ಕರ್ನಾಟಕ ಬಜೆಟ್​ ಮಹಿಳಾ ದಿನಾಚರಣೆ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mahila Samriddhi Yojana: ನುಡಿದಂತೆ ನಡೆದ ದಿಲ್ಲಿ ಸರ್ಕಾರ; ಅರ್ಹ ಮಹಿಳೆಯರಿಗೆ ಪ್ರತಿ ತಿಂಗಳು ಸಿಗಲಿದೆ 2,500 ರೂ.

ದಿಲ್ಲಿ ಸರ್ಕಾರ ಮಹಿಳೆಯರಿಗೆ ಪ್ರತಿ ತಿಂಗಳು 2,500 ರೂ. ನೀಡುವ ಮಹಿಳಾ ಸಮೃದ್ಧಿ ಯೋಜನೆಗೆ 5,100 ಕೋಟಿ ರೂ. ಅನುದಾನ ಬಿಡುಗಡೆ ಮಾಡಲು ಅನುಮೋದನೆ ನೀಡಿದೆ. ಆ ಮೂಲಕ ವಿಧಾನಸಭಾ ಚುನಾವಣೆ ವೇಳೆ ನೀಡಿದ್ದ ಭರವಸೆಯನ್ನು ಈಡೇರಿಸಲು ಮುಂದಾಗಿದೆ.

ನುಡಿದಂತೆ ನಡೆದ ದಿಲ್ಲಿ ಸರ್ಕಾರ; ಮಹಿಳಾ ಸಮೃದ್ಧಿ ಯೋಜನೆಗೆ ಅನುಮೋದನೆ

ರೇಖಾ ಗುಪ್ತಾ.

Profile Ramesh B Mar 8, 2025 7:48 PM

ಹೊಸದಿಲ್ಲಿ: ಮಹಿಳಾ ದಿನಾಚರಣೆ (Women's Day)ಯಂದು ದಿಲ್ಲಿಯ ಮಹಿಳೆಯರಿಗೆ ಬಿಜೆಪಿ ನೇತೃತ್ವದ ಸರ್ಕಾರ ಗುಡ್‌ನ್ಯೂಸ್‌ ನೀಡಿದೆ (Delhi Government). ಶನಿವಾರ (ಮಾ. 8) ರಾಜ್ಯ ಸರ್ಕಾರ ಮಹಿಳೆಯರಿಗೆ ಪ್ರತಿ ತಿಂಗಳು 2,500 ರೂ. ನೀಡುವ ಮಹಿಳಾ ಸಮೃದ್ಧಿ ಯೋಜನೆ (Mahila Samriddhi Yojana)ಗೆ 5,100 ಕೋಟಿ ರೂ. ಅನುದಾನ ಬಿಡುಗಡೆ ಮಾಡಲು ಅನುಮೋದನೆ ನೀಡಿದೆ. ಈ ಮೂಲಕ ಮುಖ್ಯಮಂತ್ರಿ ರೇಖಾ ಗುಪ್ತಾ (Rekha Gupta) ದಿಲ್ಲಿ ವಿಧಾನಸಭಾ ಚುನಾವಣೆ ವೇಳೆ ನೀಡಿದ್ದ ಭರವಸೆಯನ್ನು ಈಡೇರಿಸಲು ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಯೋಜನೆ ಜಾರಿ ವಿಳಂಬವಾಗುತ್ತಿದೆ ಎಂದು ಆಮ್‌ ಆದ್ಮಿ ಪಾರ್ಟಿ ಆರೋಪಿಸುತ್ತಲೇ ಬಂದಿರುವ ಮಧ್ಯೆ ಈ ಬೆಳವಣಿಗೆ ನಡೆದಿದೆ.

ʼʼಇವತ್ತು ಮಹಿಳಾ ದಿನಾಚರಣೆ. ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹಿಳಾ ಸಮೃದ್ಧಿ ಯೋಜನೆಗೆ ಅನುಮೋದನೆ ನೀಡಲಾಗಿದೆ. ಅರ್ಹ ಮಹಿಳೆಗೆ ಪ್ರತಿ ತಿಂಗಳು 2,500 ರೂ. ನೀಡುವ ಯೋಜನೆ ಇದಾಗಿದೆ. ಈ ಮೂಲಕ ಚುನಾವಣೆ ವೇಳೆ ನೀಡಿದ್ದ ಭರವಸೆ ಈಡೇರಿಸಲು ಮುಂದಾಗಿದ್ದೇವೆʼʼ ಎಂದು ದಿಲ್ಲಿ ಮುಖ್ಯಮಂತ್ರಿ ರೇಖಾ ಗುಪ್ತಾ ತಿಳಿಸಿದ್ದಾರೆ.



"ಈ ಯೋಜನೆಯ ಅನುಷ್ಠಾನಕ್ಕಾಗಿ ನಾವು 5,100 ಕೋಟಿ ರೂ. ಒದಗಿಸಿದ್ದೇವೆ. ಇದಕ್ಕಾಗಿ ಸಮಿತಿಯನ್ನು ರಚಿಸಿದ್ದೇವೆ. ಯೋಜನೆಯ ನೋಂದಣಿ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಇದಕ್ಕಾಗಿ ಶೀಘ್ರದಲ್ಲೇ ಪೋರ್ಟಲ್ ತೆರೆಯಲಾಗುತ್ತದೆ" ಎಂದು ಅವರು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Rekha Gupta: ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ರೇಖಾ ಗುಪ್ತಾ ಫುಲ್‌ ಆ್ಯಕ್ಟಿವ್‌; ಸಚಿವರೊಂದಿಗೆ ಯಮುನಾ ಆರತಿ

ಸಮಿತಿಯಲ್ಲಿ ಯಾರೆಲ್ಲ ಇರುತ್ತಾರೆ?

