IPL 2025: ʻಅದನ್ನು ಅರಗಿಸಿಕೊಳ್ಳಲು ಆಗುತ್ತಿರಲಿಲ್ಲʼ-ಮೊಹಮ್ಮದ್ ಸಿರಾಜ್ ಹೀಗೆನ್ನಲು ಕಾರಣವೇನು?
Mohammed Siraj on Champions Trophy snub: 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಸಜ್ಜಾಗುತ್ತಿರುವ ಗುಜರಾತ್ ಟೈಟನ್ಸ್ ವೇಗಿ ಮೊಹಮ್ಮದ್ ಸಿರಾಜ್, ಐಸಿಸಿ ಚಾಂಪಿಯನ್ಸ್ ಟ್ರೋಫಿ ಭಾರತ ತಂಡಕ್ಕೆ ಆಯ್ಕೆಯಾಗದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಹೆಸರು ಇಲ್ಲ ಎಂದು ತಿಳಿದಾಗ ಅದನ್ನು ಅರಗಿಸಿಕೊಳ್ಳಲು ಆಗಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ.

ಭಾರತ ಚಾಂಪಿಯನ್ಸ್ ಟ್ರೋಫಿ ತಂಡದಲ್ಲಿ ಸ್ಥಾನ ನೀಡದ ಬಗ್ಗೆ ಮೊಹಮ್ಮದ್ ಸಿರಾಜ್ ಪ್ರತಿಕ್ರಿಯೆ ನೀಡಿದ್ದಾರೆ.

ನವದೆಹಲಿ: ಇತ್ತೀಚೆಗೆ ಅಂತ್ಯವಾಗಿದ್ದ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ (Champions Trophy 2025) ಟೂರ್ನಿಯ ಭಾರತ (India) ತಂಡದಲ್ಲಿ ತಮಗೆ ಅವಕಾಶ ನೀಡದ ಬಗ್ಗೆ ಇದೇ ಮೊದಲ ಬಾರಿ ಹಿರಿಯ ವೇಗಿ ಮೊಹಮ್ಮದ್ ಸಿರಾಜ್ (Mohammed Siraj) ಪ್ರತಿಕ್ರಿಯೆ ನೀಡಿದ್ದಾರೆ. ಭಾರತ ತಂಡದಲ್ಲಿ ನನ್ನ ಹೆಸರು ಇಲ್ಲ ಎಂಬ ವಿಷಯ ತಿಳಿದ ಬಳಿಕ ಇದನ್ನು ಅರಗಿಸಿಕೊಳ್ಳಲು ಆಗಿರಲಿಲ್ಲ. ಐಸಿಸಿ ಟೂರ್ನಿಗಳಲ್ಲಿ ಸದಾ ಆಡಬೇಕೆಂಬ ತುಡಿತವನ್ನು ನಾನು ಹೊಂದಿದ್ದೇನೆಂದು ತಿಳಿಸಿದ್ದಾರೆ. ಅಂದಹಾಗೆ 2023ರ ಐಸಿಸಿ ಏಕದಿನ ವಿಶ್ವಕಪ್ ಹಾಗೂ 2024ರ ಐಸಿಸಿ ಟಿ20 ವಿಶ್ವಕಪ್ ಭಾರತ ತಂಡದಲ್ಲಿ ಮೊಹಮ್ಮದ್ ಸಿರಾಜ್ ಆಡಿದ್ದರು. ಆದರೆ, ಚಾಂಪಿಯನ್ಸ್ ಟ್ರೋಫಿ ತಂಡದಲ್ಲಿ ಅವರಿಗೆ ಬಿಸಿಸಿಐ ಆಯ್ಕೆ ಸಮಿತಿ ಸ್ಥಾನವನ್ನು ನೀಡಿರಲಿಲ್ಲ.
ಮೊಹಮ್ಮದ್ ಸಿರಾಜ್ ಅವರ ಬದಲು ಹರ್ಷಿತ್ ರಾಣಾ, ಮೊಹಮ್ಮದ್ ಶಮಿ ಹಾಗೂ ಅರ್ಷದೀಪ್ ಸಿಂಗ್‌ಗೆ ಅವಕಾಶವನ್ನು ನೀಡಲಾಗಿತ್ತು. ಅಂದ ಹಾಗೆ ಭಾರತ ತಂಡದ ಎಲ್ಲಾ ಪಂದ್ಯಗಳನ್ನು ದುಬೈ ಇಂಟರ್‌ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆಡಿಸಲಾಗಿತ್ತು. ಇಲ್ಲಿ ಸ್ಪಿನ್ ಸ್ನೇಹಿ ಕಂಡೀಷನ್ಸ್ ಇದ್ದ ಕಾರಣ ಓಟ್ಟು ಐವರು ಸ್ಪಿನ್ನರ್‌ಗಳನ್ನು ದುಬೈಗೆ ಕರೆದುಕೊಂಡು ಹೋಗಲಾಗಿತ್ತು. ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್ ಹಾಗೂ ವರುಣ್ ಚಕ್ರವರ್ತಿಯನ್ನು ಆಯ್ಕೆ ಮಾಡಲಾಗಿತ್ತು.
