Toxic Movie: ಮುಂದಿನ ವರ್ಷ ಯುಗಾದಿಯಂದು ಬಾಕ್ಸ್ ಆಫೀಸ್‌ನಲ್ಲಿ ಬಿಗ್ ಕ್ಲ್ಯಾಶ್; ಶಾರುಖ್ ಬಳಿಕ ರಣಬೀರ್ ವಿರುದ್ಧವೂ ಗೆಲ್ತಾರಾ ಯಶ್?
Yash vs Ranbir Kapoor: ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹು ನಿರೀಕ್ಷಿತ ʼಟಾಕ್ಸಿಕ್ʼ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸಲಾಗಿದೆ. 2026ರ ಮಾ. 19ರಂದು ಇದು ರಿಲೀಸ್ ಆಗಲಿದೆ. ಅದರ ಮಾರನೇ ದಿನ ಬಾಲಿವುಡ್ ಸೂಪರ್ ಸ್ಟಾರ್ ರಣಬೀರ್ ಕಪೂರ್ ನಟನೆಯ ಲವ್ & ವಾರ್ ಸಿನಿಮಾ ತೆರೆ ಕಾಣುವ ಸಾಧ್ಯಯತೆ ಇದೆ. ಹೀಗಾಗಿ ಬಾಕ್ಸ್ ಆಫೀಸ್‌ನಲ್ಲಿ ತೀವ್ರ ಪೈಪೋಟಿ ಏರ್ಪಡಲಿದೆ.

ಯಶ್ ಮತ್ತು ರಣಬೀರ್ ಕಪೂರ್.

ಬೆಂಗಳೂರು: ಸದ್ಯ ದೇಶ ಮಾತ್ರವಲ್ಲ ಜಾಗತಿಕ ಸಿನಿಪ್ರಿಯರ ಗಮನ ಸೆಳೆದ ಚಿತ್ರ ಸ್ಯಾಂಡಲ್‌ವುಡ್‌ನ ʼಟಾಕ್ಸಿಕ್ʼ (Toxic Movie). ಕೆವಿಎನ್ ಪ್ರೊಡಕ್ಷನ್ಸ್ ಅದ್ಧೂರಿಯಾಗಿ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ (Yash) ನಟಿಸುತ್ತಿದ್ದು ಇದೇ ಕಾರಣಕ್ಕೆ ನಿರೀಕ್ಷೆ ಮೂಡಿಸಿದೆ. ಮಲಯಾಳಂ ಮೂಲದ ನಟಿ, ನಿರ್ದೇಶಕಿ ಗೀತು ಮೋಹನ್‌ದಾಸ್ ಆ್ಯಕ್ಷನ್ ಕಟ್ ಹೇಳುತ್ತಿರುವ ಈ ಗ್ಯಾಂಗ್‌ಸ್ಟರ್ ಡ್ರಾಮ ಕನ್ನಡದ ಜತೆಗೆ ಇಂಗ್ಲಿಷ್‌ನಲ್ಲೂ ತಯಾರಾಗುತ್ತಿದ್ದು, ಬಳಿಕ ಉಳಿದ ಭಾಷೆಗಳಿಗೂ ಡಬ್ ಮಾಡಲಾಗುತ್ತದೆ. ಶನಿವಾರ (ಮಾ. 22) ಯಶ್ ಅಭಿಮಾನಿಗಳಿಗೆ ಬಿಗ್ ಸರ್‌ಪ್ರೈಸ್ ನೀಡಿದ ʼಟಾಕ್ಸಿಕ್ʼ ಚಿತ್ರತಂಡ ಬಿಡುಗಡೆ ದಿನಾಂಕವನ್ನು ಘೋಷಿಸಿದೆ. ಯುಗಾದಿಯ ಪ್ರಯುಕ್ತ 2026ರ ಮಾ. 19ರಂದು ಈ ಸಿನಿಮಾ ವಿಶ್ವಾದ್ಯಂತ ತೆರೆಗೆ ಬರಲಿದೆ ಎಂದು ಪೋಸ್ಟರ್ ಮೂಲಕ ತಿಳಿಸಿದೆ. ವಿಶೇಷ ಎಂದರೆ ಮಾರನೇ ದಿನ ಎಂದರೆ ಮಾ. 20ರಂದು ಮತ್ತೊಂದು ಬಹು ನಿರೀಕ್ಷಿತ ಬಾಲಿವುಡ್ ಚಿತ್ರ ಲವ್ & ವಾರ್ (Love & War) ತೆರೆಗೆ ಬರುವ ಸಾಧ್ಯತೆ ಇದೆ. ಬಾಲಿವುಡ್ ಚಿತ್ರ ಮಾಂತ್ರಿಕ ಸಂಜಯ್ ಲೀಲಾ ಬನ್ಸಾಲಿ (Sanjay Leela Bhansali) ನಿರ್ದೇಶನದ ಈ ಸಿನಿಮಾದಲ್ಲಿ ಸೂಪರ್ ಸ್ಟಾರ್‌ಗಳಾದ ರಣಬೀರ್ ಕಪೂರ್, ವಿಕ್ಕಿ ಕೌಶಲ್ ಮತ್ತು ಆಲಿಯಾ ಭಟ್ ನಟಿಸುತ್ತಿದ್ದಾರೆ. ಹೀಗಾಗಿ ಬಾಕ್ಸ್ ಆಫೀಸ್‌ನಲ್ಲಿ ತೀವ್ರ ಪೈಪೋಟಿ ನಡೆಯಲಿದೆ ಎನ್ನುವ ಲೆಕ್ಕಾಚಾರ ಆರಂಭವಾಗಿದೆ.