ಯೋಜನೆಯ ಅನುಷ್ಠಾನಕ್ಕಾಗಿ ರೇಖಾ ಗಪ್ತಾ ನೇತೃತ್ವದಲ್ಲಿ ರಚಿಸಲಾಗಿರುವ ಸಮಿತಿಯಲ್ಲಿ ಸಚಿವರಾದ ಆಶೀಷ್‌ ಸೂದ್‌, ಪರ್ವೇಶ್‌ ವರ್ಮಾ ಮತ್ತು ಕಪಿಲ್‌ ಮಿಶ್ರಾ ಇರಲಿದ್ದಾರೆ. ಸಭೆಯ ಬಳಿಕ ಮಾತನಾಡಿದ ಆಶೀಷ್‌ ಸೂದ್‌, ʼʼಇಂದು ದಿಲ್ಲಿ ಸರ್ಕಾರ ಐತಿಹಾಸಿಕ ನಿರ್ಧಾರ ಕೈಗೊಂಡಿದೆ. ಇದು ಬಾಯಿ ಮಾತಿನ ಸರ್ಕಾರವಲ್ಲ. ಸದ್ಯದಲ್ಲೇ ನಾವು ಯೋಜನೆಗೆ ಅಗತ್ಯವಾದ ಅನುದಾನ ಒದಗಿಸಲಿದ್ದೇವೆ ಮತ್ತು ಹೆಸರು ನೋಂದಣಿಯ ಪೋರ್ಟಲ್‌ ಅನ್ನು ಶೀಘ್ರದಲ್ಲೇ ತೆರೆಯಲಾಗುತ್ತದೆʼʼ ಎಂದು ತಿಳಿಸಿದ್ದಾರೆ. ಕಳೆದ ತಿಂಗಳು ನಡೆದ ದಿಲ್ಲಿ ವಿಧಾನಸಭಾ ಚುನಾವಣೆಯ ವೇಳೆ ಬಿಜೆಪಿ ಮಹಿಳೆಯರಿಗೆ ಪ್ರತಿ ತಿಂಗಳು 2,500 ಒದಗಿಸುವುದಾಗಿ ತಿಳಿಸಿತ್ತು. ಈ ಹಿಂದೆ ಆಪ್‌ ಪ್ರತಿ ತಿಂಗಳು 2,100 ರೂ. ನೀಡುವುದಾಗಿ ಹೇಳಿತ್ತು.

ಟೀಕಿಸಿದ್ದ ಆಪ್‌

ಯೋಜನೆ ಹೆಸರಿನಲ್ಲಿ ಕೆಲವು ದಿನಗಳಿಂದ ಬಿಜೆಪಿ ಸರ್ಕಾರವನ್ನು ಆಪ್‌ ಟೀಕಿಸುತ್ತಲೇ ಬಂದಿತ್ತು. ʼʼಮಾ. 8ರೊಳಗೆ ಫಲಾನುಭವಿಗಳ ಖಾತೆಗೆ 2,500 ರೂ. ನೀಡುವುದಾಗಿ ಹೇಳಿದ್ದ ಕೇಸರಿ ಪಕ್ಷ ನುಡಿದಂತೆ ನಡೆಯುತ್ತಿಲ್ಲ. ಇದಕ್ಕಾಗಿ ಮಹಿಳೆಯರು ಕಾಯುತ್ತಿದ್ದಾರೆʼʼ ಎಂದು ತಿಳಿಸಿತ್ತು. ಈ ಹಿಂದೆ ಪತ್ರ ಬರೆದಿದ್ದ ಮಾಜಿ ಮುಖ್ಯಮಂತ್ರಿಯೂ ಆದ ಆಪ್‌ ನಾಯಕಿ ಅತಿಶಿ ಬಿಜೆಪಿ ಪ್ರಣಾಳಿಕೆಯಲ್ಲಿ ಘೋಷಿಸಿದ ಯೋಜನೆಯನ್ನು ಅನುಷ್ಠಾನಗೊಳಿಸುವಲ್ಲಿ ಎಡವಿದೆ ಎಂದು ಟೀಕಿಸಿದ್ದರು.

ಫೆ. 5ರಂದು ಒಂದೇ ಹಂತದಲ್ಲಿ ದಿಲ್ಲಿ ವಿಧಾನಸಭಾ ಚುನಾವಣೆ ನಡೆದು ಫೆ. 8ರಂದು ಫಲಿತಾಂಶ ಘೋಷಣೆಯಾಗಿತ್ತು. 70 ಕ್ಷೇತ್ರಗಳ ಪೈಕಿ ಬಿಜೆಪಿ 48 ಕಡೆಗಳಲ್ಲಿ ಜಯಗಳಿಸಿ ಬರೋಬ್ಬರಿ 27 ವರ್ಷಗಳ ಬಳಿಕ ಅಧಿಕಾರಕ್ಕೆ ಬಂದಿತ್ತು. ಆಪ್‌ 22 ಸೀಟುಗಳಿಗೆ ಸೀಮಿತವಾಗಿತ್ತು.