರ ಗಮನ ಸೆಳೆಯುತ್ತಿದ್ದು, ಈ ವೀಕೆಂಡ್‌ನ ಮೆರಗು ಹೆಚ್ಚಿಸಲು ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಸುದೀಪ್(Sudeep) ಅತಿಥಿಯಾಗಿ ಬಂದಿದ್ದಾರೆ. ವರ್ಷದ ಕೊನೆಯಲ್ಲಿ ಬಿಡುಗಡೆಯಾದ ಚಂದನವನದ ಕಿಚ್ಚ ಸುದೀಪ್ ನಟನೆಯ 'ಮ್ಯಾಕ್ಸ್' ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ನಿರ್ದೇಶಕ ವಿಜಯ್ ಕಾರ್ತಿಕೇಯ ಒಂದು ರಾತ್ರಿಯಲ್ಲಿ ನಡೆಯುವ ಕಥೆಯನ್ನು ಹೆಣೆದಿದ್ದು, ಸಿನಿಪ್ರೇಕ್ಷಕರಿಗೆ ಸಖತ್ ಕಿಕ್ ಕೊಡ್ತಿದೆ. ಕೇವಲ ಕರ್ನಾಟಕ ಮಾತ್ರವಲ್ಲದೇ ಪರಭಾಷಾ ಪ್ರೇಕ್ಷಕರಿಗೆ ʼಮ್ಯಾಕ್ಸ್ʼ ಇಷ್ಟವಾಗಿದೆ. 2022ರಲ್ಲಿ ಬಿಡುಗಡೆಯಾದ ʼವಿಕ್ರಾಂತ್ ರೋಣʼ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯಾಗಿ ಮಿಂಚಿದ್ದ ಕಿಚ್ಚ ಸುದೀಪ್, ʼಮ್ಯಾಕ್ಸ್ʼ ಸಿನಿಮಾದಲ್ಲೂ ಪೊಲೀಸ್ ಪಾತ್ರದಲ್ಲಿ ಮಿಂಚಿದ್ದಾರೆ. ʼಮ್ಯಾಕ್ಸ್ʼನಲ್ಲಿ ಪೊಲೀಸ್ ಆಗಿದ್ದರೂ ಆ್ಯಕ್ಷನ್ ಅವತಾರದ ಮೂಲಕ ಕಿಚ್ಚ ಪ್ರೇಕ್ಷಕರಿಗೆ ಸಖತ್ ಕಿಕ್ ಕೊಟ್ಟಿದ್ದಾರೆ.
View this post on Instagram A post shared by Zee Kannada (@zeekannada)
ಸದ್ಯ 'ಮ್ಯಾಕ್ಸ್' ಗೆಲುವಿನ ಖುಷಿಯಲ್ಲಿರುವ ಕಿಚ್ಚ ಸುದೀಪ್ ಸರಿಗಮಪ ಶೋಗೆ ಅತಿಥಿಯಾಗಿ ಆಗಮಿಸಿದ್ದಾರೆ. ಸ್ಪರ್ಧಿಗಳು ಕಿಚ್ಚ ಸುದೀಪ್ ಅಭಿನಯದ ಸಿನಿಮಾಗಳ ಹಿಟ್ ಹಾಡುಗಳನ್ನು ಹಾಡುವ ಮೂಲಕ ಕಿಚ್ಚನಿಗೆ ಸ್ವಾಗತ ಕೋರಿದ್ದಾರೆ. ವೇದಿಕೆಯ ಮೇಲೆ ಬಂದ ಸುದೀಪ್, ಎಲ್ಲರಿಗೂ ನಮಿಸುತ್ತಾ, ತಾವು ಮೊದಲ ಬಾರಿಗೆ ಬಣ್ಣ ಹಚ್ಚಿ ಪಾದಾರ್ಪಣೆ ಮಾಡಿದ ಜಾಗ ಇದು ಎಂದು ತಮ್ಮ ನಟನೆಯ ಆರಂಭದ ದಿನಗಳನ್ನು ನೆನೆದಿದ್ದಾರೆ. ಈ ವೇದಿಕೆ ಸಾಕಷ್ಟು ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾಗಿದೆ. ಸದಾ ಗತ್ತು ಗರ್ವದಿಂದ ಇರುತ್ತಿದ್ದ ಕಿಚ್ಚ ಈ ಸರಿಗಮ ಶೋನಲ್ಲಿ ಕಣ್ಣೀರಾಗಿದ್ದು, ರನ್ನನಿಗೆ ಜೀ ಕನ್ನಡವಾಹಿನಿ ಮರೆಯಲಾಗದ ಸರ್ಪ್ರೈಸ್ ಗಿಫ್ಟ್‌ಗಳನ್ನು ನೀಡುವ ಮೂಲಕ ಗೌರವ ಹಾಗೂ ಪ್ರೀತಿಯನ್ನು ತೋರಿಸಿದೆ .
