Toxic Release Date: ಅನೌನ್ಸ್ ಆಯ್ತು ʼಟಾಕ್ಸಿಕ್ʼ ರಿಲೀಸ್ ಡೇಟ್; ಈ ವರ್ಷ ಬಿಡುಗಡೆಯಾಗಲ್ಲ ಯಶ್ ಚಿತ್ರ
Toxic Movie: ವಿಶ್ವಾದ್ಯಂತದ ಸಿನಿಪ್ರಿಯರಲ್ಲಿ ಕುತೂಹಲ ಕೆರಳಿಸಿದ, ಯಶ್ ನಟನೆಯ ʼಟಾಕ್ಸಿಕ್ʼ ಚಿತ್ರದ ರಿಲೀಸ್ ದಿನಾಂಕವನ್ನು ಘೋಷಿಸಲಾಗಿದೆ. ಈ ಹಿಂದೆ ಚಿತ್ರ ಈ ವರ್ಷ ತೆರೆಗೆ ಬರಲಿದೆ ಎನ್ನಲಾಗಿತ್ತು. ಆದರೆ ತಾಂತ್ರಿಕ ಕಾರಣಗಳಿಂದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ. ಮುಂದಿನ ವರ್ಷ ಸಿನಿಮಾ ರಿಲೀಸ್ ಆಗಲಿದೆ.

ʼಟಾಕ್ಸಿಕ್ʼ ಚಿತ್ರದ ಪೋಸ್ಟರ್.

ಬೆಂಗಳೂರು: ಸ್ಯಾಂಡಲ್‌ವುಡ್, ಭಾರತೀಯ ಚಿತ್ರರಂಗವಷ್ಟೇ ಅಲ್ಲದೆ ಇಡೀ ವಿಶ್ವವೇ ಕುತೂಹಲದ ಕಣ್ಣಿನಿಂದ ನಿರೀಕ್ಷಿಸುತ್ತಿರುವ ಚಿತ್ರ ʼಟಾಕ್ಸಿಕ್ʼ (Toxic Movie). ನಿರ್ದೇಶಕ ಪ್ರಶಾಂತ್ ನೀಲ್-ನಿರ್ಮಾಪಕ ವಿಜಯ್ ಕಿರಗಂದೂರು ನೇತೃತ್ವದ ಹೊಂಬಾಳೆ ಫಿಲ್ಮ್ಸ್‌ನ 'ಕೆಜಿಎಫ್' ಸರಣಿ ಚಿತ್ರಗಳ ಮೂಲಕ ಗ್ಲೋಬಲ್ ಸ್ಟಾರ್ ಆಗಿ ಬದಲಾದ ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್' ಚಿತ್ರತಂಡ ಸದ್ಯ ಬಿಡುವಿಲ್ಲದೆ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದೆ. ಮಲಯಾಳಂ ಮೂಲದ ನಟಿ, ನಿರ್ದೇಶಕಿ ಗೀತು ಮೋಹನ್‌ದಾಸ್ (Geetu Mohandas) ಆ್ಯಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರದ ಅಡ್ಡದಿಂದ ಇದೀಗ ಹೊಸ ಅಪ್‌ಡೇಟ್ ಹೊರ ಬಿದ್ದಿದೆ. ಹೊಸ ಪೋಸ್ಟರ್ ಮೂಲಕ ಚಿತ್ರದ ರಿಲೀಸ್ ದಿನಾಂಕವನ್ನು ಘೋಷಿಸಲಾಗಿದೆ.
ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಚಿತ್ರ ಈ ವರ್ಷ ರಿಲೀಸ್ ಆಗುವುದಿಲ್ಲ. ಬದಲಾಗಿ ಯುಗಾದಿ ಪ್ರಯುಕ್ತ 2026ರ ಮಾರ್ಚ್ 19ರಂದು ವಿಶ್ವಾದ್ಯಂತ ತೆರೆಗೆ ಬರಲಿದೆ. ಈ ವಿಚಾರವನ್ನು ಚಿತ್ರತಂಡ ಹೊಸ ಪೋಸ್ಟರ್ ಮೂಲಕ ಅಧಿಕೃತವಾಗಿ ಘೋಷಿಸಿದೆ. ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಏಕಕಾಲಕ್ಕೆ ಚಿತ್ರೀಕರಣವಾಗುತ್ತಿರುವ ಈ ಸಿನಿಮಾವನ್ನು ಬಳಿಕ ಹಿಂದಿ, ತೆಲುಗು, ತಮಿಳು, ಮಲಯಾಳಂಗೆ ಡಬ್ ಮಾಡಲಾಗುತ್ತದೆ. ಹೀಗಾಗಿ ʼಟಾಕ್ಸಿಕ್ʼ ಈಗಾಗಲೇ ಸಿನಿಪ್ರಿಯರಲ್ಲಿ ಕುತೂಹಲ ಕೆರಳಿಸಿದೆ. ಈ ಹಿಂದೆ ಸಿನಿಮಾವನ್ನು 2025ರ ಏಪ್ರಿಲ್ 10ರಂದು ರಿಲೀಸ್ ಮಾಡಲಾಗುತ್ತದೆ ಎಂದು ಘೋಷಿಸಲಾಗಿತ್ತು. ಆದರೆ ಅಂದುಕೊಂಡಂತೆ ಚಿತ್ರೀಕರಣ ನಡೆಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ 1 ವರ್ಷ ಮುಂದೂಡಲಾಗಿದೆ.