ಚಾಂಪಿಯನ್ಸ್ ಟ್ರೋಫಿ ಭಾರತ ಪ್ರಮುಖ ತಂಡದಲ್ಲಿ ಮೊಹಮ್ಮದ್ ಸಿರಾಜ್ ಅವರನ್ನು ಆಯ್ಕೆ ಮಾಡಲಾಗಿರಲಿಲ್ಲ. ಆದರೆ, ಅವರನ್ನು ಮೀಸಲು ಆಟಗಾರನಾಗಿ ಉಳಿಸಲಾಗಿತ್ತು. ಅಂದರೆ, ಅವರು ಭಾರತ ತಂಡದ ಜೊತೆ ಪ್ರಯಾಣ ಬೆಳೆಸದೆ ತವರಿನಲ್ಲಿಯೇ ಉಳಿಯಬೇಕಾಗಿತ್ತು. ಗುಜರಾತ್ ಟೈಟನ್ಸ್ ತಂಡದ ಪರ ಮೊದಲ ಐಪಿಎಲ್ ಪಂದ್ಯ ಆಡುವುದಕ್ಕೂ ಮುನ್ನ ಮಾತನಾಡಿದ ಅವರು, ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.
Hum excited, tum excited, sab excited - for our first game of #TATAIPL2025 🥳 pic.twitter.com/0lJH0FDRrD
— Gujarat Titans (@gujarat_titans) March 25, 2025
ಚಾಂಪಿಯನ್ಸ್ ಟ್ರೋಫಿಗೆ ಆಯ್ಕೆಯಾಗದ ಬಗ್ಗೆ ಸಿರಾಜ್ ಪ್ರತಿಕ್ರಿಯೆ
"ನೀವು ನಿಮ್ಮ ದೇಶದ ಪರ ಆಡುತ್ತಿರುವಾಗ, ನಿಮಗೆ ಅಗಾದವಾದ ವಿಶ್ವಾಸವಿರುತ್ತದೆ. ಅಂತಾರಾಷ್ಟ್ರೀಯ ಕ್ರಿಕೆಟಿಗನಾಗಿ ನೀವು ಯಾವಾಗಲೂ ಐಸಿಸಿ ಟ್ರೋಫಿ ಯನ್ನು ಗೆಲ್ಲಲು ಎದುರು ನೋಡುತ್ತೀರಿ. ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡವನ್ನು ಪ್ರಕಟಿಸಿದ ಆರಂಭದಲ್ಲಿ ನನಗೆ ಭಾರಿ ನಿರಾಶೆಯಾಗಿತ್ತು ಹಾಗೂ ಆರಂಭದಲ್ಲಿ ಇದನ್ನು ಅರಗಿಸಿಕೊಳ್ಳಲು ನನ್ನಿಂದ ಆಗಿರಲಿಲ್ಲ. ತಂಡಕ್ಕೆ ಯಾವುದು ಉತ್ತಮವಾಗಿದೆ ಎಂಬುದು ರೋಹಿತ್ ಭಾಯ್‌ಗೆ ಗೊತ್ತಿದೆ ಹಾಗೂ ಅದನ್ನೇ ಅವರು ಮಾಡಿದ್ದಾರೆ. ಅವರು ತುಂಬಾ ಅನುಭವವನ್ನು ಹೊಂದಿದ್ದಾರೆ ಹಾಗೂ ದುಬೈನಲ್ಲಿ ವೇಗಿಗಳನ್ನು ಹೆಚ್ಚಾಗಿ ಬಳಸುವುದಿಲ್ಲ ಎಂಬುದು ಅವರಿಗೆ ಗೊತ್ತಿತ್ತು. ಇಲ್ಲಿನ ಕಂಡೀಷನ್ಸ್‌ನಲ್ಲಿ ಸ್ಪಿನ್ನರ್‌ಗಳು ತುಂಬಾ ನೆರವಾಗಲಿದ್ದಾರೆಂದು ಅವರಿಗೆ ಗೊತ್ತಿತ್ತು. ಈ ಕಾರಣದಿಂದಲೇ ಅವರು ನನ್ನನ್ನು ಪರಿಗಣಿಸಿರಲಿಲ್ಲ," ಎಂದು ಮೊಹಮ್ಮದ್ ಸಿರಾಜ್ ಸ್ಪಷ್ಟನೆ ನೀಡಿದ್ದಾರೆ.
ವಿರಾಮವನ್ನು ಸದುಪಯೋಗಪಡಿಸಿಕೊಂಡಿದ್ದೇನೆ
"ದೀರ್ಘಾವಧಿ ಸಮಯದಲ್ಲಿ ನಾನು ಕ್ರಿಕೆಟ್ ಆಡುವುದನ್ನು ಮುಂದುವರಿಸಿದ್ದೆ. ಈ ವಿರಾಮದ ಅವಧಿಯಲ್ಲಿ ನಾನು ಫಿಟ್‌ನೆಸ್ ಹಾಗೂ ಬೌಲಿಂಗ್ ಮೇಲೆ ಹೆಚ್ಚಿನ ಕೆಲಸವನ್ನು ಮಾಡಿದ್ದೇನೆ. ನೀವು ನಿಯಮಿತವಾಗಿ ಕ್ರಿಕೆಟ್ ಆಡುತ್ತಿದ್ದಾಗ, ನೀವು ಮಾಡುವ ತಪ್ಪುಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುವುದಿಲ್ಲ. ಹಾಗಾಗಿ ನನಗೆ ಇದು ಒಳ್ಳೆಯ ವಿರಾಮವಾಗಿದೆ ಹಾಗೂ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದಿದ್ದೇವೆ. ಇದು ನಮ್ಮ ಪಾಲಿಗೆ ದೊಡ್ಡ ವಿಷಯ.," ಎಂದು ಗುಜರಾತ್ ಟೈಟನ್ಸ್ ವೇಗಿ ಹೇಳಿದ್ದಾರೆ.