ಸುದೀಪ್ ಜತೆಗೆ ಮಗಳು ಸಾನ್ವಿ ಹಾಗೂ ಪತ್ನಿ ಪ್ರಿಯಾ ಅವರು ಕೂಡ ಈ ಶೋ ಬಂದಿದ್ದಾರೆ. ಸಾನ್ವಿ ಹಾಡು ಹಾಡಿ ಅಪ್ಪನಿಗೆ ಸರ್ಪ್ರೈಸ್ ನೀಡಿದ್ದಾರೆ. ಜತೆಗೆ ಸುದೀಪ್ ಕೂಡ ತಮ್ಮ ಪತ್ನಿ ಪ್ರಿಯಾ ಅವರನ್ನು ಹಾಡಿ ಹೊಗಳಿದ್ದು, ಸಾಂಗ್ ಹಾಡುವ ಮೂಲಕ ತಮ್ಮ ಪ್ರೀತಿಯನ್ನು ಹೊರಹಾಕಿದ್ದಾರೆ.
ತಾಯಿಯ ಮೂರ್ತಿಯನ್ನ ಗಿಫ್ಟ್ ನೀಡಿದ ಜೀ ವಾಹಿನಿ
ಸರಿಗಮಪ ಟೀಂ ಕಿಚ್ಚನಿಗೆ ತಾಯಿಯ ಮೂರ್ತಿಯನ್ನ ಗಿಫ್ಟ್ ಕೊಟ್ಟಿದ್ದು, ಇದನ್ನು ಕಂಡ ಸುದೀಪ್ ಆ ಪ್ರತಿಮೆಯನ್ನು ಬಿಗಿದಪ್ಪಿ ಕಣ್ಣೀರಿಟ್ಟಿದ್ದಾರೆ. ಜತೆಗೆ ಅಮ್ಮನಿಗಾಗಿ ಮುದ್ದಾದ ಲಾಲಿ ಹಾಡನ್ನು ಹಾಡಿದ್ದು, ಇಡೀ ವೇದಿಕೆ ಭಾವುಕ ಕ್ಷಣಕ್ಕೆ ಸಾಕ್ಷಿಯಾಗಿದೆ. ಇದನ್ನ ನೋಡಿ ಮಗಳು ಸಾನ್ವಿ ಕೂಡ ಕಣ್ಣೀರಿಟ್ಟಿದ್ದು, ಒಟ್ಟಾರೆ ಇಡೀ ಕಾರ್ಯಕ್ರಮ ಸಂಬಂಧಗಳ ಮಹತ್ವ ಹಾಗೂ ಪ್ರಾಮುಖ್ಯತೆಯನ್ನು ಎತ್ತಿ ಹಿಡಿದಿದೆ. ಈ ಶನಿವಾರ, ಭಾನುವಾರದ ಎಪಿಸೋಡ್‌ನಲ್ಲಿ ಪ್ರಸಾರ ಕಾಣಲಿದೆ.
ಈ ಸುದ್ದಿಯನ್ನು ಓದಿ: Game Changer Trailer: ಮತ್ತೊಂದು ಪವರ್‌ಫುಲ್ ಪಾತ್ರದಲ್ಲಿ ರಾಮ್ ಚರಣ್; ಬಹು ನಿರೀಕ್ಷಿತ ‘ಗೇಮ್ ಚೇಂಜರ್ʼ ಟ್ರೈಲರ್ ಔಟ್