ಈಗಾಗಲೇ ಈ ಎರಡೂ ಚಿತ್ರಗಳು ಸಿನಿಪ್ರಿಯರ ಕುತೂಹಲದ ಕೇಂದ್ರ ಬಿಂದು ಎನಿಸಿಕೊಂಡಿವೆ. ʼಟಾಕ್ಸಿಕ್ʼ ಹಾಲಿವುಡ್ ರೇಂಜ್‌ನಲ್ಲಿ ಮೂಡಿ ಬರಲಿದ್ದು, ಗೋವಾದಲ್ಲಿ ನಡೆಯುವ ಡ್ರಗ್ಸ್ ಮಾಫಿಯಾದ ಕಥೆಯನ್ನು ಒಳಗೊಂಡಿದೆ ಎನ್ನಲಾಗಿದೆ. ಈಗಾಗಲೇ ಹೊರಬಂದಿರುವ ಪೋಸ್ಟರ್, ಟೀಸರ್ ಗಮನ ಸೆಳೆದಿದೆ. ರೆಟ್ರೋ ಶೈಲಿಯಲ್ಲಿ ರಾಕಿಂಗ್ ಸ್ಟಾರ್ ಯಶ್ ಸ್ಟ್ರೈಲಿಶ್ ಪಾತ್ರದಲ್ಲಿ ಮಿಂಚಿದ್ದಾರೆ. ಜತೆಗೆ ಹಾಲಿವುಡ್ ನಟರು, ತಂತ್ರಜ್ಞರು ʼಟಾಕ್ಸಿಕ್ʼ ಚಿತ್ರದ ಭಾಗವಾಗಿದ್ದಾರೆ. ಈಗಾಗಲೇ ಭರದಿಂದ ಶೂಟಿಂಗ್ ನಡೆಯುತ್ತಿದೆ. ಬೆಂಗಳೂರು ಸೇರಿದಂತೆ ವಿವಿಧ ಕಡೆಗಳಲ್ಲಿ ಚಿತ್ರೀಕರಣ ನಡೆದಿದೆ. ಸುಮಾರು 250 ಕೋಟಿ ರೂ. ವೆಚ್ಚದಲ್ಲಿ ತಯಾರಾಗುತ್ತಿರುವ ಈ ಕನ್ನಡ-ಇಂಗ್ಲಿಷ್ ಚಿತ್ರ ಬಳಿಕ ಹಿಂದಿ, ತಮಿಳು, ತೆಲುಗು, ಮಲಯಾಳಂಗೂ ಡಬ್ ಆಗಿ ಥಿಯೇಟರ್‌ಗೆ ಲಗ್ಗೆ ಇಡಲಿದೆ. ʼಕೆಜಿಎಫ್ʼ ಸರಣಿ ಚಿತ್ರಗಳ ಬಹುದೊಡ್ಡ ಯಶಸ್ಸಿನ ಬಳಿಕ ಯಶ್ ನಟಿಸುತ್ತಿರುವ ಸಿನಿಮಾ ಇದಾಗಿರುವ ಕಾರಣದಿಂದಲೇ ನಿರೀಕ್ಷೆ ಬೆಟ್ಟದಷ್ಟಾಗಿದೆ.