ಹಾಲಿವುಡ್ ರೇಂಜ್
ಅದ್ಧೂರಿಯಾಗಿ ಮೂಡಿ ಬರುತ್ತಿರುವ ಈ ಚಿತ್ರವನ್ನು ಹಾಲಿವುಡ್ ರೇಂಜ್‌ನಲ್ಲಿ ಕಟ್ಟಿ ಕೊಡಲಾಗುತ್ತಿದೆ. ಗೋವಾದ ಡ್ರಗ್ಸ್ ಮಾಫಿಯಾದ ಸುತ್ತ ಕಥೆ ಸಾಗುತ್ತದೆ ಎನ್ನಲಾಗಿದೆ. ಈ ಆ್ಯಕ್ಷನ್ ಥ್ರಿಲ್ಲರ್ ಚಿತ್ರವನ್ನು ವಿಭಿನ್ನವಾಗಿ ತೆರೆಗೆ ತರಲು ಸಿನಿಮಾತಂಡ ಎಲ್ಲ ರೀತಿಯಿಂದಲೂ ಸಜ್ಜಾಗಿದೆ. ಬೆಂಗಳೂರಿನಲ್ಲಿ ಶೂಟಿಂಗ್ ಆರಂಭಿಸಿದ್ದ ಚಿತ್ರತಂಡ ಗೋವಾ, ಮುಂಬೈ ಬಳಿಕ ಇದೀಗ ಮತ್ತೆ ಬೆಂಗಳೂರಿಗೆ ಮರಳಿದೆ. ವಿವಿಧ ಹಂತಗಳಲ್ಲಿ ಈಗಾಗಲೇ ಬಹುತೇಕ ಶೂಟಿಂಗ್ ಮುಗಿಸಲಾಗಿದೆ.
ಈ ಸುದ್ದಿಯನ್ನೂ ಓದಿ: Toxic Movie: ಬದಲಾಯ್ತು ಸ್ಯಾಂಡಲ್‌ವುಡ್ ಖದರ್; ಹಾಲಿವುಡ್ ಶೈಲಿಯಲ್ಲಿ ಮೂಡಿ ಬರುತ್ತಿದೆ 'ಟಾಕ್ಸಿಕ್'
ನಾಯಕಿಯಾಗಿ ಕಿಯಾರಾ ಅಡ್ವಾಣಿ
ಸದ್ಯ ಬಾಲಿವುಡ್‌ನ ಬ್ಯುಸಿ ನಟಿಯರಲ್ಲಿ ಒಬ್ಬರಾದ ಕಿಯಾರಾ ಅಡ್ವಾಣಿ ʼಟಾಕ್ಸಿಕ್ʼ ಚಿತ್ರಕ್ಕೆ ನಾಯಕಿಯಾಗುವ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಿದ್ದಾರೆ. ವಿಶೇಷ ಎಂದರೆ ಈ ಚಿತ್ರಕ್ಕಾಗಿ ಅವರಿಗೆ ದಾಖಲೆಯ 15 ಕೋಟಿ ರೂ. ಸಂಭಾವನೆ ನೀಡಲಾಗಿದೆ ಎನ್ನಲಾಗಿದೆ. ಆ ಮೂಲಕ ಬಾಲಿವುಡ್‌ನ ಟಾಪ್ ನಾಯಕಿಯರನ್ನು ಅವರು ಹಿಂದಿಕ್ಕಿದ್ದಾರೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇನ್ನೂ ಹೊರ ಬಿದ್ದಿಲ್ಲ.
ಮುಖ್ಯ ಪಾತ್ರದಲ್ಲಿ ನಯನತಾರಾ
ಇನ್ನೊಂದು ವಿಶೇಷ ಎಂದರೆ ಬಹುಭಾಷಾ ತಾರೆ ನಯನತಾರಾ ʼಟಾಕ್ಸಿಕ್ʼ ಸಿನಿಮಾದ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆ ಮೂಲಕ ಸುಮಾರು 15 ವರ್ಷಗಳ ಬಳಿಕ ನಯನತಾರಾ ಸ್ಯಾಂಡಲ್‌ವುಡ್‌ಗೆ ಮರಳಿದ್ದಾರೆ. ಅಲ್ಲದೆ ಬ್ರಿಟಿಶ್ ನಟರಾದ ಡಾರೆನ್ ಡಿʼಸಿಲ್ವಾ, ಬೆನೆಡಿಕ್ಟ್ ಗ್ಯಾರೆಟ್ ಕೂಡ ಅಭಿನಯಿಸುತ್ತಿದ್ದಾರೆ.