ಯಶ್ ಅವರ ಇನ್‌ಸ್ಟಾಗ್ರಾಮ್ ಪೋಸ್ಟ್:
ಈ ಸುದ್ದಿಯನ್ನೂ ಓದಿ: Toxic Release Date: ಅನೌನ್ಸ್ ಆಯ್ತು ʼಟಾಕ್ಸಿಕ್ʼ ರಿಲೀಸ್ ಡೇಟ್; ಈ ವರ್ಷ ಬಿಡುಗಡೆಯಾಗಲ್ಲ ಯಶ್ ಚಿತ್ರ
ಇತ್ತ ಬಾಲಿವುಡ್‌ನ ಸಂಜಯ್ ಲೀಲಾ ಬನ್ಸಾಲಿ ಕ್ಲಾಸ್ ಸಿನಿಮಾಗಳ ಮೂಲಕ ಪ್ರೇಕ್ಷಕರ ಗಮನ ಸೆಳೆದವರು. ಅಲ್ಲದೆ ʼಗಂಗೂಭಾಯಿ ಕಾಥಿಯಾವಾಡಿʼ ಚಿತ್ರದಲ್ಲಿ ಮೊದಲ ಬಾರಿ ಒಂದಾಗಿದ್ದ ಸಂಜಯ್ ಮತ್ತು ಆಲಿಯಾ ಭಟ್ ಇದೀಗ ʼಲವ್ & ವಾರ್ʼಗಾಗಿ ಮತ್ತೆ ಒಂದಾಗುತ್ತಿದ್ದಾರೆ. ಸೂಪರ್ ಹಿಟ್ ಆಗಿದ್ದ ʼಗಂಗೂಭಾಯಿ ಕಾಥಿಯಾವಾಡಿʼಯ ಅಭಿನಯಕ್ಕಾಗಿ ಆಲಿಯಾ ರಾಷ್ಟ್ರ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿದ್ದಾರೆ. ಅಲ್ಲದೆ ಸಂಜಯ್-ರಣಬೀರ್-ಆಲಿಯಾ-ವಿಕ್ಕಿ ಕೌಶಲ್ ಮೊದಲ ಬಾರಿಗೆ ಒಂದಾಗುತ್ತಿರುವುದು ಕೂಡ ನಿರೀಕ್ಷೆ ಹೆಚ್ಚಿಸಿದೆ. ವಿಶೇಷ ಎಂದರೆ ಈ ಚಿತ್ರದ ಕಥೆಯನ್ನು 1964ರಲ್ಲಿ ತೆರೆಕಂಡ ಬಾಲಿವುಡ್‌ನ ಕ್ಲಾಸಿಕ್ ಚಿತ್ರ ʼಸಂಗಮ್ʼನಿಂದ ಸ್ಫೂರ್ತಿಗೊಂಡು ರಚಿಸಲಾಗಿದೆ ಎನ್ನಲಾಗಿದೆ.
ಯಶ್ vs ರಣಬೀರ್
ʼಟಾಕ್ಸಿಕ್ʼ ಮತ್ತು ʼಲವ್ & ವಾರ್ʼ 1 ದಿನದ ಅಂತರದಲ್ಲಿ ತೆರೆಕಂಡರೆ ಬಾಕ್ಸ್ ಆಫೀಸ್‌ನಲ್ಲಿ ಬಹುದೊಡ್ಡ ಕ್ಲ್ಯಾಶ್ ನಡೆಯಲಿದೆ. ಈ ಹಿಂದೆ 2018ರಲ್ಲಿ ಯಶ್ ಅಭಿನಯದ ʼಕೆಜಿಎಫ್: ಚಾಪ್ಟರ್ 1ʼ ಮತ್ತು ಶಾರುಖ್ ಖಾನ್ ಅವರ ʼಝೀರೋʼ ಒಂದೇ ದಿನ ಬಿಡುಗಡೆಯಾಗಿದ್ದವು. ಡಿ. 21ರಂದು ತೆರೆಗೆ ಅಪ್ಪಳಿಸಿದ ಎರಡು ಚಿತ್ರಗಳ ಪೈಕಿ ʼಕೆಜಿಎಫ್: ಚಾಪ್ಟರ್ 1ʼ ಬಾಕ್ಸ್ ಆಫೀಸ್‌ನಲ್ಲಿ ಮ್ಯಾಜಿಕ್ ಮಾಡಿದ್ದರೆ ʼಝೀರೋʼ ಕಮಾಲ್ ಮಾಡುವಲ್ಲಿ ವಿಫಲವಾಗಿತ್ತು. ಹೀಗಾಗಿ ಈ ಬಾರಿ ಮತ್ತೆ ಇತಿಹಾಸ ಮರುಕಳಿಸುತ್ತಾ ಎನ್ನುವ ಪ್ರಶ್ನೆ ಮೂಡಿದೆ. ಈ ಹಿಂದೆ ʼಟಾಕ್ಸಿಕ್ʼ ಈ ವರ್ಷದ ಏ. 10ರಂದು ರಿಲೀಸ್ ಆಗಲಿದೆ ಮತ್ತು ʼಲವ್ & ವಾರ್ʼ ಈ ವರ್ಷದ ಕ್ರಿಸ್‌ಮಸ್ ವೇಳೆಗೆ ತೆರೆಗೆ ಬರಲಿದೆ ಎನ್ನಲಾಗಿತ್ತು. ಆದರೆ ನಂತರ ಕಾರಣಾಂತರಗಳಿಂದ ಎರಡೂ ಚಿತ್ರಗಳ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿತ್ತು.
ವಿಶೇಷ ಎಂದರೆ ಬಾಲಿವುಡ್‌ನ ʼರಾಮಾಯಣʼ ಚಿತ್ರದಲ್ಲಿ ರಣಬೀರ್ ಕಪೂರ್ ರಾಮನಾಗಿ ಕಾಣಿಸಿಕೊಂಡರೆ ರಾವಣನ ಪಾತ್ರಕ್ಕೆ ಯಶ್ ಬಣ್ಣ ಹಚ್ಚುತ್ತಿದ್ದಾರೆ. ಹೀಗಾಗಿ ಈ ಪೈಪೋಟಿಯನ್ನು ರಾಮ vs ರಾವಣ ಎಂದೇ ಕರೆಯಲಾಗುತ್ತಿದೆ.